ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಮನೆಗೆ ನುಗ್ಗಿದ ಮಾಜಿ ಚಾಲಕನ ಗ್ಯಾಂಗ್, ವೃದ್ಧೆಗೆ ಚಾಕುವಿನಿಂದ ಇರಿದಿದೆ. ಆದರೆ, ವೃದ್ಧೆಯು ಸತ್ತಂತೆ ನಟಿಸಿ, ಕಳ್ಳರು ಹೋದ ಬಳಿಕ ಕೂಗಿಕೊಂಡಿದ್ದರಿಂದ ಸ್ಥಳೀಯರು ಓರ್ವ ಆರೋಪಿಯನ್ನು ಹಿಡಿದಿದ್ದಾರೆ.

ಬೆಂಗಳೂರು (ಸೆ.19): ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಮನೆಗೆ ದರೋಡೆ ಮಾಡಲು ಬಂದ ಮಾಜಿ ಕಾರು ಚಾಲಕನ ಗ್ಯಾಂಗ್ ವೃದ್ಧೆಯ ಹೊಟ್ಟೆಗೆ ಎರಡು ಬಾರಿ ಚಾಕು ಇರಿದಿದೆ. ಈ ವೇಳೆ ತನ್ನ ಪ್ರಾಣವನ್ನು ಲೆಕ್ಕಿಸದ ವೃದ್ಧೆ ಸತ್ತಂತೆ ನಟನೆ ಮಾಡಿದ್ದಾಳೆ. ನಂತರ, ಕಳ್ಳರು ದರೋಡೆ ಮಾಡಿಕೊಂಡು ವಾಪಸ್ ಹೋಗುವಾಗ ಬಾಗಿಲ ಬಳಿ ಬಂದು ಕಳ್ಳ, ಕಳ್ಳ ಎಂದು ಕೂಗಿದ್ದು, ಅಕ್ಕ-ಪಕ್ಕದ ಮನೆಯವರು ಬಂದು ದರೋಡೆ ಗ್ಯಾಂಗಿನ ಒಬ್ಬ ಕಳ್ಳನನ್ನು ಸೆರೆ ಹಿಡಿದಿದ್ದಾರೆ. ಈ ಘಟನೆಯಲ್ಲಿ ವೃದ್ಧೆಯ ಚಾಣಾಕ್ಷ ನಡೆಯ ಬಗ್ಗೆ ಸ್ಥಳೀಯರು ಚರ್ಚೆ ಆರಂಭಿಸಿದ್ದಾರೆ.

ಮನೆಗೆ ನುಗ್ಗಿದ ಚಾಲಕ ಮತ್ತು ಆತನ ಗ್ಯಾಂಗ್:

ಬೆಂಗಳೂರಿನ ಬಿಎಸ್‌ಕೆ 3ನೇ ಹಂತದ ಸಿಂಡಿಕೇಟ್ ಬ್ಯಾಂಕ್ ಕಾಲೋನಿಯಲ್ಲಿರುವ ರಿಯಲ್‌ ಎಸ್ಟೇಟ್ ಉದ್ಯಮಿ ರಾಹುಲ್‌ ಅವರ ತಾಯಿ ಕನಕಪುಷ್ಪಾ (65) ಅವರ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ರಾಹುಲ್ ಇತ್ತೀಚೆಗೆ ತಮ್ಮ ಮಾಜಿ ಚಾಲಕ ಮಡಿವಾಳ ಅಲಿಯಾಸ್ ಮ್ಯಾಡಿಯನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದರಿಂದ ಕೋಪಗೊಂಡಿದ್ದ ಮ್ಯಾಡಿ, ರಾಹುಲ್ ಮನೆಯಲ್ಲಿ ಹಣ ಮತ್ತು ಚಿನ್ನದ ಆಭರಣಗಳನ್ನು ದೋಚಲು ಯೋಜನೆ ರೂಪಿಸಿದ್ದ.

