ಸಿನಿ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಸೆಪ್ಟೆಂಬರ್ 30ರಿಂದ ಸಿನಿಮಾ ಟಿಕೆಟ್‌ಗಳ ಮೇಲೆ ಶೇ.2ರಷ್ಟು ಹೆಚ್ಚುವರಿ ಸೆಸ್ ವಿಧಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಇದರಿಂದ ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆಯಿದೆ.
ಬೆಂಗಳೂರು (ಸೆ.19) ರಾಜ್ಯ ಸರ್ಕಾರವು ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ- 2024ರ ಅಡಿಯಲ್ಲಿ, ಸೆ. 30ರಿಂದ ಅನ್ವಯವಾಗುವಂತೆ ರಾಜ್ಯದಲ್ಲಿ ಸಿನಿಮಾ ಟಿಕೆಟ್‌ಗಳ ಮೇಲೆ ಶೇಕಡ 2 ಹೆಚ್ಚುವರಿ ಸೆಸ್ (ಉಪಕರ) ವಿಧಿಸುವ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಸಿನಿಪ್ರಿಯರಿಗೆ ಸೆ.30 ರಿಂದ ದರ ಏರಿಕೆ ಬಿಸಿ
ಇದರಿಂದ ಸಿನಿಪ್ರಿಯರಿಗೆ ಮುಂದಿನ ದಿನಗಳಲ್ಲಿ ಮಲ್ಟಿಫ್ಲೆಕ್ಸ್‌ಗಳು ಸೇರಿ ಎಲ್ಲಾ ಮಾದರಿ ಚಿತ್ರಮಂದಿರಗಳಲ್ಲೂ ಟಿಕೆಟ್ ದರ ಏರಿಕೆ ಬಿಸಿ ತಟ್ಟುವ ಸಾಧ್ಯತೆ ಇದೆ. ಹೆಚ್ಚುವರಿ ಸೆಸ್ ವಿಚಾರವಾಗಿ ಈ ಹಿಂದೆ ಅಧಿಕೃತ ಅಧಿಸೂಚನೆಯನ್ನೇ ಹೊರಡಿಸದೆ ಸರ್ಕಾರ ಸಿನಿಮಾ ಟಿಕೆಟ್ ಮೇಲೆ ಶೇ.2ರಷ್ಟು ಹೆಚ್ಚುವರಿ ಸೆಸ್ ಸಂಗ್ರಹಿಸುವ ಸಂಬಂಧ ಚಿತ್ರಮಂದಿರಗಳಿಗೆ ಸುತ್ತೋಲೆ ಮೂಲಕ ನೋಟಿಸ್ ನೀಡಿತ್ತು. ಇದನ್ನು ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸೇರಿ ಮತ್ತಿತರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಸರ್ಕಾರ ಆದೇಶ ವಾಪಸ್ ಪಡೆದಿತ್ತು.
ಸಿನಿಮಾ ಟಿಕೆಟ್‌ಗಳ ಮೇಲೆ ಶೇ.2ರಷ್ಟು ಹೆಚ್ಚುವರಿ ಸೆಸ್
ಇದೀಗ ಕಾಯ್ದೆಯ ಅಡಿ ಅಧಿಕೃತ ಆದೇಶ ಹೊರಡಿಸಿ ಸೆ.30ರಿಂದ ಮಲ್ಟಿಫ್ಲೆಕ್ಸ್‌ಗಳೂ ಸೇರಿ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಸಿನಿಮಾ ಟಿಕೆಟ್‌ಗಳ ಮೇಲೆ ಶೇ.2ರಷ್ಟು ಹೆಚ್ಚುವರಿ ಸೆಸ್ ಸಂಗ್ರಹಿಸಲು ಆದೇಶಿಸಿದೆ. ಇದರಿಂದ ಬರುವ ಹಣವನ್ನು, ಕನ್ನಡ ಚಿತ್ರರಂಗದ ಕಾರ್ಮಿಕರು, ತಂತ್ರಜ್ಞರು ಮತ್ತು ಸಾಂಸ್ಕೃತಿಕ ಕಲಾವಿದರ ಸಾಮಾಜಿಕ ಭದ್ರತೆ ಹಾಗೂ ಆರ್ಥಿಕ ನೆರವಿಗಾಗಿ ಪ್ರತ್ಯೇಕ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
ಟಿಕೆಟ್ ದರ ಎಷ್ಟು ಹೆಚ್ಚಾಗಬಹುದು?:
ಕರ್ನಾಟಕದ ಎಲ್ಲಾ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಮತ್ತು ಐಷಾರಾಮಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೂ ಇದು ಅನ್ವಯಿಸುತ್ತದೆ. ಅದರಂತೆ, ಪ್ರಸ್ತುತ ಇರುವ ಟಿಕೆಟ್ ದರದ ಮೇಲೆ ಶೇ.2ರಷ್ಟು ಸೆಸ್ ಬೀಳಲಿದೆ. ಉದಾಹರಣೆಗೆ, ನೀವು ₹250 ಬೆಲೆಯ ಟಿಕೆಟ್ ಖರೀದಿಸಿದರೆ ₹5 ಹೆಚ್ಚುವರಿ ಸೆಸ್ ಸೇರಿ ಒಟ್ಟು ₹255 ಪಾವತಿಸಬೇಕಾಗಬಹುದು. ಮತ್ತೊಂದಡೆ, ಚಿತ್ರಮಂದಿರಗಳ ಮಾಲೀಕರು ಈ ಹೊರೆಯನ್ನು ತಾವೇ ಭರಿಸಬೇಕೇ ಅಥವಾ ಗ್ರಾಹಕರಿಗೆ ವರ್ಗಾಯಿಸಬೇಕೇ ಎಂಬ ಬಗ್ಗೆಯೂ ಚರ್ಚಿಸುತ್ತಿದ್ದಾರೆ.


