ಏನೇನೋ ಕಂಡ ಮೇಲೂ, ನಮ್ಮೂರೇ ನಮಗೆ ಮೇಲು!

ಬಿರು ಬೇಸಗೆ ಅಡಿ ಇಟ್ಟಿದೆ. ಮಕ್ಕಳು ಬೇಸಿಗೆ ರಜೆಯ ಖುಷಿಯಲ್ಲಿದ್ದಾರೆ. ರಜೆ, ಖುಷಿಯ ಜೊತೆಗೆ ಮಕ್ಕಳಿಗೆ ನಿಸರ್ಗದ ವಿಸ್ಮಯಗಳನ್ನು ಪರಿಚಯಿಸುವ ಹಂಬಲ ನಿಮಗಿದ್ದರೆ ಈ ಮೂರು ಪ್ರವಾಸಿ ತಾಣಗಳಿಗೆ ಭೇಟಿಕೊಡಬಹುದು. ನಮ್ಮೂರೇ ನಮಗೆ ಮೇಲು ಅನಿಸೋಕೆ ಮೊದಲು ಏನೇನನ್ನೋ ಕಾಣಬೇಕು. ಅಂಥಾ ಕಾಣ್ಕೆಗಳಿವು.

Best places to visit in Karnatakas different district Vin

ನಿಸರ್ಗ ನಿರ್ಮಿತ ಸಿಡಿಲುಪಡಿ
- ಈಶ್ವರ ಶೆಟ್ಟರ್‌

ಪ್ರಾಗ್ರೈತಿಹಾಸಿಕ ಶಿಲಾಶಾಸನಗಳು ಹಾಗೂ ಕಲಾ ಪರಂಪರೆಯ ಭಾಗವಾಗಿರುವ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಸ್ಥಳ ಬಾದಾಮಿಯ ಪರಿಸರದಲ್ಲಿ ಮೇಣ ಬಸದಿ, ಗುಹಾಂತರ ದೇವಾಲಯಗಳ ಜೊತೆಗೆ ಭೂತನಾಥ ದೇವಾಲಯಗಳು ಚಾಲುಕ್ಯರ ಕಾಲದ ಬಹುದೊಡ್ಡ ಕೊಡುಗೆ. ಆದರೆ ಇದೇ ಪರಿಸರದ ಕೆಲವು ಕಿಲೋ ಮೀಟರ್‌ಗಳ ಅಂತರದಲ್ಲಿ ನಿಸರ್ಗ ನಿರ್ಮಿತ ಸಿಡಿಲುಪಡಿ ಎಂದು ಗುರುತಿಸಿಕೊಳ್ಳುವ ಈ ಶಿಲಾ ಸೇತುವೆ ಉಳಿದ ಸ್ಮಾರಕಗಳಂತೆ ನೋಡಲು ದಕ್ಕುವುದಿಲ್ಲ. ಆದರೆ ಅಲ್ಪ ಶ್ರಮ ಹಾಕಲು ನಿರ್ಧರಿಸಿದರೆ ನಿಶ್ಚಿತವಾಗಿಯೂ ನಿಸರ್ಗ ನಿರ್ಮಿತ ಶಿಲಾ ಸೇತುವೆಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ನಿಸರ್ಗ ನಿರ್ಮಿತ ಸಿಡಿಲುಪಡಿ: ಬಾದಾಮಿಯಿಂದ ರೇಲ್ವೆ ನಿಲ್ದಾಣಕ್ಕೆ ತೆರಳುವ ಮಾರ್ಗ ಮಧ್ಯೆ ಇದೀಗ ತಾನೆ ಅರಣ್ಯ ಇಲಾಖೆ ನಿರ್ಮಿಸಿರುವ ಬಾದಾಮಿ ಗುಡ್ಡಕ್ಕೆ ಹೊಂದಿಕೊಂಡಿರುವ ಸಾಲುಮರದ ತಿಮ್ಮಕ್ಕ ಅರಣ್ಯ ವಲಯದ ಮೂಲಕ ತೆರಳಿದರೆ ನಿಸರ್ಗ ನಿರ್ಮಿತ ಸಿಡಿಲುಪಡಿಯನ್ನು ತಲುಪಬಹುದು. ಇನ್ನೊಂದು ಮಾರ್ಗವು ಸಹ ಇದ್ದು ಗುಹಾಂತರ ದೇವಾಲಯದ ಬಳಿ ಇರುವ ಅಗಸ್ತ್ಯತೀರ್ಥದ ಉತ್ತರ ದಂಡೆಯಲ್ಲಿರುವ ತಟ್ಟುಕೋಟೆ ಪ್ರದೇಶದಲ್ಲಿನ ಪ್ರಸಿದ್ಧ ಕಪ್ಪೆ ಅರಭಟ್ಟನ ಶಾಸನದ ಪಕ್ಕದಲ್ಲಿ ಮಹಾಕೂಟಕ್ಕೆ ಸಾಗಬಹುದಾದ ಕಲ್ಲು ದಾರಿಯಲ್ಲಿ ಸಾಗಿದರೆ, ಈ ಶಿಲಾ ಸೇತುವೆಯನ್ನು ತಲುಪಬಹುದು. ಆದರೆ ಎರಡೂ ಮಾರ್ಗಗಳಲ್ಲಿ ಕನಿಷ್ಟಮೂರು ಕಿಮೀ ಗುಡ್ಡಕ್ಕೆ ಹೊಂದಿಕೊಂಡಿರುವ ಕಲ್ಲುಮಣ್ಣುಗಳಲ್ಲಿ ಕಾಲ್ನಡಿಗೆಯಲ್ಲಿಯೇ ತೆರಳುವುದು ಅನಿವಾರ್ಯವಾಗಿದೆ.

