ತುಮಕೂರು-ರಾಯದುರ್ಗ-ಪಾವಗಡ ರೈಲು ಮಾರ್ಗಕ್ಕೆ ಮರುಜೀವ; ಯಾವಾಗ ಶುರುವಾಗಲಿದೆ ಸಂಚಾರ?
ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ಮರುಚಾಲನೆ ಸಿಕ್ಕಿದೆ. ಕೇಂದ್ರ ಸಚಿವ ವಿ.ಸೋಮಣ್ಣ 2027ರೊಳಗೆ ಪೂರ್ಣಗೊಳಿಸುವ ಭರವಸೆ ನೀಡಿದ್ದರೆ, ಡಿಸಿಎಂ ಡಾ.ಜಿ.ಪರಮೇಶ್ವರ್ ಒಂದು ವರ್ಷದೊಳಗೆ ತುಮಕೂರು-ಪಾವಗಡ ಮಾರ್ಗ ಪೂರ್ಣಗೊಳಿಸಲು ಸೂಚಿಸಿದ್ದಾರೆ.

ತುಮಕೂರು ರಾಯದುರ್ಗ ಹೊಸ ರೈಲು ಮಾರ್ಗದ ಕಾಮಗಾರಿ
ಕೊರಟಗೆರೆ: ಗಡಿಭಾಗಗಳ ಕನಸಿನ ಕೂಸಾದ ತುಮಕೂರು ರಾಯದುರ್ಗ ಹೊಸ ರೈಲು ಮಾರ್ಗದ ಕಾಮಗಾರಿಗೆ ಚಾಲನೆ ಸಿಕ್ಕಿದ್ದು ಈ ಭಾಗದ ಸಾರ್ವಜನಿಕರ ಕನಸು ನನಸಾಗುವ ದಿನಗಳು ಹತ್ತಿರ ಬಂದಂತೆ ಕಾಣಿಸುತ್ತಿದೆ.
ತುಮಕೂರು ರಾಯದುರ್ಗ ಹೊಸ ರೈಲು ಮಾರ್ಗದ ಯೋಜನೆಯನ್ನು 2012ರಲ್ಲಿ ಆರಂಭಿಸಲಾಯಿತು. ಒಟ್ಟು 206 ಕಿ.ಮೀ. ಉದ್ದದ ಲೈನ್ ಇದಾಗಿದ್ದು, ಸುಮಾರು 1850 ಕೋಟಿ ವೆಚ್ಚದಲ್ಲಿ ಕ್ರಿಯಾ ಯೋಜನೆ ಘೋಷಿಸಿದ್ದರೂ, ಆ ನಂತರ 2500 ಕೋಟಿಗೆ ಏರಿಸಲಾಗಿದೆ. ನೆರೆಯ ಆಂಧ್ರ ಪ್ರದೇಶದ ರಾಯದುರ್ಗದಿಂದ ಕರ್ನಾಟಕದ ಪಾವಗಡವರೆಗೆ 125 ಕಿ.ಮೀ ವರೆಗೂ ಈಗಾಗಲೇ ಕಾಮಗಾರಿ ಪೂರ್ಣಗೊಂಡು ಕೆ.ರಾಮಪುರ ರೈಲ್ವೆ ನಿಲ್ದಾಣದವರೆಗೆ ಹಳಿ ಜೋಡಣೆ ಹಾಗೂ ಪ್ರಾಯೋಗಿಕವಾಗಿ ರೈಲು ಸಂಚಾರ ಮಾಡಲಾಗಿದೆ.
ರೈಲ್ವೆ ಕಾಮಗಾರಿ ಪ್ರಾರಂಭಕ್ಕೆ ಸಂತಸ
ಕೆ.ರಾಮಪುರ ನಿಲ್ದಾಣದಿಂದ ಮಧುಗಿರಿ, ಕೊರಟಗೆರೆ, ತುಮಕೂರುವರೆಗೆ 81 ಕಿ.ಮೀ ವರೆಗೂ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಲ್ಲಿಲ್ಲಿ ಕಾಮಗಾರಿ ಪ್ರಾರಂಭ ಮಾಡಲು ಈಗಾಗಲೇ ಮಾರ್ಗದ ಮಧ್ಯೆ ಇರುವ ಗಿಡ, ಮರ ಸೇರಿದಂತೆ ಪೆಟ್ಟಿಗೆ ಅಂಗಡಿಗಳನ್ನು ತೆರವು ಮಾಡಲಾಗುತ್ತಿದೆ. ಹಲವು ವರ್ಷಗಳಿಂದ ನನಗುದ್ದಿಗೆ ಬಿದ್ದಿದ್ದ ರೈಲ್ವೆ ಕಾಮಗಾರಿ ಪ್ರಾರಂಭವಾಗಿರುವುದು ಈ ಭಾಗದ ಕೂಲಿ ಕಾರ್ಮಿಕರಿಗೆ, ತುಮಕೂರು ಬೆಂಗಳೂರಿಗೆ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಸಂತಸ ತಂದಿದೆ.
