ಪಂಜಾಬ್‌ನ ಬರ್ನಾಲಾ ರೈಲು ನಿಲ್ದಾಣದಲ್ಲಿ ವೃದ್ಧರೊಬ್ಬರು ಪ್ರಯಾಣಿಕರಿಗೆ ಉಚಿತವಾಗಿ ಆಹಾರ ನೀಡುತ್ತಿದ್ದಾರೆ. ಯಾವುದೇ ಪ್ರಚಾರದ ಹಂಬಲವಿಲ್ಲದ ಅವರ ಈ ನಿಸ್ವಾರ್ಥ ಸೇವೆಯ ವೀಡಿಯೋ ವೈರಲ್ ಆಗಿದ್ದು, ಅವರ ಮಾನವೀಯತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಉಚಿತವಾಗಿ ಇಂದಿನ ಕಾಲದಲ್ಲಿ ಒಂದು ಗ್ಲಾಸ್ ನೀರು ಕೂಡ ಸಿಗೋದಿಲ್ಲ, ಫೈವ್ ಸ್ಟಾರ್‌ ಹೊಟೇಲ್‌ಗಳಲ್ಲಿ ಆಹಾರ ಸೇವಿಸಿದರೆ ನೀರು ಕೂಡ ಉಚಿತವಾಗಿ ಸಿಗೋದಿಲ್ಲ. ನೀರಿಗೆ ನೀವು ಪ್ರತ್ಯೇಕವಾಗಿ ಹಣ ಪಾವತಿ ಮಾಡಬೇಕಾಗುತ್ತದೆ. ಹೀಗಿರುವಾಗ ಇಲ್ಲೊಬ್ಬರು ವೃದ್ಧ ರೈಲು ನಿಲ್ದಾಣದಲ್ಲಿ ಉಚಿತವಾಗಿ ಪ್ರಯಾಣಿಕರಿಗೆ ಆಹಾರ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಈ ಮಾನವೀಯ ದೃಶ್ಯಕ್ಕೆ ಪಂಜಾಬ್‌ನ ಬರ್ನಾಲಾ ರೈಲು ನಿಲ್ದಾಣ ಸಾಕ್ಷಿಯಾಗಿದೆ. ಇಲ್ಲಿ ಪ್ರಯಾಣಿಕರಿಗೆ ಉಚಿತ ಆಹಾರ ವಿತರಿಸುತ್ತಿರುವ ಈ ವೃದ್ಧನ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅವರಿಗೆ ಪ್ರೀತಿ ಮತ್ತು ಕೃತಜ್ಞತೆಗಳನ್ನು ಸಲ್ಲಿಸಿ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

ಎಕ್ಸ್‌ನಲ್ಲಿ (ಟ್ವಿಟರ್) @Jimmyy__02 ಎಂಬ ಖಾತೆಯಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಿ ಹೀಗೆ ಬರೆದಿದ್ದಾರೆ. ಪಂಜಾಬ್‌ನ ಬರ್ನಾಲಾ ರೈಲು ನಿಲ್ದಾಣದಲ್ಲಿ ಹೃದಯಸ್ಪರ್ಶಿ ದೃಶ್ಯವೊಂದು ಬಯಲಾಗಿದೆ. ನಿಂತಿದ್ದ ರೈಲಿನ ಬಳಿ ವೃದ್ಧ ಸಿಖ್ ವ್ಯಕ್ತಿಯೊಬ್ಬರು ಪ್ರಯಾಣಿಕರಿಗೆ ಉಚಿತ ಆಹಾರ ಮತ್ತು ನೀರನ್ನು ವಿತರಿಸುತ್ತಿರುವುದು ಕಂಡುಬಂತು. ಯಾವುದೇ ಸದ್ದುಗದ್ದಲ ಆಡಂಬರವಿಲ್ಲದೇ ನಡೆಸಿದ ಈ ನಿಸ್ವಾರ್ಥ ಸೇವೆಯು ಸಿಖ್ ಧರ್ಮದಲ್ಲಿನ ನಿಸ್ವಾರ್ಥ ಸೇವೆಯ ಸಂಪ್ರದಾಯವನ್ನು ತೋರಿಸುತ್ತದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮಾನವೀಯತೆ ಮತ್ತು ದಯೆಗೆ ಉದಾಹರಣೆಯಾಗಿದೆ ಎಂದು ಬರೆದುಕೊಂಡಿದ್ದಾರೆ.