ಜನಜಂಗುಳಿಯಿಂದ ದೂರ ಉಳಿಯಲು ಬಯಸಿದ್ರೆ… ಈ ಗಿರಿಧಾಮಗಳೇ ಸ್ವರ್ಗ

ಏನಿದು ಸಿಡಿಲುಪಡಿ?: ತಟ್ಟನೆ ನೋಡಿದರೆ ಸೇತುವೆಯಂತೆ ಕಾಣುವ 50 ಮೀಟರ್‌ ಉದ್ದ 5 ಮೀಟರ್‌ ಎತ್ತರ ಇರುವ ಸುಮಾರು 15 ಮೀಟರ್‌ ಅಗಲವಿರುವ ಈ ಶಿಲಾ ಸೇತುವೆ ನಿಸರ್ಗವೆ ನಿರ್ಮಿಸಿಕೊಂಡ ಅದ್ಭುತ ಸ್ಮಾರಕ ಎಂದರೆ ತಪ್ಪಾಗಲಾರದು. ಲಕ್ಷಾಂತರ ವರ್ಷಗಳ ಹಿಂದೆ ನಡೆದ ನೈಸರ್ಗಿಕ, ವೈಜ್ಞಾನಿಕ ಕ್ರಿಯೆಯಿಂದ ಇದು ನಿರ್ಮಾಣಗೊಂಡಿದೆ ಎಂದು ಭೂವಿಜ್ಞಾನಿಗಳ ಅಭಿಪ್ರಾಯವಾಗಿದೆ. ಸ್ಥಳೀಯರ ಅಭಿಪ್ರಾಯದಲ್ಲಿ ಬಹುದೊಡ್ಡ ಸಿಡಿಲೊಂದು ಬೃಹತ್‌ ಬಂಡೆಯೊಂದಕ್ಕೆ ಬಡಿದಿದ್ದರಿಂದ ಈ ರೂಪ ತಾಳಿದ್ದು ಅದಕ್ಕಾಗಿ ಇದನ್ನು ಸಿಡಿಲುಪಡೆ ಎಂದು ಗುರುತಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಈ ಶಿಲಾ ಸೇತುವೆಯ ಒಳ ಭಾಗದಲ್ಲಿ ಪ್ರಾಗ್ರೈತಿಹಾಸಿಕತೆಯನ್ನು ಬಿಂಬಿಸುವ ಚಿತ್ರಗಳಿವೆ. ಬಿಳಿ ಬಣ್ಣದಲ್ಲಿ ಚಿತ್ರಿಸಲ್ಪಟ್ಟಹಾವು, ಗುಬ್ಬಚ್ಚಿ, ಆನೆ, ಮನುಷ್ಯನ ಚಿತ್ರಗಳಿಗೆ ಐತಿಹಾಸಿಕವಾಗಿ ಬಹಳ ಮಹತ್ವವಿದೆ ಎಂದು ಇತಿಹಾಸಕಾರ ಡಾ.ಅ.ಸುಂದರ ಅಭಿಪ್ರಾಯಪಟ್ಟಿದ್ದಾರೆ. ನಿಸರ್ಗ ನಿರ್ಮಿತ ಅದ್ಭುತವನ್ನು ವೀಕ್ಷಿಸುವುದೇ ಒಂದು ಸಂಭ್ರಮ ಎಂದರೆ ತಪ್ಪಾಗಲಾರದು.

