ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ಕೋಟಿ ಮಾತಾ ದೇವಸ್ಥಾನದಲ್ಲಿ ಪತಿ-ಪತ್ನಿ ಒಟ್ಟಿಗೆ ದರ್ಶನ ಪಡೆಯುವಂತಿಲ್ಲ. ದಂಪತಿಗಳು ಜೊತೆಯಾಗಿ ದೇವಸ್ಥಾನಕ್ಕೆ ಬಂದರೂ, ದರ್ಶನವನ್ನು ಪ್ರತ್ಯೇಕವಾಗಿ ಪಡೆಯಬೇಕು. ಇದಕ್ಕೆ ಕಾರಣವೂ ಇದೆ. 

ಪತಿ- ಪತ್ನಿ ಒಟ್ಟಾಗಿ ದರ್ಶನ ಪಡೆದರೆ ಇಲ್ಲಿನ ದೇವರಿಗೆ ಸಿಟ್ಟು ಬರುತ್ತೆ!

ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಪತಿ ಪತ್ನಿ ಜತೆಯಾಗಿ ದೇವಾಲಯಕ್ಕೆ ಹೋಗುವುದು, ದೇವರ ದರ್ಶನ ಮಾಡುವುದು, ಜೊತೆಯಾಗಿ ಪೂಜೆ ಮಾಡುವುದು ವಾಡಿಕೆ. ಹೀಗೆ ಮಾಡಿದರೆ ಶುಭಕರ, ದೇವರು ಪ್ರಸನ್ನನಾಗಿ ಬೇಗನೆ ಅನುಗ್ರಹ ಮಾಡುತ್ತಾನೆ ಎಂಬ ನಂಬಿಕೆ ಇದೆ. ದಂಪತಿ ಜತೆಯಾಗಿ ಪೂಜಾ ಕೈಂಕರ್ಯ ಮಾಡದೇ ಇದ್ದರೆ ಆ ಪೂಜೆ ಅಪೂರ್ಣ ಎಂಬ ನಂಬಿಕೆ ನಮ್ಮಲ್ಲಿ ಇದೆ. ಆದರೆ ಇದಕ್ಕೂ ಅಪವಾದ ಇದೆ. ಇಲ್ಲೊಂದು ದೇಗುಲ ತನ್ನ ವಿಶಿಷ್ಟ ಪದ್ಧತಿಯ ಕಾರಣದಿಂದ ಭಕ್ತರ ಗಮನ ಸೆಳೆದಿದೆ. ಅದೇನೆಂದರೆ, ಈ ದೇಗುಲದಲ್ಲಿ ಪತಿ ಪತ್ನಿ ಒಟ್ಟಾಗಿ ಪೂಜೆ ಮಾಡುವಂತಿಲ್ಲ. ಈ ದೇವಸ್ಥಾನಕ್ಕೆ ದಂಪತಿ ಒಟ್ಟಾಗಿ ಬರಬಹುದು. ಆದರೆ ದೇವಿಯ ಪೂಜೆ ಮತ್ತು ದರ್ಶನಕ್ಕೆ ಪ್ರತ್ಯೇಕವಾಗಿ ಹೋಗಬೇಕು.

ಈ ವಿಶಿಷ್ಟ ದೇವಾಲಯ ಇರೋದು ಹಿಮಾಚಲ ಪ್ರದೇಶದ ಶಿಮ್ಲಾದ ರಾಮ್‌ಪುರದಲ್ಲಿ. ಪಾರ್ವತಿ ದೇವಿಯ ಸನ್ನಿಧಾನ ಇದು. ಶ್ರೀ ಕೋಟಿ ಮಾತಾ ಮಂದಿರ ಎಂದೇ ಇದು ಜನಪ್ರಿಯ. ಇಲ್ಲಿ ಸತಿ ಪತಿ ಒಟ್ಟಾಗಿ ದೇವಿಗೆ ಪೂಜೆ ಸಲ್ಲಿಸುವಂತಿಲ್ಲ. ದೇವಿಯ ದರ್ಶನ ಮಾಡುವಂತಿಲ್ಲ. ದೇವಸ್ಥಾನದ ತನಕ ಜತೆಯಾಗಿ ಹೋದರೂ ದೇವರ ದರ್ಶನ ಮಾತ್ರ ಪ್ರತ್ಯೇಕವಾಗಿಯೇ ಮಾಡಬೇಕು. ಇಲ್ಲಿ ಯಾಕೆ ಈ ಪದ್ಧತಿಯನ್ನು ಅನುಸರಿಸಲಾಗುತ್ತದೆ ಎಂಬುದಕ್ಕೆ ಪೌರಾಣಿಕವಾಗಿ ಒಂದು ಕಥೆ ಸಿಗುತ್ತದೆ.

