ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಅಭಿವೃದ್ಧಿ ಪರ್ವ ಆರಂಭವಾಗಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ, L&T ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯಂ ಜೊತೆ ಕೈಗಾರಿಕಾ ಬೆಳವಣಿಗೆ ಬಗ್ಗೆ ಚರ್ಚಿಸಿದ್ದಾರೆ, ಅತ್ತ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನ ಭೇಟಿ ಮಾಡಿದ್ದಾರೆ.
ಪಶ್ಚಿಮ ಬಂಗಾಳ(West bengal)ದ ಮುಖ್ಯಮಂತ್ರಿ ಸುವೇಂದು ಅಧಿಕಾರಿ(CM Suvendu adhikari) ಅವರು ಶನಿವಾರ ಲಾರ್ಸೆನ್ ಮತ್ತು ಟೂಬ್ರೊ (L&T) ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ಸುಬ್ರಹ್ಮಣ್ಯಂ(SN Subrahmanyam) ಅವರನ್ನು ಕೋಲ್ಕತ್ತಾ ವಿಮಾನ ನಿಲ್ದಾಣ(Kolkata Airport)ದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಭೆಯಲ್ಲಿ ಅವರು ರಾಜ್ಯದ ಕೈಗಾರಿಕಾ ಬೆಳವಣಿಗೆ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ಬಗ್ಗೆ ಚರ್ಚಿಸಿದರು.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (X) ಪೋಸ್ಟ್ ಮಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು, 'ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಲಾರ್ಸೆನ್ ಮತ್ತು ಟೂಬ್ರೊ (L&T) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಎನ್. ಸುಬ್ರಹ್ಮಣ್ಯಂ ಜಿ ಅವರೊಂದಿಗೆ ನಡೆದ ಸಭೆ ಯಶಶ್ವಿಯಾದ ಬಗ್ಗೆ ಬರೆದುಕೊಂಡಿದ್ದಾರೆ.
ಅಭಿವೃದ್ಧಿಯತ್ತ ಪಶ್ಚಿಮ ಬಂಗಾಳ
ನಮ್ಮ 30 ನಿಮಿಷಗಳ ಚರ್ಚೆಯಲ್ಲಿ ಪಶ್ಚಿಮ ಬಂಗಾಳದ ಕೈಗಾರಿಕಾ ಪುನಶ್ಚೇತನದ ಬಗ್ಗೆ ಹೆಚ್ಚು ಗಮನ ಹರಿಸಿದೆವು. ಬೃಹತ್ ಹೂಡಿಕೆಗಳನ್ನು ಆಕರ್ಷಿಸಲು, ಆರ್ಥಿಕ ಬೆಳವಣಿಗೆ ಸಾಧಿಸಲು ನಾವು ನಮ್ಮ ರಾಜ್ಯದ ಯುವಕರಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಬೇಕಾದ ಒಂದು ದೃಢವಾದ ಸಿಸ್ಟಂ ನಿರ್ಮಿಸುವ ಬಗ್ಗೆ ಮಾತುಕತೆ ನಡೆಸಿದೆವು. ಪಶ್ಚಿಮ ಬಂಗಾಳದಲ್ಲಿ ಅಪಾರ ಸಾಮರ್ಥ್ಯವಿದೆ. ರಾಜ್ಯದ ಆರ್ಥಿಕ ಚಿತ್ರಣವನ್ನು ಬದಲಾಯಿಸುವಲ್ಲಿ ಇಂತಹ ಕೈಗಾರಿಕಾ ದಿಗ್ಗಜರೊಂದಿಗಿನ ವ್ಯೂಹಾತ್ಮಕ ಸಹಭಾಗಿತ್ವವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಕೇಂದ್ರ ರೈಲ್ವೆ ಸಚಿವರ ಭೇಟಿಯಾದ ಸುವೇಂದು ಅಧಿಕಾರಿ
