ಆನ್‌ಲೈನ್ ರೈಲ್ವೆ ಟಿಕೆಟ್ ಬುಕ್ ಮಾಡುವಾಗ ವಯಸ್ಸನ್ನು '24'ರ ಬದಲು '1' ಎಂದು ತಪ್ಪಾಗಿ ನಮೂದಿಸಿದ್ದಕ್ಕೆ ಬೆಂಗಳೂರಿನ ಪ್ರಯಾಣಿಕರೊಬ್ಬರಿಗೆ ₹7,035 ದಂಡ ವಿಧಿಸಲಾಗಿದೆ. ಸೂಕ್ತ ಗುರುತಿನ ಚೀಟಿ ತೋರಿಸಿದರೂ ಟಿಟಿಇ ದಂಡ ವಿಧಿಸಿದೆ.

ಬೆಂಗಳೂರು (ಜು.1): ಆನ್‌ಲೈನ್‌ನಲ್ಲಿ ರೈಲ್ವೆ ಇ-ಟಿಕೆಟ್ (Indian Railway) ಬುಕ್ ಮಾಡುವಾಗ ವಯಸ್ಸನ್ನು ನಮೂದಿಸುವಲ್ಲಿ ಆದ ಒಂದು ಸಣ್ಣ ತಾಂತ್ರಿಕ ತಪ್ಪಿನಿಂದ ಬೆಂಗಳೂರಿನ ಪ್ರಯಾಣಿಕರೊಬ್ಬರಿಗೆ ಬರೋಬ್ಬರಿ ₹7,035 ಗಳ ಭಾರಿ ದಂಡದ (Railway Fine) ರೂಪದಲ್ಲಿ ದೊಡ್ಡ ಆಘಾತ ನೀಡಿದೆ. ಸೂಕ್ತ ಗುರುತಿನ ಚೀಟಿ (ID Proof) ಇದ್ದಾಗಲೂ ರೈಲ್ವೆ ಟಿಕೆಟ್ ಪರೀಕ್ಷಕರು (TTE) ಈ ಭಾರಿ ಮೊತ್ತದ ದಂಡ ವಿಧಿಸಿದ್ದು, ಸದ್ಯ ಈ ಪ್ರಕರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು (SWR) ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯ ಲೋಪ ಹಾಗೂ ಸಿಬ್ಬಂದಿಯ ನಡವಳಿಕೆಯ ಕುರಿತು ತನಿಖೆಗೆ ಆದೇಶಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಯಸ್ಸು 24 ರ ಬದಲು 1 ಎಂದು ನಮೂದಿಸಿದ್ದೇ ಅಪರಾಧವಾಯ್ತು!

ರಮಕಾಂತ್ ಎಂ. ಎಂಬ ಪ್ರಯಾಣಿಕರು ಜೂನ್ 23 ರಂದು ಬೆಂಗಳೂರಿನಿಂದ ನಾಗ್ಪುರಕ್ಕೆ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಟಿಕೆಟ್ ಬುಕ್ ಮಾಡುವಾಗ ಅವರು ತಮ್ಮ ವಯಸ್ಸನ್ನು '24' ಎಂದು ಹಾಕುವ ಬದಲು ಆಕಸ್ಮಿಕವಾಗಿ '1' ಎಂದು ನಮೂದಿಸಿದ್ದರು. ರೈಲಿನಲ್ಲಿ ತಪಾಸಣೆ ನಡೆಸಿದ ಟಿಕೆಟ್ ಪರೀಕ್ಷಕರು, ವಯಸ್ಸಿನ ವ್ಯತ್ಯಾಸವನ್ನು ಕಂಡುಹಿಡಿದು ಅವರ ಟಿಕೆಟ್ ಅಸಿಂಧು ಎಂದು ಘೋಷಿಸಿದರು. ಪ್ರಯಾಣಿಕನು ತನ್ನ ಹೆಸರಿರುವ ಅಧಿಕೃತ ಸರ್ಕಾರಿ ಗುರುತಿನ ಚೀಟಿಯನ್ನು ತೋರಿಸಿದರೂ ಒಪ್ಪದ ಸಿಬ್ಬಂದಿ, ಅವರು 'ಟಿಕೆಟ್ ರಹಿತವಾಗಿ' (Travelling without ticket) ಪ್ರಯಾಣಿಸುತ್ತಿದ್ದಾರೆ ಎಂದು ಪರಿಗಣಿಸಿ ರೈಲ್ವೆ ಕಾಯ್ದೆ 1989 ರ ಸೆಕ್ಷನ್ 138 ರ ಅಡಿಯಲ್ಲಿ ₹7,035 ದಂಡ ವಿಧಿಸಿದ್ದರು.

