ಹಿಮವಿಲ್ಲದ ಕಾಶ್ಮೀರ; ಪ್ರವಾಸಿಗರಲ್ಲಿ ನಿರಾಸೆ ಮೂಡಿಸಿದ ವಿಂಟರ್ ವಂಡರ್‌ಲ್ಯಾಂಡ್!
ಕಾಶ್ಮೀರವೆಂದರೆ ಹಿಮ ದಡ್ಡವಾಗಿ ಹರಡಿರಬೇಕು. ಕಾಶ್ಮೀರಕ್ಕೆ ಪ್ರವಾಸ ಹೋಗುವ ಎಲ್ಲರೂ ಹಿಮದೊಂದಿಗೆ ಆಡುವ ಆಸೆಯೊಂದಿಗೆ ತೆರಳುತ್ತಾರೆ. ಆದರೆ ಈ ಬಾರಿ ಇಂಥ ಘೋರ ಚಳಿಯಲ್ಲೂ ಕಾಶ್ಮೀರದಲ್ಲಿ ಹಿಮವಿಲ್ಲ!
ಚಳಿಗಾಲ ಎಂದರೆ ಕಾಶ್ಮೀರ ಬಿಳಿ ಹಿಮದ ಹೊದಿಕೆ ಹೊದ್ದು ತೊಗಲು ತುಂಬಿದ ಬಿಳಿ ಮೊಲದಂತೆ ಮುದ್ದಾಗಿ ಕಾಣುತ್ತದೆ. ಅದರಲ್ಲೂ ಕಾಶ್ಮೀರದ ವಿಂಟರ್ ವಂಡರ್‌ಲ್ಯಾಂಡ್ ಎಂದೇ ಕರೆಸಿಕೊಳ್ಳುವ ಗುಲ್‌ಮಾರ್ಗ್‌ನ ಮಾರ್ಗದುದ್ದಕ್ಕೂ ಹಿಮ ದಟ್ಟವಾಗಿ ಹಾಸಿರುತ್ತದೆ. ಪ್ರವಾಸಿಗರಿಗಾಗಿ ಹಲವಾರು ಹಿಮದ ಆಟಗಳು ಇಲ್ಲಿ ಕಾದು ಕುಳಿತಿರುತ್ತವೆ. ಆದರೆ, ಈ ಬಾರಿ ಹಿಮದಲ್ಲಿ ಸ್ವರ್ಗ ಸಮಾನ ಸೌಂದರ್ಯ ಹೊಂದಿದ ಕಾಶ್ಮೀರ ನೋಡಬೇಕೆಂದು ಹೋದ ಪ್ರವಾಸಿಗರ ಮುಖದಲ್ಲಿ ನಿರಾಸೆಯ ನೆರಳು ಎದ್ದು ಕಾಣುತ್ತಿದೆ. ಏಕೆಂದರೆ, ಅವರು ಹಿಂದಿನ ಫೋಟೋಗಳಲ್ಲಿ ನೋಡಿದ, ಕಲ್ಪನೆ ಮಾಡಿಕೊಂಡ ಕಾಶ್ಮೀರ ಅಲ್ಲಿ ಕಾಣಿಸಿಲ್ಲ.
ಚಳಿಗಾಲದ ಈ ಸಮಯದಲ್ಲೂ ಶುಷ್ಕ ವಾತಾವರಣವನ್ನು ಎದುರಿಸುತ್ತಿರುವ ಕಾಶ್ಮೀರ ಹಿಮವಿಲ್ಲದೆ, ಹಿಮದ ಮಳೆಯಿಲ್ಲದೆ ಬಂಜರಾಗಿ ಕಾಣುತ್ತಿದೆ. ವಿಶ್ವಪ್ರಸಿದ್ಧ ಸ್ಕೀ ರೆಸಾರ್ಟ್ ಗುಲ್ಮಾರ್ಗ್‌ನ ಇಳಿಜಾರುಗಳು ಕೂಡಾ ಹಿಮದ ಹೊದಿಕೆಯಿಲ್ಲದೆ ಬೋಳಾಗಿ ಕಳೆಗುಂದಿವೆ. ಹವಾಮಾನ ಇಲಾಖೆ ಪ್ರಕಾರ, ಕಾಶ್ಮೀರದಲ್ಲಿ ಡಿಸೆಂಬರ್ ಮತ್ತು ಜನವರಿಯಲ್ಲಿ ಸುಮಾರು 75 ಪ್ರತಿಶತದಷ್ಟು ಮಳೆಯ ಕೊರತೆಯಿದೆ. ಇದಕ್ಕೆ ಕಾರಣ ಬದಲಾಗುತ್ತಿರುವ ಹವಾಮಾನ, ಏರುತ್ತಿರುವ ತಾಪಮಾನ.
