ಒಂದು ಕಾಲದಲ್ಲಿ ವಿಮಾನವೆಂಬುದು ಮೇಲೆ ಹಾರುವುದು ನೋಡುವುದೇ ವಿಚಿತ್ರ  ಖುಷಿ  ನೀಡುವ ಅನುಭವ. ಆದರೆ ಈಗ ಹಾಗಲ್ಲ, ಇಂದಿನ ವೇಗದ ಜೀವನಶೈಲಿಗೆ ವಿಮಾನವೆಂಬುದು ಬಸ್‌ನಷ್ಟೇ ಅಗತ್ಯ  ಹಾಗೂ ಅಷ್ಟೇ  ಕೈಗೆಟುಕುವ ಸಾರಿಗೆ ಕೂಡಾ. ವಿಮಾನದಲ್ಲಿ ಸಾದಾದಿಂದ ಹಿಡಿದು ಲಕ್ಷುರಿವರೆಗೆ ವ್ಯವಸ್ಥೆಗಳಲ್ಲಿ ವ್ಯತ್ಯಾಸವಿರಬಹುದು. ಕೆಲ ಕಂಪನಿಯ ವಿಮಾನಗಳು ಐಶಾರಾಮಿ ಸೇವೆಗೆ ಹೆಸರಾಗಿರಬಹುದು.

ವಿಮಾನದಲ್ಲಿ ಲವ್ @ ಫಸ್ಟ್ ಸೈಟ್; ವರ್ಷಗಳ ಬಳಿಕ ಅದೇ ಫ್ಲೈಟ್‌ನಲ್ಲಿ ಎಂಗೇಜ್ಮೆಂಟ್!

ಆದರೆ, ಮತ್ತೆ  ಕೆಲವಿವೆ ಹಾಗೂ ಮತ್ತೆ ಕೆಲವಿದ್ದವು- ಇವು ವಿಲಕ್ಷಣ ಹಾಗೂ ಅಸಾಮಾನ್ಯ ಸೇವೆ ಒದಗಿಸಿ ಜನರನ್ನು ಮೆಚ್ಚಿಸಹೊರಟಿವೆ. ಇಂಥ ಕೆಲ ಚಿತ್ರವಿಚಿತ್ರ ಸೇವೆಗಳನ್ನೊಳಗೊಂಡ ಏಳು ವಿಮಾನಸೇವೆಗಳ ಬಗ್ಗೆ ಇಲ್ಲಿದೆ.

1. ಈ ಏರ್‌ಲೈನ್ಸ್‌ನಲ್ಲಿ ಬಿಕಿನಿ ಬೆಡಗಿಯರ ಅಬ್ಬರ

ಸಾಮಾನ್ಯವಾಗಿ ಏರ್‌ಹಾಸ್ಟೆಸ್‌ಗಳಿಗೆ ಫಾರ್ಮಲ್ ಹಾಗೂ ಗೌರವಯುತ ಉಡುಗೆ ಇರುತ್ತದೆ. ಅವರು ಅದರಲ್ಲಿ ಬಹಳ ಅಫೀಶಿಯಲ್ ಲುಕ್‌ನಲ್ಲಿ ಕಂಗೊಳಿಸುತ್ತಾರೆ. ಆದರೆ, ವಿಯೆಟ್ನಾಂನ ವಿಯೆಟ್‌ಜೆಟ್ ಏವಿಯೇಶನ್ ವಿಮಾನ ಏರಿದವರಿಗೆ ಏರ್‌ಹಾಸ್ಟೆಸ್‌ಗಳು ಬಿಕಿನಿ ಹಾಗೂ ಸ್ಟಾಕಿಂಗ್ಸ್ ಧರಿಸಿ ಸೇವೆ ನೀಡುತ್ತಾರೆ! ದೇಶದ ಏಕೈಕ ಖಾಸಗಿ ವಿಮಾನಸಂಸ್ಥೆಯಾದ ಇದು ಕ್ಯಾಲೆಂಡರ್ ಮಾಡೆಲ್‌ಗಳನ್ನು ಏರ್‌ಹಾಸ್ಟೆಸ್‌ಗಳಾಗಿ ತೆಗೆದುಕೊಳ್ಳುತ್ತದೆ. ಈ ಸಂಸ್ಥೆಯ ಸಿಇಒ ವಿಯೆಟ್ನಾಂನ ಮೊದಲ ಮಹಿಳಾ ಬಿಲಿಯನೇರ್ ಆಗಿದ್ದು, ಅವರ ಪ್ರಕಾರ, ಫ್ಲೈಟೊಳಗೆ ಇಂಥ ಉಡುಗೆ ಧರಿಸುವ ಸ್ವಾತಂತ್ರ್ಯ ಮಹಿಳಾ ಸಬಲೀಕರಣದ ಸೂಚಕವಂತೆ. 