ಇದು ಅಜಾಗರೂಕತೆಯಿಂದ ಆದ ಪ್ರಾಮಾಣಿಕ ತಪ್ಪಾಗಿತ್ತು. ನನ್ನ ನಿಜವಾದ ವಯಸ್ಸನ್ನು ನಮೂದಿಸಿದ್ದರೂ ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಇರುತ್ತಿರಲಿಲ್ಲ. ಏಕೆಂದರೆ ನಾನು ಯಾವುದೇ ವಯೋಮಿತಿ ರಿಯಾಯಿತಿ (Concession) ಅಥವಾ ಡಿಸ್ಕೌಂಟ್ ಕ್ಲೈಮ್ ಮಾಡಿರಲಿಲ್ಲ. ನನ್ನ ಹೆಸರಿಗೆ ಹೊಂದಿಕೆಯಾಗುವ ಗವರ್ನಮೆಂಟ್ ಐಡಿ ನನ್ನ ಬಳಿ ಇತ್ತು. ಆದರೂ ನನ್ನನ್ನು ಟಿಕೆಟ್ ಇಲ್ಲದ ಪ್ರಯಾಣಿಕನಂತೆ ಪರಿಗಣಿಸಿ ₹7,035 ದಂಡ ವಸೂಲಿ ಮಾಡಲಾಯಿತು. ಇದರಿಂದ ನನ್ನ ಒಟ್ಟು ಪ್ರಯಾಣದ ವೆಚ್ಚ ₹10,000 ದಾಟಿತ್ತು ಎಂದು ಸಂತ್ರಸ್ಥ ಪ್ರಯಾಣಿಕ ರಮಾಕಾಂತ್‌ ಹೇಳಿದ್ದಾರೆ.

ಆಗಿದ್ದೇನು?

ಬೆಂಗಳೂರಿನಲ್ಲಿದ್ದ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ರಮಾಕಾಂತ್‌ ಜೂನ್‌ 23 ರಂದು ತಮ್ಮ ಊರು ಮಹಾರಾಷ್ಟ್ರದ ನಾಗಪುರಕ್ಕೆ ಮರಳಲು ತಯಾರಿ ನಡೆಸುತ್ತಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಅವರು 22691 ಕೆಎಸ್ಆರ್ ಬೆಂಗಳೂರು-ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಹತ್ತಿದರು. ಟಿಟಿಇ ಟಿಕೆಟ್ ಪರಿಶೀಲಿಸಲು ಬರುವವರೆಗೂ ಪ್ರಯಾಣವು ಸರಾಗವಾಗಿ ಸಾಗಿತ್ತು. ಕಾಯ್ದಿರಿಸಿದ ಸೆಕೆಂಡ್‌ ಎಸಿ ಬರ್ತ್‌ನಲ್ಲಿ ಕುಳಿತಿದ್ದ ರಮಾಕಾಂತ್ ಫೋನ್‌ನಲ್ಲಿ ತಮ್ಮ ಇ-ಟಿಕೆಟ್ ಅನ್ನು ತೋರಿಸಿದರು. ಆದರೆ, ನಂತರದ ಘಟನೆಗಳು ಅವರಿಗೆ ಶಾಕ್ ನೀಡಿತು. "ನಾನು ಟಿಕೆಟ್ ತೋರಿಸಿದಾಗ, ಟಿಟಿಇ ನನ್ನೊಂದಿಗೆ ಮೊದಲ ಎಸಿ ಕೋಚ್‌ಗೆ ಬರಲು ಕೇಳಿಕೊಂಡರು. ಅಲ್ಲಿಗೆ ಮತ್ತೊಬ್ಬ ಟಿಟಿಇ ನಮ್ಮೊಂದಿಗೆ ಸೇರಿಕೊಂಡರು. ನನ್ನ ಟಿಕೆಟ್ ಅಮಾನ್ಯವಾಗಿದೆ ಮತ್ತು ಇಂದು ನಾನು ದರದ ಎರಡು ಪಟ್ಟು ದಂಡವನ್ನು ವಿಧಿಸಬೇಕಾಗಬಹುದು ಎಂದು ಅವರು ನನಗೆ ಹೇಳಿದರು' ಎಂದು ರಮಾಕಾಂತ್ ನೆನಪಿಸಿಕೊಂಡಿದ್ದಾರೆ.

