ಅಬುಧಾಬಿಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಸಾಕು ಹದ್ದಿಗೆ ಪಾಸ್‌ಪೋರ್ಟ್ ಮಾಡಿಸಿ, ಅದರೊಂದಿಗೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾನ್ಯವಾಗಿ ಬೆಕ್ಕು ನಾಯಿಗಳನ್ನು ಜನ ವಿಮಾನದಲ್ಲಿ ಕರೆದೊಯ್ಯುತ್ತಾರೆ. ದೇಶ ವಿದೇಶಗಳಿಗೆ ಕರೆದೊಯ್ದು ಅವುಗಳೊಂದಿಗೆ ಸುತ್ತಾಡುತ್ತಾರೆ. ಆದರೆ ಅವುಗಳಿಗೆ ಯಾವುದಕ್ಕೂ ಪಾಸ್‌ಪೋರ್ಟ್‌ಗಳಿರುವುದಿಲ್ಲ, ವಿಮಾನಯಾನ ಸಂಸ್ಥೆಯ ಅನುಮತಿಯ ಮೇರೆಗೆ ಅವುಗಳನ್ನು ಕೊಂಡೊಯ್ಯಲಾಗುತ್ತದೆ. ಆದರೆ ಹಾರುವ ಹಕ್ಕಿಗೇಕೆ ಪಾಸ್‌ಪೋರ್ಟ್‌.

ಗಡಿ ಭಾಷೆ ದೇಶ ಯಾವುದರ ಹಂಗಿಲ್ಲದೇ ಓಡಾಡುವ ಹಕ್ಕಿರುವುದು ಹಕ್ಕಿಗಳಿಗೆ ಮಾತ್ರ. ಬೇಕಾದಾಗಲೆಲ್ಲಾ ಅವು ವಿದೇಶ ಪ್ರವಾಸ ಮಾಡಬಲ್ಲವು. ಆದರೆ ಇಲ್ಲೊಂದು ಕಡೆ ಹಾರುವ ಹಕ್ಕಿಗೂ ಪಾಸ್‌ಪೋರ್ಟ್‌ ಮಾಡಲಾಗಿದೆ. ವಿಚಿತ್ರ ಎನಿಸಿದರು ಸತ್ಯ. ಹಲವು ವಿಸ್ಮಯಗಳಿಗೆ, ಮಾನವ ನಿರ್ಮಿತ ಕೌತುಕಗಳಿಗೆ ನೆಲೆಯಾಗಿರುವ ಗಲ್ಫ್‌ ರಾಷ್ಟ್ರಗಳಲ್ಲಿ ಒಂದಾದ ಅಬುಧಾಬಿಯಲ್ಲಿ ಹಕ್ಕಿಗೂ ವ್ಯಕ್ತಿಯೊಬ್ಬರು ಪಾಸ್‌ಪೋರ್ಟ್ ಮಾಡಿಸಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಹಲವು ಗಲ್ಫ್‌ ರಾಷ್ಟ್ರಗಳಲ್ಲಿ ಕಾಡುಪ್ರಾಣಿಗಳನ್ನು ಕೂಡ ಸಾಕು ಪ್ರಾಣಿಗಳಂತೆ ಸಾಕಾಲಾಗುತ್ತದೆ. ಹುಲಿ ಸಿಂಹ, ಹಾವುಗಳನ್ನು ಅವರು ಮುದ್ದು ಮಾಡುವ ಸಾಕು ಪ್ರಾಣಿಗಳಂತೆ ಸಾಕುತ್ತಿರುವ ಹಲವು ವೀಡಿಯೋಗಳನ್ನು ನಾವು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಈಗ ಅವರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸಾಕುಪ್ರಾಣಿ ಎನಿಸಿರುವ ಹಕ್ಕಿಗೆ ಪಾಸ್‌ಪೋರ್ಟ್ ಕೂಡ ಮಾಡಿಸಿದ್ದಾರೆ. ಇನ್ನು ವಿಶೇಷ ಎಂದರೆ ಈ ಹದ್ದು, ತನ್ನ ಮಾಲೀಕನ ಜೊತೆ ಹಲವು ದೇಶಗಳನ್ನು ವಿಮಾನದಲ್ಲಿ ಸುತ್ತಾಡಿದೆ. ಮನುಷ್ಯರಂತೆ ಸಂಪೂರ್ಣ ವಿವರವನ್ನು ಹೊಂದಿರುವ ಪಾಸ್‌ಪೋರ್ಟ್ ಇದಾಗಿದ್ದು, ಅನೇಕರು ಹದ್ದಿನ ಈ ಪಾಸ್‌ಪೋರ್ಟ್ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. 