ಸವಿಯಬೇಕಾದ ಹೋಟೆಲ್‌: ಬಾಗಲಕೋಟೆ ನವನಗರದ ಕಾಳಿದಾಸ ವರ್ತುಲದ ಬಳಿ ಇರುವ ಪಕ್ವಾನ್‌ ಜವಾರಿ ಹೋಟೆಲ್‌ನಲ್ಲಿ ಜೋಳದ ರೊಟ್ಟಿ, ನಾಲ್ಕಾರು ವಿಧದ ಪಲ್ಯಗಳು, ಹೋಳಿಗೆ ಸೇರಿದಂತೆ ಎಲ್ಲ ಹಲವು ಬಗೆಯ ತಿನಿಸು ಸವಿಯಬಹುದಾಗಿದೆ.

ಗುಳೇದಗುಡ್ಡ ಕಣ: ಇಳಕಲ್‌ ಸೀರೆ ಒಂದೆಡೆ ಎಷ್ಟುಪ್ರಸಿದ್ಧವೋ ಹಾಗೇ ಗುಳೇದಗುಡ್ಡದ ರೇಷ್ಮೆ ಕಣಗಳು (ಕುಪ್ಪಸಗಳು) ಅಷ್ಟೆ ಪ್ರಸಿದ್ಧಿಯಾಗಿವೆ. ಸ್ಥಳೀಯ ನೇಕಾರರ ಕುಶಲತೆಗೆ ಕನ್ನಡಿಯಾಗಿರುವ ಗುಳೇದಗುಡ್ಡದ ಪಟ್ಟಣದಲ್ಲಿ ಸಿಗುವ ಕಣಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ಸಂತಸ ಎನ್ನಬಹುದು.

ಮಾಡಲೇಬೇಕಾದ ಕೆಲಸಗಳು: ಏಷ್ಯಾ ಖಂಡದಲ್ಲಿಯೇ ಬಹುದೊಡ್ಡ ನಗರ ನೀರಾವರಿ ಯೋಜನೆಗಾಗಿ ಮುಳುಗಡೆಯಾಗಿದ್ದು ಜಿಲ್ಲಾ ಕೇಂದ್ರವಾಗಿರುವ ಬಾಗಲಕೋಟೆ ನಗರ, ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಬಾಧಿತವಾಗಿರುವ ನಗರವೀಗ ನವನಗರವಾಗಿ ರೂಪಗೊಂಡಿದೆ. ಪ್ರವಾಸಿಗರು ಬಾಗಲಕೋಟೆಗೆ ಬಂದಾಗ ಇಲ್ಲಿನ ಸಂತ್ರಸ್ತರನ್ನು ಭೇಟಿ ಮಾಡಿ, ಈ ಯೋಜನೆಯಿಂದ ಆಗಿರುವ ನೋವು ನಲಿವುಗಳನ್ನು ತಿಳಿದುಕೊಳ್ಳಬಹುದು.

