ಜರ್ಮನ್ ಸರ್ಕಾರದ ಮೇಲೆ ಮುಗಿಬಿದ್ದ ರೈತರು, ನಗರದ ರಸ್ತೆಗಳಲ್ಲಿ ಲಕ್ಷಾಂತರ ಟ್ರ್ಯಾಕ್ಟರ್ ನಿಲ್ಲಿಸಿ ಪ್ರತಿಭಟನೆ!
ಜರ್ಮನಿ ರಾಜಧಾನಿ ಬರ್ಲಿನ್ ಸೇರಿದಂತೆ ದೇಶದ ಪ್ರಮುಖ ನಗರಗಳು, ಫ್ರಾನ್ಸ್ ಜೊತೆಗೆ ಹಂಚಿಕೊಂಡ ಗಡಿ ರಸ್ತೆಗಳನ್ನು ರೈತರು ಬಂದ್ ಮಾಡಿದ್ದಾರೆ. ಇದರಿಂದಾಗಿ ಈ ವಾರವಿಡೀ ಜರ್ಮನಿಯ ರಸ್ತೆಗಳು ಟ್ರಾಫಿಕ್ ಜಾಮ್‌ಗಳಿಂದ ಸಮಸ್ಯೆ ಎದುರಿಸಿದೆ.
ನವದೆಹಲಿ (ಜ.9): ಕೆಲ ವರ್ಷಗಳ ಹಿಂದ ಭಾರತದಲ್ಲಿ ನಡೆದಿದ್ದ ರೈತ ಹೋರಾಟದ ಆಧುನಿಕ ಆವೃತ್ತಿ ಎನ್ನುವಂತೆ ಜರ್ಮನಲ್ಲಿಯೂ ದೊಡ್ಡ ಪ್ರಮಾಣದ ರೈತ ಹೋರಾಟ ಜರುಗಿದೆ. ರೈತರ ಹೋರಾಟ, ಪ್ರತಿಭಟನೆಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಸರ್ಕಾರಿ ಕಚೇರಿಗಳ ಎದುರು ಟ್ರ್ಯಾಕ್ಟರ್‌ಗಳಲ್ಲಿ ತಮ್ಮ ಗದ್ದೆಗಳ ಕಸವನ್ನು ಹಾಕಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಅದರ ನಡುವೆ ಜರ್ಮನಿ ರಾಜಧಾನಿ ಬರ್ಲಿನ್ ಸೇರಿದಂತೆ ಪ್ರಮುಖ ನಗರಗಳ ಪ್ರಮುಖ ರಸ್ತೆಗಳಲ್ಲಿ ಸಾಲು ಸಾಲು ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ರೈತರ ಪ್ರತಿಭಟನೆಗೆ ಕಾರಣವೂ ಇದೆ. ಜರ್ಮನಿ ಸರ್ಕಾರ ರೈತರ ಸಬ್ಸಿಡಿಯನ್ನು ಕಟ್ ಮಾಡುವ ನಿರ್ಧಾರ ಮಾಡಿದ್ದೇ ಈ ಪ್ರತಿಭಟನೆಗೆ ಕಾರಣ. ಇದರ ಬೆನ್ನಲ್ಲಿಯೇ ಜರ್ಮನಿಯ ಆರ್ಥಿಕ ತಜ್ಞರು ಆದಷ್ಟು ಬೇಗ ಸರ್ಕಾರ ಈ ಪ್ರತಿಭಟನೆಯನ್ನು ಹತ್ತಿಕ್ಕಬೇಕು. ಇಲ್ಲದೇ ಇದ್ದಲ್ಲಿ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಪ್ರತಿಭಟನೆ ಮಾರ್ಗವಾಗಿ ರೈತರು ತಮ್ಮ ಟ್ರ್ಯಾಕ್ಟರ್‌ಗಳಿಂದ ಪ್ರಮಖ ಮಾರ್ಗಗಳನ್ನು ನಿರ್ಬಂಧಿಸಿದ್ದಾರೆ. ಕೆಲವೊಂದು ರಸ್ತೆಗಳ ಮೇಲೆ ಸಾವಿರಕ್ಕೂ ಅಧಿಕ ಟ್ರ್ಯಾಕ್ಟರ್‌ಗಳ ನಿಂತಿವೆ. 'ರೈತರಿಲ್ಲದೆ ನಿಮಗೆ ಬಿಯರ್ ಸಿಗೋದಿಲ್ಲ' ಎನ್ನುವ ಬ್ಯಾನರ್‌ಗಳನ್ನು ಟ್ರಕ್ ಹಾಗೂ ಟ್ರ್ಯಾಕ್ಟರ್‌ಗಳ ಮೇಲೆ ಹಾಕಲಾಗಿದೆ. ಬರ್ಲಿನ್‌ನ ಸಿಟಿ ಸೆಂಟರ್‌ನಲ್ಲಿ ಸಾವಿರಕ್ಕೂ ಅಧಿಕ ಲಾರಿಗಳು ಹಾಗೂ ಟ್ರ್ಯಾಕ್ಟರ್‌ಗಳು ನಿಂತು ಏಕಕಾಕಲದಲ್ಲಿಯೇ ಹಾರ್ನ್‌ಗಳು ಹಾಗೂ ಟ್ರ್ಯಾಕ್ಟರ್ ಲೈಟ್‌ಗಳನ್ನು ಆನ್-ಆಫ್ ಮಾಡುವ ಮೂಲಕ ಸರ್ಕಾರಕ್ಕೆ ಚಾಟಿ ಬೀಸಿದೆ. ಫ್ರಾನ್ಸ್‌ನೊಂದಿಗಿನ ಹಲವಾರು ಗಡಿ ರಸ್ತೆಗಳು ಸೇರಿದಂತೆ ರಾಷ್ಟ್ರವ್ಯಾಪಿ ಅನೇಕ ಸ್ಥಳಗಳಲ್ಲಿ ರಸ್ತೆಗಳು ಮತ್ತು ಹೆದ್ದಾರಿ ರಸ್ತೆಗಳನ್ನು ನಿರ್ಬಂಧಿಸಲಾಗಿದೆ, ಇದು ಬೆಳಗಿನ ಜನದಟ್ಟಣೆಯ ಸಮಯದಲ್ಲಿ ಟ್ರಾಫಿಕ್ ಜಾಮ್‌ಗೆ ಕಾರಣವಾಯಿತು ಎಂದು ಜರ್ಮನ್ ಪೊಲೀಸರು ತಿಳಿಸಿದ್ದಾರೆ.
