ದಪ್ಪಗಿರೋ ವ್ಯಕ್ತಿಗಳನ್ನು ವಿಚಿತ್ರವಾಗಿ ನೋಟೋ ಈ ಕಾಲದಲ್ಲಿ ತೂಕ ಹೆಚ್ಚಿಸಿಕೊಳ್ಳೋಕೆ ಸ್ಪರ್ಧೆ ನಡೆಯುತ್ತೆ ಅಂದ್ರೆ ನಂಬ್ಲೇಬೇಕು. ಆರು ತಿಂಗಳ ಸ್ಪರ್ಧೆಯಲ್ಲಿ ಗೆದ್ರೆ ರಾಜಮರ್ಯಾದೆ.
ತೆಳ್ಳಗಿರುವ ವ್ಯಕ್ತಿಯನ್ನು ನೋಡಿದ್ರೆ ನಮ್ಮವರು ಹೊಟ್ಟೆ ಉರಿದುಕೊಳ್ತಾರೆ. ಒಂದು ಕೆಜಿ ತೂಕ ಏರಿಕೆ ಆದ್ರೂ ಟೆನ್ಷನ್ ಜಾಸ್ತಿ ಆಗುತ್ತೆ. ಹೇಗಪ್ಪ ತೂಕ ಇಳಿಸಿಕೊಳ್ಳೋದು ಎನ್ನುವ ಚಿಂತೆ ಕಾಡುತ್ತೆ. ಊಟ ಬಿಟ್ಟು, ಡಯಟ್, ವಾಕ್, ಜಿಮ್ ಅಂತ ಜನರು ತೂಕ (weight) ಕಡಿಮೆ ಮಾಡ್ಕೊಂಡು, ಸ್ಲಿಮ್, ಸ್ಮಾರ್ಟ್ ಆಗೋಕೆ ಕಸರತ್ತು ಮಾಡ್ತಾರೆ. ಆದ್ರೆ ಪ್ರಪಂಚದಲ್ಲಿ ಭಿನ್ನವಾಗಿ ಯೋಚನೆ ಮಾಡುವ ಅನೇಕ ಬುಡಕಟ್ಟು ಜನಾಂಗವಿದೆ. ಕೆಲ ಜನಾಂಗದಲ್ಲಿ ತೆಳ್ಳಗಿರುವ ವ್ಯಕ್ತಿಗಿಂತ ದಪ್ಪಗಿರುವ ವ್ಯಕ್ತಿಗೆ ಮರ್ಯಾದೆ ಜಾಸ್ತಿ. ಹಾಗಾಗಿಯೇ ಅಲ್ಲಿನ ಜನರು ಉಂಡು – ತಿಂದು ಹಾಯಾಗಿರ್ತಾರೆ. ಆದ್ರೆ ಇಥಿಯೋಪಿಯಾದಲ್ಲಿರುವ ಬೋಡಿ ಬುಡಕಟ್ಟು ಜನಾಂಗ (Bodi tribe) ವಿಚಿತ್ರ ಸಂಪ್ರದಾಯ ಪಾಲನೆ ಮಾಡ್ತಿದೆ. ಇಲ್ಲಿ ದಪ್ಪ ದೇಹದ ವ್ಯಕ್ತಿಗೆ ಗೌರವ ಮಾತ್ರ ಸಿಗೋದಿಲ್ಲ. ಆತನನ್ನು ಶಕ್ತಿಯ ಸಂಕೇತ ಅಂತ ನಂಬಲಾಗುತ್ತೆ. ಅವರನ್ನು ದೇವರಂತೆ ಪೂಜೆ ಮಾಡ್ತಾರೆ. ನಾವೆಲ್ಲ ತೂಕ ಇಳಿಸಿಕೊಳ್ಳಲು ಸ್ಪರ್ಧೆ ಮಾಡಿದ್ರೆ ಅವರು ತೂಕ ಹೆಚ್ಚಿಸಿಕೊಳ್ಳೋಕೆ ಸ್ಪರ್ಧೆ ಮಾಡ್ತಾರೆ.
ಆರು ತಿಂಗಳಿರುತ್ತೆ ದಪ್ಪವಾಗುವ ಸ್ಪರ್ಧೆ : ಬೋಡಿ ಬುಡಕಟ್ಟು ಜನಾಂಗದಲ್ಲಿ ದಪ್ಪಗಾಗುವ ಸ್ಪರ್ಧೆಯೊಂದು ನಡೆಯುತ್ತದೆ. ಇದನ್ನು ವರ್ಷಕ್ಕೊಮ್ಮೆ ನಡೆಸಲಾಗುತ್ತದೆ. ಈ ಸ್ಪರ್ಧೆಯ ಅವಧಿ ಆರು ತಿಂಗಳು. ಅವಿವಾಹಿತ ಯುವಕರು ಮಾತ್ರ ಇದರಲ್ಲಿ ಭಾಗವಹಿಸಬಹುದು. ಸ್ಪರ್ಧೆ ಉದ್ದೇಶ ಸಾಧ್ಯವಾದಷ್ಟು ದಪ್ಪವಾಗೋದು. ಹೆಚ್ಚು ತೂಕ ಹೆಚ್ಚಿಸಿಕೊಂಡ ಸ್ಪರ್ಧಿಯನ್ನು ಬುಡಕಟ್ಟಿನ ನಾಯಕ ಅಂತ ಘೋಷಣೆ ಮಾಡಲಾಗುತ್ತದೆ. ಅವರ ಪೂಜೆ ನಡೆಯುತ್ತದೆ. ಅವರಿಗೆ ವಿಶೇಷ ಗೌರವ, ಮರ್ಯಾದೆ ಸಿಗುತ್ತದೆ.
