ಚಿಕ್ಕಮಗಳೂರಿನ ಕಾಡಿನ ಮಧ್ಯೆ ಹೊಳೆಯುವ ಡೈಮಂಡ್ ಫಾಲ್ಸ್
ಒಂದೊಂದು ಊರಲ್ಲೂ ಒಂದೊಂದು ಸೊಬಗು. ಆಯಾಯ ಊರಿಗೆ ಒಂದೊಂದು ಗುರುತು. ಪ್ರತೀ ಊರಿನಲ್ಲೂ ಒಮ್ಮೆ ಭೇಟಿ ನೀಡಬೇಕಾದ ಹಲವು ತಾಣಗಳಿರುತ್ತವೆ. ಅಲ್ಲೂಂಚೂರು ಹೊತ್ತು ಕುಳಿತು ಬಂದರೆ ಆ ಊರಿಗೆ ಸಮಾಧಾನ. ಹೋದವರಿಗೆ ತೃಪ್ತಿ. ಅಂಥಾ ಕೆಲವು ಊರುಗಳ ಹಲವು ವಿಶೇಷತೆಗಳ ಪರಿಚಯ.
- ಆರ್ ತಾರಾನಾಥ್
ಕಾಫಿಯ ನಾಡು ಚಿಕ್ಕಮಗಳೂರು ಪ್ರಕೃತಿ ಮಾತೆಯ ತವರೂರು. ಇಲ್ಲಿ ಪ್ರವಾಸೋದ್ಯಮ ಇಲಾಖೆ ಗುರುತು ಮಾಡಿರುವ 45 ಪ್ರವಾಸಿ ತಾಣಗಳಿವೆ. ಇವುಗಳು ಹೊರತಾಗಿಯೂ ಹಲವು ಪ್ರವಾಸಿ ತಾಣಗಳು ದಟ್ಟವಾದ ಕಾಡಿನ ಮಧ್ಯೆ ನೆಲೆವೂರಿವೆ. ಇವುಗಳ ಸಾಲಿನಲ್ಲಿ ಡೈಮಂಡ್ ಫಾಲ್ಸ್ ಸ್ಥಾನ ಪಡೆದುಕೊಂಡಿದೆ.
ವರ್ಷವಿಡೀ ಈ ಫಾಲ್ಸ್‌ನಲ್ಲಿ ನೀರು ಧುಮುಕುತ್ತಲೇ ಇರುತ್ತದೆ. ಇಲ್ಲಿಗೆ ಹೋಗುವ ದಾರಿ ಸುಗಮವಾಗಿಲ್ಲ, ಮುಖ್ಯ ರಸ್ತೆಯಿಂದ ಕಾಡಿನಲ್ಲಿ ಸುಮಾರು 5 ಕಿ.ಮೀ. ಹೋಗಬೇಕು, ಕಾರಿನಲ್ಲಿ ಹೋಗುವುದಾದರೆ 3 ಕಿ.ಮೀ.ವರೆಗೆ ಹೋಗಬಹುದು. ನಂತರದಲ್ಲಿ ನಡೆದುಕೊಂಡು ಹೋಗಬೇಕು, ಬೈಕಿದ್ದರೆ ಫಾಲ್ಸ್‌ವರೆಗೆ ಹೋಗಬಹುದು. ಟ್ರಕ್ಕಿಂಗ್ ಮಾಡುವುದು ಅಭ್ಯಾಸ ಇರುವವರಿಗೆ ಇದೊಂದು ಸೂಕ್ತವಾದ ಸ್ಥಳ. ದಟ್ಟವಾದ ಕಾಡಿನ ಮಧ್ಯೆ ನಡೆದುಕೊಂಡು ಹೋಗುವುದು, ಅಲ್ಲಿನ ನಿರ್ಜನವಾದ ಪ್ರದೇಶದಲ್ಲಿ ಧುಮುಕುತ್ತಿರುವ ಫಾಲ್ಸ್ ನೋಡುವುದು ಖುಷಿ ನೀಡುತ್ತದೆ.
ಪ್ರಕೃತಿ ಪ್ರಿಯರ ಸ್ವರ್ಗ ಭೀಮೇಶ್ವರ ದೇವಾಲಯ ಮತ್ತು ಜಲಪಾತ
ಚಿಕ್ಕಮಗಳೂರಿಗೆ ಬಂದು, ಇಲ್ಲಿಂದ ಸಂತವೇರಿ, ತರೀಕೆರೆ ಮಾರ್ಗದಲ್ಲಿ 20 ಕಿ.ಮೀ. ಪ್ರಯಾಣಿಸಿದರೆ ತೊಗರಿಹಂಕಲ್ ಗ್ರಾಮ ಸಿಗುತ್ತದೆ. ಅಲ್ಲಿಂದ 5 ಕಿ.ಮೀ. ಕಾಡಿನ ದಾರಿಯಲ್ಲಿ ಸಾಗಿದರೆ ಡೈಮಂಡ್ ಫಾಲ್ಸ್ ನೋಡಬಹುದು. ಚಿಕ್ಕಮಗಳೂರಿಗೆ ಬರುವ ಹೆಚ್ಚಿನ ಮಂದಿ ಇದೇ ಮಾರ್ಗದಲ್ಲಿರುವ ಟೌನ್ ಕ್ಯಾಂಟಿನ್‌ನಲ್ಲಿ ಉಪಹಾರ ಸೇವಿಸಬಹುದು. ಈ ಹೋಟೆಲ್ ದೋಸೆಗೆ ಖ್ಯಾತಿ.
ಚಿಕ್ಕಮಗಳೂರಿಗೆ ಬಂದ ಮೇಲೆ ಕೈಯಲ್ಲಿ ಕಾಫಿ ಪೌಡರ್ ಹಿಡಿದುಕೊಂಡು ಹೋಗಿಲ್ಲವೆಂದರೆ ಸಮಾಧಾನ ಆಗೋದಿಲ್ಲ. ಅಂಥಾ ಘಮ ಇಲ್ಲಿನ ಕಾಫಿ ಪುಡಿಗೆ. ಪಶ್ಚಿಮಘಟ್ಟದ ತಪ್ಪಲ್ಲಿರುವ ಕಾಫಿಯ ನಾಡು, ದಟ್ಟವಾದ ಕಾಡು, ಅಲ್ಲೊಂದು ಯಾರ ಕಾಣ್ಣಿಗೂ ಕಾಣದಂತೆ ನೆಲೆಸಿರುವ ಡೈಮಂಡ್ ಫಾಲ್ಸ್. ನೋಡಬೇಕಾ, ಬನ್ನಿ ಚಿಕ್ಕಮಗಳೂರಿಗೆ.
ಬೇಸಿಗೆ ಪ್ರವಾಸಕ್ಕೆ ಹೋಗಬಹುದಾದ ಸೊಬಗಿನ ತಾಣಗಳ ಪರಿಚಯ