ಕರ್ನಾಟಕದ ಗತಕಾಲದ ಈ ಸ್ಥಳಗಳಿಗೆ ಭೇಟಿ ನೀಡಿ, ವಾಸ್ತುಶಿಲ್ಪದ ಮೆರಗು ನೋಡಿ

ಚಾಂದನಿ ಚಬೂತರ್‌ನ ಚಂದ್ರಮ
- ಅಪ್ಪಾರಾವ್‌ ಸೌದಿ

ನಭದಲ್ಲಿ ಚಂದ್ರಮ ಎಲ್ಲಿದ್ದರೂ ಕಾಣ್ತಾನೆ. ಆದರೆ ಇಲ್ಲಿ ತೀರ ಹತ್ತಿರದಿಂದ ಕಂಡಂತೆ, ಮಾಮೂಲಿಗಿಂತ ದೊಡ್ಡದಾಗಿ ಕಾಣ್ತಾನೆ. ಇಂಥದ್ದೊಂದು ಅದ್ಭುತ ಅನುಭವ ಸಿಗೋದು ಬೀದರ್‌ ಕೋಟೆ ಆವರಣದಲ್ಲಿರುವ ಚಾಂದನಿ ಚಬೂತರ್‌ನಲ್ಲಿ. ಹುಣ್ಣಿಮೆ ದಿನ ಅದ್ಭುತ ಚಂದ್ರ ದರ್ಶನವಾಗುತ್ತದೆ. ಬೆಳಗ್ಗೆ ಬೀದರ್‌ ಕೋಟೆಯ ಸ್ಮಾರಕ ಸ್ಥಳಗಳ ಪ್ರವಾಸ ಮಾಡುವ ಪ್ರವಾಸಿಗರು ಸಂಜೆ ಹೊತ್ತಿಗೆ ಈ ಚಾಂದನಿ ಚಬೂತರ್‌ಗೆ ಭೇಟಿ ನೀಡಬಹುದು. ಆಗಸದಲ್ಲಾಗುವ ಬದಲಾವಣೆ, ನಕ್ಷತ್ರ ಹಾಗೂ ಗ್ರಹಗಳನ್ನು ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಸಮೀಪದಲ್ಲಿ ನೋಡಲು ವಿಜ್ಞಾನ ಕೇಂದ್ರಗಳಿದ್ದಂತೆ ಹುಣ್ಣಿಮೆ ಚಂದ್ರನ ಅಂದವನ್ನು ಕಣ್ಣು ತುಂಬಿಸಿಕೊಳ್ಳಲು, ಆನಂದಿಸಲೆಂದೇ ಇರುವ ವಿಶೇಷ ತಾಣವಿದು.

