ಸೂಪರ್ ಎಲ್ ನಿನೊ ಪರಿಣಾಮದಿಂದ ರಾಜ್ಯದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದ್ದು, ಒಂದೆಡೆ ಬಿಸಿಲಿನ ತಾಪದಿಂದ ಆರೋಗ್ಯ ಸಮಸ್ಯೆಗಳು, ಮತ್ತೊಂದೆಡೆ ಡೆಂಗ್ಯೂ, ಚಿಕೂನ್‌ಗುನ್ಯಾದಂತಹ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯು ಹೈ ಅಲರ್ಟ್ ಘೋಷಿಸಿ, ಆಸ್ಪತ್ರೆಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದೆ.
ಬೆಂಗಳೂರು (ಸೆ.10): ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸುತ್ತಿರುವ ‘ಸೂಪರ್ ಎಲ್ ನಿನೊ’ (Super El Niño) ಕೇವಲ ಮಳೆ ಕೊರತೆ ಅಥವಾ ಕೃಷಿ ವಲಯಕ್ಕೆ ಮಾತ್ರವಲ್ಲದೆ, ಇದೀಗ ಸಾರ್ವಜನಿಕರ ಆರೋಗ್ಯದ ಮೇಲೂ ಭಾರಿ ಪರಿಣಾಮ ಬೀರಲು ಆರಂಭಿಸಿದೆ. ಒಂದೆಡೆ ಮಳೆಗಾಲದಲ್ಲೂ ಸುಡು ಬಿಸಿಲು, ಮತ್ತೊಂದೆಡೆ ದಿಢೀರ್ ಮಳೆಯಿಂದಾಗಿ ಉಂಟಾಗುತ್ತಿರುವ ಹವಾಮಾನ ವೈಪರೀತ್ಯ ರಾಜ್ಯದ ಆರೋಗ್ಯ ಇಲಾಖೆಗೆ ‘ಡಬಲ್ ಚಾಲೆಂಜ್’ ಒಡ್ಡಿದ್ದು, ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಹೈ ಅಲರ್ಟ್ ಘೋಷಿಸಿದೆ.
ಒಂದೆಡೆ ಬಿಸಿಲಿನ ಝಳ, ಮತ್ತೊಂದೆಡೆ ಡೆಂಗ್ಯೂ ಭೀತಿ:
ಸಾಮಾನ್ಯವಾಗಿ ಮಳೆಗಾಲದಲ್ಲಿ ತಂಪಾದ ವಾತಾವರಣವಿರುತ್ತಿತ್ತು. ಆದರೆ ಎಲ್ ನಿನೊ ಪರಿಣಾಮದಿಂದಾಗಿ ಉಷ್ಣಾಂಶದಲ್ಲಿ ದಿಢೀರ್ ಏರಿಕೆಯಾಗುತ್ತಿದ್ದು, ಜನರಲ್ಲಿ ದೇಹದಲ್ಲಿ ನೀರಿನ ಕೊರತೆ (Dehydration), ತೀವ್ರ ಸುಸ್ತು, ಬಿಸಿಲಿನ ತಲೆನೋವು ಹಾಗೂ ಹೀಟ್‌ಸ್ಟ್ರೋಕ್ ಮಾದರಿಯ ಲಕ್ಷಣಗಳು ಹೆಚ್ಚಾಗುವ ಆತಂಕ ಎದುರಾಗಿದೆ. ಇದರ ಜೊತೆಗೆ, ಅಲ್ಲಲ್ಲಿ ಬೀಳುತ್ತಿರುವ ಮಳೆಯಿಂದಾಗಿ ನೀರು ನಿಂತು ಡೆಂಗ್ಯೂ, ಚಿಕೂನ್‌ಗುನ್ಯಾ ಸೇರಿದಂತೆ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ಭೀತಿ ದುಪ್ಪಟ್ಟಾಗಿದೆ. ವಾತಾವರಣದಲ್ಲಿನ ಈ ವಿಚಿತ್ರ ಬದಲಾವಣೆಯು ಶೀತ, ಕೆಮ್ಮು, ಉಸಿರಾಟದ ತೊಂದರೆ ಮತ್ತು ತೀವ್ರ ವೈರಲ್ ಜ್ವರಗಳಿಗೆ ದಾರಿ ಮಾಡಿಕೊಡುತ್ತಿದೆ.
ಆಸ್ಪತ್ರೆಗಳಲ್ಲಿ ಸಮರೋಪಾದಿ ಸಿದ್ಧತೆ:
- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹವಾಮಾನ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ, ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸಿದ್ಧತೆ ಆರಂಭಿಸಿದೆ:
- ಎಲ್ಲಾ ಸರ್ಕಾರಿ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಓಆರ್‌ಎಸ್ (ORS), ಐವಿ ಫ್ಲೂಯಿಡ್ಸ್ ಹಾಗೂ ಆ್ಯಂಟಿಬಯೋಟಿಕ್ ಔಷಧಗಳನ್ನು ದಾಸ್ತಾನು ಇರಿಸಿಕೊಳ್ಳಲು ಸೂಚಿಸಲಾಗಿದೆ.
- ಡೆಂಗ್ಯೂ, ಚಿಕೂನ್‌ಗುನ್ಯಾ ರಕ್ತ ಪರೀಕ್ಷಾ ಕಿಟ್‌ಗಳು ಹಾಗೂ ತುರ್ತು ಚಿಕಿತ್ಸಾ ಬೆಡ್‌ಗಳನ್ನು ಸನ್ನದ್ಧವಾಗಿಡಲು ಆಸ್ಪತ್ರೆಗಳಿಗೆ ಆದೇಶಿಸಲಾಗಿದೆ.
- ಸಾಂಕ್ರಾಮಿಕ ರೋಗಗಳು ಉಲ್ಬಣಿಸದಂತೆ ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮತ್ತು ಲಾರ್ವಾ ಸಮೀಕ್ಷೆಯನ್ನು ಚುರುಕುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.


