ವಿಮಾನದಲ್ಲಿ ಕಾರ್ಗಿಲ್ ವಾರ್ ಹೀರೋ ಗುರುತಿಸಿ ಸನ್ಮಾನಿಸಿದ ಇಂಡಿಗೋ: ವೈರಲ್ ವೀಡಿಯೋ
ತಮ್ಮ ವಿಮಾನದಲ್ಲಿ ಬಂದ, ಕಾರ್ಗಿಲ್ ಸಮರದಲ್ಲಿ ಭಾಗವಹಿಸಿ ದೇಶಕ್ಕಾಗಿ ತಾವು ಸಲ್ಲಿಸಿದ ಅಪ್ರತಿಮ ಸೇವೆಗಾಗಿ ಪರಮ ವೀರ ಚಕ್ರ ಪ್ರಶಸ್ತಿ ಪಡೆದಿರುವ ಯೋಧರೊಬ್ಬರನ್ನು ಇಂಡಿಗೋ ವಿಮಾನಯಾನ ಸಂಸ್ಥೆ ಗುರುತಿಸಿ ಸನ್ಮಾನಿಸಿದ ವಿಶೇಷ ಘಟನೆ ಇಂಡಿಗೋ ಏರ್‌ಲೈನ್ಸ್‌ನಲ್ಲಿ ನಡೆದಿದ್ದು, ಈ ಸಂದರ್ಭದ ವೀಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ.
ಮುಂಬೈ: ಕಾರ್ಗಿಲ್ ಯುದ್ಧ ವಿಜಯ ದಿವಸ ಆಚರಣೆಗೆ ಇನ್ನೆರಡೇ ದಿನ ಬಾಕಿ ಇದೆ. ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯಶಾಲಿಯಾಗಿ ಜುಲೈ 26ಕ್ಕೆ 24 ವರ್ಷಗಳು ಪೂರ್ಣಗೊಳ್ಳಲಿದ್ದು, ಭಾರತೀಯ ರಕ್ಷಣಾ ಪಡೆ ಈ ಸಮರದಲ್ಲಿ ತಮ್ಮ ಜೀವ ತ್ಯಾಗ ಮಾಡಿದ ಯೋಧರ ಸ್ಮರಣಗಾಗಿ ಪ್ರತಿವರ್ಷ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸುತ್ತದೆ. ಈ ಮಧ್ಯೆ ತಮ್ಮ ವಿಮಾನದಲ್ಲಿ ಬಂದ, ಕಾರ್ಗಿಲ್ ಸಮರದಲ್ಲಿ ಭಾಗವಹಿಸಿ ದೇಶಕ್ಕಾಗಿ ತಾವು ಸಲ್ಲಿಸಿದ ಅಪ್ರತಿಮ ಸೇವೆಗಾಗಿ ಪರಮ ವೀರ ಚಕ್ರ ಪ್ರಶಸ್ತಿ ಪಡೆದಿರುವ ಯೋಧರೊಬ್ಬರನ್ನು ಇಂಡಿಗೋ ವಿಮಾನಯಾನ ಸಂಸ್ಥೆ ಗುರುತಿಸಿ ಸನ್ಮಾನಿಸಿದ ವಿಶೇಷ ಘಟನೆ ಇಂಡಿಗೋ ಏರ್‌ಲೈನ್ಸ್‌ನಲ್ಲಿ ನಡೆದಿದ್ದು, ಈ ಸಂದರ್ಭದ ವೀಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ.
ವಿಮಾನದಲ್ಲಿ, ಏರ್‌ಪೋರ್ಟ್‌ಗಳಲ್ಲಿ ಹಾಗೆಯೇ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಸಿನಿಮಾ ತಾರೆಯರನ್ನು ಗಣ್ಯ ವ್ಯಕ್ತಿಗಳನ್ನು ಗುರುತಿಸಿ ಜನ ಅವರಿಂದ ಸೆಲ್ಪೀ ತೆಗೆದುಕೊಂಡು ಸಂಭ್ರಮಿಸುವುದನ್ನು ನೀವು ನೋಡಿರಬಹುದು. ಆದರೆ ದೇಶದ ಗಡಿಯನ್ನು ಕಾಯುವ ನಿಜವಾದ ಹೀರೋಗಳು ಸಾರ್ವಜನಿಕವಾಗಿ ಗುರುತಿಸ್ಪಡುವುದು ತೀರಾ ಕಡಿಮೆ. ಆದರೂ ಇಂಡಿಗೋ ವಿಮಾನಯಾನ ಸಂಸ್ಥೆ ದೇಶ ಕಾದ ವೀರಯೋಧನನ್ನು ವಿಶೇಷವಾಗಿ ಗೌರವಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಕಾರ್ಗಿಲ್ ವಿಜಯ ದಿವಸಕ್ಕೆ ಭರದ ಸಿದ್ಧತೆ: ದೆಹಲಿಯಿಂದ ಕಾರ್ಗಿಲ್‌ಗೆ ವೀರನಾರಿಯರ ಬೈಕ್ ರೈಡ್
ವೀಡಿಯೋದಲ್ಲೇನಿದೆ?
