ಜೋಗ್ ಫಾಲ್ಸ್‌ನ ನಿಷೇಧಿತ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಬೆಂಗಳೂರು ಮೂಲದ ಯೂಟ್ಯೂಬರ್ ಮತ್ತು ಸ್ಥಳೀಯ ಗೈಡ್ ವಿರುದ್ಧ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. \

ಕಾರವಾರ, ಉತ್ತರ ಕನ್ನಡ (ಆ.7): ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಜೋಗ್ ಫಾಲ್ಸ್‌ನ ಅಪಾಯಕಾರಿ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಬೆಂಗಳೂರು ಮೂಲದ ಯೂಟ್ಯೂಬರ್ ಗೌತಮ್ ಅರಸು (32) ಹಾಗೂ ಸೊರಬ ಮೂಲದ ಗೈಡ್ ಸಿದ್ಧರಾಜ್ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ:

ಮಾವಿನಗುಂಡಿಯ ಬ್ರಿಟಿಷ್ ಬಂಗಲೆ ಕಡೆಯಿಂದ ರಾಜಾ ಫಾಲ್ಸ್ ಬೀಳುವ ಜಾಗಕ್ಕೆ ತೆರಳಿದ್ದ ಯುಟ್ಯೂಬರ್. ಈ ಭಾಗವು ಎತ್ತರದ ಬಂಡೆಗಲ್ಲಿನಿಂದ ಜಲಪಾತವು ಧುಮ್ಮಿಕ್ಕುವ ಅತ್ಯಂತ ಅಪಾಯಕಾರಿ ಸ್ಥಳವಾಗಿದೆ. ಈ ಪ್ರದೇಶವನ್ನು ಸಾರ್ವಜನಿಕರ ಸುರಕ್ಷತೆಗಾಗಿ ನಿಷೇಧಿತ ವಲಯವೆಂದು ಘೋಷಿಸಲಾಗಿದ್ದು, ಯಾರೂ ಇಲ್ಲಿ ಪ್ರವೇಶಿಸದಂತೆ ಎಚ್ಚರಿಕೆಯ ಫಲಕಗಳನ್ನು ಸಹ ಅಳವಡಿಸಲಾಗಿದೆ. ಆದರೆ, ಬೆಂಗಳೂರಿನ ಜಾಲಹಳ್ಳಿಯ ಗೌತಮ್ ಅರಸು ಎಂಬ ಯೂಟ್ಯೂಬರ್, ಸೊರಬ ಮೂಲದ ಗೈಡ್ ಸಿದ್ಧರಾಜ್‌ನೊಂದಿಗೆ, ಬಂಡೆಗಲ್ಲಿನ ಹತ್ತಿರಕ್ಕೆ ತೆರಳಿ, ಅಪಾಯಕಾರಿ ಸ್ಥಳದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.

ಗೌತಮ್ ಅವರು ಈ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್ ‘Gowtham Naidu’ ರಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಗೌತಮ್ ರಾಜಾ ಫಾಲ್ಸ್‌ನ ಅತ್ಯಂತ ಅಪಾಯಕಾರಿ ಬಂಡೆಗಲ್ಲಿನ ಹತ್ತಿರ ನಿಂತು ವಿಡಿಯೋ ರೆಕಾರ್ಡ್ ಮಾಡಿದ್ದು, ಇದು ಸ್ಥಳೀಯರ ಗಮನಕ್ಕೆ ಬಂದಿದೆ. ಇಂಥ ಅಪಾಯಕಾರಿ ಚಿತ್ರೀಕರಣ ಇತರರಿಗೆ ಪ್ರೇರಣೆ ನೀಡುವ ಸಾಧ್ಯತೆ ಹಿನ್ನೆಲೆ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ಪೊಲೀಸ್ ಕ್ರಮ

ಸಿದ್ದಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಈ ಘಟನೆಯ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ. ಗೌತಮ್ ಅರಸು ಮತ್ತು ಸಿದ್ಧರಾಜ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.