ವಲಸಿಗ ಎಂಬ ತಡೆ ಇಲ್ಲ, ತಪಾಸಣೆ ಇಲ್ಲ, ಯೋಧರ ಕಣ್ಗಾವಲು ಇಲ್ಲ ಸಂತಾನೋತ್ಪತಿಗಾಗಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ನಿರಂತ 38 ಸಾವಿರ ಕಿಲೋ ಮೀಟರ್ ಪ್ರಯಾಣಿಸಿದ ಹಕ್ಕಿಯ ರೋಚಕ ಯಾನದ ಕತೆ ಇಲ್ಲಿದೆ.
ನವದೆಹಲಿ: ದೇಶ ಭಾಷೆ, ಗಡಿಯ ಹಂಗಿಲ್ಲದೇ ಹಕ್ಕಿಗಳ ವಲಸೆ ಸಾಮಾನ್ಯವಾಗಿದೆ. ದೇಶದ ಗಡಿಗಳ ಕ್ರಮಿಸಿ ಸಾವಿರಾರು ಕಿಲೋ ಮೀಟರ್ ದೂರಕ್ಕೆ ಹಕ್ಕಿಗಳು ವಲಸೆ ಹೋಗುತ್ತವೆ. ಹಾಗೆಯೇ ಅಮುರ್ ಫಾಲ್ಕನ್ ಜಾತಿಯ ಹಕ್ಕಿಗಳು ತಮ್ಮ ಸಾವಿರಾರು ಕಿಲೋ ಮೀಟರ್ ದೂರದ ವಲಸೆಗೆ ಫೇಮಸ್ ಆಗಿವೆ. ಇವುಗಳ ವಲಸೆ ಹಾಗೂ ಜೀವನಶೈಲಿಯ ಬಗ್ಗೆ ತಿಳಿದುಕೊಳ್ಳಲು ಪಕ್ಷಿ ತಜ್ಞರು ತಾವು 'ಚಿಯುಲನ್ 2' ಎಂದು ಹೆಸರಿಸಿದ್ದ ಅಮುರ್ ಫಾಲ್ಕನ್ ಪ್ರಬೇಧದ ಹಕ್ಕಿಗೆ ರೇಡಿಯೋ ಟ್ಯಾಗ್ ಅಳವಡಿಸಿದ್ದರು. ಇದರಿಂದ ಹಕ್ಕಿಗಳ ವಲಸೆಗೆ ಸಂಬಂಧಿಸಿದಂತೆ ವಿಸ್ಮಯ ಎನಿಸುವ ವಿಚಾರಗಳು ಬೆಳಕಿಗೆ ಬಂದಿದೆ. ಚಿಯುಲನ್ 2 ಅಮುರ್ ಫಾಲ್ಕನ್ ಹಕ್ಕಿಯೊಂದು ಕೇವಲ 93 ಗಂಟೆಯಲ್ಲಿ ಎಲ್ಲೂ ಕೂಡ ನಿಲ್ಲದೇ ಅರೇಬಿಯನ್ ಸಮುದ್ರದ ಮೇಲೆ ಸುಮಾರು 3,8000 ಕಿಲೋ ಮೀಟರ್ ದೂರ ಹಾರಿ ಭಾರತಕ್ಕೆ ಬಂದಿದೆ.
ಅಮುರ್ ಫಾಲ್ಕನ್ಸ್ ಹೆಸರಿನ(Falco amurensis)ಹಕ್ಕಿಗಳು, ಹಕ್ಕಿ ಪ್ರಬೇಧಗಳಲ್ಲೇ ತುಂಬಾ ದೂರ ವಲಸೆ ಹೋಗುವಂತಹ ಹಕ್ಕಿ ಪ್ರಬೇಧಗಳಾಗಿವೆ. ಇವುಗಳು ವಾರ್ಷಿಕವಾಗಿ ಅಂದಾಜು 22 ಸಾವಿರ ಕಿಲೋ ಮೀಟರ್ ಗೂ ಅಧಿಕ ದೂರ ಪ್ರಯಾಣ ಮಾಡುತ್ತವೆ. ಏಕೆಂದರೆ ಇವುಗಳ ಸಂತಾನೋತ್ಪಿ ಜಾಗ ಪೂರ್ವ ಏಷ್ಯಾದಲ್ಲಿದ್ದರೆ, ಅವುಗಳ ಚಳಿಗಾಲದ ಆವಾಸಸ್ಥಾನ ದಕ್ಷಿಣ ಆಫ್ರಿಕಾ ಆಗಿದೆ. ಹೀಗಾಗಿ ಸಂತಾನೋತ್ಪತ್ತಿಗಾಗಿ ಇವು ದೂರದ ಆಫ್ರಿಕಾದಿಂದ ಭಾರತಕ್ಕೆ ಬರುವುದು ಸಾಮಾನ್ಯ ಎನಿಸಿದೆ. ಆದರೆ ಇಷ್ಟು ದೂರ ಅವುಗಳ ಪ್ರಯಾಣವೇ ಒಂದು ರೋಚಕಗಾಥೆ.
