ಕಾಲಿಲ್ಲದಿದ್ದರೂ ಕಿಲಿಮಂಜಾರೋ ಏರಿದ ಬಾಂಬ್ ಬ್ಲಾಸ್ಟ್ ಗಾಯಾಳು
ಬಾಂಬ್ ಸ್ಫೋಟದಲ್ಲಿ ಕಾಲು ಕಳೆದುಕೊಂಡ 40 ವರ್ಷದ ಯುವಕರೊಬ್ಬರು ಗಾಲಿ ಕುರ್ಚಿಯ ಸಹಾಯದಿಂದ ಆಫ್ರಿಕಾದ ಅತ್ಯಂತ ಎತ್ತರದ ಶಿಖರವಾದ ಕಿಲಿಮಂಜಾರೋವನ್ನು ಏರಿ ಸಾಧನೆ ಮಾಡಿದ್ದಾರೆ.
ಸಾಧನೆಗೆ ಬೇಕಿರುವುದು ಯೌವ್ವನ, ದೈಹಿಕ ಸಾಮರ್ಥ್ಯವಲ್ಲ. ಧೃಡ ನಿರ್ಧಾರ ಹಾಗೂ ಮನೋಬಲ. ಇದು ಅನೇಕ ಬಾರಿ ಸಾಬೀತಾಗಿದೆ. ದೈಹಿಕ ಸಾಮರ್ಥ್ಯವಿಲ್ಲದಿದ್ದರೂ ಕೇವಲ ಮನೋಬಲದಿಂದ ಸಾಧನೆ ಮಾಡಿದ ಅನೇಕರು ಸ್ಪೂರ್ತಿಯ ಕತೆಯಾಗಿ ನಮ್ಮ ಸಮಾಜದಲ್ಲಿದ್ದಾರೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ ಮ್ಯಾಂಚಿಸ್ಟಾರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಕಾಲುಗಳ ಸ್ವಾಧೀನ ಕಳೆದುಕೊಂಡ ಮಾರ್ಟಿನ್ ಹಿಬರ್ಟ್. 2017 ರ ಅರೆನಾ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬದುಕುಳಿದವರಲ್ಲಿ ಇವರು ಒಬ್ಬರು. ಸ್ಫೋಟದ ವೇಳೆ ಬಾಂಬ್ ಒಂದರ ಬೋಲ್ಟ್ ಒಂದು ನೇರವಾಗಿ ಮಾರ್ಟಿನ್ ಹಿಬರ್ಟ್ ಅವರ ಬೆನ್ನು ಮುರಿಯ ಮೂಲಕ ಹೊರಟು ಹೋದಾಗ ಅವರ ಬದುಕು ಸಂಪೂರ್ಣವಾಗಿ ತಲೆಕೆಳಗಾಯಿತು.
ದೈಹಿಕವಾಗಿ ಚಟುವಟಿಕೆಯಿಂದ ಇದ್ದ ಅವರು ತಮ್ಮ ಕಾಲುಗಳ ಸ್ವಾಧೀನ ಕಳೆದುಕೊಂಡರು ಸ್ವತಂತ್ರವಾಗಿ ಹಾರಾಡುತ್ತಿದ್ದ ಹಕ್ಕಿಯಂತೆ ಬದುಕಿದ ಅವರು ಪ್ರತಿಯೊಂದಕ್ಕೂ ಯಾರಾನ್ನಾದರು ಅವಲಂಬಿಸುವ ಸ್ಥಿತಿ ಬಂದೊದಗಿತ್ತು. ಈ ಇದ್ಯಾವುದು ಅವರ ಆತ್ಮವಿಶ್ವಾಸವನ್ನು ಬದುಕುವ ಛಲವನ್ನು ಕುಂದಿಸಲಿಲ್ಲ. ತಮ್ಮ ಬಂಧುಗಳು, ಸ್ನೇಹಿತರ ಸಹಾಯದಿಂದ ಮತ್ತೆ ಪುಟಿದೆದ್ದ ಅವರು ಗಾಲಿಕುರ್ಚಿಯ ಸಹಾಯದಿಂದಲೇ ಇಂದು ಆಫ್ರಿಕಾದ ಅತೀ ಎತ್ತರದ ಬೆಟ್ಟ ಕಿಲಿಮಂಜಾರೋವನ್ನು ಏರುವ ಮೂಲಕ ಕಾಲಿದ್ದವರಿಗೆ ಸವಾಲೊಡಿದ್ದಾರೆ. ಬದುಕಿನಲ್ಲಿ ಬರುವ ಸಣ್ಣಪುಟ್ಟ ಘಟನೆಗಳಿಗೆ ಧೃತಿಗೆಟ್ಟು ಪ್ರಾಣ ಕಳೆದುಕೊಳ್ಳಲು ಹೊರಡುವ ಅನೇಕರಿಗೆ ಇದ್ದು ಸಾಧಿಸಿ ಎಂಬ ಸಂದೇಶ ಸಾರಿದ್ದಾರೆ.
