ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಬೆಂಗಳೂರಿನಿಂದ ಜೋಗ್ ಫಾಲ್ಸ್‌ಗೆ ಹೊಸ ವಾರಾಂತ್ಯದ ಪ್ಯಾಕೇಜ್ ಪ್ರವಾಸವನ್ನು ಆರಂಭಿಸಿದೆ. ಈ ಪ್ರವಾಸವು ಜೋಗ್ ಫಾಲ್ಸ್ ಜೊತೆಗೆ ವರದಹಳ್ಳಿ, ಇಕ್ಕೇರಿ, ಮತ್ತು ಕೆಳದಿಯಂತಹ ಐತಿಹಾಸಿಕ ಸ್ಥಳಗಳ ವೀಕ್ಷಣೆಯನ್ನು ಒಳಗೊಂಡಿದೆ. ಈ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಶುಕ್ರವಾರ ಮತ್ತು ಶನಿವಾರಗಳಂದು ಲಭ್ಯವಿರುತ್ತದೆ.
ಬೆಂಗಳೂರು (ಆ.06): ಪ್ರಕೃತಿ ಪ್ರಿಯರಿಗೆ ಹಾಗೂ ವಾರಾಂತ್ಯದ ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸಿಹಿ ಸುದ್ದಿ ನೀಡಿದೆ. ಕೆಎಸ್‌ಆರ್‌ಟಿಸಿಯ ಬೆಂಗಳೂರು ಕೇಂದ್ರ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ "ಬೆಂಗಳೂರು - ಜೋಗ್ ಫಾಲ್ಸ್" ಮಾರ್ಗದ ನೂತನ ವಾರಾಂತ್ಯದ ಪ್ಯಾಕೇಜ್ ಟೂರ್ ಅನ್ನು ದಿನಾಂಕ 08-08-2026 ರಿಂದ ಆರಂಭಿಸಲಾಗುತ್ತಿದೆ.
ಈ ಪ್ಯಾಕೇಜ್ ಪ್ರವಾಸವು ಶಿವಮೊಗ್ಗ ಮತ್ತು ಸಾಗರ ಮಾರ್ಗವಾಗಿ ಸಂಚರಿಸಲಿದ್ದು, ನಾನ್ ಎಸಿ ಸ್ಲೀಪರ್ (Non-A/C Sleeper) ವಾಹನದ ಮೂಲಕ ಕಾರ್ಯಾಚರಣೆಗೊಳ್ಳಲಿದೆ. ವಾರಾಂತ್ಯದ ದಿನಗಳಾದ ಶುಕ್ರವಾರ ಮತ್ತು ಶನಿವಾರ ಬೆಂಗಳೂರಿನಿಂದ ಈ ಬಸ್ಸುಗಳು ಹೊರಡಲಿವೆ.
ಪ್ಯಾಕೇಜ್ ಟೂರ್‌ನಲ್ಲಿ ಏನೆಲ್ಲಾ ವೀಕ್ಷಿಸಬಹುದು? (840 ಕಿ.ಮೀ ಪ್ರಯಾಣ)
ಈ ಪ್ರವಾಸವು ಕೇವಲ ಜೋಗ್ ಫಾಲ್ಸ್ ವೀಕ್ಷಣೆಗೆ ಮಾತ್ರ ಸೀಮಿತವಾಗಿರದೆ, ಮಲೆನಾಡಿನ ಪ್ರಸಿದ್ಧ ಐತಿಹಾಸಿಕ ಹಾಗೂ ಧಾರ್ಮಿಕ ತಾಣಗಳನ್ನೂ ಒಳಗೊಂಡಿದೆ:
- ಸಾಗರ
- ವರದಹಳ್ಳಿ
- ವರದಮೂಲ
- ಇಕ್ಕೇರಿ
- ಕೆಳದಿ
- ವಿಶ್ವಪ್ರಸಿದ್ಧ ಜೋಗ್ ಫಾಲ್ಸ್ (Jog Falls)
- ಸಾಗರದಲ್ಲಿ ಶಾಪಿಂಗ್ ಸಮಯ
ಪ್ರಯಾಣದ ಸಮಯ ಮತ್ತು ವೇಳಾಪಟ್ಟಿ:
ರಾತ್ರಿ 10:30 (22:30): ಬೆಂಗಳೂರಿನಿಂದ ಸಾಗರಕ್ಕೆ ನಿರ್ಗಮನ.