ಇಲ್ಲಿನ ದಂತಕಥೆಯ ಪ್ರಕಾರ, ಒಮ್ಮೆ ಕಾರ್ತಿಕೇಯ ಮತ್ತು ಗಣಪತಿಯ ನಡುವೆ ಯಾರ ವಿವಾಹ ಮೊದಲು ನಡೆಯುತ್ತದೆ ಎಂಬ ವಿಷಯಕ್ಕೆ ಜಗಳ ನಡೆದಿತ್ತು. ಸೋದರರ ಈ ಜಗಳದ ಸಮಯದಲ್ಲಿ ಅಲ್ಲಿಗೆ ಶಿವ ಪಾರ್ವತಿಯರು ಬಂದರು. ಈ ವೇಳೆ, ಬ್ರಹ್ಮಾಂಡವನ್ನು ಮೊದಲು ಸುತ್ತಿ ಬರುವವರಿಗೆ ಮೊದಲು ಮದುವೆಯಾಗುವುದಾಗಿ ಶಿವ ದೇವರು ಇವರಿಬ್ಬರನ್ನು ಸಮಾಧಾನ ಮಾಡುತ್ತಾನೆ. ಆಗ ಕಾರ್ತೀಕೇಯ ನವಿಲನ್ನೇರಿ ಬ್ರಹ್ಮಾಂಡ ಪ್ರದಕ್ಷಿಣೆ ಹಾಕಲು ಹೋದರೆ, ಜಾಣ ಗಣಪತಿ ತಂದೆ ತಾಯಿ ಪಾದದಲ್ಲಿಯೇ ಬ್ರಹ್ಮಾಂಡವಿದೆ ಎಂದು ಅವರಿಗೆ ಸುತ್ತು ಬಂದ. ಇಲ್ಲಿನ ಸ್ಥಳ ಪುರಾಣದಂತೆ, ಗಣಪತಿಗೆ ಮದುವೆಯಾಗಿತ್ತು. ಇತ್ತ, ಕಾರ್ತಿಕೇಯ ನವಿಲನ್ನೇರಿ ಬ್ರಹ್ಮಾಂಡವನ್ನು ಪ್ರದಕ್ಷಿಣೆ ಹಾಕಿ ಮರಳಿ ಬಂದಾಗ ಗಣಪತಿಗೆ ವಿವಾಹವಾಗಿತ್ತಂತೆ. ಇದರಿಂದ ಸಿಟ್ಟಾದ ಕಾರ್ತಿಕೇಯ ತಾನೆಂದೂ ಇನ್ನು ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಇಲ್ಲೇ ತಪಸನ್ನು ಮಾಡಲು ಆರಂಭಿಸಿದನಂತೆ. ಪುತ್ರನ ಪ್ರತಿಜ್ಞೆಯನ್ನು ತಿಳಿದು ಪಾರ್ವತಿ ಮಾತೆ ದುಃಖಿತಳಾಗಿ, ಕೋಪದಿಂದ ಇಲ್ಲಿ ದೇವಿಯನ್ನು ಒಟ್ಟಿಗೆ ನೋಡುವ ಯಾವುದೇ ದಂಪತಿ ಪರಸ್ಪರ ದೂರವಾಗುತ್ತಾರೆ ಎಂದು ಶಪಿಸಿದಳಂತೆ. ಹೀಗಾಗಿ, ಈ ದೇವಸ್ಥಾನದಲ್ಲಿ ದಂಪತಿ ಒಟ್ಟಾಗಿ ಪೂಜೆ ಮಾಡಬಾರದು ಎಂಬುದು ನಂಬಿಕೆ.

ತಾವರೆಕೆರೆಗೆ ಈಗ ನೇರಳೆ ಮೆರುಗು: ಕೊಡಗಿನ ಕುಶಾಲನಗರದಲ್ಲಿ ಅಪರೂಪದ ಪುಷ್ಪ ಸೊಬಗು

ಈ ದೇಗುಲದಲ್ಲಿ ಗಣಪತಿಯ ಪತ್ನಿಯ ವಿಗ್ರಹವನ್ನೂ ನೋಡಬಹುದು. ದಟ್ಟ ಅರಣ್ಯದ ನಡುವೆ ಈ ದೇವಿ ದೇವಸ್ಥಾನ ಇದೆ. ತನ್ನ ವಿಶಿಷ್ಟ ಸಂಪ್ರದಾಯದ ಕಾರಣದಿಂದಲೇ ಈ ದೇಗುಲ ಹೆಸರುವಾಸಿಯಾಗಿದೆ. ಸಾಕಷ್ಟು ಭಕ್ತರು ಇಲ್ಲಿಗೆ ಬರುತ್ತಾರೆ. ಶಿಮ್ಲಾಕ್ಕೆ ಹೋಗಿ ಅಲ್ಲಿಂದ ನೀವು ಈ ದೇಗುಲಕ್ಕೆ ಬರಬಹುದು. ಶಿಮ್ಲಾದಿಂದ ದೇವಸ್ಥಾನಕ್ಕೆ ತಲುಪಲು ಸಾಕಷ್ಟು ಸಾರಿಗೆ ವ್ಯವಸ್ಥೆ ಕೂಡಾ ಇದೆ. ಪ್ರವಾಸಕ್ಕೆಂದು ಬಂದ ಸಾಕಷ್ಟು ಮಂದಿ ಕೂಡಾ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

Debt-Free Temples: ಸಾಲದ ಶೂಲದಲ್ಲಿ ಸಿಕ್ಕಿದ್ದರೆ ಈ ದೇವಸ್ಥಾನಕ್ಕೆ ವಿಸಿಟ್ ಮಾಡಿ, ರಿಲ್ಯಾಕ್ಸ್ ಆಗುತ್ತೆ ನೋಡಿ