ಭದ್ರಾ ಮೇಲ್ದಂಡೆ ಯೋಜನೆಯಡಿ ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ಭಾನುವಾರ ಪ್ರಾಯೋಗಿಕವಾಗಿ ನೀರು ಹರಿಸಲಾಯಿತು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಲಕ್ಕವಳ್ಳಿ ಅಣೆಕಟ್ಟಿನಲ್ಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಚಿತ್ರದುರ್ಗ (ಸೆ.08): ಐದಾರು ದಶಕಗಳ ಕಾಲದ ಭದ್ರಾ ಮೇಲ್ದಂಡೆ ಯೋಜನೆಯ ಸುದೀರ್ಘ ಕನಸು ಇಂದು ನನಸಾಗುವತ್ತ ಸಾಗಿದೆ. ಬಯಲು ಸೀಮೆಯ ಜನರ ಭಗೀರಥ ಪ್ರಯತ್ನಕ್ಕೆ ಭದ್ರೆ ಒಲಿದಿದ್ದು, 'ಭದ್ರಾವತರಣ'ಕ್ಕೆ ದಿನಗಣನೆ ಶುರುವಾಗಿದೆ. ಧಾವಂತದಿಂದ ಹರಿದು ಬರುತ್ತಿರುವ ಭದ್ರಾ ಜಿಲ್ಲೆಗೆ ಪ್ರವೇಶಿಸಿದೊಡನೆ ಸದಾ ಬರಗಾಲದ ಜಿಲ್ಲೆ ಎಂಬ ಹಣೆಪಟ್ಟಿಗೆ ಪಾಪವಿಮೋಚನೆಯಾಗುವ ಕನಸು ಚಿಗುರೊಡೆದಿದೆ. ಭದ್ರೆಯೊಡನೆ ಇನ್ನೆರಡು ತಿಂಗಳಲ್ಲಿ ತುಂಗೆಯೂ ಜಿಲ್ಲೆಯ ಕಡೆ ಮುಖಮಾಡಲಿದ್ದಾಳೆ.
ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ರಮ
ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ರಮಕ್ಕೆ ಭದ್ರಾ ಮೇಲ್ದಂಡೆ ಯೋಜನೆಯ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿರುವ ಇನ್ ಟೇಕ್ ಪಾಯಿಂಟ್ (ಲಕ್ಕವಳ್ಳಿ ಅಣೆಕಟ್ಟು) ನಲ್ಲಿ ಭಾನುವಾರ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರು ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಚಾಲನೆ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಟಿ. ರಘುಮೂರ್ತಿ, ಇಂದು ಇತಿಹಾಸದಲ್ಲಿ ನೆನಪಿಡಬೇಕಾದ ಮಹತ್ವದ ದಿನ. ಐದಾರು ದಶಕಗಳಿಂದ ಬಯಲುಸೀಮೆ ಜನರು ಕಂಡಿದ್ದ ಭದ್ರಾ ಮೇಲ್ದಂಡೆ ಯೋಜನೆಯ ಕನಸು ಇಂದು ನನಸಾಗುತ್ತಿದೆ. ಈ ಯೋಜನೆಗೆ ಮುನ್ನುಡಿ ಬರೆದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ. ಕೃಷ್ಣ ಹಾಗೂ ಸಚಿವರಾಗಿದ್ದ ಟಿ.ಬಿ. ಜಯಚಂದ್ರ ಸೇರಿದಂತೆ, ಯೋಜನೆಯ ಸಾಕಾರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬ ಹೋರಾಟಗಾರರು, ರೈತರು, ಸ್ವಾಮೀಜಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾದಿಂದ 17.4 ಟಿ.ಎಂ.ಸಿ ಹಾಗೂ ಭದ್ರಾದಿಂದ 12.5 ಟಿ.ಎಂ.ಸಿ ಸೇರಿ ಒಟ್ಟು 29.9 ಟಿ.ಎಂ.ಸಿ ನೀರು ಹಂಚಿಕೆಯಾಗಿದೆ. ಪ್ರಸ್ತುತ ಯೋಜನೆ ವೆಚ್ಚ ರೂ.21,500 ಕೋಟಿ ಆಗಿದೆ. ಯೋಜನೆಯಿಂದ ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಸೇರಿದಂತೆ 4 ಜಿಲ್ಲೆಗಳ 12 ತಾಲೂಕುಗಳಿಗೆ ಅನುಕೂಲವಾಗಲಿದೆ. ಒಟ್ಟು 2,25,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಒಟ್ಟು 367 ಕೆರೆಗಳಿಗೆ ನೀರು ತುಂಬಿಸುವ ಬೃಹತ್ ಯೋಜನೆ ಇದಾಗಿದೆ. ತುಂಗಾದಿಂದ ಬರಬೇಕಾದ 17.4 ಟಿ.ಎಂ.ಸಿ ನೀರಿನ ಕಾಮಗಾರಿಗಳು ಎರಡು ಟವರ್ ಕೆಲಸ ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸಚಿವ ಟಿ. ರಘುಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಧರಂ ಸಿಂಗ್, ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಿಂದ ಹಿಡಿದು ಸಿದ್ದರಾಮಯ್ಯನವರ ಸರ್ಕಾರದವರೆಗೆ ಹಲವು ಹಂತಗಳಲ್ಲಿ ಅನುದಾನ ಹಂಚಿಕೆಯಾಗಿದೆ. ಆರಂಭದಲ್ಲಿ ರೂ.2,814 ಕೋಟಿಗೆ ಚಾಲನೆ ಸಿಕ್ಕ ಈ ಯೋಜನೆಗೆ, ಆನಂತರದ ಸಮ್ಮಿಶ್ರ ಸರ್ಕಾರದಲ್ಲಿ ರೂ.5,500 ಕೋಟಿ, 2013-18ರ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ರೂ.12,500 ಕೋಟಿ ಹಾಗೂ 2022ರ ಸರ್ಕಾರದ ಅವಧಿಯಲ್ಲಿ ರೂ.21,500 ಕೋಟಿಗೆ ಪರಿಷ್ಕೃತ ಮಂಜೂರಾತಿ ದೊರೆತಿದೆ. ಯೋಜನೆ ಅನುಷ್ಠಾನಗೊಳ್ಳಲು ಎಲ್ಲಾ ಪಕ್ಷಗಳು ಪಕ್ಷಾತೀತವಾಗಿ ನೆರವು ನೀಡಿದನ್ನು ಸಚಿವ ಟಿ. ರಘುಮೂರ್ತಿ ಸ್ಮರಿಸಿದರು.


