ಪ್ರಕೃತಿ ಪ್ರಿಯರ ಸ್ವರ್ಗ ಭೀಮೇಶ್ವರ ದೇವಾಲಯ ಮತ್ತು ಜಲಪಾತ
ಒಂದೊಂದು ಊರಲ್ಲೂ ಒಂದೊಂದು ಸೊಬಗು. ಆಯಾಯ ಊರಿಗೆ ಒಂದೊಂದು ಗುರುತು. ಪ್ರತೀ ಊರಿನಲ್ಲೂ ಒಮ್ಮೆ ಭೇಟಿ ನೀಡಬೇಕಾದ ಹಲವು ತಾಣಗಳಿರುತ್ತವೆ. ಅಲ್ಲೂಂಚೂರು ಹೊತ್ತು ಕುಳಿತು ಬಂದರೆ ಆ ಊರಿಗೆ ಸಮಾಧಾನ. ಹೋದವರಿಗೆ ತೃಪ್ತಿ. ಅಂಥಾ ಕೆಲವು ಊರುಗಳ ಹಲವು ವಿಶೇಷತೆಗಳ ಪರಿಚಯ ಇಲ್ಲಿದೆ.
- ಗಣೇಶ ತಮ್ಮಡಿಹಳ್ಳಿ
ಶಿವಮೊಗ್ಗ ಜಿಲ್ಲೆಯ ಪಶ್ಚಿಮ ಘಟ್ಟದ ಶರಾವತಿ ಕಣಿವೆ, ಪ್ರಕೃತಿ ಪ್ರಿಯರ ಸ್ವರ್ಗ. ಪಶ್ಚಿಮ ಘಟ್ಟಗಳ ಪರ್ವತಗಳು ಕಣ್ಣಿಗೆ ಕಾಣದಷ್ಟುವಿಸ್ತಾರವಾಗಿ ಹಬ್ಬಿವೆ. ಈ ನಯನ ಮನೋಹರ ಹಸಿರಿನ ನಡುವೆ ಕಾಡಿನ ಭೀಮೇಶ್ವರ ಅಥವಾ ಭೀಮಲಿಂಗೇಶ್ವರ ದೇವಾಲಯವಿದೆ.
ಭೀಮೇಶ್ವರವು ಶಿವ ದೇವಾಲಯವಾಗಿದ್ದು (Temple), ಪ್ರಕೃತಿ ಪ್ರಿಯರಿಗೆ ಸ್ವರ್ಗವಾಗಿದೆ. ಕಥೆಯ ಪ್ರಕಾರ, ಪಾಂಡವರ ಕಾಲದಲ್ಲಿ ಈ ಶಿವಲಿಂಗವನ್ನು ಭೀಮ ತನ್ನ ಅಜ್ಞಾತವಾಸದ ಸಮಯದಲ್ಲಿ ಇಲ್ಲಿ ಸ್ಥಾಪಿಸಿದ. ಇಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಹಚ್ಚ ಹಸಿರಿನ ಕಾಡು, ನೀಲಿ ಆಕಾಶ ಮತ್ತು ನಿಮ್ಮ ಉಸಿರಿನ ಸದ್ದನ್ನು ನೀವೇ ಕೇಳುವಷ್ಟುಮೌನ. ಪ್ರಕೃತಿಯ (Nature) ಮಡಿಲಲ್ಲಿ ಕಾಲ ಕಳೆಯಲು ಇದು ಸೂಕ್ತ. ದಾರಿಯಲ್ಲಿ ವಿಶಾಲವಾದ ಭತ್ತದ ಗದ್ದೆಗಳು, ಅನೇಕ ಬೆಟ್ಟಗಳನ್ನು ದಾಟಿ ಕಣಿವೆಯ ಸುಂದರ ನೋಟವನ್ನು ಸವಿಯಬಹುದು.
ಜೋಗ ಜಲಪಾತದಿಂದ 41 ಕಿಮೀ ಮತ್ತು ಶಿವಮೊಗ್ಗದಿಂದ 140 ಕಿಮೀ ದೂರದಲ್ಲಿರುವ ಭೀಮೇಶ್ವರ ದೇವಸ್ಥಾನ ಮತ್ತು ಜಲಪಾತವು (Falls) ಕರ್ನಾಟಕದ ಕಾರ್ಗಲ್ ಪಟ್ಟಣದ ಸಮೀಪವಿರುವ ಭೀಮೇಶ್ವರ ಗ್ರಾಮದಲ್ಲಿ ನೆಲೆಗೊಂಡಿರುವ ಪವಿತ್ರ ಯಾತ್ರಾ ಸ್ಥಳವಾಗಿದೆ. ಭಟ್ಕಳ- ಸಿದ್ದಾಪುರ ಹೆದ್ದಾರಿಯಲ್ಲಿ ಇರುವ ಇದು ಶಿವಮೊಗ್ಗದ ಸಮೀಪದಲ್ಲಿ ಭೇಟಿ ನೀಡಬೇಕಾದ ರಮಣೀಯ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಜೋಗ್ ಫಾಲ್ಸ್ ಪ್ಯಾಕೇಜ್‌ಗಳಲ್ಲಿ ಕಡ್ಡಾಯವಾಗಿ ಸೇರಿಸಬೇಕಾದ ಸ್ಥಳಗಳಲ್ಲಿ ಒಂದಾಗಿದೆ.
