- Home
- Jobs
- Private Jobs
- 2026ರಲ್ಲಿ ಪ್ರತಿ ದಿನಕ್ಕೆ 936 ಮಂದಿಯಂತೆ ಐಟಿಯಲ್ಲಿ ಲೇಆಫ್, ಕೆಲಸ ಕಳೆದುಕೊಂಡ 85,156 ಟೆಕ್ಕಿಗಳು
2026ರಲ್ಲಿ ಪ್ರತಿ ದಿನಕ್ಕೆ 936 ಮಂದಿಯಂತೆ ಐಟಿಯಲ್ಲಿ ಲೇಆಫ್, ಕೆಲಸ ಕಳೆದುಕೊಂಡ 85,156 ಟೆಕ್ಕಿಗಳು
2026ರಲ್ಲೂ ಐಟಿ ವಲಯದಲ್ಲಿ ಉದ್ಯೋಗ ಕಡಿತದ ಅಲೆ ಮುಂದುವರಿದಿದ್ದು, ವರ್ಷದ ಆರಂಭದಲ್ಲೇ 85,156 ಟೆಕ್ಕಿಗಳು ಕೆಲಸ ಕಳೆದುಕೊಂಡಿದ್ದಾರೆ. ಒರಾಕಲ್, ಅಮೆಜಾನ್, ಇಂಟೆಲ್‌ನಂತಹ ದೈತ್ಯ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಇದು ಐಟಿ ಉದ್ಯೋಗಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಈ ವರ್ಷ 85,156 ಟೆಕ್ಕಿಗಳು ವಜಾ
ಕಳೆದ ಎರಡು ವರ್ಷಗಳಿಂದ ಐಟಿ (IT) ವಲಯದಲ್ಲಿ ಎದ್ದಿರುವ ಉದ್ಯೋಗ ಕಡಿತದ (Layoffs) ಅಲೆ 2026ರಲ್ಲೂ ಮುಂದುವರಿದಿದ್ದು, ಟೆಕ್ಕಿಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 2026ರ ಆರಂಭದ ಕೆಲವೇ ತಿಂಗಳುಗಳಲ್ಲಿ ಸುಮಾರು 85,156 ಮಂದಿ ಕೆಲಸ ಕಳೆದುಕೊಂಡಿದ್ದಾರೆ.
2026ರಲ್ಲಿ ಪ್ರತಿ ದಿನ 936 ಟೆಕ್ಕಿಗಳ ಲೇಆಫ್
2026ರ ವರ್ಷದ ಇಲ್ಲಿಯವರೆಗೆ ಒಟ್ಟು 208 ಕಂಪನಿಗಳು ಉದ್ಯೋಗ ಕಡಿತ ಮಾಡಿದ್ದು, ದಿನವೊಂದಕ್ಕೆ ಸರಾಸರಿ 936 ಟೆಕ್ಕಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಕಳೆದ ವರ್ಷ ಒಟ್ಟು 783 ಕಂಪನಿಗಳು ಉದ್ಯೋಗ ಕಡಿತ ಮಾಡಿದ್ದವು, ಇದರಿಂದ 2,45,953 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು. ಯಾವೆಲ್ಲಾ ಕಂಪನಿಗಳು ಎಷ್ಟು ಪ್ರಮಾಣದ ಟೆಕ್ಕಿಗಳನ್ನು ಲೇಆಫ್ ಮಾಡಿದ್ದಾರೆ ಅನ್ನೋ ವಿವರ ಇಲ್ಲಿದೆ.
ಒರಾಕಲ್
ಒರಾಕಲ್ ಕಂಪನಿ ಲೇಆಫ್ ಲಿಸ್ಟ್‌ಗೆ ಹೊಸದಾಗಿ ಸೇರ್ಪಡೆಯಾಗಿದ್ದು, ಭಾರತದಲ್ಲಿ 12 ಸಾವಿರಕ್ಕೂ ಅಧಿಕ ಉದ್ಯೋಗಿಗಳೊಂದಿಗೆ ವಿಶ್ವದಾದ್ಯಂತ 30 ಸಾವಿರ ಟೆಕ್ಕಿಗಳನ್ನು ಏಕಾಏಕಿ ಕೆಲಸದಿಂದ ಕಿತ್ತುಹಾಕಿದೆ.