ಕೇಂದ್ರ ರೈಲ್ಚೆ ಸಚಿವ ವಿ.ಸೋಮಣ್ಣ ಭರವಸೆ
ತುಮಕೂರು ಲೋಕಸಭಾ ಚುನಾವಣೆಯಲ್ಲಿ ವಿ.ಸೋಮಣ್ಣ ಜಯಗಳಿಸಿದ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇಂದ್ರ ರೈಲ್ಚೆ ಸಚಿವರಾಗಿ ಸೋಮಣ್ಣ ಅವರನ್ನ ಆಯ್ಕೆ ಮಾಡಿದ್ದು ತುಮಕೂರು ಜನರಿಗೆ ಅದೃಷ್ಟ ಬಂದಂತೆ ಆಗಿದೆ. ಜಿಲ್ಲೆಯಲ್ಲಿ ನೆನಗುದ್ದಿಗೆ ಬಿದ್ದಿದ್ದ ಕಾಮಗಾರಿಗಳು ಇಂದು ಚಾಲನೆಗೊಂಡಿವೆ ಕೆಲವು ಕಾಮಗಾರಿಗಳು ಮುಗಿದಿವೆ. ಇದರ ಜೊತೆಗೆ ಹಲವಾರು ವರ್ಷಗಳಿಂದ ಕಾಮಗಾರಿಯೇ ಪ್ರಾರಂಭವಾಗದ ತುಮಕೂರು ರಾಯದುರ್ಗ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಬಗ್ಗೆ ಸಚಿವ ವಿ.ಸೋಮಣ್ಣ ಅವರು 2027ರ ಒಳಗೆ ಕಾಮಗಾರಿ ಮುಗಿಯುವ ಭರವಸೆ ನೀಡಿದ್ದಾರೆ.
ಡಾ.ಜಿ.ಪರಮೇಶ್ವರ್ ಪರಿಶೀಲನೆ
ತುಮಕೂರು ರಾಯದುರ್ಗ ರೈಲ್ವೆ ಕಾಮಗಾರಿ ಹಲವು ವರ್ಷಗಳಿಂದ ನೆನಗುದ್ದಿಗೆ ಬಿದ್ದಿದ್ದು, ಉಪ ಮುಖ್ಯಮಂತ್ರಿ ಸ್ಥಾನ ಪಡೆಯುತ್ತಿದಂತೆ ಡಾ.ಜಿ.ಪರಮೇಶ್ವರ್ ಅವರು ಪಾವಗಡ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಒಂದು ವರ್ಷದೊಳಗೆ ಪಾವಗಡದಿಂದ ತುಮಕೂರಿನವರೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಹು ವರ್ಷಗಳ ಕನಸಿನ ಕೂಸು
ಬಹು ವರ್ಷಗಳ ಕನಸಿನ ಕೂಸಾದ ತುಮಕೂರು ರಾರ್ಯದುರ್ಗ ರೈಲ್ವೆ ಕಾಮಗಾರಿ ಕನಸಾಗಿ ಉಳಿದಿತ್ತು. ನಾನು ನಮ್ಮ ಹಳ್ಳಿಯಿಂದ ತುಮಕೂರಿಗೆ ಕೆಲಸಕ್ಕೆ ಹೋಗುತ್ತಿದ್ದು, ತುಮಕೂರು ಪಾವಗಡ ರಾಜ್ಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಜಾಸ್ತಿಯಾಗಿದ್ದು, ಬೈಕ್ ಸವಾರರು ಜೀವ ಕೈಯಲ್ಲಿ ಇಟ್ಟುಕೊಂಡು ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ವ್ಯಕ್ತಿ ಮಹೇಶ್ ಕೂಲಿ ಹೇಳುತ್ತಾರೆ.