ಕಲೆ ಹಾಗೂ ಸಂಗೀತ ಪ್ರೇಮಿಯಾಗಿದ್ದ ಔರಂಗಜೇಬನ ಕಾಲದಲ್ಲಿ ಬೀದರ್‌ ಕೋಟೆಯ ತಲಘಾಟ್‌ ದರ್ವಾಜಾ ಬಳಿ ಚಂದ್ರೋದಯ ವೀಕ್ಷಣೆಗಾಗಿಯೇ ಈ ಸ್ಥಳ ಆಯ್ಕೆ ಮಾಡಿ ಕಟ್ಟಲಾಗಿದೆ. ಇಂದಿಗೂ ಚಂದ್ರೋದಯ ವೀಕ್ಷಣೆಗಾಗಿಯೇ ಜನರನ್ನ ಇದು ಸೆಳೆಯುವಂತಿದೆ. ಸೂರ್ಯೋದಯ ಮತ್ತು ಸೂರ್ಯಾಸ್ತ ವೀಕ್ಷಣೆಗೆ ದೇಶದ ಬಹಳಷ್ಟುಸ್ಥಳಗಳು ಪ್ರಖ್ಯಾತಿ ಹೊಂದಿದೆ. ಆದರೆ, ಚಂದ್ರೋದಯ ವೀಕ್ಷಣೆಗಾಗಿ ಪ್ರತ್ಯೇಕ ವ್ಯವಸ್ಥೆ ಇರುವುದು ಬೀದರ್‌ನ ಚಾಂದನಿ ಚಬೂತರ್‌ನಲ್ಲಿ ಮಾತ್ರ. ಹಲವು ವರ್ಷಗಳ ಹಿಂದೆ ಸಂಪೂರ್ಣ ಅಳವಿನಂಚಿನಲ್ಲಿದ್ದ ಈ ಸ್ಮಾರಕ ಈಗ ಜೀರ್ಣೋದ್ಧಾರಕ್ಕೊಳಗಾಗಿದ್ದು, ಇನ್ನಷ್ಟುಸೌಲಭ್ಯಗಳು ಬೇಕಿದೆ. ಕೋಟೆಯ ಪ್ರವೇಶ ಮತ್ತು ಹೊರಹೋಗುವ ಸಮಯವನ್ನು ವಿಸ್ತರಿಸುವ ಅಗತ್ಯವೂ ಇದೆ. ಇಲ್ಲಿ 3 ದಿನ ಸಮಾನ ಗಾತ್ರದ ಪೂರ್ಣಚಂದ್ರ ಕಾಣಿಸೋದು ವಿಶೇಷ ಎಂದು ರಷ್ಯನ್‌ ಪ್ರವಾಸಿ ಅಫನಾಸಿ ನಿಕೆಟಿನ್‌ ತನ್ನ ಪ್ರವಾಸ ಕಥನದಲ್ಲಿ ದಾಖಲಿಸಿದ್ದು, ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿರುವ ನೈಸರ್ಗಿಕ ಕಾರಣಗಳಿಂದಾಗಿ ಬೇರೆಲ್ಲ ಕಡೆಗಳಿಗಿಂತ ದೊಡ್ಡ ಚಂದ್ರ ಇಲ್ಲಿ ಕಾಣಿಸುತ್ತಾನೆ ಎಂದೂ ಆತ ಉಲ್ಲೇಖಿಸಿದ್ದಾನೆ.

ಇದು ಬೀದರ್‌ ನಗರದಲ್ಲಿನ ಬಹಮನಿ ಕೋಟೆ ಆವರಣದಲ್ಲಿದೆ. ಬೀದರ್‌ ಬಸ್‌ ನಿಲ್ದಾಣದಿಂದ ಸುಮಾರು 3 ಕಿ.ಮೀ. ದೂರದಲ್ಲಿರುವ ಇಲ್ಲಿಗೆ ಸಿಟಿ ಬಸ್‌, ಆಟೋ ಅಥವಾ ಸ್ವಂತ ವಾಹನದಲ್ಲಿ ಆಗಮಿಸಬಹುದು. ರಾತ್ರಿ ಹೆಚ್ಚು ಹೊತ್ತು ಸಮಯ ಕಳೆಯಲು ಸದ್ಯಕ್ಕೆ ಪುರಾತತ್ವ ಇಲಾಖೆಯ ಪರವಾನಗಿ ಇಲ್ಲ. ಪ್ರವಾಸಿಗರು ಹೆಚ್ಚಿದಂತೆ ಇಲಾಖೆ ಸಮಯ ವಿಸ್ತರಣೆ ಸಾಧ್ಯತೆ ಇದೆ.

Travel Tips : ಜೋಗ ಜೊತೆ ಎಷ್ಟು ಅದ್ಭುತ ಜಲಪಾತಗಳಿವೆ ಭಾರತದಲ್ಲಿ ಗೊತ್ತಾ?

