ಐಟಿ/ಬಿಟಿ ಸಂಸ್ಥೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳ ಸುರಕ್ಷತೆ ಮತ್ತು ಸಾರಿಗೆ ನಿಯಮಗಳನ್ನು ಕರ್ನಾಟಕ ಸರ್ಕಾರ ಹಿಂಪಡೆದಿದೆ. ಈ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (KITU) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಮಹಿಳೆಯರನ್ನು ಅಸುರಕ್ಷತೆಗೆ ತಳ್ಳುತ್ತದೆ ಎಂದು ಎಚ್ಚರಿಸಿದೆ.

ಬೆಂಗಳೂರು (ಸೆ.15): ರಾಜ್ಯದ ಐಟಿ, ಬಿಟಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಉದ್ಯೋಗಿಗಳ ಸುರಕ್ಷತೆ ಮತ್ತು ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ ಕಡ್ಡಾಯ ನಿಯಮಗಳನ್ನು ಹಿಂಪಡೆದಿರುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (KITU) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಜನವಿರೋಧಿ ತಿದ್ದುಪಡಿಯನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ಕಾಯ್ದೆ ಮೂಲಕ ಕಾಯ್ದೆಯ ಕಲಂ 25(1)(h) ನಿಂದ 25(1)(o) ವರೆಗಿನ ಉಪ-ವಿಧಿಗಳನ್ನು ಕೈಬಿಡಲಾಗಿದೆ. ಈ ವಿಧಿಗಳು ರಾತ್ರಿ ವೇಳೆ ಕೆಲಸ ಮಾಡುವ ಮಹಿಳೆಯರ ಪ್ರಯಾಣ, ವಾಹನ ಚಾಲಕರ ಹಿನ್ನೆಲೆ ಪರಿಶೀಲನೆ, ಭದ್ರತಾ ಸಿಬ್ಬಂದಿ ಒದಗಿಸುವಿಕೆ ಸೇರಿದಂತೆ ಹಲವು ಅತ್ಯಗತ್ಯ ರಕ್ಷಣಾ ಕ್ರಮಗಳನ್ನು ಕಡ್ಡಾಯಗೊಳಿಸಿದ್ದವು. ಸರ್ಕಾರದ ಈ ಕ್ರಮದಿಂದಾಗಿ ಮಹಿಳಾ ಉದ್ಯೋಗಿಗಳನ್ನು ತೀವ್ರ ಅಸುರಕ್ಷತೆಗೆ ತಳ್ಳಿದಂತಾಗಿದೆ ಎಂದು ‘ಕಿಟು’ ಎಚ್ಚರಿಸಿದೆ.

ಸರ್ಕಾರ ಕೈಬಿಟ್ಟಿರುವ ಪ್ರಮುಖ ಸುರಕ್ಷತಾ ನಿಯಮಗಳು ಇಂತಿವೆ:

ಚಾಲಕರ ಕಡ್ಡಾಯ ಹಿನ್ನೆಲೆ ಪರಿಶೀಲನೆ: ಮಹಿಳೆಯರನ್ನು ಕರೆದೊಯ್ಯುವ ಕ್ಯಾಬ್ ಚಾಲಕರ ಪೂರ್ವಾಪರ ಮತ್ತು ಪೊಲೀಸ್ ಪರಿಶೀಲನೆ ಕಡ್ಡಾಯವಾಗಿರಬೇಕಿತ್ತು.

ನಿಗದಿತ ಮಾರ್ಗಗಳು: ಅಧಿಕೃತ ಪಿಕ್-ಅಪ್ ಮತ್ತು ಡ್ರಾಪ್ ಮಾರ್ಗಗಳ ನಿರ್ವಹಣೆ.

ಖಾಸಗಿತನದ ರಕ್ಷಣೆ: ಮಹಿಳಾ ಉದ್ಯೋಗಿಗಳ ಮೊಬೈಲ್ ಸಂಖ್ಯೆ, ವಿಳಾಸ, ಇ-ಮೇಲ್ ಮುಂತಾದ ವಿವರಗಳು ಅನಧಿಕೃತ ವ್ಯಕ್ತಿಗಳ ಕೈಸೇರದಂತೆ ಗೌಪ್ಯತೆ ಕಾಯ್ದುಕೊಳ್ಳುವುದು.

ಮೊದಲು ಪಿಕ್/ಕೊನೆಗೆ ಡ್ರಾಪ್ ನಿರ್ಬಂಧ: ರಾತ್ರಿ ವೇಳೆ ಮಹಿಳೆಯನ್ನು ಮೊದಲು ಪಿಕ್ ಮಾಡುವುದು ಅಥವಾ ಕೊನೆಯಲ್ಲಿ ಡ್ರಾಪ್ ಮಾಡುವುದನ್ನು ನಿರ್ಬಂಧಿಸಲಾಗಿತ್ತು.

ಭದ್ರತಾ ಸಿಬ್ಬಂದಿ (Security Escort): ರಾತ್ರಿ ವೇಳೆ ಮಹಿಳೆಯರು ಪ್ರಯಾಣಿಸುವಾಗ ನಿರ್ದಿಷ್ಟ ಸಂದರ್ಭಗಳಲ್ಲಿ ಸೆಕ್ಯುರಿಟಿ ಗಾರ್ಡ್ ಒದಗಿಸುವುದು ಕಡ್ಡಾಯವಾಗಿತ್ತು.