ಬರ್ಲಿನ್‌ನ ಸರ್ಕಾರಿ ಕ್ವಾರ್ಟರ್‌ನ ಹೃದಯಭಾಗದಲ್ಲಿರುವ ಬ್ರಾಂಡೆನ್‌ಬರ್ಗ್ ಗೇಟ್ ಲ್ಯಾಂಡ್‌ಮಾರ್ಕ್‌ನಲ್ಲಿ ಭಾನುವಾರ ಸಂಜೆ ರೈತರು ಸೇರಲು ಆರಂಭ ಮಾಡಿದ್ದರು. ರೈತರು ಹೇಳುವ ಪ್ರಕಾರ, ಜರ್ಮನ್ ಸರ್ಕಾರ ರೈತರಿಗಾಗಿ ನೀಡಿದ್ದ ಎರಡು ತೆರಿಗೆ ವಿನಾಯಿತಿಗಳನ್ನು ಕೊನೆ ಮಾಡಲು ನಿರ್ಧಾರ ಮಾಡಿದ್ದು, ತಮ್ಮ ಆದಾಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಜರ್ಮನಿಯ ಸುಪ್ರೀಂ ಕೋರ್ಟ್, ಸರ್ಕಾರ 2024ರ ಬಜೆಟ್‌ನಲ್ಲಿ ಉಳಿತಾಯವನ್ನು ಹುಡುಕುವ ಮಾರ್ಗಗಳನ್ನು ನೋಡಬೇಕು ಎಂದಿದ್ದರಿಂದ ಸರ್ಕಾರ ಕೆಲವೊಂದು ಸಬ್ಸಿಡಿಗಳನ್ನು ಕೊನೆ ಮಾಡಿವ ನಿರ್ಧಾರ ಮಾಡಿದೆ. ಈ ಸಬ್ಸಿಡಿ ಕಟ್ ಮಾಡೋದರಿಂದ ನಮ್ಮ ಮೇಲೆ ಅನಗತ್ಯ ಒತ್ತಡ ಬೀರಲಿದೆ ಎಂದಿದ್ದಾರೆ.
ಒಂದು ವಾರದವರೆಗೆ ಪ್ರಮುಖ ಟ್ರಾಫಿಕ್ ಮತ್ತು ಲಾಜಿಸ್ಟಿಕ್ಸ್ ಮಾರ್ಗಗಳನ್ನು ನಿರ್ಬಂಧಿಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ. ಕಳೆದ ವಾರ ರೈತರ ಪ್ರತಿಭಟನೆ ಭುಗಿಲೆದ್ದ ನಂತರ, ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ನೇತೃತ್ವದ ಸಮ್ಮಿಶ್ರ ಸರ್ಕಾರವು ಬಜೆಟ್‌ನಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ಮಾಡಿದೆ. ಕೃಷಿಗೆ ಸಬ್ಸಿಡಿಗಳನ್ನಕಡಿತಗೊಳಿಸುವ ಯೋಜನೆಗಳನ್ನು ಮಾರ್ಪಡಿಸುವುದು ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಿದೆ. ಹೊಸ ತಿದ್ದುಪಡಿಗಳ ಪ್ರಕಾರ, ಕೃಷಿ ಡೀಸೆಲ್ ಮೇಲಿನ ಸಬ್ಸಿಡಿಯನ್ನು ಈ ವರ್ಷ 40% ರಷ್ಟು, 2025 ರಲ್ಲಿ 30% ರಷ್ಟು ಕಡಿತಗೊಳಿಸಲಾಗುವುದು ಮತ್ತು 2026ಕ್ಕೆ ಸಂಪೂರ್ಣವಾಗಿ ಕೊನೆಗಾಣಲಿದೆ.
ಇಂದು ವಿಧಾನಸೌಧ ಚಲೋ; ನ.26ರಿಂದ ದೆಹಲಿ ಗಡಿಯಲ್ಲಿ ಮತ್ತೆ ಹೋರಾಟ!
ಯಾವುದೇ ಬದಲಾವಣೆಗಳನ್ನು ಸರ್ಕಾರ ಪರಿಗಣಿಸುತ್ತಿಲ್ಲ ಎಂದು ಸೋಮವಾರ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಕೊನೆಯಲ್ಲಿ ದೇಶದ ಪ್ರಗತಿಗೆ ಯಾವುದು ಸರಿಯಾದ ಮಾರ್ಗ ಎನ್ನುವುದನ್ನು ಸರ್ಕಾರವೇ ನಿರ್ಧರಿಸಬೇಕು. ಹಾಗಂತ ಈ ನಿರ್ಧಾರಗಳು ಎಲ್ಲರಿಗೂ ತೃಪ್ತಿ ನೀಡುತ್ತದೆ ಎನ್ನವುದಕ್ಕೂ ಸಾಧ್ಯವಿಲ್ಲ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.