ಇಂಟೆಲ್
ಪ್ರಖ್ಯಾತ ಚಿಪ್ ಕಂಪನಿ ಇಂಟೆಲ್ ಇಲ್ಲಿಯವರೆಗೆ 21 ಸಾವಿರ ಟೆಕ್ಕಿಗಳನ್ನು ವಜಾ ಮಾಡಿದೆ. 2025ರ ಜುಲೈನಲ್ಲಿ ಟೆಕ್ಕಿಗಳನ್ನು ವಜಾ ಮಾಡುವ ನಿರ್ಧಾರ ಪ್ರಕಟಿಸಿತ್ತು.
ಅಮೆಜಾನ್
ಗರಿಷ್ಠ ಉದ್ಯೋಗಿಗಳನ್ನು ವಜಾ ಮಾಡಿದ ಪಟ್ಟಿಯಲ್ಲಿ ಅಮೆಜಾನ್ ಮುಂಚೂಣಿಯಲ್ಲಿದೆ. ಎರಡು ಬಾರಿ ಈ ಕೆಲಸವನ್ನು ಅಮೆಜಾನ್ ಮಾಡಿದೆ. 2025ರ ಅಕ್ಟೋಬರ್‌ನಲ್ಲಿ 14 ಸಾವಿರ ಉದ್ಯೋಗಳ ವಜಾ ಮಾಡಿದ್ದರೆ, 2026ರ ಜನವರಿಲ್ಲಿ 16 ಸಾವಿರ ಟೆಕ್ಕಿಗಳಿಗೆ ಗೇಟ್‌ಪಾಸ್ ನೀಡಿತ್ತು. ಆ ಮೂಲಕ ತನ್ನ ಉದ್ಯೋಗಿಗಳ ಸಂಖ್ಯೆಯಲ್ಲಿ 30 ಸಾವಿರ ಕಡಿತ ಮಾಡಿದೆ.
ಟಿಸಿಎಸ್
ಭಾರತದ ಐಟಿ ಸರ್ವೀಸ್ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ 2025ರ ಜುಲೈನಲ್ಲಿ 12 ಸಾವಿರ ಟೆಕ್ಕಿಗಳನ್ನು ಕೆಲಸದಿಂದ ವಜಾ ಮಾಡಿದೆ.
ಅಕ್ಸೆಂಚರ್
ಅಕ್ಸೆಂಚರ್ ಕಂಪನಿ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ 11 ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಿದೆ.
ಮೈಕ್ರೋಸಾಫ್ಟ್
ಕೋಟ್ಯಧಿಪತಿ ಬಿಲ್‌ಗೇಟ್ಸ್ ಅವರ ಮೈಕ್ರೋಸಾಫ್ಟ್ ಕೂಡ 2025ರ ಜುಲೈನಲ್ಲಿ 9 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು.
ಸೇಲ್ಸ್‌ಫೋರ್ಸ್
ಸೇಲ್ಸ್ ಫೋರ್ಸ್ ಕಂಪನಿ ಕೂಡ ತನ್ನ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರೀ ಕಡಿತ ಮಾಡಿದೆ. 2025ರ ಸೆಪ್ಟೆಂಬರ್‌ನಲ್ಲಿ 4 ಸಾವಿರ ಟೆಕ್ಕಿಗಳನ್ನು ವಜಾ ಮಾಡಿತ್ತು.
ಐಟಿ ಉದ್ಯೋಗಿಗಳ ಆತಂಕ
ವಿಶ್ವದ ದೊಡ್ಡ ಟೆಕ್ ಕಂಪನಿಗಳೇ ಆರ್ಥಿಕ ಮುಗ್ಗಟ್ಟು ಅಥವಾ ಮರುಸಂಘಟನೆಯ ನೆಪದಲ್ಲಿ ಸಾವಿರಾರು ನೌಕರರನ್ನು ಏಕಕಾಲಕ್ಕೆ ಮನೆಗೆ ಕಳುಹಿಸುತ್ತಿರುವುದು ಐಟಿ ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ. ಒರಾಕಲ್ ಮತ್ತು ಅಮೆಜಾನ್ ಕಂಪನಿಗಳು ಉದ್ಯೋಗ ಕಡಿತದಲ್ಲಿ ಮುಂಚೂಣಿಯಲ್ಲಿವೆ.

