ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯಡಿ 2026-27ನೇ ಸಾಲಿನ ಅನುದಾನ ಹಂಚಿಕೆ ಮತ್ತು ಬಳಕೆ ಕುರಿತು ಕೆಲವು ಮಹತ್ವದ ಶಿಫಾರಸುಗಳನ್ನು ರಾಜ್ಯಪರಿಷತ್‌ಗೆ ಕಳುಹಿಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳೇನು

ಬೆಂಗಳೂರು (ಸೆ.08) ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯಡಿ ಅನುದಾನ ಹಂಚಿಕೆ ಕುರಿತು ಕೆಲವು ಮಹತ್ವ ನಿರ್ಧಾರಗಳ ಬಗ್ಗೆ ರಾಜ್ಯ ಪರಿಷತ್‌ಗೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರಿನ ವಿಕಾಸಸೌಧದಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್‌. ಮುನಿಯಪ್ಪ, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಪರಿಶಿಷ್ಟ ವರ್ಗಗಳ ಕಲ್ಯಾಣ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರೂ, ನೋಡಲ್‌ ಏಜೆನ್ಸ್‌ ಉಪಾಧ್ಯಕ್ಷರೂ ಆಗಿರುವ ಸಚಿವ ಟಿ. ರಘುಮೂರ್ತಿ ನೇತೃತ್ವದಲ್ಲಿ ಸತತ ಎರಡನೇ ದಿನ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ರಾಜ್ಯಪರಿಷತ್‌ಗೆ ಶಿಫಾರಸು

2026-27ನೇ ಸಾಲಿನಲ್ಲಿ ವಿವಿಧ ಇಲಾಖೆಗಳಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯಡಿ ಅನುದಾನ ಬಳಕೆಯಾಗದಿರುವ ಬಗ್ಗೆ ಸಚಿವತ್ರಯರು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು. ಎಲ್ಲ ಇಲಾಖೆಯ ಕಾರ್ಯದರ್ಶಿಗಳಿಂದ ಮಾಹಿತಿ ಪಡೆದ ನಂತರ ಸೂಕ್ತ ಶಿಫಾರಸುಗಳನ್ನು ರಾಜ್ಯಪರಿಷತ್‌ಗೆ ಕಳುಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದೇ ವೇಳೆ ಮಾತನಾಡಿದ ಸಚಿವ ಟಿ ರಘುಮೂರ್ತಿ, ಪರಿಶಿಷ್ಟ ವರ್ಗಗಳ ಅಭಿವೃದ್ಧಿಗಾಗಿ ಮೀಸಲಿಡಲಾದ ನಿಧಿಯು ಸಮರ್ಪಕವಾಗಿ ಬಳಕೆಯಾಗಬೇಕು. ಯಾವುದೇ ಇಲಾಖೆಯಲ್ಲೂ ಅನುದಾನ ಬಳಕೆಯಾಗದೇ ಉಳಿಯಬಾರದು ಎಂದಿದ್ದಾರೆ. ಇಲಾಖೆಗಳ ನಡುವಿನ ಸಮನ್ವಯ ಹೆಚ್ಚಿಸಿ, ಯೋಜನೆಗಳ ಅನುಷ್ಠಾನವನ್ನು ವೇಗಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಡಲಾದ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು, ಯೋಜನೆಗಳ ಅನುಷ್ಠಾನದಲ್ಲಿ ಬಂದಿರುವ ಅಡಚಣೆಗಳನ್ನು ನಿವಾರಿಸುವುದು ಮತ್ತು ಅನುದಾನದ ಪೂರ್ಣ ಬಳಕೆ ಖಚಿತಪಡಿಸಿಕೊಳ್ಳುವುದು ಸಭೆಯ ಪ್ರಮುಖ ಚರ್ಚೆಯ ವಿಷಯವಾಗಿತ್ತು. ವಿವಿಧ ಇಲಾಖೆಗಳಿಂದ ಸಲ್ಲಿಕೆಯಾದ ವರದಿಗಳ ಆಧಾರದ ಮೇಲೆ, ಅನುದಾನ ಬಳಕೆಯಲ್ಲಿ ಕಂಡುಬಂದ ಕೊರತೆಗಳು ಮತ್ತು ವಿಳಂಬದ ಕಾರಣಗಳನ್ನು ಸಚಿವರು ಪರಿಶೀಲಿಸಿದರು.

ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ. ಈ ಯೋಜನೆಗಳ ಅಡಿಯಲ್ಲಿ ಜಾರಿಗೊಳಿಸಲಾಗುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಮತ್ತು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಗಳಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ರಸ್ತೆ, ಕಟ್ಟಡ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳಲ್ಲಿ ಈ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.