ಇಲ್ಲೊಬ್ಬ ಮಗ ಅಮ್ಮನ ಸೇವೆಗೆ ತನ್ನ ಜೀವವನ್ನು ಮುಡುಪಾಗಿಟ್ಟಿದ್ದಾನೆ. ಕೆಲ್ಸ ಬಿಟ್ಟು, ಬಜಾಜ್ ಚೇತಕ್ ನಲ್ಲಿ ಅಮ್ಮನ ಜೊತೆ 94 ಸಾವಿರ ಕಿಲೋಮೀಟರ್‌ ಪ್ರಯಾಣ ಬೆಳೆಸಿದ್ದಾನೆ. 

ವಯಸ್ಸಾದ ಅಪ್ಪ – ಅಮ್ಮ ಮನೆಯಲ್ಲಿದ್ರೆ ಹೊರೆ ಎನ್ನುವ ಮಕ್ಕಳೇ ಹೆಚ್ಚು. ಕರ್ತವ್ಯ ಮರೆಯುವ ಮಕ್ಕಳು, ಪಾಲಕರನ್ನು ವೃದ್ಧಾಶ್ರಮ (old age home)ಕ್ಕೆ ಸೇರಿಸಿ ಹೋಗ್ತಾರೆ. ಆದ್ರೆ ಮೈಸೂರಿನ ವ್ಯಕ್ತಿಯೊಬ್ಬರು ಅಮ್ಮನ ಸೇವೆಯನ್ನೇ ತಮ್ಮ ಗುರಿಯಾಗಿಸಿಕೊಂಡಿದ್ದಾರೆ. ಅಮ್ಮನ ಜೊತೆ ಬಜಾಜ್ ಚೇತಕ್ ಸ್ಕೂಟರ್ ಏರಿ ಭಾರತ ಸುತ್ತಿದ್ದಾರೆ. 75 ವರ್ಷದ ಅಮ್ಮನ ಜೊತೆ 44 ವರ್ಷದ ಡಿ. ಕೃಷ್ಣ ಕುಮಾರ್ ಪ್ರಯಾಣ ಮುಂದುವರೆಸಿದ್ದಾರೆ.

ಮಗ ಡಿ. ಕೃಷ್ಣ ಕುಮಾರ್ ಹಾಗೂ ತಾಯಿ ಚುಡಾರತ್ನ ಇಬ್ಬರೂ ಜನವರಿ 16, 2018 ರಿಂದ ಕುಮಾರ್ ತಂದೆಗೆ ಸೇರಿದ ಬೂದು ಬಣ್ಣದ ಬಜಾಜ್ ಚೇತಕ್ ಮೋಡಿಫೈ ಮಾಡಿ 94,000 ಕಿ.ಮೀ. ಪ್ರಯಾಣಿಸಿದ್ದಾರೆ. ಅವರು ತಮಿಳುನಾಡಿನ ಕನ್ಯಾಕುಮಾರಿಯಿಂದ ಶ್ರೀನಗರದ ಶಂಕರಾಚಾರ್ಯ ದೇವಸ್ಥಾನದವರೆಗೆ ಮತ್ತು ಗುಜರಾತ್ನ ದ್ವಾರಕಾದಿಂದ ಅರುಣಾಚಲ ಪ್ರದೇಶದ ಪರಶುರಾಮ ಕುಂಡ್ವರೆಗೆ ದೇಶದಾದ್ಯಂತ ತೀರ್ಥಯಾತ್ರೆ ಮಾಡಿದ್ದಾರೆ. ಇಷ್ಟೇ ಅಲ್ಲ ನೆರೆಯ ರಾಷ್ಟ್ರಗಳಾದ ನೇಪಾಳ, ಭೂತಾನ್ ಮತ್ತು ಮ್ಯಾನ್ಮಾರ್ಗೂ ಹೋಗಿ ಬಂದಿದ್ದಾರೆ.

