ಪರಪ್ಪನ ಅಗ್ರಹಾರದ ಜೈಲಿನ ಬ್ಯಾರೆಕ್‌ನಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ ಫೋನ್‌ನಲ್ಲಿ ಧೈರ್ಯವಾಗಿ ಮಾತನಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಸಿಸಿಬಿ ದಾಳಿಯ ಬೆನ್ನಲ್ಲೇ ಈ ಆಘಾತಕಾರಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಕರ್ತವ್ಯ ನಿರ್ಲಕ್ಷ್ಯ ತೋರಿದ ಜೈಲು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಡಿಜಿಪಿ ಅಲೋಕ್ ಕುಮಾರ್ ಸೂಚಿಸಿದ್ದಾರೆ.
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮತ್ತೊಂದು ಮುಖ ಬಯಲಾಗಿದೆ. ಜೈಲಿನ ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಪ್ರಜ್ವಲ್ ರೇವಣ್ಣ ಮೊಬೈಲ್ ಫೋನ್ ಹಿಡಿದು ಬಿಂದಾಸ್ ಆಗಿ ಮಾತನಾಡುತ್ತಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಜೈಲು ಆಡಳಿತ ಮಂಡಳಿಯ ನಿದ್ದೆಗೆಡಿಸಿದೆ.
ಬ್ಯಾರಕ್‌ನಲ್ಲಿ ಪ್ರಜ್ವಲ್ 'ಫೋನ್' ಚಾಟಿಂಗ್!
ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ಅವರು ಜೈಲಿನ ತಮ್ಮ ಬ್ಯಾರಕ್‌ನಲ್ಲಿ ಮೊಬೈಲ್ ಹಿಡಿದು ರಾಜಾರೋಷವಾಗಿ ಮಾತನಾಡುತ್ತಿರುವುದು ಕಂಡುಬಂದಿದೆ. ಯಾವುದೇ ಭಯವಿಲ್ಲದೆ, ಅತ್ಯಂತ ಬಿಂದಾಸ್ ಆಗಿ ಅವರು ಫೋನ್‌ನಲ್ಲಿ ಸಂಭಾಷಣೆ ನಡೆಸುತ್ತಿದ್ದಾರೆ. ವಿಶೇಷವೆಂದರೆ ಪ್ರಜ್ವಲ್ ಫೋನ್‌ನಲ್ಲಿ ಮಾತನಾಡುತ್ತಿರುವ ದೃಶ್ಯವನ್ನು ಮತ್ತೊಂದು ಮೊಬೈಲ್ ಮೂಲಕ ಗುಟ್ಟಾಗಿ ರೆಕಾರ್ಡ್ ಮಾಡಲಾಗಿದೆ. ಅಂದರೆ ಜೈಲಿನೊಳಗೆ ಒಂದಲ್ಲ, ಎರಡಲ್ಲ, ಹತ್ತಾರು ಮೊಬೈಲ್‌ಗಳು ರಾಜಾರೋಷವಾಗಿ ಓಡಾಡುತ್ತಿವೆಯೇ ಎಂಬ ಸಂಶಯ ಈಗ ದಟ್ಟವಾಗಿದೆ.
ಸಿಸಿಬಿ ದಾಳಿ ವೇಳೆ ಬಯಲಾದ ಸತ್ಯ
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ಮಿಂಚಿನ ದಾಳಿ ನಡೆಸಿದ್ದರು. ಈ ವೇಳೆ ಪ್ರಜ್ವಲ್ ರೇವಣ್ಣ ಅವರಿದ್ದ ಬ್ಯಾರಕ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿತ್ತು. ಇದು ರಾಜ್ಯಾದ್ಯಂತ ಭಾರಿ ಚರ್ಚೆಗೆ ಮತ್ತು ಟೀಕೆಗೆ ಕಾರಣವಾಗಿತ್ತು. ಈಗ ಆ ಮೊಬೈಲ್ ಅನ್ನು ಪ್ರಜ್ವಲ್ ಹೇಗೆ ಬಳಸುತ್ತಿದ್ದರು ಎಂಬುದಕ್ಕೆ ಈ ವಿಡಿಯೋ ಪ್ರಬಲ ಸಾಕ್ಷಿಯಂತಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್, ಭದ್ರತಾ ಲೋಪದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಪ್ರಜ್ವಲ್ ಬ್ಯಾರಕ್‌ನಲ್ಲಿ ಪತ್ತೆಯಾದ ಮೊಬೈಲ್‌ನಲ್ಲಿ ಆಂಧ್ರ ಮೂಲದ ಏರ್‌ಟೆಲ್ ಸಿಮ್ ಬಳಸಲಾಗಿದೆ. ಜೈಲಿನ ಜಾಮರ್ ಇದ್ದರೂ ಏರ್‌ಟೆಲ್ 5G ನೆಟ್‌ವರ್ಕ್ ಹೇಗೆ ಸಿಗುತ್ತಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಈಗಾಗಲೇ ಜೈಲಿನ ಓರ್ವ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಮತ್ತು ಎಸ್ಪಿಗೆ ನೋಟಿಸ್ ನೀಡಲಾಗಿದೆ.
ಜೈಲಿನ ನಿಯಮಗಳನ್ನು ಗಾಳಿಗೆ ತೂರಿ, ಸಮವಸ್ತ್ರ ಕೂಡ ಧರಿಸದೆ ಪ್ರಜ್ವಲ್ ರೇವಣ್ಣ ನಡೆದುಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.


