ಮನೆ ಮನೆಯಲ್ಲೂ ಹಾವಿನ ಬಾಕ್ಸ್ ! ಸಾವಿರಾರು ಕೋಬ್ರಾ ಇಟ್ಕೊಂಡು ಏನು ಮಾಡ್ತಾರೆ?
Vietnam Cobra Village : ಅಪರೂಪಕ್ಕೆ ಒಂದು ಹಾವು ಕಂಡ್ರೆ ಕೈಕಾಲು ನಡುಗುತ್ತೆ. ಇನ್ನು ಬಾಕ್ಸ್ ತುಂಬಾ ಹಾವು ಕಂಡ್ರೆ ಪರಿಸ್ಥಿತಿ ಏನಾಗ್ಬೇಡ? ಮನೆ ಮೆನಯಲ್ಲೂ ಸಾವಿರಾರು ಹಾವುಗಳಿರುವ ಗ್ರಾಮ ಒಂದಿದೆ. ಈ ಹಾವನ್ನು ಅವರು ಏನು ಮಾಡ್ತಾರೆ ಗೊತ್ತಾ?

ಕೋಬ್ರಾ ವಿಲೇಜ್
ವಿಯಟ್ನಾಂನ ವಿನ್ ಸನ್ ಗ್ರಾಮಕ್ಕೆ ಹೋದ್ರೆ ಪ್ರತಿಯೊಬ್ಬರ ಮನೆಯಲ್ಲೂ ನೀವು ಹಾವಿನ ಬಾಕ್ಸ್ ನೋಡ್ಬಹುದು. ಮನೆ, ಹೊಲ ಅಂತ ಎಲ್ಲ ಕಡೆ ಹಾವನ್ನು ಅವರು ಸಾಕ್ತಿದ್ದಾರೆ. ಇಲ್ಲಿ 600 ಕ್ಕೂ ಹೆಚ್ಚು ಕುಟುಂಬಗಳು ನಾಗರಹಾವುಗಳನ್ನು ಸಾಕುತ್ತವೆ. ಅನೇಕ ಮನೆಗಳಲ್ಲಿ 1,000 ರಿಂದ 5,000 ಹಾವುಗಳಿವೆ. ಕಳೆದ 200 ವರ್ಷಗಳಿಂದ ಈ ವಿಶಿಷ್ಟ ಮತ್ತು ಅಪಾಯಕಾರಿ ಬ್ಯುಸಿನೆಸ್ ನಡೆಯುತ್ತಿದೆ. ಹಾಗಾಗಿ ಅದಕ್ಕೆ ಕೋಬ್ರಾ ಸಿಟಿ ಎಂದೇ ಹೆಸರು ಬಂದಿದೆ.
ಹಾವು ಸಾಕಣೆ
ಕೋಬ್ರಾ ವಿಲೇಜ್ ಜನರಿಗೆ ನಾಗರಹಾವುಗಳೇ ಜೀವನೋಪಾಯದ ಮೂಲ. ಅಪಾಯಕಾರಿ, ವಿಪೂರಿತ ಹಾವನ್ನು ಅವರು ಸಾಕ್ತಾರೆ. ಇಲ್ಲಿನ ಜನರು ತಲೆಮಾರುಗಳಿಂದ ನಾಗರಹಾವು ಸಾಕಣೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ನಾಗರ ಹಾವಿನ ಸಾಕಣೆ ಮಾಡುವ ಈ ಹಳ್ಳಿಯ ಜನರು ಬರೀ ಹಾವಿನ ಮಾಂಸ ಮಾರಾಟ ಮಾಡೋದಿಲ್ಲ. ಮಾಂಸ, ಚರ್ಮ, ಮೊಟ್ಟ, ವಿಷ ಮತ್ತು ಇತರ ಉತ್ಪನ್ನಗಳನ್ನು ಮಾರಾಟ ಮಾಡಿ ಉತ್ತಮ ಆದಾಯ ಗಳಿಸ್ತಿದ್ದಾರೆ. 2024 ರಲ್ಲಿ, ವಿನ್ ಸನ್ ಅವರ ಹಾವಿನ ವ್ಯವಹಾರವು 100 ಬಿಲಿಯನ್ ವಿಯೆಟ್ನಾಮೀಸ್ ಡಾಂಗ್ ಅಂದ್ರೆ ಸುಮಾರು 4 ಮಿಲಿಯನ್ ಡಾಲರ್ ಗಿಂತ ಹೆಚ್ಚಾಗಿತ್ತು.