ಭಾನುವಾರ ರಾತ್ರಿ 9.30ರ ಸುಮಾರಿಗೆ, ಫುಡ್‌ ಡೆಲಿವರಿ ಬಾಯ್ ವೇಷದಲ್ಲಿ ಬಂದ ಮ್ಯಾಡಿಯ ಇಬ್ಬರು ಸಹಚರರು ಕನಕಪುಷ್ಪಾ ಅವರ ಮನೆ ಬಾಗಿಲು ತಟ್ಟಿದ್ದಾರೆ. ‘ನಿಮ್ಮ ಮಗ ನಿಮಗಾಗಿ ಫುಡ್ ಆರ್ಡರ್ ಮಾಡಿದ್ದಾರೆ’ ಎಂದು ನಂಬಿಸಿ ಬಾಗಿಲು ತೆರೆಸಿದ ತಕ್ಷಣ ಒಳಗೆ ನುಗ್ಗಿದ್ದಾರೆ. ಅವರ ಬೆನ್ನಲ್ಲೇ ಮ್ಯಾಡಿಯೂ ಕೂಡ ಮನೆಗೆ ಬಂದಿದ್ದಾನೆ.

ವೃದ್ಧೆಗೆ ಇರಿದು ಬೆದರಿಕೆ:

ಮನೆಗೆ ನುಗ್ಗಿದ ಮೂವರು ಆರೋಪಿಗಳು, ಹಣ ಮತ್ತು ಒಡವೆಗಳಿರುವ ಕಪಾಟಿನ ಬೀಗದ ಕೈ ಕೊಡುವಂತೆ ವೃದ್ಧೆಗೆ ಬೆದರಿಸಿದ್ದಾರೆ. ರಾಹುಲ್ ಬೀಗದ ಕೈಗಳನ್ನು ತಮ್ಮೊಂದಿಗೇ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದಾಗ, ಕೋಪಗೊಂಡ ಆರೋಪಿಗಳು ವೃದ್ಧೆಗೆ ಚಾಕುವಿನಿಂದ ಎರಡು ಬಾರಿ ಇರಿದಿದ್ದಾರೆ. ನೋವಿನಿಂದ ನರಳುತ್ತಿದ್ದ ಕನಕಪುಷ್ಪಾ ಅವರು, ಕಳ್ಳರು ಸುಲಭವಾಗಿ ನಂಬುವಂತೆ ಸತ್ತಂತೆ ನಟಿಸಿ ನೆಲದ ಮೇಲೆ ಬಿದ್ದಿದ್ದಾರೆ. ಅವರ ದೇಹದಿಂದ ರಕ್ತ ಸುರಿಯುತ್ತಿದ್ದರೂ, ಕಣ್ಣುಗಳನ್ನು ಮುಚ್ಚಿ ನಿಶ್ಚಲವಾಗಿ ಮಲಗಿದ್ದಾರೆ. ಇದನ್ನು ನೋಡಿದ ಆರೋಪಿಗಳು, ವೃದ್ಧೆ ಸತ್ತಿದ್ದಾರೆ ಎಂದು ಭಾವಿಸಿ, ಬಾಗಿಲನ್ನು ಮುರಿದು ಕಪಾಟಿನಲ್ಲಿದ್ದ ಎಲ್ಲ ಬೆಲೆಬಾಳುವ ವಸ್ತುಗಳನ್ನು ಕದ್ದು ಹೊರಟಿದ್ದಾರೆ.

ವೃದ್ಧೆಯ ಚಾಣಾಕ್ಷತೆ, ಸ್ಥಳೀಯರಿಂದ ಬಂಧನ:

ಕಳ್ಳರು ಹೊರಹೋದ ಕೂಡಲೇ ಚೇತರಿಸಿಕೊಂಡ ಕನಕಪುಷ್ಪಾ ಅವರು, ನೋವಿನ ನಡುವೆಯೂ ಬಾಗಿಲ ಬಳಿ ತೆರಳಿ 'ಕಳ್ಳ, ಕಳ್ಳ' ಎಂದು ಜೋರಾಗಿ ಕೂಗಿದ್ದಾರೆ. ಶಬ್ದ ಕೇಳಿ ಓಡಿಬಂದ ಅಕ್ಕಪಕ್ಕದ ಮನೆಯವರು ಕೂಡಲೇ ಓರ್ವ ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಕುರಿತು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಮ್ಯಾಡಿ ಮತ್ತು ಮತ್ತೊಬ್ಬ ಸಹಚರನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.