ಕುಮಾರ್ ಮತ್ತು ಅವರ ತಾಯಿ ಪ್ರಯಾಣ ಆರಂಭಿಸಿದ ಕೇವಲ ನಾಲ್ಕು ತಿಂಗಳಲ್ಲೇ ಅಂದ್ರೆ ಮೇ 2019 ರಲ್ಲಿ ದಿ ಟೆಲಿಗ್ರಾಫ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತ್ತು. ತಾಯಿಗೆ ಸೇವೆ ಸಲ್ಲಿಸುವುದು ನನ್ನ ಧ್ಯೇಯ. ಅದಕ್ಕಾಗಿಯೇ ನಾನು ಈ ಪ್ರಯಾಣ ಪ್ರಾರಂಭಿಸಿದ್ದೇನೆ ಎಂದು ಬ್ರಹ್ಮಚಾರಿ ಕುಮಾರ್ ಹೇಳಿದ್ದಾರೆ. ಫೆಬ್ರವರಿ 12 ರಂದು 75 ವರ್ಷಕ್ಕೆ ಕಾಲಿಟ್ಟಿರುವ ಚುಡಾರತ್ನ ಪ್ರಯಾಣದ ಪ್ರತಿಯೊಂದು ಭಾಗವನ್ನು ಎಂಜಾಯ್ ಮಾಡ್ತಿರೋದಾಗಿ ಹೇಳಿದ್ದಾರೆ.

ನಾನು ಕೆಲವು ವರ್ಷಗಳಲ್ಲಿ ಜೀವಮಾನದ ಅನುಭವವನ್ನು ಪಡೆದುಕೊಂಡಿದ್ದೇನೆ. ನನ್ನ ಮಗ ತುಂಬಾ ಸುರಕ್ಷಿತ ಡ್ರೈವರ್. ರಸ್ತೆ ಕೆಟ್ಟದಾಗಿದ್ರೆ ಅವನು ತುಂಬಾ ನಿಧಾನವಾಗಿ ಗಾಡಿ ಓಡಿಸ್ತಾನೆ ಎಂದು ಮಗನ ಡ್ರೈವಿಂಗ್ ಹೊಗಳಿದ್ದಾರೆ ಚುಡಾರತ್ನ.

ಈ ಪ್ರಯಾಣ ಶುರುವಾಗಿದ್ದು ಹೇಗೆ? : 2015 ರಲ್ಲಿ ಅವರ ತಂದೆ ನಿಧನರಾದ ನಂತ್ರ ಕುಮಾರ್ ಅವರ ಜೀವನ ಬದಲಾಯಿತು. ಮೈಸೂರಿನಿಂದ ಮೂರು ಗಂಟೆಗಳ ದೂರದಲ್ಲಿರುವ ಹಳೇಬೀಡು ದೇವಸ್ಥಾನಕ್ಕೆ ಹೋಗಲು ಅಮ್ಮ ಬಯಸಿದ್ರು. ಅವರು ಈವರೆಗೆ ಅಲ್ಲಿಗೆ ಹೋಗಿರಲಿಲ್ಲ. ನಿಜ ಹೇಳ್ಬೇಕೆಂದ್ರೆ ಮನೆ ಕೆಲಸದಲ್ಲಿ ಕಳೆದು ಹೋಗಿದ್ದ ಚುಡಾರತ್ನ ಎಲ್ಲಿಗೂ ಪ್ರವಾಸಕ್ಕೆ ಹೋಗಿರಲಿಲ್ಲ. ಅದನ್ನು ಬದಲಾಯಿಸಲು ದೃಢನಿಶ್ಚಯ ಮಾಡಿದ್ದೆ ಎಂದು ಕುಮಾರ್ ಹೇಳಿದ್ದಾರೆ. ಜೀವನ ನಡೆಸಲು ಅಗತ್ಯವಿರುವಷ್ಟು ಹಣವನ್ನು ಕೃಷ್ಣ ಕುಮಾರ್ ಸಂಪಾದನೆ ಮಾಡಿದ್ದರು. ಅಮ್ಮನಿಗೆ ಪ್ರಪಂಚ ತೋರಿಸಲು ಮುಂದಾದ ಅವರು ಕೆಲಸ ಬಿಟ್ರು.