ಗಿರಿ ಕಣಿಕಣಿವೆಗಳ ಆಗರ ಬೇಡಗುಳಿ!
- ದೇವರಾಜು ಕಪ್ಪಸೋಗೆ

ಕೊಳ್ಳೇಗಾಲ ತಾಲೂಕಿಗೆ ಸೇರಿರುವ ಅತ್ತಿಖಾನೆ ಗ್ರಾಮ ಅತಿಸುಂದರ ಗಿರಿಕಣಿವೆಗಳ ಆಗರ. ಚಾಮರಾಜನಗರದಿಂದ ತಮಿಳುನಾಡಿಗೆ ತೆರಳುವ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿರುವ ನೀಲಗಿರಿ ಶ್ರೇಣಿಯ ಅಂಚಿನಲ್ಲಿರುವ ಬೇಡಗುಳಿ ಕರ್ನಾಟಕ - ತಮಿಳುನಾಡು ರಾಜ್ಯಗಳ ಸೀಮಾರೇಖೆಯಾಗಿದೆ. ನಿತ್ಯಹರಿದ್ವರ್ಣ ಪರಿಸರದ ವನ್ಯಜೀವಿಧಾಮವಾಗಿ ಪ್ರಖ್ಯಾತಿಗೊಂಡಿದೆ. ಬೇಡಗುಳಿ ಮತ್ತು ಅತ್ತಿಖಾನೆ ಪ್ರದೇಶದಲ್ಲಿ ಗಿರಿಜನರು ವಾಸಿಸುತ್ತಾರೆ. ಯುರೋಪಿಯನ್ನರ ಕಾಲದ ಕಾಫಿ ತೋಟಗಳು ಇಲ್ಲಿನ ಮತ್ತೊಂದು ವಿಶೇಷ. ಇಲ್ಲಿನ ಗಿರಿಜನರ ಹಾಡಿಗಳು, ಅವರ ಹಾಡುಪಾಡು, ಜೀವನ ಶೈಲಿ, ಸಂಸ್ಕೃತಿ, ಸಂಪ್ರದಾಯಗಳು ಅಧ್ಯಯನ ಯೋಗ್ಯವಾಗಿದೆ. ವೈವಿಧ್ಯಮಯ ವನ್ಯಜೀವಿಗಳು, ಸುಂದರ ಗಿರಿಶ್ರೇಣಿಗಳು, ಅದ್ಭುತ ಕಣಿವೆಗಳು, ಮನೋಹರ ಜಲಪಾತಗಳು ಕಲ್ಪನಾ ಲೋಕಕ್ಕೆ ಕರೆದೊಯ್ಯುತ್ತವೆ. ಅರಣ್ಯ ಇಲಾಖೆಯ ನಿರ್ವಹಣೆಯಲ್ಲಿರುವ ಬೇಡಗುಳಿ

ಅತಿಥಿಗೃಹ ನೂರು ವರುಷಗಳಷ್ಟುಪುರಾತನವಾದುದ್ದು. ವನ್ಯಜೀವಿ ಪ್ರದೇಶವಾಗಿರುವುದರಿಂದ ಇಲ್ಲಿಗೆ ಪ್ರವೇಶಿಸಲು ಅರಣ್ಯ ಇಲಾಖೆ ಅನುಮತಿ ಅಗತ್ಯ. ಎಲೆಮರೆಯ ಕಾಯಿಯಂತಿರುವ ಅತ್ತಿಖಾನೆಯ ಕತ್ತರಿ ಬೆಟ್ಟವು ಜಿಲ್ಲೆಯಲ್ಲೇ ಅತಿ ಎತ್ತರ (ಸಮುದ್ರ ಮಟ್ಟದಿಂದ 1816 ಮೀ) ಬೆಟ್ಟ. ಇದರ ತಪ್ಪಲಿನಲ್ಲಿ ಹುಟ್ಟುವ ಝರಿಗಳು ತೊರೆಯಾಗಿ ಹರಿದು ಚಾಮರಾಜನಗರ ಜಿಲ್ಲೆಯ ಜೀವನಾಡಿಯಾದ ಸುವರ್ಣಾವತಿ ನದಿಯಾಗಿ ರೂಪುಗೊಳ್ಳುತ್ತದೆ.