ಹೀಗಾಗಿ ವಿಸ್ಮಯವೆನಿಸುವ ಈ ಹಕ್ಕಿಗಳ ಬಗ್ಗೆ ತಿಳಿದುಕೊಳ್ಳಲು ಪಕ್ಷಿ ತಜ್ಞರು ಈ ಫಾಲ್ಕನ್ ಹಕ್ಕಿಗೆ ಮಣಿಪುರದ ಟ್ಯಾಮೆಂಗ್‌ಲಾಂಗ್ ಜಿಲ್ಲೆಯಲ್ಲಿ 2004ರ ನವಂಬರ್‌ನಲ್ಲಿ ರೇಡಿಯೋ ಕಾಲರ್ ಅಳವಡಿಸಿದ್ದರು. . ಭಾರತೀಯ ವನ್ಯಜೀವಿ ಸಂಸ್ಥೆಯ ಉಪಗ್ರಹ-ಟ್ರ್ಯಾಕಿಂಗ್ ಯೋಜನೆಯ ಭಾಗವಾಗಿ ಹಕ್ಕಿಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಹೀಗಾಗಿ ಈ ಫಾಲ್ಕನ್ ಹಕ್ಕಿ, ಈ ಪಕ್ಷಿಗಳ ಗಮನಾರ್ಹ ವಲಸೆ ಪ್ರಯಾಣದ ಬಗ್ಗೆ ವಿಜ್ಞಾನಿಗಳಿಗೆ ಅಮೂಲ್ಯವಾದ ಮಾಹಿತಿ ಒದಗಿಸಿದೆ. ಚಿಯುಲುವಾನ್ 2 ಹಕ್ಕಿ ದಕ್ಷಿಣ ಆಫ್ರಿಕಾದಲ್ಲಿ ಸುಮಾರು 114 ದಿನಗಳನ್ನು ಕಳೆದಿದೆ ಮತ್ತು ಏಪ್ರಿಲ್ 8, 2025 ರಂದು ಬೋಟ್ಸ್ವಾನಾದಿಂದ ಉತ್ತರದ ಕಡೆಗೆ ಅಂದರೆ ಭಾರತದ ಕಡೆಗೆ ಹಾರಾಟ ಪ್ರಾರಂಭಿಸಿದೆ.
ಗಮನಾರ್ಹವಾಗಿ, ಈ ಪಕ್ಷಿಯು ಅರೇಬಿಯನ್ ಸಮುದ್ರದ ಮೇಲೆ ಸುಮಾರು 3,800 ಕಿ.ಮೀ.ಗಳಷ್ಟು ನಿರಂತರ ದೂರವನ್ನು ಕ್ರಮಿಸಿ, ಕೇವಲ 93 ಗಂಟೆಗಳಲ್ಲಿ (ಸುಮಾರು ನಾಲ್ಕು ದಿನಗಳು) ಭಾರತ ತಲುಪಿದೆ. ಮೊದಲು ಗುಜರಾತ್‌ನಲ್ಲಿ ಇಳಿದ ಈ ಹಕ್ಕಿ ಅಲ್ಲಿ ಕೆಲಕಾಲ ವಿಶ್ರಾಂತಿ ಪಡೆದು ನಂತರ ಭಾರತದ ಈಶಾನ್ಯ ಪ್ರದೇಶದ ಕಡೆಗೆ ತನ್ನ ಹಾರಾಟ ಮುಂದುವರೆಸಿದೆ. ಬುಧವಾರ ಸಂಜೆ 5 ಗಂಟೆಗೆ ದಾಖಲಾದ ಇತ್ತೀಚಿನ ಜಿಪಿಎಸ್ ಸಿಗ್ನಲ್ ಪ್ರಕಾರ ಈ ಹಕ್ಕಿ ಪಶ್ಚಿಮ ಒಡಿಶಾದಲ್ಲಿ ತನ್ನ ಇರುವಿಕೆಯನ್ನು ದೃಢಪಡಿಸಿತು ಎಂದು ಭಾರತೀಯ ವನ್ಯಜೀವಿ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಸುರೇಶ್ ಕುಮಾರ್ ಹೇಳಿದ್ದಾರೆ. ತನ್ನ ಪ್ರಯಾಣವನ್ನು ಮುಂದುವರಿಸುವ ಮೊದಲು ಈ ಹಕ್ಕಿ ಛತ್ತೀಸ್‌ಗಢದಲ್ಲಿ ರಾತ್ರಿಯಿಡೀ ಕಳೆದಿದೆ ಎಂದು ಅವರು ಹೇಳಿದ್ದಾರೆ.
ಈ ಚಿಯುಲನ್ ಈ ಹಿಂದೆ ಭಾರತದಿಂದ ವಾಪಾಸು ಹೋಗುವ ವೇಳೆ ಸೊಮಾಲಿಯಾದಲ್ಲಿ ಮೊದಲ ಬಾರಿ ಇಳಿದಿತ್ತು. ನವೆಂಬರ್‌ನಲ್ಲಿ ಭಾರತದಿಂದ ಹೊರಟಿದ್ದ ಇದು ಐದು ದಿನಗಳು ಮತ್ತು 17 ಗಂಟೆಗಳ ನಿರಂತರ ಹಾರಾಟ ಮಾಡಿ ಅದು ಸೋಮಾಲಿಯಾಗೆ ತಲುಪಿತ್ತು. ಈ ಟ್ರ್ಯಾಕಿಂಗ್ ಉಪಕ್ರಮದ ಮೂಲಕ ಸಂಗ್ರಹಿಸಲಾದ ದತ್ತಾಂಶವು ಸಂಶೋಧಕರಿಗೆ ವಲಸೆ ಮಾದರಿಗಳು, ನಿಲುಗಡೆ ಪರಿಸರ ವಿಜ್ಞಾನ ಮತ್ತು ಈ ದೂರದ ಹಾರಾಟಗಾರರು ಎದುರಿಸುತ್ತಿರುವ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಎಂದು ತಜ್ಞರು ಹೇಳಿದ್ದಾರೆ.