2. ನಗ್ನರಾಗೋಕೆ ಇಲ್ಲಿದೆ ಸ್ವಾತಂತ್ರ್ಯ

2008ರಲ್ಲಿ ಜರ್ಮನಿಯ ಏರ್‌ಲೈನ್ಸ್ ಸಂಸ್ಥೆ ಒಸ್ಸಿಉರ್ಲಾಬ್.ಡೆ ತನ್ನ ಪ್ರಯಾಣಿಕರಿಗೆ ಆಕಾಶದಲ್ಲಿ ನಗ್ನರಾಗಿ ಸಾವಿರಾರು ಕಿಲೋಮೀಟರ್ ದೂರ ಸಾಗುವ ಅವಕಾಶ ಮಾಡಿಕೊಟ್ಟಿತ್ತು. ಬೇಸಗೆಯಲ್ಲಿ ಎರ್‌ಫರ್ಟ್‌ನಿಂದ ರೆಸಾರ್ಟ್ ಟೌನ್ ಯೂಸ್‌ಡಂ ಹೋಗುವವರಿಗೆ ಈ ಆಫರ್ ಇತ್ತು. ಆದರೆ, ನೈತಿಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಸೇವೆ ಕ್ಯಾನ್ಸಲ್ ಮಾಡಬೇಕಾಗಿ ಬಂತು. ಇಲ್ಲಿ ಬಟ್ಟೆ ಹಾಕಿಕೊಂಡೇ ವಿಮಾನ ಹತ್ತುತ್ತಿದ್ದ ಪ್ರಯಾಣಿಕರು, ಬಳಿಕ ಬಟ್ಟೆ ತೆಗೆದು ಕುಳಿತುಕೊಳ್ಳುತ್ತಿದ್ದರು. ಇಷ್ಟಕ್ಕೂ ಇದೇನು ಮೊದಲಲ್ಲ. 2003ರಲ್ಲಿ ಹೌಸ್ಟ‌ನ್‌ನಿಂದ ಟೆಕ್ಸಾಸ್‌ಗೆ ಹಾರುತ್ತಿದ್ದ ನೇಕ್ಡ್ ಏರ್ ಎಂಬ ಏರ್‌ಲೈನ್ಸ್‌ನಲ್ಲೂ ಈ ಸೌಲಭ್ಯವಿತ್ತು. ಏರ್‌ಹಾಸ್ಟೆಸ್‌ಗಳು ಕೂಡಾ ನಗ್ನವಾಗಿಯೇ ಸೇವೆ ಕೊಡುತ್ತಿದ್ದರು. ಆದರೆ, ಈ ಸೇವೆಗಳೆಲ್ಲ ಈಗ ಬಂದ್ ಆಗಿವೆ.

ಪ್ರವಾಸ ಹೊರಡುವ ಮುನ್ನ ಈ 10 ವಿಷಯ ಗಮನಿಸಿ

3. ಹಾರುವಾಗ ಮಸಾಜ್ ಮಾಡಿಸಿಕೊಳ್ಳಿ

ದೂರ ದೂರ ವಿಮಾನಪ್ರಯಾಣ ಮಾಡಬೇಕಾಗಿ ಬಂದಾಗ ಸುಸ್ತೆನಿಸುತ್ತದೆ. ಅದರಲ್ಲೂ ಕಾಲಾಡಿಸಲೂ ಸ್ವಾತಂತ್ರ್ಯ, ಸ್ಥಳಾವಕಾಶವಿಲ್ಲದಿದ್ದರೆ ಕಿರಿಕಿರಿಯಾಗುತ್ತದೆ. ಹೀಗಾಗಿ, ಏರ್ ಮಾಲ್ಟಾ ವಿಮಾನವು ತನ್ನಲ್ಲಿ ದಿ ಸ್ಕೈ ಸ್ಪಾ ಸೇವೆಯನ್ನು 2015ರಲ್ಲಿ ಆರಂಭಿಸಿದೆ. ಈ ವಿಮಾನದ ಎಕಾನಮಿ ಕ್ಲಾಸ್‌ನಲ್ಲಿ ಪಯಣಿಸುವವರಿಗೆ ಮಸಾಜ್ ಜೊತೆಗೆ ಹಲವು ಬ್ಯೂಟಿ ಟ್ರೀಟ್‌ಮೆಂಟ್‌ಗಳನ್ನೂ ನೀಡಲಾಗುತ್ತದೆ. 