ಬೆಳಿಗ್ಗೆ 05:30 - 07:00: ಸಾಗರದ ಹೋಟೆಲ್‌ನಲ್ಲಿ ಫ್ರೆಶ್ ಅಪ್ ಮತ್ತು ವಿಶ್ರಾಂತಿ.
ಬೆಳಿಗ್ಗೆ 07:00 - 07:15: ಬೆಳಗಿನ ಉಪಹಾರ.
ಬೆಳಿಗ್ಗೆ 07:15 - ಮಧ್ಯಾಹ್ನ 12:30: ವರದಹಳ್ಳಿ, ವರದಮೂಲ, ಇಕ್ಕೇರಿ ಹಾಗೂ ಕೆಳದಿ ತಾಣಗಳ ಭೇಟಿ.
ಮಧ್ಯಾಹ್ನ 12:45 - 01:15: ಮಧ್ಯಾಹ್ನದ ಊಟ (ಸಾಗರದಲ್ಲಿ).
ಮಧ್ಯಾಹ್ನ 01:30 - ಸಂಜೆ 06:15: ಸಾಗರದಿಂದ ನಿರ್ಗಮಿಸಿ, ವಿಶ್ವಪ್ರಸಿದ್ಧ ಜೋಗ್ ಫಾಲ್ಸ್ ವೀಕ್ಷಣೆ.
ಸಂಜೆ 07:00 - ರಾತ್ರಿ 08:45: ಸಾಗರದಲ್ಲಿ ಶೋಪಿಂಗ್ ಹಾಗೂ ರಾತ್ರಿ ಊಟ.
ರಾತ್ರಿ 10:00 (22:00): ಸಾಗರದಿಂದ ನಿರ್ಗಮನ.
ಬೆಳಿಗ್ಗೆ 05:00: ಮರುದಿನ ಬೆಳಿಗ್ಗೆ ಬೆಂಗಳೂರು ತಲುಪುವುದು.
ಟಿಕೆಟ್ ದರ ಮತ್ತು ಸೌಲಭ್ಯಗಳು:
ವಯಸ್ಕರಿಗೆ (Adults): ₹3,300/-
ಮಕ್ಕಳಿಗೆ (6 ರಿಂದ 12 ವರ್ಷ): ₹3,000/-
ಟಿಕೆಟ್ ದರದಲ್ಲಿ ಏನೆಲ್ಲಾ ಸೇರಿದೆ?
ಈ ಟಿಕೆಟ್ ದರದಲ್ಲಿ ಬಸ್ ಪ್ರಯಾಣದ ದರ (ಬಿ.ಇ.ಎಸ್ ಶುಲ್ಕ ಹಾಗೂ ಜಿಎಸ್‌ಟಿ ಸೇರಿ), ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ, ಗೈಡ್ ಶುಲ್ಕ (ದಿನಕ್ಕೆ ₹500), ಜೋಗ್ ಫಾಲ್ಸ್ ಪ್ರವೇಶ ಶುಲ್ಕ (₹10), ಟೋಲ್ ಫೀ (₹63) ಮತ್ತು ಮುಂಗಡ ಶುಲ್ಕ (₹20) ಸಂಪೂರ್ಣವಾಗಿ ಸೇರಿದೆ. ಪ್ರಯಾಣಿಕರು ಊಟ ಅಥವಾ ಪ್ರವೇಶ ದರಕ್ಕೆ ಹೆಚ್ಚುವರಿಯಾಗಿ ಹಣ ನೀಡುವ ಅಗತ್ಯವಿರುವುದಿಲ್ಲ.
ಬುಕಿಂಗ್ ಹಾಗೂ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಸಾರ್ವಜನಿಕರು ಈ ಪ್ರವಾಸದ ಸೌಲಭ್ಯ ಪಡೆಯಲು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್‌ಗಳಾದ www.ksrtc.in ಅಥವಾ www.ksrtc.karnataka.gov.in ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು: 080-26252625, 7760990100, 7760990560, 7760990287.