ಕನ್ನಡಿಗನಿಗೆ ಶಿಖರ ಹತ್ತೋದೆ ಮಜಾ; ಕಿಲಿಮಂಜಾರೋ ಪರ್ವತದಲ್ಲಿ ಕನ್ನಡ ಧ್ವಜ
ಇಂಗ್ಲೆಂಡ್‌ನ ಲಂಕಾಶೈರ್ ಮೂಲದ 40 ವರ್ಷ ವಯಸ್ಸಿನ ಮಾರ್ಟಿನ್ ಹಿಬರ್ಟ್ ಅವರು ಅತೀ ಎತ್ತರದ ಕಿಲಿಮಂಜಾರೋ ಪರ್ವತ ಏರಿದ ಸಾಧನೆಯ ಜೊತೆ ದತ್ತಿಗಾಗಿ 1 ಮಿಲಿಯನ್ ಪೌಂಡ್ ಅಥವಾ ಸುಮಾರು ರೂ 9 ಕೋಟಿಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದಾರೆ. ಮಾರ್ಟಿನ್ ಹಿಬರ್ಟ್ ಅವರು ತಮ್ಮ ವೈಯಕ್ತಿಕ ಸಹಾಯಕರು, ಮಾರ್ಗದರ್ಶಕರು ಮತ್ತು ಅವರ ವೈದ್ಯಕೀಯ ಸಹಾಯಕರ ಸಹಾಯದಿಂದ 18,652 ಅಡಿ ಎತ್ತರದಲ್ಲಿರುವ ಟಾಂಜಾನಿಯಾದ ಕಿಲಿಮಂಜಾರೋ ಪರ್ವತದ ತುದಿಯನ್ನು ತಲುಪಿದ್ದಾರೆ. ಪರ್ವತಗಳನ್ನು ಪಾರ್ಶ್ವವಾಯು ಪೀಡಿತರು ಕೂಡ ಏರುವಂತಾಗಲು ಅವರು ಬಯಸಿದ್ದಾರೆ. ಹೀಗಾಗಿ ಮಾರ್ಟಿನ್ ಈ ಸಾಧನೆ ಮಾಡಿದ್ದು, ಬೆನ್ನುಮೂಳೆಯ ಗಾಯಗಳ ಚಿಕಿತ್ಸಾ ಸಂಘಕ್ಕೆ ಹಣವನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದಾರೆ.
ಅತಿ ಎತ್ತರದ ಕಿಲಿಮಂಜಾರೋ ಪರ್ವತದ ಮೇಲೆ ಸೋನು ಸೂದ್ ಫೋಟೋ; ಅಭಿಮಾನಿಯಿಂದ ಧನ್ಯವಾದ!
ಮಾರ್ಟಿನ್ ಪರ್ವತದ ತುದಿ ತಲುಪಿದಾಗ ಎಷ್ಟು ಖುಷಿಗೊಂಡಿದ್ದರೆಂದರೆ ಅವರು ಅವರ ಸ್ವಂತ ಭಾವನೆಯನ್ನೇ ನಂಬದಾಗಿದ್ದರು. ನಾನು ಶಿಖರದ ಮೇಲ್ಭಾಗವನ್ನು ತಲುಪಿದಾಗ ನನ್ನನ್ನೇ ನಾನು ಬಂಬದಾದೆ. ಪರ್ವತದ ತುದಿ ತಲುಪಿದ್ದೇನೆ ಎಂದು ತಿಳಿದಾಗ ನನಗೆ ತುಂಬಾ ಸಮಾಧಾನವಾಯಿತು. ಇದನ್ನು ನಾನು ಯಾವಾಗಲೂ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತೇನೆ ಎಂದು ಮಾರ್ಟಿನ್ ಅವರು ಹೇಳಿದ್ದಾಗಿ ಸ್ಕೈ ನ್ಯೂಸ್ ವರದಿ ಮಾಡಿದೆ. ಐದು ವರ್ಷಗಳ ಹಿಂದೆ, ನಾನು ಆಸ್ಪತ್ರೆಯಲ್ಲಿದ್ದೆ, ಚಲಿಸಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಇಲ್ಲಿ ನಾನು, ಐದು ವರ್ಷಗಳ ನಂತರ, ಕಿಲಿಮಂಜಾರೋದ ತುದಿಯಲ್ಲಿದ್ದೇನೆ. ಒಮ್ಮೆ ನೋಡಿ ಎಂದು ಮಾರ್ಟಿನ್ ಅವರು ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ.