ಪಶುವೈದ್ಯಾಧಿಕಾರಿ ಮತ್ತು ಕೈಗಾರಿಕಾ ವಿಸ್ತರಣಾಧಿಕಾರಿ ನೇಮಕಾತಿ ಅಕ್ರಮ ಹಾಗೂ ಕೆಪಿಎಸ್‌ಸಿ ಅಧ್ಯಕ್ಷರ ಪುತ್ರಿ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ತನಿಖೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

ಸುಳ್ಳು ಜಾತಿ, ಆದಾಯ ಪ್ರಮಾಣಪತ್ರ ಸಲ್ಲಿಕೆ ಕೇಸ್‌

 ಬೆಂಗಳೂರು (ಆ.21): ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಮತ್ತು ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅಕ್ರಮವಾಗಿ ನೇಮಕವಾಗಲು ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಪುತ್ರಿ ಸುಮಾ ಸುಳ್ಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಿರುವ ಪ್ರಕರಣದ ತನಿಖೆಗೆ ಸಂಬಂಧಿಸಿದ ದಾಖಲೆ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಕೆಪಿಎಸ್‌ಸಿ ನೇಮಕಾತಿ ಅಕ್ರಮವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್, ಡಾ.ಮಂಜುನಾಥ್‌ ಸಲ್ಲಿಸಿರುವ ಅರ್ಜಿ ಮತ್ತು ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್‌ ರದ್ದು ಕೋರಿ ಲೋಕೇಶ್‌ ಸೇರಿ ಹಲವು ಯಶಸ್ವಿ ಅಭ್ಯರ್ಥಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಸೂಚನೆ ನೀಡಿತು.

ಅರ್ಜಿ ವಿಚಾರಣೆ ವೇಳೆ ಲೋಕೇಶ್‌ ಪರ ವಕೀಲರು, ಅರ್ಜಿದಾರರ ಮನೆಯಲ್ಲಿ ಇ.ಡಿ ಶೋಧ ನಡೆಸಿತು. ಮನೆಯಲ್ಲಿಯೇ 20 ಅಂಕಗಳಿಗೆ ಟೆಸ್ಟ್‌ ನೀಡಿತು. ಎಫ್‌ಐಆರ್‌ ಬಾಕಿಯಿರುವುದರಿಂದ ಅರ್ಜಿದಾರರು ಸರ್ಕಾರಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಅಕ್ರಮ ನಿಲ್ಲಬೇಕು:

ಅದಕ್ಕೆ ನ್ಯಾಯಪೀಠ. ಈ ಬಗ್ಗೆ ಪರಿಶೀಲಿಸಲಾಗುವುದು. ಅಂತಿಮವಾಗಿ ಸಮಸ್ಯೆ ಪರಿಹರಿಸೋಣ. ಆದರೆ, ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಕ್ರಮ ನಿಲ್ಲಬೇಕು. ಅದಕ್ಕಾಗಿ ಏನಾದರೂ ಮಾಡಬೇಕಿದೆ ಎಂದು ನುಡಿಯಿತು.

ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಆ.27ಕ್ಕೆ ಮುಂದೂಡಿದ ಪೀಠ, ರಾಜ್ಯ ಪೊಲೀಸರು (ಸಿಐಡಿ ಮತ್ತು ವಿಧಾನಸೌಧ ಠಾಣಾ ಪೊಲೀಸರು) ಪ್ರಕರಣ ಕುರಿತು ನಡೆಸಿರುವ ತನಿಖೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಬೇಕು ಎಂದು ನಿರ್ದೇಶಿಸಿತು. ಹಾಗೆಯೇ, ಅರ್ಜಿಗಳ ಸಂಬಂಧ ಹೊರಡಿಸಿರುವ ಮಧ್ಯಂತರ ಆದೇಶ ಮತ್ತು ಯಶಸ್ವಿ ಅಭ್ಯರ್ಥಿಗಳಿಗೆ ಒದಗಿಸಿರುವ ರಕ್ಷಣಾ ಕ್ರಮಗಳನ್ನು ಮುಂದಿನ ವಿಚಾರಣೆಗೆ ವಿಸ್ತರಿಸಿತು.