ಹೌದು, ಕಾಶ್ಮೀರ ಕಣಿವೆಯು ಹವಾಮಾನದಲ್ಲಿ ಅಭೂತಪೂರ್ವ ಬದಲಾವಣೆಗೆ ಸಾಕ್ಷಿಯಾಗಿದೆ. ಜನವರಿಯಲ್ಲಿ, ಗುಲ್ಮಾರ್ಗ್, ಪಹಲ್ಗಾಮ್ ಮತ್ತು ಸೋನ್ಮಾರ್ಗ್ನಂತಹ ಪ್ರವಾಸಿ ಸ್ಥಳಗಳು ಸಾಮಾನ್ಯವಾಗಿ ಸಾಕಷ್ಟು ಹಿಮವನ್ನು ಸಂಗ್ರಹಿಸಿರುತ್ತವೆ. ಆದರೆ ಈ ವರ್ಷ, ಚಳಿಗಾಲದ ಅದ್ಭುತ ಕಾಶ್ಮೀರ, ಗುಲ್ಮಾರ್ಗ್ ಎಲ್ಲಿಯೂ ಹಿಮವಿಲ್ಲವಾಗಿದೆ.
ಪಾಕ್ ಹೊಂಚು ಹಾಕಿದ್ದ ಲಕ್ಷದ್ವೀಪ ಭಾರತದಲ್ಲೇ ಉಳಿದುಕೊಂಡಿದ್ದೇಗೆ? ಗು ...
ಈ ವರ್ಷ ಯಾವುದೇ ಹಿಮವಿಲ್ಲ, ಹಿಮಪಾತದ ಅನುಪಸ್ಥಿತಿಯ ಕಾರಣ ಹಿಮನದಿಗಳು ಕುಗ್ಗಿವೆ. ಇದಕ್ಕೆ ಜಾಗತಿಕ ತಾಪಮಾನ ಏರಿಕೆ ಕಾರಣ. ಮುಂದಿನ ಕೆಲವು ದಿನಗಳವರೆಗೂ ಕಾಶ್ಮೀರ ಹೀಗೆ ಬೋಳಾಗಿಯೇ ಇರಲಿದೆ ಎನ್ನುತ್ತಾರೆ ಹವಾಮಾನ ತಜ್ಞರು. ಈ ಶುಷ್ಕ ಪರಿಸ್ಥಿತಿಯ ಪರಿಣಾಮ ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಮತ್ತು ತೋಟಗಾರಿಕೆ ವಲಯದ ಮೇಲೂ ಪರಿಣಾಮ ಬೀರಬಹುದು ಎನ್ನಲಾಗಿದೆ.
ಸಮುದ್ರದ ಮೇಲ್ಮೈ ತಾಪಮಾನದ ಉಷ್ಣತೆಯು ಜಾಗತಿಕ ಹವಾಮಾನವನ್ನು ಅಡ್ಡಿಪಡಿಸಿದೆ ಮತ್ತು ಹಿಮಾಲಯ ಪ್ರದೇಶದಲ್ಲಿ ಕಡಿಮೆ ಮಳೆ ಮತ್ತು ಹಿಮಕ್ಕೆ ಇದು ಒಂದು ಕಾರಣ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಗುಲ್ಮಾರ್ಗ್ ಮತ್ತು ಪಹಲ್ಗಾಮ್‌ನಂತಹ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರು ಈ ಗಿರಿಧಾಮಗಳಲ್ಲಿ ಹಿಮದ ಹೊದಿಕೆ ಇಲ್ಲದಿರುವುದರಿಂದ ಹೆಚ್ಚು ನಿರಾಶೆಗೊಂಡಿದ್ದಾರೆ. ಪ್ರವಾಸೋದ್ಯಮವನ್ನು ಅವಲಂಬಿಸಿರುವ ಸ್ಥಳೀಯರ ಜೀವನೋಪಾಯದ ಮೇಲೆ ಕೂಡಾ ಇದು ಈಗ ಪರಿಣಾಮ ಬೀರಲು ಪ್ರಾರಂಭಿಸಿದೆ.
ಜರ್ಮನ್ ಸರ್ಕಾರದ ಮೇಲೆ ಮುಗಿಬಿದ್ದ ರೈತರು, ನಗರದ ರಸ್ತೆಗಳಲ್ಲಿ ಲಕ್ಷಾಂತರ ಟ್ರ್ಯಾಕ್ಟರ್ ನಿಲ್ಲಿಸಿ ಪ್ರತಿಭಟನೆ!
ಭೇಟಿ ನೀಡುವ ಪ್ರವಾಸಿಗರಲ್ಲಿ ನಿರಾಶೆ ಈಗ ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುತ್ತಿದೆ ಮತ್ತು ಅನೇಕ ಜನರು ತಮ್ಮ ಕಾಶ್ಮೀರ ಪ್ರವಾಸವನ್ನು ರದ್ದುಗೊಳಿಸುತ್ತಿದ್ದಾರೆ.