ಕರ್ನಾಟಕದ ಗಣ್ಯ ಮತದಾರರ ಪಟ್ಟಿಯಲ್ಲಿ ಲೋಪಗಳಿರುವುದು ಪತ್ತೆಯಾಗಿದೆ. ನಂದನ್ ನೀಲೆಕಣಿಗೆ ನೋಟಿಸ್ ನೀಡಿದ ಬನ್ನಲ್ಲೇ ಇದೀಗ ಉದ್ಯಮಿ ನಿಖಿಲ್ ಕಾಮತ್‌ಗೂ ಚುನಾವಣಾ ಆಯೋಗದ SIR ನೋಟಿಸ್ ಬಂದಿದೆ.

ಬೆಂಗಳೂರು (ಸೆ.10) ಕರ್ನಾಟಕದಲ್ಲಿ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ (SIR) ನಡೆಸುತ್ತಿದೆ. ದಾಖಲೆ, ಹೆಸರು, ವಿಳಾಸ, ಇತರೆಡೆ ವೋಟರ್ ಐಡಿ ಸೇರಿದಂತೆ ಹಲವು ಕಾರಣಗಳಿಂದ ಕೆಲ ಮತದಾರರ ಹೆಸರು ದೋಷಪೂರಿತ ಪಟ್ಟಿಗೆ ಸೇರ್ಪಡೆಯಾಗಿದೆ. ಹೀಗೆ ಸೇರ್ಪಡೆಯಾದವರಿಗೆ ಇದೀಗ ಚುನಾವಣಾ ಆಯೋಗ ನೋಟಿಸ್ ನೀಡುತ್ತಿದೆ. ಈ ಪೈಕಿ ಯುವ ಉದ್ಯಮಿ, ಝಿರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್‌ಗೆ SIR ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.

ಅಕ್ಟೋಬರ್ 22ರ ವರೆಗೆ ಅವಕಾಶ

ಕರ್ನಾಟಕದ 67 ಲಕ್ಷ ಮತದಾರರ ಹೆಸರು ದೋಷಪೂರಿತ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಈ ಪೈಕಿ ಹಲವರಿಗೆ ಈಗಾಗಲೇ SIR ನೋಟಿಸ್ ನೀಡಲಾಗಿದೆ. ಅಗತ್ಯ ದಾಖಲೆ ಪತ್ರಗಳನ್ನು ಸಲ್ಲಿಸಿ ದೋಷ ಸರಿಪಡಿಸಿಕೊಳ್ಳಲು ಸೂಚಿಸಲಾಗಿದೆ. ಅಕ್ಟೋಬರ್ 22ರ ಒಳಗೆ ಬಿಎಲ್‌ಒಗಳಿಗೆ ದಾಖಲೆ ನೀಡಿ ದೋಷ ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದೀಗ ನಿಖಿಲ್ ಕಾಮತ್ ದಾಖಲೆ ಪತ್ರ ಸಲ್ಲಿಸಿ ದೋಷ ಸರಿಪಡಿಸಿಕೊಳ್ಳಬೇಕಿದೆ.

ದಾಖಲೆಗಳಲ್ಲಿ ಮಿಸ್ ಮ್ಯಾಚ್

ಝಿರೋಧಾ ಸಹ ಸಂಸ್ಥಾಪಕ, ಉದ್ಯಮಿ ನಿಖಿಲ್ ಕಾಮತ್ ಹಾಗೂ ಅವರ ಕುಟುಂಬದ ದಾಖಲೆಗಳಲ್ಲಿ ಕೆಲ ಲೋಪಗಳು ಪತ್ತಯಾಗಿದೆ. ಚುನಾವಣಾ ಆಯೋಗದಲ್ಲಿರುವ ಹಳೇ ದಾಖಲೆ ಹಾಗೂ ಹೊಸ ದಾಖಲೆ ಮ್ಯಾಚ್ ಆಗುತ್ತಿಲ್ಲ. ಈ ಪೈಕಿ ಪೋಷಕರ ಹೆಸರಿನಲ್ಲಿ ಕೆಲ ವ್ಯತ್ಯಾಸಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಕೆಲ ಪೂರಕ ದಾಖಲೆಗಳನ್ನು ಸಲ್ಲಿಕೆ ಮಾಡಿ ಲೋಪ ಸರಿಪಡಿಸಿಕೊಳ್ಳಲು ನೋಟಿಸ್ ಮೂಲಕ ಸೂಚಿಸಲಾಗಿದೆ.

ಎಸ್ಐಆರ್ ಅನ್‌ಮ್ಯಾಪ್ಡ್ ಲಿಸ್ಟ್

ದೋಷಪೂರಿತ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿದ್ದರೆ, ಪೂರಕ ದಾಖಲೆ ನೀಡಿ ಸರಿಪಡಿಸಿಕೊಳ್ಳಲು ಚುನಾವಣಾ ಆಯೋಗ ಸೂಚಿಸಿದೆ. ದೋಷಪೂರಿತ ಪಟ್ಟಿಯಲ್ಲಿ ಹೆಸರು ಬಂದಿದ್ದರೆ, ಮತದಾರರ ಪಟ್ಟಿಯಿಂದ ಕೈಬಿಡಲಾಗುವುದು ಎಂದರ್ಥವಲ್ಲ. ಆಯೋಗ ಸೂಚಿಸುವ ಹಲವು ದಾಖಳೆಗಳಲ್ಲಿ ಪೂರಕ ದಾಖಲೆ ನೀಡಿ ಲೋಪ ಸರಿಪಡಿಸಿಕೊಳ್ಳಲು ಸಾಧ್ಯವಿದೆ. ಹಲವು ಗಣ್ಯರ ದಾಖಲೆಗಳು ಅನ್‌ಮ್ಯಾಪ್ಡ್ ಲಿಸ್ಟ್‌ಗೆ ಸೇರಿಕೊಂಡಿದೆ. ಇದು ಮತದಾರರ ಹೆಸರು, ಪೋಷಕರ ಹೆಸರು ಸೇರಿ ಸಣ್ಣ ಲೋಪಗಳಿಂದ ಸಂಭವಿಸಿದ್ದಾಗಿದೆ. ಹೀಗಾಗಿ ಇದಕ್ಕೆ ಚುನಾವಣಾ ಆಯೋಗ ಸೂಚಿಸುವ ಪೂರಕ ದಾಖಲೆ ಒದಗಿಸಿ ಲೋಪ ಸರಿಸಪಡಿಸಿಕೊಳ್ಳಲು ಸಾಧ್ಯ ಎಂದು ಆಯೋಗ ಸ್ಪಷ್ಟಪಡಿಸಿದೆ.

ರಾಜ್ಯದಲ್ಲಿ 67 ಲಕ್ಷ ಮತದಾರರ ಹೆಸರು ದೋಷಪೂರಿತ ಪಟ್ಟಿಯಲ್ಲಿದೆ. ಈ ಪೈಕಿ ಈಗಾಗಲೇ 48 ಲಕ್ಷಕ್ಕೂ ಅಧಿಕ ಮಂದಿಗೆ ನೋಟಿಸ್ ನೀಡಲಾಗಿದೆ. ಪ್ರತಿ ಮತದಾರರಿಗೂ ಹತ್ತಿರದ ಬಿಎಲ್ಒಗಳ ಸಂಪರ್ಕಿಸಿ ಲೋಪ ಸರಿಪಡಿಸಿಕೊಳ್ಳುವ ಅವಕಾಶ ನೀಡಲಾಗಿದೆ.