ಪೌರಾಣಿಕ ಹಿನ್ನೆಲೆ: ಭೀಮ ಲಿಂಗೇಶ್ವರ ದೇವಸ್ಥಾನ ಶಿವನಿಗೆ ಸಮರ್ಪಿತವಾಗಿದೆ ಮತ್ತು ಇದು ಕರ್ನಾಟಕದ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಪುರಾಣಗಳ ಪ್ರಕಾರ, ಭೀಮನು ಈ ಸ್ಥಳದಲ್ಲಿ ಶಿವಲಿಂಗವನ್ನು ನಿರ್ಮಿಸಿದನು ಮತ್ತು ಮಹಾ ಶಿವರಾತ್ರಿಯ ಶುಭ ದಿನದಂದು ಹಿರಿಯ ಸಹೋದರ ಧರ್ಮರಾಯ ಇದನ್ನು ಪ್ರತಿಷ್ಠಾಪಿಸಿದನು. ದೇವಾಲಯದ ಪಕ್ಕದಲ್ಲಿ ಭೀಮೇಶ್ವರ ಜಲಪಾತವಿದ್ದು, ಅರ್ಜುನ ಪೂಜೆಗಾಗಿ ಬಂಡೆಗಳಿಂದ ನೀರನ್ನು ಹೊರತೆಗೆಯಲು ತನ್ನ ಬಾಣವನ್ನು ಬಳಸಿದಾಗ ಜಲಪಾತವು ರೂಪುಗೊಂಡಿತು ಎಂದು ನಂಬಲಾಗಿದೆ.
ಕಾಡಿನ ಮಧ್ಯೆ ಹೊಳೆಯುವ ಡೈಮಂಡ್ ಫಾಲ್ಸ್
ಭೀಮೇಶ್ವರ ಜಲಪಾತದ ವಿಶೇಷತೆ ಎಂದರೆ ವರ್ಷವಿಡೀ ನೀರು ಬತ್ತುವುದಿಲ್ಲ. ಮಹಾಶಿವರಾತ್ರಿಯಂದು ಪ್ರತಿವರ್ಷ ಸ್ಥಳೀಯ ಜನರಿಂದ ಭಗವಂತನಿಗೆ ದೊಡ್ಡ ಪೂಜೆ ನಡೆಯುತ್ತದೆ. ಭೀಮೇಶ್ವರ ದೇವಸ್ಥಾನ ಮತ್ತು ಜಲಪಾತ ಮುಖ್ಯ ರಸ್ತೆಯಿಂದ ಸುಮಾರು 2.5 - 3 ಕಿ.ಮೀ. ದೂರದಲ್ಲಿದೆ. ಸಾಮಾನ್ಯ ಕಾರುಗಳಿಗೆ ಸೂಕ್ತವಲ್ಲದ ಕೆಸರು ಮಣ್ಣಿನ ರಸ್ತೆ ಇರುವ ಕಾಣ 4/4 ಜೀಪ್ ಅಥವಾ ಬೈಕ್ ಬಾಡಿಗೆಗೆ ಪಡೆದು ಇಲ್ಲಿಗೆ ಬರಬಹುದು.
ತಲುಪುವುದು ಹೇಗೆ?: ಸಾಗರದಿಂದ ಹೊನ್ನಾವರ ರಸ್ತೆಯ ಕಡೆಗೆ 29 ಕಿ.ಮೀ ದೂರದಲ್ಲಿರುವ ಜೋಗ್ ವೃತ್ತವನ್ನು ತಲುಪಿ ಕಾರ್ಗಲ…-ಭಟ್ಕಲ್ ರಸ್ತೆಯ ಕಡೆಗೆ ಎಡಕ್ಕೆ ತಿರುಗಿ ಕಾರ್ಗಲ್-ಘಟ್ಟಲ್ ರಸ್ತೆಯ ಮುಪ್ಪಾನೆ ದಾಟಿ ಕೊರ್ಗ ಘಟ್ಟದಾರಿಯಲ್ಲಿ ಹೋಗಬೇಕು. ಮಳೆಗಾಲದಲ್ಲಿ ಇಲ್ಲಿಗೆ ಬರುವುದು ಕಷ್ಟಸಾಧ್ಯ.