ಟಿಕೆಟ್‌ ಬುಕ್‌ ಮಾಡುವಾಗ ವಯಸ್ಸನ್ನು 24 ಎನ್ನುವ ಬದಲು 1 ಎಂದು ತಪ್ಪಾಗಿ ಹಾಕಿರುವುದನ್ನು ಅವರು ಗಮನಸೆಳೆದರು. ಆರಂಭದಲ್ಲಿ ಟಿಕೆಟ್‌ ವ್ಯವಸ್ಥೆಯಲ್ಲೇ ಸಮಸ್ಯೆ ಇದೆ ಎಂದುಕೊಂಡಿದ್ದೆ. ಕೊನೆಗೆ ಪರಿಶೀಲನೆ ಮಾಡಿದಾಗ ಅದು ನನ್ನ ಕಡೆಯಿಂದಲೇ ಆಗಿರುವ ತಪ್ಪು ಎನ್ನುವುದು ಗೊತ್ತಾಗಿತ್ತು' ಎಂದು ರಮಾಕಾಂತ್‌ ಹೇಳಿದ್ದಾರೆ.

24 ಗಂಟೆಯೊಳಗೆ ರೀಫಂಡ್ ಅರ್ಜಿ ತಿರಸ್ಕರಿಸಿದ ರೈಲ್ವೆ ಮದದ್‌

ದಂಡದ ಮೊತ್ತವನ್ನು ಯುಪಿಐ (UPI) ಮೂಲಕ ಪಾವತಿಸಿದ ನಂತರ, ರಮಕಾಂತ್ ಅವರು ತಮಗೆ ಆದ ಅನ್ಯಾಯದ ವಿರುದ್ಧ ರೈಲ್ವೆ ಇಲಾಖೆಯ 'ರೈಲ್ ಮದದ್' (RailMadad) ವ್ಯವಸ್ಥೆಯ ಮೂಲಕ ಅಧಿಕೃತ ದೂರು ದಾಖಲಿಸಿ, ದಂಡದ ಹಣವನ್ನು ಮರುಪಾವತಿ (Refund) ಮಾಡುವಂತೆ ಕೋರಿದ್ದರು. ಆದರೆ, ಕೇವಲ 24 ಗಂಟೆಗಳ ಒಳಗೆ ಈ ದೂರನ್ನು ಕ್ಲೋಸ್ ಮಾಡಿದ ಅಧಿಕಾರಿಗಳು, "ಪ್ರಯಾಣಿಕರು ಪ್ರಯಾಣಿಸುವ ಮುನ್ನವೇ ತಮ್ಮ ಟಿಕೆಟ್ ವಿವರಗಳನ್ನು ಪರಿಶೀಲಿಸಿ, ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಬೇಕು" ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ರೈಲ್ವೆ ನಿಯಮಗಳ ಪ್ರಕಾರ, ಟಿಟಿಇಗಳು ಪ್ರಯಾಣಿಕರೊಂದಿಗೆ ಗೌರವದಿಂದ ವರ್ತಿಸಬೇಕು ಮತ್ತು ಯಾವುದೇ ಅನಗತ್ಯ ಕಿರುಕುಳ ನೀಡಬಾರದು. ಇಂತಹ ಸಂದರ್ಭದಲ್ಲಿ ಗ್ರಾಹಕರು ಹೆಲ್ಪ್‌ಲೈನ್ 139 ಕ್ಕೆ ಕರೆ ಮಾಡಬಹುದು.