ಆಕಸ್ಮಿಕ ತಪಾಸಣೆ: ರಾತ್ರಿ ಪಾಳಿಯ ವಾಹನಗಳನ್ನು ಮೇಲ್ವಿಚಾರಕರು (Supervisors) ಹಠಾತ್ ತಪಾಸಣೆಗೆ ಒಳಪಡಿಸುವುದು.

ಕಂಟ್ರೋಲ್ ರೂಂ/ಟ್ರಾವೆಲ್ ಡೆಸ್ಕ್: ವಾಹನಗಳ ಸಂಚಾರವನ್ನು ನೈಜ ಸಮಯದಲ್ಲಿ (Real-time) ಟ್ರ್ಯಾಕ್ ಮಾಡಲು ಕಂಟ್ರೋಲ್ ರೂಂ ವ್ಯವಸ್ಥೆ.

ತುರ್ತು ಸಹಾಯ ವ್ಯವಸ್ಥೆ: ಮಹಿಳಾ ಉದ್ಯೋಗಿಗಳು ಅಪಾಯದ ಸಂದರ್ಭದಲ್ಲಿ ತಕ್ಷಣವೇ ನೆರವು ಪಡೆಯಲು ತುರ್ತು ಕರೆ/ಎಸ್‌ಒಎಸ್ (SOS) ವ್ಯವಸ್ಥೆ.

ಉದ್ಯೋಗದಾತರ ಹೊಣೆಗಾರಿಕೆ ಕಡಿತ, ಮಹಿಳೆಯರಿಗೆ ಅಪಾಯ

ಕರ್ನಾಟಕದ ಐಟಿ ಮತ್ತು ಐಟಿಇಎಸ್ (IT/ITeS) ವಲಯದಲ್ಲಿ ಲಕ್ಷಾಂತರ ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರ್ಯಕ್ಷೇತ್ರದಲ್ಲಿ ಮಹಿಳೆಯರ ಸಮಾನ ಭಾಗವಹಿಸುವಿಕೆಗೆ ಸುರಕ್ಷಿತ ಸಾರಿಗೆ ಮತ್ತು ಪರಿಣಾಮಕಾರಿ ಭದ್ರತಾ ವ್ಯವಸ್ಥೆಗಳು ಕನಿಷ್ಠ ಹಾಗೂ ರಾಜಿ ಮಾಡಿಕೊಳ್ಳಲಾಗದ ಷರತ್ತುಗಳಾಗಿವೆ. ಇಂತಹ ಸಂದರ್ಭದಲ್ಲಿ ಕಾನೂನುಬದ್ಧ ರಕ್ಷಣೆಯನ್ನು ಹಿಂಪಡೆಯುವುದು ಉದ್ಯೋಗದಾತ ಕಂಪನಿಗಳ ಹೊಣೆಗಾರಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಮಹಿಳಾ ಉದ್ಯೋಗಿಗಳನ್ನು ಹೆಚ್ಚಿನ ಅಪಾಯಕ್ಕೆ ದೂಡುತ್ತದೆ ಎಂದು ಸಂಘಟನೆ ಆತಂಕ ವ್ಯಕ್ತಪಡಿಸಿದೆ.

'ಕಿಟು' ಆಗ್ರಹವೇನು?

ಸರ್ಕಾರ ಯಾವುದೇ ಕಾರಣಕ್ಕೂ ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬಾರದು. ಸೆಕ್ಷನ್ 25(1)(h) ನಿಂದ (o) ವರೆಗಿನ ವಿಧಿಗಳನ್ನು ರದ್ದುಪಡಿಸಿರುವ ತಿದ್ದುಪಡಿಯನ್ನು ತಕ್ಷಣವೇ ವಾಪಸ್ ಪಡೆಯಬೇಕು. ಮಹಿಳೆಯರ ರಾತ್ರಿ ಪಾಳಿಯ ಸಾರಿಗೆ ಮತ್ತು ಭದ್ರತೆಗೆ ಸಂಬಂಧಿಸಿದ ಎಲ್ಲಾ ಶಾಸನಬದ್ಧ ಸುರಕ್ಷತಾ ಕ್ರಮಗಳನ್ನು ಮರುಸ್ಥಾಪಿಸಬೇಕು' ಎಂದು ಕಿಟು ಪ್ರಧಾನ ಕಾರ್ಯದರ್ಶಿ ಸುಹಾಸ್ ಅಡಿಗ ಆಗ್ರಹಿಸಿದ್ದಾರೆ.

ಅಲ್ಲದೆ, ಸರ್ಕಾರದ ಈ ನಿರ್ಧಾರದ ವಿರುದ್ಧ ಧ್ವನಿ ಎತ್ತಲು ಹಾಗೂ ಸುರಕ್ಷತಾ ನಿಯಮಗಳನ್ನು ಮರಳಿ ಜಾರಿಗೆ ತರುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಐಟಿ ಮತ್ತು ಸಂಬಂಧಿತ ವಲಯದ ಎಲ್ಲಾ ಉದ್ಯೋಗಿಗಳು ಒಗ್ಗಟ್ಟಾಗಿ ಮುಂದೆ ಬರಬೇಕೆಂದು ಸಂಘಟನೆ ಕರೆ ನೀಡಿದೆ.