ಜಪಾನ್‌ನ ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ 503 ಕ್ರೀಡಾಪಟುಗಳು ಸೇರಿದಂತೆ 768 ಮಂದಿಯ ಭಾರತೀಯ ತಂಡ ಪಾಲ್ಗೊಳ್ಳಲಿದೆ. ಕಳೆದ ಬಾರಿ 106 ಪದಕ ಗೆದ್ದಿದ್ದ ಭಾರತ, ಈ ಬಾರಿ ಅಗ್ರ-3ರಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿದೆ. ಸಿಂಧು, ಮನು ಭಾಕರ್ ಸೇರಿದಂತೆ ಹಲವು ತಾರೆಯರ ಮೇಲೆ ಪದಕದ ಭರವಸೆ ಇಡಲಾಗಿದೆ.

ನಗೋಯಾ: ಕಳೆದ ಬಾರಿ ಪದಕ ಗಳಿಕೆಯಲ್ಲಿ 100ರ ಗಡಿ ದಾಟಿದ್ದ ಭಾರತ ಈ ಬಾರಿ ಆ ದಾಖಲೆಯನ್ನೂ ಮುರಿಯುವ ವಿಶ್ವಾಸದಲ್ಲಿದೆ. ಒಟ್ಟು 503 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದರಲ್ಲಿ 269 ಪುರುಷ, 234 ಮಹಿಳಾ ಅಥ್ಲೀಟ್‌ಗಳಿದ್ದಾರೆ. ಉಳಿದಂತೆ 265 ಸಹಾಯಕ ಸಿಬ್ಬಂದಿ ಕೂಡಾ ಇದ್ದಾರೆ. ಒಟ್ಟಾರೆ 768 ಭಾರತೀಯರು ಜಪಾನ್‌ಗೆ ತೆರಳಿದ್ದಾರೆ. ಕರ್ನಾಟಕದಿಂದ ಈಜುಪಟು ಶ್ರೀಹರಿ ನಟರಾಜ್‌, ಗಾಲ್ಫರ್‌ ಅದಿತಿ ಅಶೋಕ್‌, ಅಥ್ಲೀಟ್‌ಗಳಾದ ಸ್ನೇಹಾ, ಯಶಸ್‌ ಪಿ., ಎಂ.ಆರ್‌.ಪೂವಮ್ಮ, ಸಿಂಧುಶ್ರೀ, ಶಟ್ಲರ್‌ ಆಯುಷ್‌ ಶೆಟ್ಟಿ, ಕ್ರಿಕೆಟರ್‌ ಶ್ರೇಯಾಂಕಾ ಪಾಟೀಲ್‌ ಸೇರಿ 24 ಮಂದಿ ಸ್ಪರ್ಧಿಸಲಿದ್ದಾರೆ.

ಕಳೆದ ಬಾರಿ ಭಾರತದ 661 ಮಂದಿ ಚೀನಾದ ಹ್ಯಾಂಗ್ಝೋ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದರು. ಭಾರತ 28 ಚಿನ್ನ ಸೇರಿ 106 ಪದಕ ಗೆದ್ದಿತ್ತು. ಅದು ಏಷ್ಯಾಡ್‌ ಇತಿಹಾಸದಲ್ಲೇ ಭಾರತ ಗೆದ್ದ ಅತಿ ಹೆಚ್ಚು ಪದಕ. ಆದರೂ ಭಾರತ ಪದಕ ಪಟ್ಟಿಯಲ್ಲಿ ಅಗ್ರ-3ರಲ್ಲಿ ಸ್ಥಾನ ಪಡೆದುಕೊಂಡಿರಲಿಲ್ಲ. 4ನೇ ಸ್ಥಾನಿಯಾಗಿತ್ತು. ಈ ಬಾರಿಯೂ ಭಾರತ ಅಗ್ರ-3ರ ಗುರಿ ಇಟ್ಟುಕೊಂಡೇ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿದೆ. ಅಂದಹಾಗೆ, ಭಾರತ ಈವರೆಗಿನ 19 ಆವೃತ್ತಿಗಳ ಪೈಕಿ ಅಗ್ರ-3ರಲ್ಲಿ ಸ್ಥಾನ ಪಡೆದಿದ್ದು 2 ಬಾರಿ ಮಾತ್ರ. 1951ರಲ್ಲಿ 2ನೇ, 1962ರಲ್ಲಿ 3ನೇ ಸ್ಥಾನಿಯಾಗಿತ್ತು.