ಶೇರ್ ಮಾಡಲಾದ ವಿಡಿಯೋದಲ್ಲಿ ಆ ವ್ಯಕ್ತಿ ಪ್ಲಾಟ್‌ಫಾರ್ಮ್‌ನಲ್ಲಿ ನಡೆದುಕೊಂಡು ಹೋಗಿ ಜನರಿಗೆ ಆಹಾರ ವಿತರಿಸುವುದನ್ನು ಕಾಣಬಹುದು. ರೈಲಿಗಾಗಿ ಕಾಯುತ್ತಾ ಸುಸ್ತಾಗಿದ್ದ ಪ್ರಯಾಣಿಕರಿಗೆ ಆ ವ್ಯಕ್ತಿ ಆಹಾರ ಬಡಿಸುತ್ತಿದ್ದರು ಎಂದು ಜಿಮ್ಮಿ ಹೇಳಿದ್ದಾರೆ. ವಿಡಿಯೋದಲ್ಲಿ, ನೀಲಿ ಪೇಟ ಧರಿಸಿ, ಆಹಾರದ ಟ್ರೇ ಹಿಡಿದುಕೊಂಡಿರುವ ವೃದ್ಧರೊಬ್ಬರನ್ನು ಕಾಣಬಹುದು. ಅವರು ತುಂಬು ಪ್ರೀತಿ ಮತ್ತು ದಯೆಯಿಂದ ಪ್ರಯಾಣಿಕರಿಗೆ ಆಹಾರ ಬಡಿಸುತ್ತಿದ್ದಾರೆ. ಅವರು ಇದನ್ನು ಪ್ರಚಾರಕ್ಕಾಗಲಿ ಅಥವಾ ಮನ್ನಣೆಗಾಗಲಿ ಮಾಡುತ್ತಿಲ್ಲ. ಜನರ ಬಗ್ಗೆ ಅವರಿಗಿರುವ ದಯೆ ಮತ್ತು ಸಹಾನುಭೂತಿಯನ್ನು ಜನರು ಕಾಮೆಂಟ್‌ಗಳಲ್ಲಿ ಉಲ್ಲೇಖಿಸಿದ್ದಾರೆ. ಈ ಮನುಷ್ಯನಿಂದ ನಾವು ಕಲಿಯುವುದು ಬಹಳಷ್ಟಿದೆ', 'ಈ ಜಗತ್ತಿನಲ್ಲಿ ಇನ್ನೂ ಮಾನವೀಯತೆ ಜೀವಂತವಾಗಿದೆ' ಎಂದು ಜನ ಕಾಮೆಂಟ್ ಮಾಡ್ತಿದ್ದಾರೆ.

ಇದನ್ನೂ ಓದಿ: ರಷ್ಯನ್ ನಿರ್ಬಂಧ ಮಸೂದೆಗೆ ಟ್ರಂಪ್ ಅನುಮೋದನೆ: ಭಾರತಕ್ಕೆ ಅಮೆರಿಕದ ಮತ್ತೊಂದು ಆಘಾತ

ಇಂದಿನ ಕಾಲದಲ್ಲಿ ಕೆಲವರು ಒಂದು ಹೊತ್ತು ಊಟ ನೀಡಿದರೂ ಅದನ್ನು ಫೋಟೋ ತೆಗೆದು ವೀಡಿಯೋ ಮಾಡಿ ಇಡೀ ಊರಿಗೆ ತಿಳಿಯುವಂತೆ ಮಾಡುತ್ತಾರೆ. ಹೀಗಿರುವಾಗ ಈ ವೃದ್ಧ ಯಾವುದೇ ನಿರೀಕ್ಷೆ ಪ್ರಚಾರದ ಹಂಬಲವಿಲ್ಲದೇ ನಿಸ್ವಾರ್ಥವಾಗಿ ಈ ದಾನ ಕಾರ್ಯದಲ್ಲಿ ತೊಡಗಿದ್ದು, ಅನೇಕರನ್ನು ಭಾವುಕರನ್ನಾಗಿಸಿದೆ.

ಇದನ್ನೂ ಓದಿ: ಮಗುವಿಗೆ ತಿಂಗಳು ತುಂಬುವ ಮೊದಲೇ ಮತ್ತೆ ಕೆಲಸಕ್ಕೆ ಹಾಜರಾದ ನಟಿ: ಪಪಾರಾಜಿಗಳ ಮಾತಿಗೆ ಶಾಕ್