4. ಸಹಪ್ರಯಾಣಿಕರನ್ನು ನೀವೇ ಆರಿಸಿ!

ಇದೊಂತರಾ ಫ್ಲೈಟ್‌ನಲ್ಲಿ ಡೇಟ್ ಹೋಗುವಂತೆ. ಕೆಎಲ್‌ಎಂ ರಾಯಲ್ ಡಚ್ ಏರ್‌ಲೈನ್ಸ್‌ನಲ್ಲಿ ಮೀಟ್ ಆ್ಯಂಡ್ ಸೀಟ್ ಅವಕಾಶವಿದೆ. ನೀವು ವಿಮಾನ ಏರುವ ಮುನ್ನವೇ ಸಹಪ್ರಯಾಣಿಕರೆಲ್ಲರ ಫೇಸ್ಬುಕ್ ಹಾಗೂ ಲಿಂಕ್ಡ್‌ಇನ್ ಪ್ರೊಫೈಲ್ ವಿವರ ಹಾಗೂ ಅವರು ಯಾವ ಸೀಟಿನಲ್ಲಿ ಕೂರುತ್ತಾರೆ ಎಂಬುದು ನಿಮಗೆ ಸಿಗುತ್ತದೆ. ಹೀಗಾಗಿ, ಯಾರ ಪಕ್ಕ ಕೂರಬೇಕೆನಿಸುತ್ತದೋ ಅದೇ ಸೀಟ್ ಆಯ್ಕೆ ಮಾಡಿಕೊಳ್ಳಬಹುದು. ಅಲ್ಲದೆ, 5. ನಿಮ್ಮ ವಿಮಾನದಲ್ಲಿರುವ ಯಾರಿಗೇ ಬೇಕಿದ್ದರೂ ಫೇಸ್‌ಬುಕ್‌ನಲ್ಲಿ ಫ್ರೆಂಡ್‌ಲಿಸ್ಟ್ ಕಳಿಸಬಹುದಸಲ್ಲವೇ?

5. ಮಸಾಜ್ ಚೇರ್‌ ಮೇಲೆ ಕುಳಿತು ವಾಯುಯಾನ

ಲಾ ಕ್ಯಾಂಪೇನ್ ವಿಮಾನಗಳಲ್ಲಿ ಶೇ.100ರಷ್ಟು ಸೀಟ್‌ಗಳೂ ಬಿಸ್ನೆಸ್ ಕ್ಲಾಸ್‌ನವೇ ಆಗಿದ್ದು, ಪ್ರತಿ ಸೀಟ್ ಕೂಡಾ 175 ಡಿಗ್ರಿ ಆ್ಯಂಗಲ್‌ನಲ್ಲಿದ್ದು ಅದರಲ್ಲಿ ಮಸಾಜ್ ಆಯ್ಕೆ ಕೂಡಾ ಇರುತ್ತದೆ. ಅಂದರೆ ಪ್ರಯಾಣಿಕರು ಬಯಸಿದಾಗ ಅದು ಮಸಾಜ್ ಮಾಡುತ್ತದೆ. ನ್ಯೂಯಾರ್ಕ್ ಹಾಗೂ ಪ್ಯಾರಿಸ್ ನಡುವೆ ಸಂಚರಿಸುವ ಈ ಏರ್‌ಲೈನ್ಸ್ ಆ್ಯಂಟಿ ಅಲೆರ್ಜಿಕ್ ದಿಂಬುಗಳು, ದೊಡ್ಡ ದಪ್ಪದಾದ ಮೃದು ಹೊದಿಕೆಗಳು, ಖಾಸಗಿ ಟ್ಯಾಬ್ಲೆಟ್‌ಗಳನ್ನು ನೀಡುತ್ತದೆ. ವೈನ್ ಟೇಸ್ಟಿಂಗ್ ಸೇರಿದಂತೆ ಟಾಪ್ ಶೆಫ್‌ಗಳು ತಯಾರಿಸಿದ ಮೆನು ಇದರಲ್ಲಿ ಲಭ್ಯ.