ಎಲ್ಲಿದೆ - ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಸೇರಿದೆ. ಸಂರಕ್ಷಿತ ಅರಣ್ಯದಲ್ಲಿರುವುದರಿಂದ ಅನುಮತಿ ಇಲ್ಲದೆ ಪ್ರವೇಶಿಸುವಂತಿಲ್ಲ.

ಹೋಗೋದು ಹೇಗೆ: ಜಿಲ್ಲಾ ಕೇಂದ್ರದಿಂದ 30 ಕಿ.ಮೀ ದೂರದಲ್ಲಿದೆ. ಚಾಮರಾಜನಗರದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಪುಣಜನೂರು ಮಾರ್ಗವಾಗಿ ತೆರಳಬಹುದು.

ಮಳೆಯಲ್ಲಿ ಕಣ್ಮನ ಸೆಳೆಯುತ್ತಿದೆ ಹಂಪಿಯ ಸ್ಮಾರಕಗಳ ಸೊಬಗು

ಬಾಯಲ್ಲಿ ನಿರೂಣಿಸುವ ದೇವು ಮೆಸ್‌ನ ಸೆಟ್‌ ದೋಸೆ !
ಎರಡು ದಶಕದ ಹಿಂದೆ ಚಾಮರಾಜನಗರದ ಹೃದಯ ಭಾಗದಲ್ಲಿದ್ದ ಪಚ್ಚಪ್ಪ ಹೋಟೆಲ್‌ನಲ್ಲಿ ಸೆಟ್‌ ದೋಸೆ ಪ್ರಸಿದ್ಧಿಯಾಗಿತ್ತು. ಈಗ ಪಚ್ಚಪ್ಪ ಹೋಟೆಲ್‌ ಇಲ್ಲ. ಆದ್ರೆ ಅದೇ ರುಚಿ ದೋಸೆ ಸಿಗುವುದು ದೇವು ಮೆಸ್‌ನಲ್ಲಿ. ನಗರಸಭೆ ವ್ಯಾಪ್ತಿಗೆ ಸೇರಿದ ರಾಮಸಮುದ್ರ ಬಳಿಯ ಕುಲುಮೆ ರಸ್ತೆಯಲ್ಲಿರುವ ದೇವು ಮೆಸ್‌ ಸೆಟ್‌ ದೋಸೆಗೆ ಪ್ರಸಿದ್ದಿ. ಅಂಗೈ ಅಗಲದ, ತೆಳುವಾದ ಸೆಟ್‌ದೋಸೆ, ಚಟ್ನಿ, ಸಾಗು, ಬೆಣ್ಣೆ ನೆನೆಸಿಕೊಂಡ್ರೆ ಬಾಯಲ್ಲಿ ನೀರು ಗ್ಯಾರಂಟಿ. ಸೆಟ್‌ ದೋಸೆ ಅಲ್ಲದೆ ಬೆಣ್ಣೆ ರೋಸ್ಟ್‌, ಚಪಾತಿ ಕೂಡ ಬಹಳ ರುಚಿಕರ. ಹೊಟ್ಟೆಬಿರಿಯುವ ಹಾಗೆ ತಿಂದರೂ ಬಿಲ್‌ ಮಾತ್ರ ಹಗುರ.

