ಭಾರತೀಯ ರೈಲ್ವೆಯು ತನ್ನ 40 ವರ್ಷ ಹಳೆಯ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯನ್ನು (PRS) ಆಗಸ್ಟ್‌ನಿಂದ ನವೀಕರಿಸಲು ಸಿದ್ಧತೆ ನಡೆಸಿದೆ. ಈ ಹೊಸ ವ್ಯವಸ್ಥೆಯು RailOne ಆ್ಯಪ್‌ನೊಂದಿಗೆ ಸಂಯೋಜನೆಗೊಂಡು, ವೇಟಿಂಗ್ ಲಿಸ್ಟ್ ಟಿಕೆಟ್‌ಗಳಿಗೆ ಮಿತಿ ವಿಧಿಸುವಂತಹ ನಿಯಮಗಳೊಂದಿಗೆ ವೇಗದ ಮತ್ತು ಸುಗಮ ಟಿಕೆಟ್ ಬುಕ್ಕಿಂಗ್ ಅನುಭವವನ್ನು ನೀಡಲಿದೆ.

ಭಾರತೀಯ ರೈಲ್ವೆ ದಶಕಗಳಲ್ಲಿಯೇ ಅತಿ ದೊಡ್ಡ ರೈಲ್ವೆ ಮೀಸಲಾತಿ ವ್ಯವಸ್ಥೆಯ ನವೀಕರಣಕ್ಕೆ ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ, ಆಗಸ್ಟ್‌ನಿಂದ ಟೆಕೆಟ್ ಕಾಯ್ದಿರಿಸುವಿಕೆ ವ್ಯವಸ್ಥೆ (Passenger Reservation System - PRS) ಯನ್ನು ಅಪ್​ಡೇಟ್​ ಮಾಡುತ್ತಿದೆ. 1986ರಿಂದ ಬಳಕೆಯಲ್ಲಿರುವ ಹಳೆಯ ವ್ಯವಸ್ಥೆಯನ್ನು ಬದಲಿಸಿ, ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಹೊಸ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದ್ದು, ಇದು ಆಗಸ್ಟ್​ನಿಂದ ಆರಂಭ ಆಗಲಿದೆ. ಭಾರತೀಯ ರೈಲ್ವೆ ಇಲಾಖೆಯ ಈ ಹೊಸ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೆ ತರಲಿದ್ದು, ಈ ವೇಳೆ ಸೇವೆಯಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲಕ್ಷಾಂತರ ಪ್ರಯಾಣಿಕರಿಗೆ ತ್ವರಿತವಾಗಿ ಮತ್ತು ಸುಗಮವಾಗಿ ಟಿಕೆಟ್ ಬುಕ್ಕಿಂಗ್ ಅನುಭವ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶ.

40 ವರ್ಷಗಳ ಹಳೆಯ ವ್ಯವಸ್ಥೆ

ಪ್ರಸ್ತುತ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯನ್ನು 1986 ರಲ್ಲಿ ಪರಿಚಯಿಸಲಾಯಿತು ಮತ್ತು ಕೆಲವೇ ಕೆಲವು ಸಲ ಅಪ್​ಡೇಟ್​ ಆಗಿದೆ. ಆದರೆ ತಂತ್ರಜ್ಞಾನ ಇಷ್ಟು ಮುಂದುವರೆದರೂ ಅದಿನ್ನೂ ಹಳೆಯ ವ್ಯವಸ್ಥೆಯಲ್ಲಿಯೇ ಇದೆ. ಈ ಹಿನ್ನೆಲೆಯಲ್ಲಿ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪುನರ್ನಿರ್ಮಿಸುವ ಯೋಜನೆ ಕೇಂದ್ರ ಸರ್ಕಾರ ಮಾಡಿದೆ.

ಇದು ಆನ್‌ಲೈನ್ ರೈಲು ಟಿಕೆಟ್ ಬುಕಿಂಗ್‌ಗೆ ಹೆಚ್ಚುತ್ತಿರುವ ಬೇಡಿಕೆಯನ್ನು ನಿರ್ವಹಿಸಲು ಹೆಚ್ಚು ಸಹಕಾರಿಯಾಗಿದೆ. ಅಷ್ಟಕ್ಕೂ, ಭಾರತೀಯ ರೈಲ್ವೆ 2002 ರಲ್ಲಿ ಇಂಟರ್ನೆಟ್ ಆಧರಿತ ಟಿಕೆಟಿಂಗ್ ಅನ್ನು ಪ್ರಾರಂಭಿಸಿತು ಮತ್ತು ಇಂದು ಹೆಚ್ಚಿನ ಪ್ರಯಾಣಿಕರು ಮೀಸಲಾತಿ ಕೌಂಟರ್‌ಗಳಿಗೆ ಭೇಟಿ ನೀಡುವ ಬದಲು ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಲು ಬಯಸುತ್ತಾರೆ. ಈಗ ಶೇಕಡಾ 88 ರಷ್ಟು ಟಿಕೆಟ್ ಬುಕಿಂಗ್‌ಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ನಡೆಯುತ್ತಿವೆ. ಇದರಿಂದಾಗಿಯೇ ಈ ಹೊಸ ವ್ಯವಸ್ಥೆ ಎಂದಿದೆ ಸರ್ಕಾರ.

ಪ್ರಮುಖ ಬದಲಾವಣೆ ಏನು?

