ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಘಾತ: ಸಿಪಿಆರ್ ಮಾಡಿ ಜೀವ ಉಳಿಸಿದ ಟಿಟಿಇ
ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ಹೃದಯಾಘಾತವಾಗಿದ್ದು, ಟಿಟಿಇಯೊಬ್ಬರು ಸಿಪಿಆರ್ ಮಾಡುವ ಮೂಲಕ ಪ್ರಯಾಣಿಕರ ಜೀವವನ್ನು ಉಳಿಸಿದ್ದಾರೆ.
ಸಾಮಾನ್ಯವಾಗಿ ಹೃದಯಾಘಾತಕ್ಕೀಡಾದಾಗ ಜೊತೆಯಲ್ಲಿದ್ದವರಿಗೆ ಏನು ಮಾಡಬೇಕು ಎಂಬುದೇ ಗೊತ್ತಾಗುವುದಿಲ್ಲ, ಕೆಲವರಿಗೆ ಏನಾಯ್ತು ಎಂದು ಕೂಡ ತಿಳಿಯುವುದು ಕಷ್ಟ. ಒಂದು ವೇಳೆ ಹೃದಯಾಘಾತಕ್ಕೀಡಾದಾಗ ಜೊತೆಯಲ್ಲಿದ್ದವರಿಗೆ ಏನು ಮಾಡಬೇಕು ಎಂದು ತಿಳಿದಿದ್ದರೆ ಹೃದಯಾಘಾತಕ್ಕೀಡಾದವರ ಜೀವ ಉಳಿಸಬಹುದಾಗಿದೆ. ಹೃದಯಾಘಾತಕ್ಕೀಡಾದ ಸಿಪಿಆರ್ ಮಾಡುವ ಮೂಲಕ ವ್ಯಕ್ತಿಯ ಜೀವ ಉಳಿಸಬಹುದಾಗಿದೆ. ಇದನ್ನು ತಿಳಿದಿರುವ ಯಾರೇ ಆದರೂ ಮಾಡಬಹುದಾಗಿದೆ.ಇತ್ತೀಚೆಗೆ ಹೃದಯಾಘಾತಕ್ಕೀಡಾಗಿ ಹಠಾತ್ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ರೈಲಿನಲ್ಲಿ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿದ್ದು, ಕೂಡಲೇ ಸಿಪಿಆರ್ ಮಾಡುವ ಮೂಲಕ ರೈಲಿನ ಟಿಕೆಟ್ ಪರೀಶಿಲನೆ (Ticket checker) ಮಾಡುವ ವ್ಯಕ್ತಿ ಹೃದಯಾಘಾತಕ್ಕೀಡಾದ ವ್ಯಕ್ತಿಯ ಜೀವ ಉಳಿಸಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವೀಡಿಯೋವನ್ನು ರೈಲ್ವೆ ಸಚಿವಾಲಯವೂ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಟಿಟಿಯವರ ಸಮಯಪ್ರಜ್ಞೆಯಿಂದ ವ್ಯಕ್ತಿಯೊಬ್ಬರ ಜೀವ ಉಳಿದಿದೆ. 15708 ರೈಲು ಸಂಖ್ಯೆಯ ಅಮ್ರಪಾಲಿ ಎಕ್ಸ್‌ಪ್ರೆಸ್ ರೈಲಿನ ಜನರಲ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ 70 ವರ್ಷದ ಹಿರಿಯ ನಾಗರಿಕರೊಬ್ಬರಿಗೆ ಹಠಾತ್ ಹೃದಯಾಘಾತವಾಗಿದೆ. ಈ ವೇಳೆ ಪ್ರಯಾಣಿಕರ ಟಿಕೆಟ್ ಪರಿಶೀಲನೆ (Travelling Ticket Examiner)ಮಾಡುವ ಟಿಟಿಇ ಒಬ್ಬರು ಆ ವ್ಯಕ್ತಿಗೆ ಕೂಡಲೇ ಸಿಪಿಆರ್(Cardiopulmonary Resuscitation) ಮಾಡುವ ಮೂಲಕ ಅವರ ಜೀವ ಉಳಿಸಿದ್ದಾರೆ ಎಂದು ವೀಡಿಯೋ ಶೇರ್ ಮಾಡಿಕೊಂಡು ವಿವರ ನೀಡಿದ್ದಾರೆ.
ಟಿಟಿಇ ಮಾಡಿದ ಸಿಪಿಆರ್‌ನಿಂದಾಗಿ 70 ವರ್ಷದ ಪ್ರಯಾಣಿಕರು ಕೂಡಲೇ ಚೇತರಿಸಿಕೊಂಡಿದ್ದು, ಅವರ ಹೃದಯ ಮತ್ತೆ ಸ್ವಸ್ಥಿತಿಯಲ್ಲಿ ಕೆಲಸ ಮಾಡಲು ಶುರು ಮಾಡಿದೆ. ಇದಾದ ನಂತರ ಮುಂದಿನ ರೈಲು ನಿಲ್ದಾಣವಾದ ಚಪ್ರಾ ರೈಲು ನಿಲ್ದಾಣದಲ್ಲಿ ರೈಲು ನಿಂತಾಗ ಅವರನ್ನು ರಕ್ಷಿಸಿ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗೆ ಆಪತ್ಕಾಲದಲ್ಲಿ ವ್ಯಕ್ತಿಯ ಜೀವ ಉಳಿಸಿದ ಟಿಕೆಟ್ ಚೆಕರ್ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ಇದೊಂದು ಶ್ರೇಷ್ಠ ಕೆಲಸ, ಇಂತಹ ಟಿಟಿಇಗಳು ಸಿಗುವುದು ಬಹಳ ಅಪರೂಪ ಈ ಟಿಟಿಇಗೊಂದು ದೊಡ್ಡ ಸೆಲ್ಯೂಟ್ ಎಂದು ಕಾಮೆಂಟ್ ಮಾಡಿ ಟಿಟಿಇ ಕಾರ್ಯಕ್ಕೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಿಪಿಆರ್ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಿಕೊಡಬೇಕಿದೆ ಎಂದು ಜನ ಚರ್ಚೆ ನಡೆಸಿದ್ದಾರೆ.
ಇದನ್ನು ಓದಿ: ರಾವಣ ದಹನದ ವೇಳೆ ಹಾರ್ಟ್ ಅಟ್ಯಾಕ್: ಸಿಪಿಆರ್ ಮಾಡಿ ವ್ಯಕ್ತಿ ಜೀವ ಉಳಿಸಿದ ಎಸಿಪಿ
ಇದನ್ನು ಓದಿ: ದೆಹಲಿ ಏರ್‌ಪೋರ್ಟ್‌ನಲ್ಲಿ ಹೃದಯಾಘದಿಂದ ಕುಸಿದ ವ್ಯಕ್ತಿಗೆ ಸಿಪಿಆರ್ ನೀಡಿ ಬದುಕಿಸಿದ ಯೋಧ!