ಅಂದಹಾಗೆ ಈ ವೀಡಿಯೋ ಅಬುಧಾಬಿಯ ಏರ್‌ಪೋರ್ಟ್‌ನಲ್ಲಿ ಸೆರೆಯಾದ ವೀಡಿಯೋವಾಗಿದೆ. ಗಲ್ಫ್‌ನ ಸಂಪ್ರದಾಯಿಕ ಧಿರಿಸು ಧರಿಸಿರುವ ವ್ಯಕ್ತಿಯೊಬ್ಬರು ತಮ್ಮ ಪ್ರೀತಿಯ ರಣಹದ್ದಿನ ಜೊತೆ ಯುಇಎಯ ಏರ್‌ಲೈನ್ಸ್ ವಿಮಾನ ಏರುವುದಕ್ಕೆ ಸಜ್ಜಾಗಿದ್ದಾರೆ. ಆದರೆ ರಣಹದ್ದುವಿನ ಜೊತೆ ಇವರ ವಿಮಾನ ಪ್ರಯಾಣವನ್ನು ನೋಡಿ ಕುತೂಹಲಕ್ಕೊಳಗಾದ ಜೊತೆಯಲ್ಲಿದ್ದ ವ್ಯಕ್ತಿಯೊಬ್ಬರು ಅವರಲ್ಲಿ ಈ ಬಗ್ಗೆ ಪ್ರಶ್ನಿಸಿದ್ದಾರೆ. ಇವರಿಬ್ಬರ ಸಂಭಾಷಣೆಯ ವೀಡಿಯೋವೇ ಈಗ ವೈರಲ್ ಆಗಿರೋದು. ವೀಡಿಯೋದಲ್ಲಿ ಅಬುಧಾಬಿ ಮೂಲದ ವ್ಯಕ್ತಿ ತಮ್ಮ ಪ್ರೀತಿಯ ರಣಹದ್ದಿಗೂ ಪಾಸ್‌ಪೋರ್ಟ್ ಮಾಡಿಸಿರುವ ವಿಚಾರವನ್ನು ಹೇಳಿದ್ದಾರೆ.