ಪದಕ ಭರವಸೆಗಳು:

ಭಾರತ ಈ ಬಾರಿಯೂ ಕೆಲ ಅಥ್ಲೀಟ್‌ಗಳ ಮೇಲೆ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ. ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ.ಸಿಂಧು, ಲಕ್ಷ್ಯ ಸೇನ್‌, ಸಾತ್ವಿಕ್‌-ಚಿರಾಗ್‌, ಆಯುಷ್‌, ಅಥ್ಲೆಟಿಕ್ಸ್‌ನಲ್ಲಿ ಅವಿನಾಶ್‌ ಸಾಬ್ಳೆ, ತೇಜಿಂದರ್‌ ಪಾಲ್‌, ಪಾರುಲ್‌ ಚೌಧರಿ, ಅನಿಮೇಶ್‌, ಬಾಕ್ಸಿಂಗ್‌ನಲ್ಲಿ ಲವ್ಲೀನಾ ಬೊರ್ಗೊಹೈನಾ, ಸಾಕ್ಷಿ ಚೌಧರಿ, ಅಂಕುಶ್‌, ಪ್ರಿಯಾ, ಪ್ರೀತಿ ಪವಾರ್‌, ಸಚಿನ್‌ ಸಿವಾಚ್‌, ಕುಸ್ತಿಯಲ್ಲಿ ಅಮನ್‌, ಅಂತಿಮ್‌ ಪಂಘಲ್‌, ನಿಶಾ ದಹಿಯಾ, ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು, ಶೂಟಿಂಗ್‌ನಲ್ಲಿ ಮನು ಭಾಕರ್‌, ಇಶಾ ಸಿಂಗ್‌ ಸೇರಿ ಪ್ರಮುಖರು ಪದಕ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಭಾರತದ ಕ್ರಿಕೆಟ್‌, ಕಬಡ್ಡಿ ತಂಡಗಳು ಚಿನ್ನದ ಪದಕ ಗೆಲ್ಲುವ ನೆಚ್ಚಿನ ತಂಡಗಳೆನಿಸಿವೆ.

ಏಷ್ಯಾಡ್‌: ಟೆಕ್‌ಬಾಲ್‌ನಲ್ಲಿ ಭಾರತಕ್ಕೆ ಪದಕ ನಿರೀಕ್ಷೆ!

ನಗೊಯಾ (ಜಪಾನ್‌): ಏಷ್ಯನ್‌ ಗೇಮ್ಸ್‌ ಟೆಕ್‌ಬಾಲ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಪದಕದ ನಿರೀಕ್ಷೆ ಮೂಡಿದೆ. ಮಹಿಳಾ ಸಿಂಗಲ್ಸ್‌ನಲ್ಲಿ ಕ್ವಿಮ್ಸಿ ಜವೊಕಿಮ್‌ ಡಿಸೋಜಾ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಗುಂಪು ಹಂತದಲ್ಲಿ ಎರಡೂ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನ ಪಡೆದ ಕ್ವಿಮ್ಸಿಗೆ ಕ್ವಾರ್ಟರ್‌ ಫೈನಲ್‌ನಲ್ಲಿ ಬೈ ಸಿಕ್ಕಿತು. ಶನಿವಾರ ಸೆಮೀಸ್‌ನಲ್ಲಿ ಗೆದ್ದರೆ ಪದಕ ಖಚಿತವಾಗಲಿದೆ. ಸೋತರೂ, ಭಾನುವಾರ ಕಂಚಿನ ಪದಕಕ್ಕಾಗಿ ಸೆಣಸುವ ಅವಕಾಶ ಇರಲಿದೆ.

ಇದೇ ವೇಳೆ ಕ್ವಿಮ್ಸಿ ಹಾಗೂ ಮೊಹಮದ್‌ ಬೇಗ್‌ ಜೋಡಿ ಮಿಶ್ರ ಡಬಲ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುಂಡಿತು. ಆದರೆ ರಿಪಿಕೇಜ್‌ ಸುತ್ತು ಪ್ರವೇಶಿಸಿದ್ದು, ಕಂಚಿನ ಪದಕ ಗೆಲ್ಲುವ ಅವಕಾಶವಿದೆ.

ಏನಿದು ಟೆಕ್‌ಬಾಲ್‌?

ಇದು ಫುಟ್ಬಾಲ್‌ ಹಾಗೂ ಟೇಬಲ್‌ ಟೆನಿಸ್‌ ಮಿಶ್ರಿತ ಆಟ. ಟೇಬಲ್‌ ಟೆನಿಸ್‌ನಲ್ಲಿ ಬಳಸುವ ರೀತಿಯ ಟೇಬಲ್‌ ಮೇಲೆ ಫುಟ್ಬಾಲ್ ರೀತಿ ಚೆಂಡನ್ನು ಪರಸ್ಪರ ಅಂಕಣಗಳಿಗೆ ತಲುಪಿಸಿ ಆಡುವ ಆಟ. ಚೆಂಡನ್ನು ಹೊಡೆಯಲು ಕೈ, ತೋಳು ಬಿಟ್ಟು ದೇಹದ ಇನ್ನುಳಿದ ಭಾಗಗಳನ್ನು ಬಳಸಬಹುದು.