ದಕ್ಷಿಣ ಕಾಶಿ ಎಂದೇ ಗುರುತಿಸಿಕೊಂಡಿರುವ ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್ ಬಂದಿದ್ದ ಉದ್ಯಮಿಯ ಪುತ್ರ ನಾಪತ್ತೆಯಾದ ಘಟನೆ ನಡೆದಿದೆ. ಬೆಟ್ಟದ ಶಾಂತಾಲಾ ಡ್ರಾಪ್ ಅತ್ಯಂತ ಅಪಾಯಕಾರಿ ಸ್ಥಳವಾಗಿದ್ದು, ಇಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ಬೆಂಗಳೂರು (ಆ.08) ದಕ್ಷಿಣ ಕಾಶಿ ಶಿವಗಂಗೆ ಬೆಟ್ಟ ಅತ್ಯಂತ ಸುಂದರ ಪ್ರಕೃತಿ ತಾಣ. ಈ ಬೆಟ್ಟ ಹತ್ತಲು ಪ್ರತಿ ದಿನ ಹಲವು ಸಾಹಸಿಗಳು ಆಗಮಿಸುತ್ತಾರೆ. ಸುರಕ್ಷತಾ ಮಾರ್ಗದರ್ಶನಗಳ ಜೊತೆಗೆ ಬೆಟ್ಟ ಹತ್ತುತ್ತಾರೆ. ಹೀಗೆ ಖ್ಯಾತ ಉದ್ಯಮಿಯ ಪುತ್ರ 31ರ ಹರೆಯದ ಪ್ರತೀಕ್ ಉಪಾದ್ಯಾ ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್ ಬಂದು ನಾಪತ್ತೆಯಾದ ಘಟನೆ ನಡೆದಿದೆ. ಬೆಟ್ಟ ಹತ್ತುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಪ್ರತೀಕ್ ಉಪದ್ಯಾಯನ ಸುಳಿವಿಲ್ಲ. ಪೊಲೀಸರು ಡ್ರೋನ್ ಬಳಸಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
ಬುಲೆಟ್ ಬೈಕ್ ಪಾರ್ಕ್ ಮಾಡಿ ಬೆಟ್ಟ ಹತ್ತಿದ್ದ ಪ್ರತೀಕ್
ಐದು ದಿನಗಳ ಹಿಂದೆ ವೈಟ್ ಫೀಲ್ಡ್‌ನಲ್ಲಿ ಬುಲೆಟ್ ಬೈಕ್ ಬಾಡಿಗೆ ಪಡೆದಿದ್ದ ಪ್ರತೀಕ್ ಉಪಾದ್ಯಾಯ ಒಂದಷ್ಟು ಕಡೆ ಸುತ್ತಾಡಿದ್ದಾನೆ. ನಿನ್ನೆ (ಆ.07) ನೆಲಮಂಗಲ ತಾಲೂಕಿನಲ್ಲಿರುವ ಶಿವಗಂಗೆ ಬೆಟ್ಟ ಹತ್ತಲು ಆಗಮಿಸಿದ್ದಾನೆ. ಶಿವಗಂಗೆಗೆ ಬೈಕ್ ಮೂಲಕ ಬಂದ ಪ್ರತೀಕ್ ಉಪಾದ್ಯಾಯ, ಪಾರ್ಕಿಂಗ್ ಸ್ಥಳದಲ್ಲಿ ಬುಲೆಟ್ ಬೈಕ್ ಪಾರ್ಕ್ ಮಾಡಿದ್ದಾನೆ. ಬಳಿಕ ಬೆಟ್ಟ ಹತ್ತಲು ಆರಂಭಿಸಿದ್ದಾನೆ. ಈತ ಪಾರ್ಕಿಂಗ್ ಮಾಡಿ ಬೆಟ್ಟ ಹತ್ತುವ ಕೆಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಾಪತ್ತೆ ಹಿಂದೆ ಸಾಕಷ್ಟು ಅನುಮಾನ
ಪ್ರತೀಕ್ ಉಪಾದ್ಯಾಯ ವಾಪಸ್ ಮರಳಿರುವ ಬಗ್ಗೆ ಸಿಸಿಟಿವಿಯಲ್ಲಿ ದಾಖಲಾಗಿಲ್ಲ. ಈ ಕುರಿತು ಯಾವುದೇ ಸ್ಪಷ್ಟತೆ ಇಲ್ಲ.ಪ್ರತೀಕ್ ಉಪಾದ್ಯಾಯನ ಫೋನ್ ಬೇರೆ ಕಡೆ ಸ್ವಿಚ್ ಆಗಿದೆ. ಪ್ರತೀಕ್ ಉಪಾದ್ಯಾಯ ನಾಪತ್ತೆಯಾಗಿರುವ ಸ್ಥಳಕ್ಕೂ ಫೋನ್ ಸ್ವೀಚ್ ಆಗಿರುವ ಲೋಕೇಶನ್ ಬೇರೆ ಬೇರೆಯಾಗಿದೆ. ಇತ್ತ ಐದು ದಿನಗಳ ಹಿಂದೆ ಬೈಕ್ ಬಾಡಿಗೆ ಪಡೆದು ಸುತ್ತಾಟ ಆರಂಭಿಸಿದ ಹಿಂದೆಯೂ ಕೆಲ ಅನುಮಾನಗಳು ವ್ಯಕ್ತವಾಗಿದೆ.
ಶಿವಗಂಗೆ ಬೆಟ್ಟ ಸಮುದ್ರದ ಮಟ್ಟದಿಂದ 4800 ಅಡಿ ಎತ್ತರದಲ್ಲಿರುವ ಬೆಟ್ಟ . ಜೊತೆಗೆ ಹಲವು ಕಡೆ ಅತ್ಯಂತ ಅಪಾಯಕಾರಿಯಾಗಿದೆ. ಈ ಪೈಕಿ ಶಾಂತಲಾ ಡ್ರಾಪ್ ಅತೀ ಎಚ್ಚರವಹಿಸಬೇಕಾದ ಸ್ಥಳ. ಮರಗಿಡಗಳು ಕಲ್ಲು ಬಂಡೆಗಳಿಂದ ಕೂಡಿರುವ ಶಾಂತಲಾ ಡ್ರಾಪ್ ಬಳಿ ಹಲವು ಸೂಚನಾ ಫಲಕಗಳು ಇವೆ. ಇದೀಗ ಪೊಲೀಸರು ಡ್ರೋನ್ ಬಳಸಿ ಶಾಂತಲಾ ಡ್ರಾಪ್ ಬಳಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಪ್ರತೀಕ್ ಉಪಾದ್ಯಾಯ ನಾಪತ್ತೆ ಕುರಿತು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