ಇದು ಅಬುಧಾಬಿಯಿಂದ ಮೊರಾಕೊಗೆ ಹೊರಟ ವಿಮಾನವಾಗಿದೆ. ವ್ಯಕ್ತಿಯು ಹದ್ದಿನ ಜೊತೆಯಲ್ಲಿ ಮೊರಾಕೊಗೆ ವಿಮಾನವೇರಲು ಹೊರಟಿದ್ದನ್ನು ನೋಡಿ ಜೊತೆಗಿದ್ದವ ಒಬ್ಬರು ಅವರನ್ನು ಮಾತನಾಡಿಸಿದ್ದಾರೆ. ನೀವು ಈ ಫಾಲ್ಕನ್(ರಣಹದ್ದು) ಜೊತೆ ಪ್ರಯಾಣ ಮಾಡುತ್ತಿದ್ದೀರಾ, ಇದು ಕೂಡ ವಿಮಾನದಲ್ಲಿ ಹಾರುವುದೇ ಎಂದು ಅವರು ಕೇಳುತ್ತಾರೆ. ಅದಕ್ಕೆ ರಣಹದ್ದಿನ ಮಾಲೀಕ ಹೌದು ಅದು ಕೂಡ ಹಾರುವುದು ಎಂದು ಹೇಳುತ್ತಾರೆ. ಈ ವೇಳೆ ಗೊಂದಲಕ್ಕೊಳಗಾದ ಸಹ ಪ್ರಯಾಣಿಕ ಹಾಗಲ್ಲ, ಅದು ವಿಮಾನದಲ್ಲಿ ನಮ್ಮ ಜೊತೆ ಬರುವುದೇ? ನೀವು ಎಲ್ಲಿಗೆ ಹೊರಟಿದ್ದೀರಿ ಎಂದು ಮತ್ತೆ ಪ್ರಶ್ನಿಸುತ್ತಾರೆ. ಅದಕ್ಕೆ ಹದ್ದಿನ ಮಾಲೀಕ ತಾನು ಮೊರಾಕೋಗೆ ಹೋಗುತ್ತಿರುವುದಾಗಿ ಹೇಳುತ್ತಾರೆ. ಈ ವೇಳೆ ಈ ಹದ್ದಿಗೆ ಗುರುತಿಸುವಿಕೆ ಇದೆಯೇ ಎಂದು ಅವರು ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಮಾಲೀಕ ಹೌದು ಅದು ತನ್ನದೇ ಆ ಪಾಸ್‌ಪೋರ್ಟ್ ಹೊಂದಿದೆ. ಎನ್ನುತ್ತಾರೆ. ಆದರೆ ಸಹ ಪ್ರಯಾಣಿಕ ಇದನ್ನು ನಂಬುವುದಿಲ್ಲ, ಅದಕ್ಕೆ ಮಾಲೀಕ ಕೂಡಲೇ ಹಕ್ಕಿಯ ಪಾಸ್‌ಪೋರ್ಟ್‌ ತೆಗೆದು ತೋರಿಸಿದ್ದಾರೆ. ಇದನ್ನು ನೋಡಿ ಶಾಕ್ ಆಗುವ ಸರದಿ ಸಹ ಪ್ರಯಾಣಿಕನದ್ದಾಗಿದೆ. 

ಅದರಲ್ಲಿ ಅದು(ಹದ್ದು) ಗಂಡು, ಮೂಲತಃ ಸ್ಪೈನ್‌ನವ, ಹಾಗೂ ಆತ ಈಗಾಗಲೇ ಹಲವು ದೇಶಗಳಲ್ಲಿ ಸುತ್ತಾಡಿದ್ದಾನೆ ಹೀಗೆ ಆ ಹದ್ದಿನ ಸಂಪೂರ್ಣ ಪ್ರಯಾಣದ ಇತಿಹಾಸವಿತ್ತು. ಇದನ್ನು ನೋಡಿ ಸಹಪ್ರಯಾಣಿಕ ಇದೊಂತರ ಅಸಾಮಾನ್ಯವಾದುದು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಈ ವೀಡಿಯೋ ನೋಡಿದ ನೆಟ್ಟಿಗರು ಮಾತ್ರ ನಮಗಿಂತ ಹದ್ದಿನ ಲೈಫ್‌ಸ್ಟೈಲೇ ಲಕ್ಸುರಿಯಸ್ ಆಗಿದೆ ಎಂದು ಹಲುಬಿದ್ದಾರೆ. ಅಲ್ಲದೇ ಹೀಗೆ ಹಲವು ಪ್ರಶ್ನೆಗಳನ್ನು ಕೇಳಿದ ಅಪರಿಚಿತನಿಗೆ ತಾಳ್ಮೆಯಿಂದ ಉತ್ತರಿಸಿದ ಮಾಲೀಕನ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

View post on Instagram