ಆರು ವರ್ಷಗಳ ಹಿಂದೆ ದಿ ಟೆಲಿಗ್ರಾಫ್ ತೆಗೆದ ಫೋಟೋದಲ್ಲಿ ಅವರ ಕೆದರಿದ ಕೂದಲು ಮತ್ತು ಉದ್ದ ಗಡ್ಡವನ್ನು ಕಾನ್ಬಹುದು. ಬ್ರೂಸ್ ಲೀ ಟೀ-ಶರ್ಟ್ ಧರಿಸಿದ್ದ ಅವರು ಹಿಂದೆ ಮಾರ್ಕೆಟಿಂಗ್ ವೃತ್ತಿಯಲ್ಲಿದ್ರು ಅನ್ನೋದು ಕಷ್ಟವಾಗಿತ್ತು. ಆದ್ರೀಗ ಕೂದಲು ಚಿಕ್ಕದಾಗಿದೆ. ಗಡ್ಡವನ್ನು ಟ್ರಿಮ್ ಮಾಡಿದ್ದಾರೆ. ಕೋವಿಡ್ -19, ಲಾಕ್ ಡೌನ್ ಸಮಯದಲ್ಲಿ ಅವರ ಪ್ರಯಾಣ ಸ್ಥಗಿತವಾಗಿತ್ತು. ಆ ಸಮಯದಲ್ಲಿ ಅವರು ಚಹಾ ತೋಟಗಳಿಗೆ ಹೆಸರುವಾಸಿಯಾದ ಜಲ್ಪೈಗುರಿಯ ಸ್ಯಾಮ್ಸಿಂಗ್ ಪಟ್ಟಣದಲ್ಲಿದ್ದರು. ಒಬ್ಬರ ಮನೆಯಲ್ಲಿ ಸುಮಾರು ಎರಡು ತಿಂಗಳು ಕಳೆದಿದ್ದರು ಕುಮಾರ್ ಹಾಗೂ ಅವರ ಅಮ್ಮ.

ಆಗಸ್ಟ್ 15, 2022 ರಂದು, ಕೃಷ್ಣ ಮತ್ತು ಚುಡಾರತ್ನ ಮತ್ತೆ ತಮ್ಮ ಪ್ರಯಾಣ ಪ್ರಾರಂಭಿಸಿದ್ದರು. ಎರಡನೇ ಹಂತದಲ್ಲಿ ಅವರು ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಕಾಶ್ಮೀರದಿಂದ ವಾಪಸ್ ಬರುವ ವೇಳೆ ಅವರು ಪಂಜಾಬ್, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ಸೇರಿದಂತೆ ಇತರ ಸ್ಥಳಗಳಿಗೆ ಭೇಟಿ ನೀಡಿ ಬಂದಿದ್ದಾರೆ. ಸೆಂಬರ್ 2023 ರಲ್ಲಿ ಅವರು ಮೈಸೂರಿಗೆ ವಾಪಸ್ ಆಗಿದ್ದರು. ಮೂರನೇ ಹಂತ ಈ ವರ್ಷ ಫೆಬ್ರವರಿ 28 ರಂದು ಪ್ರಾರಂಭವಾಗಿದೆ. ಈಗ ಆಂಧ್ರಪ್ರದೇಶ ಮತ್ತು ಒಡಿಶಾದ ಪೂರ್ವ ಕರಾವಳಿಐ ಕೆಲ ಭಾಗಗಳಿಗೆ ಅವರು ಭೇಟಿ ನೀಡ್ತಿದ್ದಾರೆ. ಹಲವಾರು ಭಾಷೆಗಳನ್ನು ಮಾತನಾಡಬಲ್ಲ ಕುಮಾರ್ ಗೆ ಪ್ರಯಾಣ ಸುಲಭವಾಗಿದೆ.