ಹಾಲಿನ ಜೊತೆ ರಕ್ತ ಬೆರೆಸಿ ಕುಡಿಬೇಕು !: ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಯುವಕರಿಗೆ ವಿಶೇಷ ಪಾನೀಯ ನೀಡಲಾಗುತ್ತದೆ. ಇದನ್ನು ಹಸುವಿನ ರಕ್ತ ಮತ್ತು ಹಾಲಿನ ಮಿಶ್ರಣದಿಂದ ತಯಾರಿಸಲಾಗುತ್ತದೆ. ಈ ಮಿಶ್ರಣವನ್ನು ಕುಡಿಯುವುದರಿಂದ ದೇಹ ಬೇಗನೆ ದಪ್ಪವಾಗುತ್ತದೆ ಅಂತ ಅವರು ನಂಬ್ತಾರೆ. ಇಂಟರೆಸ್ಟಿಂಗ್ ವಿಷ್ಯ ಏನೆಂದ್ರೆ ಇಲ್ಲಿನ ಜನ ಹಸುವನ್ನು ಪವಿತ್ರವೆಂದು ಪರಿಗಣಿಸ್ತಾರೆ. ಹಾಗಾಗಿ ಹಾಲಿನ ಜೊತೆ ಹಸುವಿನ ರಕ್ತ ಬೆರೆಸಲು ಹಸುವನ್ನು ಕೊಲ್ಲೋದಿಲ್ಲ. ಹಸುವಿನ ರಕ್ತನಾಳವನ್ನು ಚುಚ್ಚಿ ರಕ್ತವನ್ನು ಸಂಗ್ರಹಿಸಿ ಹಾಲಿನೊಂದಿಗೆ ಬೆರೆಸಿ ಕುಡಿಯುತ್ತಾರೆ. ಆರು ತಿಂಗಳುಗಳ ಕಾಲ ಅವರು ತಮ್ಮ ಆಹಾರಕ್ಕೆ ಹೆಚ್ಚಿನ ಗಮನ ನೀಡ್ತಾರೆ.
ಸ್ಪರ್ಧಿಗಳಿಗೆ ಪ್ರತ್ಯೇಕ ವಾಸ : ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಯುವಕರು ಸಮಾಜದಿಂದ ದೂರ ಇರಬೇಕು. ಕುಟುಂಬದ ಜೊತೆ ವಾಸ ಮಾಡುವಂತಿಲ್ಲ. ಆರು ತಿಂಗಳು ಅವರು ಸಂಪೂರ್ಣ ಮನೆಯಿಂದ ದೂರ ಇರ್ತಾರೆ. ಅವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸ್ಥಳಗಳಲ್ಲಿ ಇರ್ತಾರೆ. ಅಲ್ಲಿ ಅವರಿಗೆ ನಿರಂತರವಾಗಿ ಆಹಾರ ಮತ್ತು ನೀರನ್ನು ನೀಡಲಾಗುತ್ತದೆ. ಸಾಧ್ಯವಾದಷ್ಟು ದಪ್ಪಗಾಗುವುದು ಅವರ ಮುಖ್ಯ ಗುರಿಯಾಗಿರುತ್ತೆ. ತೂಕ ಹೆಚ್ಚಿಸಿಕೊಳ್ಳೋದನ್ನು ಬಿಟ್ಟು ಬೇರೆ ಕಡೆ ಅವರ ಗಮನ ಹೋಗದಿರಲಿ ಎನ್ನುವ ಕಾರಣಕ್ಕೆ ಅವರನ್ನು ಪ್ರತ್ಯೇಕವಾಗಿಡಲಾಗುತ್ತದೆ.
ಜಗತ್ತಿನಲ್ಲಿ ಈ ಸಂಪ್ರದಾಯದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಕೆಲವರು ಇದನ್ನು ಸಾಂಸ್ಕೃತಿಕ ವೈವಿಧ್ಯತೆಯ ಭಾಗವೆಂದು ಪರಿಗಣಿಸ್ತಾರೆ. ಕೆಲವರು ಇದು ಆರೋಗ್ಯಕ್ಕೆ ಅಪಾಯಕಾರಿ ಎನ್ನುತ್ತಾರೆ. ಸತತ ಆರು ತಿಂಗಳು ಆಹಾರ ಸೇವನೆ ಮಾಡಿ ತೂಕ ಏರಿಸಿಕೊಂಡ್ರೆ ಬೊಜ್ಜು ಸೇರಿದಂತೆ ಅನೇಕ ಖಾಯಿಲೆ ಶುರುವಾಗುತ್ತದೆ ಎಂಬ ಆತಂಕವನ್ನು ಜನರು ವ್ಯಕ್ತಪಡಿಸಿದ್ದಾರೆ. ಆದ್ರೆ ಬೋಡಿ ಬುಡಕಟ್ಟು ಜನಾಂಗಕ್ಕೆ ಇದ್ರ ಬಗ್ಗೆ ಚಿಂತೆ ಇಲ್ಲ. ತೂಕ ಹೆಚ್ಚಳ ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ. ಅತ್ಯಂತ ದಪ್ಪದ ವ್ಯಕ್ತಿ ಸೌಂದರ್ಯದ ಸಂಕೇತ ಮಾತ್ರವಲ್ಲ ಅವರನ್ನೇ ತಮ್ಮ ದೇವರು ಎಂದು ಪೂಜಿಸುತ್ತಾರೆ.
