ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಅವರ ಬ್ಯಾರಕ್ ಅನ್ನು ನ್ಯಾಯಾಲಯದ ಆದೇಶದಂತೆ ಬದಲಾಯಿಸಲಾಗಿದೆ. ಹಳೆಯ ಬ್ಯಾರಕ್‌ನಲ್ಲಿನ ವಾತಾವರಣದಿಂದ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಇಂದು ಅವರ ಜಾಮೀನು ಅರ್ಜಿಯ ವಿಚಾರಣೆ ಕೂಡ ನಡೆಯಲಿದೆ.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಆಪ್ತೆ ಪವಿತ್ರಾ ಗೌಡ ಅವರಿಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದ ಆದೇಶದಂತೆ ಜೈಲಿನಲ್ಲಿ ಬ್ಯಾರಕ್ ಬದಲಾವಣೆ ಮಾಡಲಾಗಿದೆ.
ಈ ಹಿಂದೆ ಸುಮಾರು 30ಕ್ಕೂ ಹೆಚ್ಚು ವಿಚಾರಣಾಧೀನ ಖೈದಿಗಳಿದ್ದ ಬ್ಯಾರಕ್‌ನಲ್ಲಿ ಪವಿತ್ರಾ ಗೌಡ ಳನ್ನು ಇರಿಸಲಾಗಿತ್ತು. ಅದರಲ್ಲಿ ವಯೋವೃದ್ಧರು ಹಾಗೂ ನೈಜೀರಿಯಾ ಮೂಲದ ವಿದೇಶಿ ಖೈದಿಗಳು ಇದ್ದುದ್ದರಿಂದ ಭಾಷೆ ಹಾಗೂ ವಾತಾವರಣದ ಹೊಂದಾಣಿಕೆಯಾಗದೆ ತೀವ್ರ ಮಾನಸಿಕ ಒತ್ತಡ ಮತ್ತು ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾರಕ್ ಬದಲಾಯಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದ ಪವಿತ್ರಾ ಗೌಡ ಮನವಿಯನ್ನು ಮನ್ನಿಸಲಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ್ದ ಸೆಷನ್ಸ್ ಕೋರ್ಟ್, ಕಡಿಮೆ ಜನರಿದ್ದ ಬ್ಯಾರಕ್‌ಗೆ ವರ್ಗಾಯಿಸಲು ಜೈಲು ಆಡಳಿತಕ್ಕೆ ನಿರ್ದೇಶನ ನೀಡಿತ್ತು. ಕೋರ್ಟ್ ಆದೇಶದ ಬೆನ್ನಲ್ಲೇ ಜೈಲು ಅಧಿಕಾರಿಗಳು ಪವಿತ್ರಾ ಗೌಡ ಳನ್ನುರಿಂದ 5 ಮಂದಿ ಖೈದಿಗಳಿರುವ ಪ್ರತ್ಯೇಕ ಬ್ಯಾರಕ್‌ಗೆ ಶಿಫ್ಟ್ ಮಾಡಿದ್ದಾರೆ.
ಇಂದು ಜಾಮೀನು ಅರ್ಜಿ ವಿಚಾರಣೆ:
ಇನ್ನೊಂದೆಡೆ, ಪವಿತ್ರಾ ಗೌಡ ಸೇರಿದಂತೆ ಪ್ರಕರಣದ 6ನೇ ಆರೋಪಿ ಜಗದೀಶ್ ಮತ್ತು 7ನೇ ಆರೋಪಿ ಅನುಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಲಯ ಇಂದು (ಸೆಪ್ಟೆಂಬರ್ 21) ಕೈಗೆತ್ತಿಕೊಳ್ಳಲಿದೆ. ರಾಜ್ಯ ಸರ್ಕಾರಿ ಅಭಿಯೋಜಕರು ಜಾಮೀನಿಗೆ ತೀವ್ರ ಆಕ್ಷೇಪಣೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಇದೇ ವೇಳೆ ಪ್ರಕರಣದ ಪ್ರಮುಖ ಸಾಕ್ಷಿಗಳಾದ 234, 235, 236 ಹಾಗೂ 246ನೇ ಸಾಕ್ಷಿದಾರರಿಗೆ ಕೋರ್ಟ್‌ಗೆ ಹಾಜರಾಗಿ ಸಾಕ್ಷ್ಯ ನುಡಿಯುವಂತೆ ಸಮನ್ಸ್ ಜಾರಿಗೊಳಿಸಲಾಗಿದೆ. ಅನಾರೋಗ್ಯಕ್ಕೆ ಒಳಗಾಗಿರುವ 12ನೇ ಆರೋಪಿ ಲಕ್ಷ್ಮಣ್‌ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಅವರ ವೈದ್ಯಕೀಯ ತಪಾಸಣಾ ವರದಿಯನ್ನು ಕೋರ್ಟ್‌ಗೆ ಸಲ್ಲಿಸಲು ಸೂಚಿಸಲಾಗಿದೆ.