ವಿಶ್ವದ ಬಲಶಾಲಿ ಪಾಸ್‌ಪೋರ್ಟ್ ಲಿಸ್ಟ್ ಔಟ್: ಭಾರತಕ್ಕೆ ಯಾವ ಸ್ಥಾನ?

6. ಸ್ಕೈಕೌಚ್

ಮಕ್ಕಳು, ಪತ್ನಿ ಸೇರಿದಂತೆ ಕುಟುಂಬದೊಂದಿಗೆ ದೂರಪ್ರಯಾಣ ಮಾಡುವವರಿಗೆ ಇದು ಬಹಳ ಪ್ರಿಯ. ಏರ್ ನ್ಯೂಜಿಲ್ಯಾಂಡ್ ವಿಮಾನಗಳಲ್ಲಿ ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ ಕೂಡಾ ಹಾಸಿಗೆಯಲ್ಲಿ ಮಲಗಿದಂತೆ ಮಲಗಿ ಹೋಗುವ ಸೌಲಭ್ಯವಿದೆ. ವಿಮಾನದೊಳಗೇ ನಿಮ್ಮದೇ ಪ್ರತ್ಯೇಕ ಸ್ಥಳವಿದ್ದಂತೆ ಇಲ್ಲಿ ಮೂರು ಸೀಟ್‌ಗಳ ಕೌಚ್‌ಗಳಿವೆ. 

7. ಹೆಲೋ ಕಿಟ್ಟಿ ಥೀಮ್ ಪ್ಲೇನ್

ಕಾರ್ಟೂನ್ ಹಾಗೂ ಅನೀಮ್  ಕ್ಯಾರೆಕ್ಟರ್‌ಗಳು ಕೇವಲ ಮಕ್ಕಳಿಗಾಗಿ ಎಂದು ನೀವು ತಿಳಿದಿದ್ದರೆ, ಈ ಏರ್ಲೈನ್ಸ್‌ನಲ್ಲಿ ನಿಮಗಾಗಿ ಕೂಡಾ ಕಾರ್ಟೂನ್ ವಿನ್ಯಾಸ ಮಾಡಲಾಗಿದೆ. ತೈವಾನೀಸ್ ಏರ್‌ಲೈನ್‌ಗಳಲ್ಲಿ ಕಿಟ್ಟಿ ಥೀಮ್ ಅಷ್ಟೇ ಅಲ್ಲ, ಹಲವಷ್ಟು ಕಾರ್ಟೂನ್‌ಗಳು ನಿಮ್ಮ ಪ್ರಯಾಣವನ್ನು ಕಲರ್‌ಫುಲ್ ಆಗಿಸುತ್ತವೆ. ಕ್ಯಾಬಿನ್ ವ್ಯವಸ್ಥೆಗಳಿಂದ ಹಿಡಿದು ಮೀಲ್ಸ್‌ವರೆಗೆ ಎಲ್ಲವೂ ಕಿಟ್ಟಿ ಥೀಮ್ ಹೊಂದಿವೆ. ಫ್ಲೈಟ್ ಅಟೆಂಡೆಂಟ್ಸ್ ಕೂಡಾ ಮುದ್ದಾದ ಪಿಂಕ್ ಏಪ್ರನ್ ತೊಟ್ಟು ಪ್ರಯಾಣಿಕರನ್ನು ಗ್ರೀಟ್ ಮಾಡುತ್ತಾರೆ. ಮಕ್ಕಳಿಗಂತೂ ಬಹಳ ಮಜವಾದ ಅನುಭವ ನೀಡುತ್ತದೆ ಈ ಏರ್‌ಲೈನ್ಸ್. 

ಟ್ರಾವೆಲ್‌ ಬ್ಯಾಗ್‌ನಲ್ಲಿ ಇರಲೇ ಬೇಕಾದ 7 ವಸ್ತುಗಳು!