ಸಿಬ್ಬಂದಿ ನಡೆ ಮತ್ತು ಐಆರ್‌ಸಿಟಿಸಿ ಲೋಪದ ಬಗ್ಗೆ ಉನ್ನತ ಮಟ್ಟದ ತನಿಖೆ

ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತ ನೈಋತ್ಯ ರೈಲ್ವೆ (South Western Railway) ವಕ್ತಾರರು ಪ್ರತಿಕ್ರಿಯೆ ನೀಡಿದ್ದು. 'ಕಾನೂನು ಪ್ರಕಾರ ದಂಡ ವಿಧಿಸಲು ಅವಕಾಶವಿದ್ದರೂ, ಈ ಪ್ರಕರಣವನ್ನು ನಿರ್ವಹಿಸಿದ ರೀತಿ ಕಳವಳಕಾರಿಯಾಗಿದೆ' ಎಂದು ತಿಳಿಸಿದ್ದಾರೆ. ಒಂದು ವರ್ಷದ ಮಗುವಿಗೆ ಪ್ರತ್ಯೇಕವಾಗಿ ಒಬ್ಬರೇ ಪ್ರಯಾಣಿಸಲು IRCTC ವ್ಯವಸ್ಥೆಯು ಟಿಕೆಟ್ ಬುಕ್ ಮಾಡಲು ಹೇಗೆ ಅವಕಾಶ ನೀಡಿತು? ಎಂಬ ತಾಂತ್ರಿಕ ಲೋಪದ ಬಗ್ಗೆ ಹಾಗೂ ಪ್ರಯಾಣಿಕನನ್ನು ಮತ್ತೊಂದು ಕೋಚ್‌ಗೆ ಕರೆದೊಯ್ದ ಸಿಬ್ಬಂದಿಯ ನಡವಳಿಕೆಯ ಕುರಿತು ರೈಲ್ವೆ ಇಲಾಖೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ಜುಲೈ 2026 ರಿಂದ ಕೇಂದ್ರ ಸರ್ಕಾರದ 'ಜನ್ ವಿಶ್ವಾಸ್ ಕಾಯ್ದೆ' (Jan Vishwas Act) ಅಡಿಯಲ್ಲಿ ಪರಿಷ್ಕೃತ ನಿಯಮಗಳು ಜಾರಿಗೆ ಬಂದಿದೆ.. ಇದರ ಅಡಿಯಲ್ಲಿ ರೈಲ್ವೆಯ ಹಲವು ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಪಡಿಸಿ, ಅದರ ಜಾಗದಲ್ಲಿ ಭಾರಿ ಮೊತ್ತದ ಸಿವಿಲ್ ದಂಡಗಳನ್ನು (Higher Civil Penalties) ವಿಧಿಸಲು ತೀರ್ಮಾನಿಸಲಾಗಿದೆ. ಇನ್ನು ಮುಂದೆ ಟಿಕೆಟ್ ಇಲ್ಲದೆ ಪ್ರಯಾಣಿಸುವವರಿಗೆ ಕನಿಷ್ಠ ದಂಡದ ಮೊತ್ತ ₹500 ಆಗಿರಲಿದೆ. ಅದರೊಂದಿಗೆ ರೈಲ್ವೆ ಸೌಲಭ್ಯಗಳ ದುರುಪಯೋಗ ಹಾಗೂ ಮಹಿಳಾ ಮೀಸಲು ಕೋಚ್‌ಗಳಿಗೆ ಅನಧಿಕೃತವಾಗಿ ಪ್ರವೇಶಿಸುವವರಿಗೆ ಭಾರಿ ಮೊತ್ತದ ದಂಡ ವಿಧಿಸಲಾಗುತ್ತದೆ.