ಮೂಲತಃ ರಾಮಸಮುದ್ರವರೇ ಆದ ದೇವಣ್ಣ ಈ ಗುಡಿಸಲು ಹೋಟೆಲ್‌ ಆರಂಭಿಸುವ ಮುಂಚೆ ಚಾಮರಾಜನಗರದ ಗುಂಡ್ಲುಪೇಟೆ ವೃತ್ತದಲ್ಲಿ ಇನ್ನೊಂದು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಂತರ ರಾಮ ಸಮುದ್ರದಲ್ಲಿ ಹೋಟೆಲ್‌ ಆರಂಭಿಸಿದರು. ಈಗ ಸುವರ್ಣ ಮಹೋತ್ಸವದತ್ತ ದಾಪುಗಾಲು ಹಾಕುತ್ತಿರುವ ಈ ಹೊಟೇಲಿನಲ್ಲಿ ಹಿಂದೆ 10 ಪೈಸೆಗೆ ಒಂದು ದೋಸೆ, 30 ಪೈಸೆಗೆ ಒಂದು ಚಪಾತಿ ಸಿಗುತ್ತಿತ್ತು. ಈಗ ದರ ಬದಲಾಗಿದೆ. ದೇವಣ್ಣನವರ ಹೋಟೆಲಿನ ಸಕ್ಸಸ್‌ಗೆ ಅವರ ಪುತ್ರ ಮಂಜುನಾಥ್‌, ಹಿಂದೆ ದೋಸೆ ಹಾಕುತ್ತಿದ್ದ ರಾಜಪ್ಪ, ಈಗ ದೋಸೆ ಹಾಕುತ್ತಿರುವ ಪುಟ್ಟಮಾದಪ್ಪ ಕಾಣಿಕೆಯೂ ಅಪಾರ.

ಮಳೆಗಾಲದಲ್ಲಿ ಕರ್ನಾಟಕದ ಈ ಪ್ರವಾಸಿತಾಣಗಳು ಭೂಲೋಕದ ಸ್ವರ್ಗ

ಇಲ್ಲಿ ಸೌದೆ ಒಲೆ ಬಳಸುವುದರಿಂದ ದೋಸೆಯ ರುಚಿ ಹೆಚ್ಚಾಗುತ್ತದೆ ಎನ್ನುತ್ತಾರೆ ದೇವಣ್ಣ. ಅನೇಕ ರಾಜಕಾರಣಿಗಳು, ಉದ್ಯಮಿಗಳು ಇದರ ರುಚಿಗೆ ಮನಸೋತು ಹುಡುಕಿಕೊಂಡು ಬರುತ್ತಾರೆ. ಚಾಮರಾಜನಗರಕ್ಕೆ ಬಂದ್ರೆ ರಾಮಸಮುದ್ರದಿಂದ ಕುಲುಮೆ ರಸ್ತೆಯಲ್ಲಿರುವ ದೇವು ಮೆಸ್‌ಗೆ ಭೇಟಿ ನೀಡಿ.

ಚಾಮರಾಜನಗರ ಜಿಲ್ಲೆಗೆ ಬಂದವರು ಮಲೆ ಮಹದೇಶ್ವರ ದರ್ಶನ ಪಡೆದು ಉತ್ಸಾಹ ಇದ್ದರೆ ನಾಗಮಲೆಗೆ ಟ್ರಕ್ಕಿಂಗ್‌ಗೆ ಹೋಗಬಹುದು. ಇಲ್ಲವಾದರೆ ಹೊಗೇನಕಲ್‌ ಜಲಪಾತಕ್ಕೆ ಹೋಗಿ ಬಂಡೆಗಳ ನಡುವೆ ಬೋರ್ಗರೆಯುವ ಜಲಪಾತದ ನಡುವೆ ದೋಣಿಯಲ್ಲಿ ವಿಹಾರ ಮಾಡಬಹುದು. ಚಾಮರಾಜನಗರ ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿದಿರು ಬುಟ್ಟಿಪ್ರಸಿದ್ಧ. ಇಲ್ಲಿಗೆ ಬಂದರೆ ಬಿದಿರಿನಿಂದ ತಯಾರಿಸಿದ ಬುಟ್ಟಿ, ಮೊರೆ, ಮಕ್ಕರಿ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಬೆಳೆಯುವ ಅರಿಶಿನ ಖರೀದಿಸಬಹುದು.

Latest Videos
Follow Us:
Download App:
  • android
  • ios