ವೀಡಿಯೋದಲ್ಲಿ ಪರಮ ವೀರ ಚಕ್ರ ಪ್ರಶಸ್ತಿ ಪಡೆದ ಯೋಧ ಸುಬೇದಾರ್ ಮೇಜರ್ ಸಂಜಯ್ ಕುಮಾರ್ ಅವರು ವಿಮಾನದಲ್ಲಿ ಬಂದು ಕುಳಿತುಕೊಳ್ಳುತ್ತಿದ್ದಂತೆ ವಿಮಾನದ ಕ್ಯಾಪ್ಟನ್ ವಿಮಾನದ ಮೈಕ್ ಮೂಲಕ ಎನೌನ್ಸ್‌ಮೆಂಟ್ ಮಾಡುತ್ತಾರೆ. ನಮ್ಮ ವಿಮಾನದಲ್ಲಿ ಕಾರ್ಗಿಲ್ ಯುದ್ಧದ ಹೀರೋ ಪರಮ ವೀರ ಚಕ್ರಪ್ರಶಸ್ತಿ ವಿಜೇತ ಯೋಧ ಸುಬೇದಾರ್ ಮೇಜರ್ ಸಂಜಯ್ ಕುಮಾರ್ ಅವರು ಪ್ರಯಾಣಿಸುತ್ತಿದ್ದು, ವಿಮಾನದಲ್ಲಿರುವ ಸಿಬ್ಬಂದಿ ಹಾಗೂ ಪ್ರಯಾಣಿಕರು ಚಪ್ಪಾಳೆ ತಟ್ಟಿ ಅವರನ್ನು ಗೌರವಿಸಬೇಕಾಗಿ ಕೇಳಿಕೊಳ್ಳುತ್ತಾರೆ. ಅಲ್ಲದೇ ಕಾರ್ಗಿಲ್ ಯುದ್ಧದ ವೇಳೆ ಅವರ ಸಾಹಸವನ್ನು ಕಾಪ್ಟನ್ ಪ್ರಯಾಣಿಕರಿಗೆ ವಿವರಿಸಿ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಈ ಪರಮವೀರ ಚಕ್ರ ಪ್ರಶಸ್ತಿಯನ್ನು ಭಾರತೀಯ ಇತಿಹಾಸದಲ್ಲಿ ಕೇವಲ 21 ಪರಾಕ್ರಮಿಗಳಿಗೆ ಮಾತ್ರ ನೀಡಲಾಗಿದೆ. ಯುದ್ಧದ ಕಾಲದಲ್ಲಿ ತೋರಿದ ಅತ್ಯುನ್ನತ ಸಾಹಸಕ್ಕೆ ನೀಡಲಾಗುವ ಸರ್ವೋಚ್ಚ ಪ್ರಶಸ್ತಿ ಇದಾಗಿದೆ. ಈ ಗುರುತಿಸುವಿಕೆಯ ನಂತರ ಇಂಡಿಗೋದ ವತಿಯಿಂದ ವಾರ್ ಹೀರೋ ಸುಬೇದಾರ್ ಅವರಿಗೆ ನೆನಪಿನ ಕಾಣಿಕೆಯನ್ನು ನೀಡಲಾಗುತ್ತದೆ.
ಇಂಡಿಗೋ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಹೀರೋ ಜೊತೆ ಹಾರಾಟ, ಸುಬೇದಾರ್ ಮೇಜರ್ ಸಂಜಯ್ ಕುಮಾರ್ ಜೀ, ಜೀವಂತ ಪರಮವೀರ ಚಕ್ರ ಪ್ರಶಸ್ತಿ ವಿಜೇತರ ಜೊತೆ ಪ್ರಯಾಣ ಎಂದು ಬರೆದು ಈ ವೀಡಿಯೋವನ್ನು ಶೇರ್ ಮಾಡಿದೆ. ವೀಡಿಯೋ ನೋಡಿದ ಅನೇಕರು ಇಂಡಿಗೋ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅನೇಕರು ವೀರ ಯೋಧನನ್ನು ಗುರುತಿಸಿರುವುದಕ್ಕೆ ಇಂಡಿಗೋಗೆ ಧನ್ಯವಾದ ತಿಳಿಸಿದ್ದಾರೆ.
ಕಾರ್ಗಿಲ್ ಯುದ್ಧದ ‘ವಾಸ್ತುಶಿಲ್ಪಿ’ ಮುಷರ್ರಫ್: ಭಾರತದಲ್ಲಿ ಹುಟ್ಟಿ ಭಾರತದ ಮೇಲೇ ಯುದ್ಧ ನಡೆಸಿದ್ದರು
ಮತ್ತೆ ಅನೇಕರು ಪರಮವೀರಚಕ್ರ ಸಂಜಯ್ ಕುಮಾರ್ ಅವರಿಗೆ ಧನ್ಯವಾದ ಸಲ್ಲಿಸಿದ್ದು, ನಿಮ್ಮ ಸೇವೆಗೆ ನಮ್ಮಶತ ಶತ ಪ್ರಣಾಮಗಳು ಎಂದು ಹೇಳಿದ್ದಾರೆ.