ಇದಕ್ಕೂ ಮುನ್ನ ಪೊಲೀಸರ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌, ಸ್ವಲ್ಪ ಕಾಲವಕಾಶ ನೀಡಿದರೆ ಆಕ್ಷೇಪಣೆ ಸಲ್ಲಿಸಲಾಗುವುದು. ಅದರ ಪ್ರತಿಯನ್ನು ಮುಂಗಡವಾಗಿ ಅರ್ಜಿದಾರರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕೆಪಿಎಸ್‌ಸಿ ನೇಮಕಾತಿಯಲ್ಲಿ ಉದ್ಯೊಗ ಗಿಟ್ಟಿಸಿರುವ ಕೆ.ಆರ್‌.ಲೋಕೇಶ್‌ ಹಾಗೂ ಇತರ ಯಶಸ್ವಿ ಅಭ್ಯರ್ಥಿಗಳ ಪರ ವಕೀಲರು, ಅರ್ಜಿದಾರರೆಲ್ಲರೂ ಯಶಸ್ವಿ ಅಭ್ಯರ್ಥಿಗಳಾಗಿದ್ದಾರೆ. ಅವರು ಯಾವುದೇ ಅಕ್ರಮ ಮಾರ್ಗದಿಂದ ಅಂಕ ಸಂಪಾದಿಸಿಲ್ಲ. ಬುಧವಾರ ಜಾರಿ ನಿರ್ದೇಶನಾಲಯ (ಇಡಿ) ಅರ್ಜಿದಾರನ ಮನೆಗೆ ಬಂದು ತನಿಖೆ ನಡೆಸಿದೆ. ಅರ್ಜಿದಾರರಿಗೆ ಮನೆಯಲ್ಲಿಯೇ ಟೆಸ್ಟ್‌ ನೀಡಿದೆ. ಈ ಪ್ರಕರಣವನ್ನು ಪ್ರಿಡಿಕೇಟ್‌ ಅಪರಾಧವಾಗಿ ಬಳಸಿದೆ ಎಂದು ಆರೋಪಿಸಿದರು.

ಅದಕ್ಕೆ ಪೀಠ, ಅರ್ಜಿದಾರರಿಗೆ ಇಡಿ ಟೆಸ್ಟ್‌ ಮಾಡಿತ್ತೇ? ಹಾಗಾದರೆ ಆ ಕ್ರಮವನ್ನು ಅರ್ಜಿದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿ ಎಂದು ಸೂಚಿಸಿ ಇ.ಡಿ ಶೋಧ ನಡೆಸಿದೆಯೇ ಎಂದು ಕೇಳಿತು. ರಾಜ್ಯ ಸರ್ಕಾರಿ ಅಭಿಯೋಜಕರು ಉತ್ತರಿಸಿ, ಶಿವಶಂಕರಪ್ಪ ಸಾಹುಕಾರ್‌ ಅವರ ಮನೆಯಲ್ಲಿ ಬುಧವಾರ ಇ.ಡಿ ಶೋಧ ನಡೆಸಿದೆ ಎಂದು ಮಾಹಿತಿ ನೀಡಿದರು.

ಸೋಮವಾರದೊಳಗೆ ಆಕ್ಷೇಪಣೆಗೆ ಸೂಚನೆ:

ಲೋಕೇಶ್‌ ಪರ ವಕೀಲರು, ಶಿವಶಂಕರಪ್ಪ ಅವರ ಮನೆ ಸೇರಿದಂತೆ ಎಲ್ಲ ಯಶಸ್ವಿ ಅಭ್ಯರ್ಥಿಗಳ ಮನೆ ಮೇಲೆ ಇ.ಡಿ ಶೋಧ ನಡೆಸಿದೆ. ಇ.ಡಿ ಕ್ರಮ ಪ್ರಶ್ನಿಸಲು ಅರ್ಜಿದಾರರ ಬಳಿ ಇಸಿಐಆರ್‌ (ಇ.ಡಿ ದಾಖಲಿಸುವ) ಪ್ರತಿ ಇಲ್ಲ. ಮನೆಯಲ್ಲಿ ಅರ್ಜಿದಾರರಿಗೆ ಇ.ಡಿ 20 ಅಂಕಗಳಿಗೆ ಪ್ರಶ್ನೆಗಳನ್ನು ನೀಡಿ ಉತ್ತರ ಕೇಳಿ ಟೆಸ್ಟ್‌ ನಡೆಸಿದೆ. ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ 20 ಅಂಕ ಪಡೆಯುವಲ್ಲಿ ಅರ್ಜಿದಾರರು ಯಶಸ್ವಿಯಾಗಿದ್ದಾರೆ. ಅರ್ಜಿದಾರರು ಸರ್ಕಾರಿ ಉದ್ಯೋಗ ಪಡೆದಿದ್ದಾರೆ. ಇತರೆ ಪರೀಕ್ಷೆಯಲ್ಲಿ ಅವರು ಯಶಸ್ವಿಯಾಗಿದ್ದಾರೆ. ಆದರೆ, ಈ ಎಫ್‌ಐಆರ್‌ ಬಾಕಿ ಇರುವುದರಿಂದ ಅರ್ಜಿದಾರರು ಸರ್ಕಾರಿ ಉದ್ಯೋಗ ಪಡೆಯಲಾಗುತ್ತಿಲ್ಲ. ಅರ್ಜಿದಾರರು ಓಎಂಆರ್‌ ಶೀಟ್‌ ಎಲ್ಲವನ್ನೂ ತುಂಬಿದ್ದಾರೆ. ಯಾವೊಂದು ಪ್ರಶ್ನೆಯನ್ನೂ ಬಿಟ್ಟಿಲ್ಲ ಎಂದು ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸರ್ಕಾರಿ ಅಭಿಯೋಜಕರು ಸೋಮವಾರದೊಳಗೆ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.