ಇದು ಕೃತಕ ಬುದ್ಧಿಮತ್ತೆ ಜಮಾನಾ. ಈ ಹಿನ್ನೆಲೆಯಲ್ಲಿ, ಭಾರತೀಯ ರೈಲ್ವೆ 2026ರ ಜೂನ್ 1ರಿಂದ ಎಸಿ ಹಾಗೂ ಸ್ಲೀಪರ್ ಕೋಚ್‌ಗಳಲ್ಲಿ ವೇಟಿಂಗ್ ಲಿಸ್ಟ್ ಟಿಕೆಟ್‌ಗಳ ಸಂಖ್ಯೆಗೆ ಮಿತಿ ವಿಧಿಸುವ ಹೊಸ ನಿಯಮ ಜಾರಿಗೆ ತಂದಿದೆ. ಹೆಚ್ಚುತ್ತಿರುವ ಜನಸಂದಣಿ, ಬೋಗಿಗಳಲ್ಲಿ ನಿಂತೇ ಪ್ರಯಾಣಿಸುವ ಪರಿಸ್ಥಿತಿ ಹಾಗೂ ಸುರಕ್ಷತಾ ಸಮಸ್ಯೆಗಳನ್ನು ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹೊಸ ನಿಯಮದಂತೆ ಸ್ಲೀಪರ್ ಕೋಚ್‌ಗಳಲ್ಲಿ ವೇಟಿಂಗ್ ಲಿಸ್ಟ್ ಅನ್ನು ಒಟ್ಟು ಆಸನ ಸಾಮರ್ಥ್ಯದ ಸುಮಾರು 30%ಕ್ಕೆ ಮತ್ತು ಎಸಿ ಕೋಚ್‌ಗಳಲ್ಲಿ 60%ಕ್ಕೆ ಮಿತಿಗೊಳಿಸಲಾಗುತ್ತದೆ. ಇದರಿಂದ ದೃಢೀಕೃತ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚುವ ಜೊತೆಗೆ ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಹಾಗೂ ಸುರಕ್ಷಿತ ಪ್ರಯಾಣದ ಅನುಭವ ಸಿಗಲಿದೆ.

RailOne ಆ್ಯಪ್‌

RailOne ಆ್ಯಪ್‌ಗೆ ಹೊಸ ಶಕ್ತಿ ಹೊಸ ಮೀಸಲಾತಿ ವ್ಯವಸ್ಥೆಯನ್ನು RailOne ಆ್ಯಪ್‌ನೊಂದಿಗೆ ಸಂಯೋಜಿಸಲಾಗುತ್ತಿದೆ. 2025ರ ಜುಲೈನಲ್ಲಿ ಬಿಡುಗಡೆಯಾದ ಈ ಆ್ಯಪ್ ಈಗಾಗಲೇ 3.5 ಕೋಟಿಗೂ ಹೆಚ್ಚು ಮಂದಿ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಈ ಆ್ಯಪ್ ಟಿಕೆಟ್ ಬುಕ್ಕಿಂಗ್, ರದ್ದತಿ ಹಾಗೂ ರೈಲಿನ ಲೈವ್ ಟ್ರ್ಯಾಕಿಂಗ್ ಸೌಲಭ್ಯಗಳನ್ನು ನೀಡುತ್ತದೆ. ಜೊತೆಗೆ ಪ್ಲಾಟ್‌ಫಾರ್ಮ್ ಮಾಹಿತಿ, ಕೋಚ್ ವಿವರಗಳು ಹಾಗೂ ದೂರು ದಾಖಲಿಸುವ ಸೌಲಭ್ಯಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುತ್ತದೆ.

ಎಷ್ಟು ಟಿಕೆಟ್​ ಬುಕ್​?

ಈ ಅಪ್ಲಿಕೇಶನ್ ಪ್ರಯಾಣಿಕರಿಗೆ ಟಿಕೆಟ್‌ಗಳನ್ನು ಬುಕ್ ಮಾಡಲು ಮತ್ತು ರದ್ದುಗೊಳಿಸಲು, ರೈಲು ಚಾಲನೆಯ ಸ್ಥಿತಿಯನ್ನು ಪರಿಶೀಲಿಸಲು, ಪ್ಲಾಟ್‌ಫಾರ್ಮ್ ಮತ್ತು ಕೋಚ್ ಮಾಹಿತಿಯನ್ನು ಪ್ರವೇಶಿಸಲು, ದೂರುಗಳನ್ನು ಸಲ್ಲಿಸಲು ಮತ್ತು ಒಂದೇ ಪ್ಲಾಟ್‌ಫಾರ್ಮ್‌ನಿಂದ ಇತರ ರೈಲ್ವೆ ಸೇವೆಗಳನ್ನು ಬಳಸಲು ಅನುಮತಿಸುತ್ತದೆ. ರೈಲ್ವೆ ಅಪ್ಲಿಕೇಶನ್ ಮೂಲಕ ಪ್ರತಿದಿನ ಸುಮಾರು 9.29 ಲಕ್ಷ ಟಿಕೆಟ್‌ಗಳನ್ನು ಬುಕ್ ಮಾಡಲಾಗುತ್ತದೆ ಎಂದು ರೈಲ್ವೆ ಹೇಳುತ್ತದೆ. ಇದರಲ್ಲಿ ಸುಮಾರು 7.2 ಲಕ್ಷ ಕಾಯ್ದಿರಿಸದ ಟಿಕೆಟ್‌ಗಳು ಮತ್ತು 2.09 ಲಕ್ಷ ಕಾಯ್ದಿರಿಸಿದ ಟಿಕೆಟ್‌ಗಳು ಸೇರಿವೆ.