ವಿದೇಶಕ್ಕೆ ಮಾರಾಟ
ಪ್ರತಿ ವರ್ಷ ಲಕ್ಷಾಂತರ ನಾಗರಹಾವಿನ ಮೊಟ್ಟೆಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ. ಅವುಗಳಲ್ಲಿ ಹೆಚ್ಚಿನ ಸಂಖ್ಯೆಯನ್ನು ದೇಶೀಯವಾಗಿ ಮತ್ತು ವಿದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸ್ಥಳೀಯ ಆರ್ಥಿಕತೆಯ ಹೆಚ್ಚಿನ ಭಾಗವು ಈ ವ್ಯವಹಾರವನ್ನು ಅವಲಂಬಿಸಿದೆ. ವಿನ್ಹ್ ಸನ್ ನ ವಿಶಿಷ್ಟ ಲಕ್ಷಣವೆಂದರೆ, ಕಾಲಾನಂತರದಲ್ಲಿ, ಇಲ್ಲಿನ ಜನರು ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಸಂಯೋಜಿಸಿದ್ದಾರೆ. ಒಂದು ಕಾಲದಲ್ಲಿ ಹಾವುಗಳನ್ನು ಸಣ್ಣ ಪ್ರಮಾಣದಲ್ಲಿ ಸಾಕಲಾಗುತ್ತಿದ್ದರೂ, ಈಗ ಅನೇಕ ಸಾಕಣೆ ಕೇಂದ್ರಗಳು ವಾಣಿಜ್ಯಿಕವಾಗಿ ಕಾರ್ಯನಿರ್ವಹಿಸುತ್ತವೆ. ಗ್ರಾಮದಲ್ಲಿ ವಿಶೇಷ ಹಾವಿನ ಸಂತಾನೋತ್ಪತ್ತಿ ಕೇಂದ್ರಗಳನ್ನು ಸಹ ಸ್ಥಾಪಿಸಲಾಗಿದೆ.
ಸಾಕಣೆ ವಿಧಾನ
ಆರೋಗ್ಯಕರ ಗಂಡು ಮತ್ತು ಹೆಣ್ಣು ನಾಗರಹಾವುಗಳನ್ನು ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಕಾಡು ಹಾವುಗಳನ್ನು ಅವಲಂಬಿಸುವುದಿಲ್ಲ, ಬದಲಿಗೆ ಸಾಕಣೆ ಕೇಂದ್ರಗಳಲ್ಲಿ ಬೆಳೆಸುವ ಹಾವುಗಳಿಂದ ಮುಂದಿನ ಪೀಳಿಗೆಯನ್ನು ಬೆಳೆಸುತ್ತಾರೆ. ಹೆಣ್ಣು ನಾಗರಹಾವುಗಳು ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳನ್ನು ಸುರಕ್ಷಿತ ತಾಪಮಾನ ಮತ್ತು ತೇವಾಂಶದಲ್ಲಿ ಇಡಲಾಗುತ್ತದೆ. ಇದರಿಂದ ಮರಿ ಹೊರಬರಲು ಅವಕಾಶ ಸಿಗುತ್ತದೆ. ಮೊಟ್ಟೆಗಳಿಂದ ಹೊರಬರುವ ಎಳೆಯ ನಾಗರಹಾವುಗಳನ್ನು ಪ್ರತ್ಯೇಕ ಪೆಟ್ಟಿಗೆಗಳಲ್ಲಿ ಅಥವಾ ಸುರಕ್ಷಿತ ಪಂಜರಗಳಲ್ಲಿ ಇಡಲಾಗುತ್ತದೆ. ಆರಂಭಿಕ ತಿಂಗಳುಗಳಲ್ಲಿ ಮರಣ ಪ್ರಮಾಣ ಹೆಚ್ಚಿರಬಹುದು, ಆದ್ದರಿಂದ ವಿಶೇಷ ಮೇಲ್ವಿಚಾರಣೆ ಅಗತ್ಯವಿರುತ್ತದೆ. ಆರಂಭದಲ್ಲಿ, ನಾಗರಹಾವುಗಳಿಗೆ ಇಲಿಗಳು ಮತ್ತು ಕಪ್ಪೆ ನೀಡಲಾಗ್ತಿತ್ತು. ಈಗ ಕೋಳಿ ಕುತ್ತಿಗೆ ಸೇರಿದಂತೆ ಅನೇಕ ಆಹಾರವನ್ನು ನೀಡಲಾಗುತ್ತದೆ. ಖನಿಜ ಪೂರಕಗಳನ್ನು ಸಹ ಆಹಾರಕ್ಕೆ ಸೇರಿಸಲಾಗುತ್ತದೆ. ಹಾವುಗಳಿಗೆ ಪ್ರತಿದಿನವಲ್ಲ, ಪ್ರತಿ 3-4 ದಿನಗಳಿಗೊಮ್ಮೆ ಆಹಾರವನ್ನು ನೀಡಲಾಗುತ್ತದೆ.
ದೊಡ್ಡ ಅಪಾಯ ಏನು?
ನಾಗರಹಾವು ಸಾಕಣೆ ಲಾಭದಾಯಕವಾಗಿದೆ. ಈ ವ್ಯವಹಾರದಲ್ಲಿ ವಿಷಕಾರಿ ಹಾವುಗಳು ಅಪಾಯಕಾರಿ. ಹಾವಿಗೆ ನೀಡುವ ಆಹಾರದ ವೆಚ್ಚ ಹೆಚ್ಚಿರುತ್ತದೆ. ಅಲ್ದೆ ಹಾವಿನಿಂದ ಹರಡುವ ರೋಗಗಳು ರೈತರಿಗೆ ಒಂದು ಪ್ರಮುಖ ಕಳವಳವಾಗಿದೆ. ಒಂದು ಜಮೀನಿನಲ್ಲಿ ಸೋಂಕು ಹರಡಿದರೆ, ಹೆಚ್ಚಿನ ಸಂಖ್ಯೆಯ ಹಾವುಗಳು ಸಾಯಬಹುದು, ಇದು ಗಮನಾರ್ಹ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

