ಮಳೆಯಲ್ಲಿ ಕಣ್ಮನ ಸೆಳೆಯುತ್ತಿದೆ ಹಂಪಿಯ ಸ್ಮಾರಕಗಳ ಸೊಬಗು
ಐತಿಹಾಸಿಕ ಹಂಪಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ. ಹಂಪಿಯ ಸ್ಮಾರಕದ ಸೌಂದರ್ಯ ವಿಜಯನಗರದ ಇತಿಹಾಸ ಕೇಳಲು ಮತ್ತು ನೋಡಲು ಎಲ್ಲರಿಗೂ ಬಲು ಇಷ್ಟ. ಸದ್ಯ ಈ ಹಂಪಿ ಮತ್ತಷ್ಟು ಆಕರ್ಷಣೆಯನ್ನು ಪಡೆದುಕೊಂಡಿದೆ. ವಿಶ್ವ ವಿಖ್ಯಾತ ಹಂಪಿಯಲ್ಲಿ ಮಳೆಯಲ್ಲಿ ಮಿಂದೆದ್ದ ಸ್ಮಾರಕಗಳು ಕಂಗೊಳಿಸುತ್ತಿವೆ. ಪೋಟೋ ಕೃಪೆ: ಶಿವಶಂಕರ್ ಬಣಗಾರು, ಹಂಪಿ

ವಿಜಯನಗರ ಜಿಲ್ಲೆಯ ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಗುರುತಿಸಿದೆ. ಪ್ರತಿ ದಿನ ಸಾವಿರಾರು ಪ್ರವಾಸಿಗರು ಹಂಪಿಗೆ ಭೇಟಿ ನೀಡುತ್ತಾರೆ. ಅಲ್ಲಿನ ಸೊಬಗನ್ನು ಕಣ್ತುಂಬಿಕೊಳ್ಳುತ್ತಾರೆ. ಸದ್ಯ ಮಳೆಯಲ್ಲಿ ಹಂಪಿಯ ಸ್ಮಾರಕಗಳ ಸೊಬಗು ಇನ್ನಷ್ಟು ಕಂಗೊಳಿಸುತ್ತಿದೆ.
ವಿಜಯನಗರದಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಭಾರೀ ಮಳೆ ಸುರಿಯುತ್ತಿದೆ. ಹೀಗಾಗಿ ವಿಶ್ವ ವಿಖ್ಯಾತ ಹಂಪಿಯಲ್ಲಿ ಸ್ಮಾರಕಗಳು ಮಳೆಯಲ್ಲಿ ಕಂಗೊಳಿಸುತ್ತಿವೆ ಜತೆಗೆ ಈ ಮಳೆ ಪ್ರವಾಸಿಗರಿಗೂ ಮುದ ನೀಡುತ್ತಿದೆ. ಕಲ್ಲಿನ ತೇರು ಸೇರಿದಂತೆ ಸಾಲು ಮಂಟಪಗಳು ನೋಡಲು ಅತ್ಯಾಕರ್ಷಕವಾಗಿ ಕಾಣಿಸುತ್ತಿವೆ.
ಹಂಪಿಯ ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ, ಕೋದಂಡ ರಾಮದೇವರ ಗುಡಿ, ಪುರಂದರದಾಸರ ಮಂಟಪ, ಕಾಲು ಸೇತುವೆ, ಕೋಟಿಲಿಂಗ, ಕರ್ಮಮಂಟಪ ಸೇರಿದಂತೆ ವಿವಿಧ ಸ್ಮಾರಕಗಳು ಜಲಾವೃತವಾಗಿವೆ. ಹಂಪಿಯ ಸೀತೆ ಸೆರಗು ಬಳಿ ಧಾರಾಕಾರವಾಗಿ ಮಳೆ ಹರಿಯುತ್ತಿದೆ.
ಶ್ರೀ ವಿರೂಪಾಕ್ಷ ದೇಗುಲದ ಆವರಣದೊಳಗಡೆಯೂ ಮಳೆ ನೀರು ತುಂಬಿಕೊಂಡಿದೆ. ಇನ್ನೂ ಶ್ರೀ ರಾಮ- ಲಕ್ಷ್ಮಣ ದೇಗುಲದ ಬಳಿಯಿಂದ ಅಂಜನಾದ್ರಿಯ ದೃಶ್ಯ ರೋಚಕವಾಗಿದ್ದು, ಮೋಡಗಳ ನಡುವೆ ಅಂಜನಾದ್ರಿ ಬೆಟ್ಟ ಕಂಡ ಪ್ರವಾಸಿಗರು ಖುಷ್ ಆಗಿದ್ದಾರೆ.
ವಿಜಯನಗರ ಸಾಮ್ರಾಜ್ಯದ ಯಶಸ್ವಿ ಒಡೆಯನಾದ ಕೃಷ್ಣದೇವರಾಯನ ಕಾಲದಲ್ಲಿ ಹಂಪೆ ಬಜಾರ್ ಎಂದೆನ್ನಿಸಿ ಕೊಂಡ ಬೀದಿಯಲ್ಲಿ ವಜ್ರಾಭರಣಗಳನ್ನು ತೂಕದ ಮಾದರಿಯಲ್ಲಿ ಮಾರಲ್ಪಡುತ್ತಿದ್ದರಂತೆ. ಕೃಷ್ಣದೇವರಾಯನ ರಾಜ್ಯಭಾರ ಮುಗಿದ ನಂತರ ವಿಜಯನಗರ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ನಿಧಾನವಾಗಿ ಕಳೆದು ಕೊಳ್ಳುತ್ತಾ ಬಂತು ಎಂದು ಇತಿಹಾಸದಲ್ಲಿ ಹೇಳಲಾಗಿದೆ.
ಕೊನೆಗೆ ತಾಳೀಕೋಟೆಯ ಯುದ್ಧದಲ್ಲಿ ಮುಸ್ಲಿಂ ಸಾಮ್ರಾಜ್ಯದಿಂದ ಬಂದ ಆಕ್ರಮಣವನ್ನು ತಡೆಯದೆ ಅಂತ್ಯಗೊಂಡಿತು. ಹಂಪೆಯಲ್ಲಿದ್ದ ಅನೇಕ ಸ್ಮಾರಕಗಳು ನಾಶವಾದವು.
ಇಂದು ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಭಗಳು, ವಿಶ್ವವಿಖ್ಯಾತ ಕಲ್ಲಿನ ರಥ,ಮಹಾನವಮಿ ದಿಬ್ಬ, ಸಾಸಿವೆ ಕಾಳು ಗಣಪತಿ, ಉಗ್ರ ನರಸಿಂಹ, ಕಮಲ ಮಹಲ್ , ಬಡವಿ ಲಿಂಗ, ಅನೆ ಲಾಯ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ನೋಡಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಹಂಪಿಯನ್ನು ಕಣ್ತುಂಬಿಕೊಳ್ಳುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.