ಇದಕ್ಕೂ ಮುನ್ನ, ಅಧಿಕಾರಿ ಅವರು ರಾಜ್ಯ ಸಚಿವಾಲಯ 'ನಬನ್ನಾ'ದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಬರಮಾಡಿಕೊಂಡರು. ಈ ವೇಳೆ ಕೇಂದ್ರ ರೈಲ್ವೆ ಸಚಿವರೊಂದಿಗಿನ ಮಹತ್ವದ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, 'ಪಶ್ಚಿಮ ಬಂಗಾಳದ ಮೂಲಸೌಕರ್ಯ ಮತ್ತು ಬೆಳವಣಿಗೆಗೆ ಇದೊಂದು ಐತಿಹಾಸಿಕ ದಿನ. ಇಂದು, ನಾನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜಿ ಅವರೊಂದಿಗೆ ನಬನ್ನಾದಲ್ಲಿ ಅತ್ಯಂತ ಮಹತ್ವದ ಸಭೆ ನಡೆಸಿದ್ದು ಯಶಸ್ವಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಯನ್ನು ಚುರುಕುಗೊಳಿಸುವುದೇ ನಮ್ಮ ಮುಖ್ಯ ವಿಷಯವಾಗಿತ್ತು. ಕೇಂದ್ರ ಸಚಿವರು ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮ ಪ್ರಯತ್ನಗಳಿಗೆ ತಕ್ಷಣ ಫಲಿತಾಂಶ ಸಿಕ್ಕಿದೆ:
ನಮ್ಮ ಜಂಟಿ ಪ್ರಯತ್ನಗಳಿಗೆ ತಕ್ಷಣದ ಫಲಿತಾಂಶ ಸಿಕ್ಕಿರುವುದು ನನಗೆ ಅತೀವ ಸಂತಸ ತಂದಿದೆ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಹಲವು ನಿರ್ಣಾಯಕ ರೈಲ್ವೆ ಯೋಜನೆಗಳಿಗೆ ಅಧಿಕೃತವಾಗಿ 'ಗ್ರೀನ್ ಸಿಗ್ನಲ್' ಸಿಕ್ಕಿದೆ. ಇದು ಉತ್ತರ ಮತ್ತು ದಕ್ಷಿಣ ಬಂಗಾಳದಾದ್ಯಂತ ಉಪನಗರ ಮತ್ತು ಮುಖ್ಯ ಮಾರ್ಗಗಳ ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ ಎಂದಿದ್ದಾರೆ. ಮುಂದುವರಿದು, ಬಾಕಿ ಉಳಿದಿರುವ ಟ್ರ್ಯಾಕ್ ಸಂಬಂಧಿತ ಕಾಮಗಾರಿಗಳು ವೇಗ ಪಡೆದುಕೊಳ್ಳಲಿವೆ. ಅಮೃತ್ ಭಾರತ್ ಯೋಜನೆಯಡಿ ಪ್ರಮುಖ ನಿಲ್ದಾಣಗಳ ಆಧುನೀಕರಣದಿಂದ ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯಗಳು ಸಿಗಲಿವೆ. ಒಟ್ಟಾರೆಯಾಗಿ, ಸಾವಿರಾರು ಕೋಟಿ ರೂಪಾಯಿಗಳ ಈ ಕಾಮಗಾರಿಗಳು ಸ್ಥಳೀಯವಾಗಿ ಭಾರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ ಮತ್ತು ನಮ್ಮ ರಾಜ್ಯದ ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡಲಿವೆ ಎಂದು ಅವರು ವಿವರಿಸಿದರು.
ಕೇಂದ್ರ ಸರ್ಕಾರದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿ ಅವರು, ಪಶ್ಚಿಮ ಬಂಗಾಳದ ಪ್ರಗತಿಗೆ ಅಚಲ ಬೆಂಬಲ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ(PM Modi) ಮತ್ತು ಕೇಂದ್ರ ರೈಲ್ವೆ ಸಚಿವರಿಗೆ ನನ್ನ ಕೃತಜ್ಞತೆಗಳು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಭಿವೃದ್ಧಿಯ ದೃಷ್ಟಿಯೊಂದಿಗೆ ಒಟ್ಟಾಗಿ ಕೆಲಸ ಮಾಡಿದಾಗ, ಜನರೇ ಗೆಲ್ಲುತ್ತಾರೆ. ಪಶ್ಚಿಮ ಬಂಗಾಳದ ಜನರ ಅನುಕೂಲಕ್ಕಾಗಿ ಈ ಯೋಜನೆಗಳನ್ನು ಸುಗಮವಾಗಿ ಮತ್ತು ತ್ವರಿತವಾಗಿ ಕಾರ್ಯಗತಗೊಳಿಸಲು ನಾವು ಬದ್ಧರಾಗಿದ್ದೇವೆ' ಎಂದು ತಮ್ಮ ಪೋಸ್ಟ್ ಮುಗಿಸಿದ್ದಾರೆ.
(ಈ ಸುದ್ದಿಯ ಹೆಡ್‌ಲೈನ್ ಹೊರತುಪಡಿಸಿ, ಉಳಿದ ಭಾಗವನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್‌ನಿಂದ ಪ್ರಕಟಿಸಲಾಗಿದೆ.)


