17 ವರ್ಷಗಳ ಸುದೀರ್ಘ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಅಧ್ಯಯನವು, ಹೆಣ್ಣು ಸಮುದ್ರ ಆನೆಗಳು ಆಹಾರಕ್ಕಾಗಿ ಪೆಸಿಫಿಕ್ ಮಹಾಸಾಗರದಲ್ಲಿ 1,700 ಮೀಟರ್‌ಗಿಂತಲೂ ಹೆಚ್ಚು ಆಳಕ್ಕೆ ಧುಮುಕುತ್ತವೆ ಎಂದು ಬಹಿರಂಗಪಡಿಸಿದೆ. ಈ ಪ್ರಾಣಿಗಳು ಹಗಲಿನಲ್ಲಿ ಆಳಕ್ಕೆ ಮತ್ತು ರಾತ್ರಿಯಲ್ಲಿ ಮೇಲ್ಮೈಗೆ ಹತ್ತಿರ ಧುಮುಕುವ ಮೂಲಕ, ಇನ್ನೂ ಪತ್ತೆಯಾಗದ ಆಳ ಸಮುದ್ರದ ಜೀವಿಗಳನ್ನು ಬೇಟೆಯಾಡುತ್ತವೆ.
ವಿಶಾಲವಾದ ಪೆಸಿಫಿಕ್ ಮಹಾಸಾಗರದ ನೀಲಿ ಮೇಲ್ಮೈ ಕೆಳಗೆ ಉತ್ತರ ಭಾಗದ ಹೆಣ್ಣು 'ಸಮುದ್ರ ಆನೆ' (Northern Elephant Seal ಅಥವಾ ನೀರಾನೆ) ಒಂದರ ಚಲನವಲನಗಳನ್ನು ಸಂಶೋಧಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅದರ ದೇಹಕ್ಕೆ ಅಳವಡಿಸಲಾಗಿದ್ದ ಸಣ್ಣ ಎಲೆಕ್ಟ್ರಾನಿಕ್ ರೆಕಾರ್ಡರ್, ಆ ಸೀಲ್ ಪ್ರಾಣಿಯು ಸಮುದ್ರದ ಆಳಕ್ಕೆ ಎಷ್ಟು ದೂರ ಪ್ರಯಾಣಿಸುತ್ತದೆ ಎಂಬುದನ್ನು ದಾಖಲಿಸುತ್ತಿತ್ತು. ಮೇಲ್ಮೈಯಿಂದ ನೂರಾರು ಮೀಟರ್ ಕೆಳಗೆ ಧುಮುಕುತ್ತಿದ್ದಂತೆ, ಸಾಮಾನ್ಯ ಕಣ್ಣಿಗೆ ಕಾಣಿಸದ ನೀರಿನ ಕತ್ತಲೆಯ ಪ್ರಪಂಚದಲ್ಲಿ ಆ ಪ್ರಾಣಿಯ ಪ್ರತಿಯೊಂದು ಚಲನೆಯನ್ನು ಈ ಸಾಧನವು ಅಳೆಯುತ್ತಿತ್ತು.
ಸಂಶೋಧಕರು ಸಮಯ-ಆಳ ರೆಕಾರ್ಡರ್‌ಗಳು (Time-Depth Recorders) ಮತ್ತು ಉಪಗ್ರಹ ಟ್ಯಾಗ್‌ಗಳನ್ನು (Satellite Tags) ಬಳಸಿ, ಆಹಾರಕ್ಕಾಗಿ ಅಲೆದಾಡುವ ಈ ಹೆಣ್ಣು ಸಮುದ್ರ ಆನೆಗಳ ಪ್ರಯಾಣದ ಬೃಹತ್ ದಾಖಲೆಯನ್ನು ಸಂಗ್ರಹಿಸಿದ್ದಾರೆ. ಈ ಪ್ರಾಣಿಗಳು ಆಹಾರ ಹುಡುಕುವಾಗ ನಿಯಮಿತವಾಗಿ ಅತ್ಯಂತ ಆಳವಾದ ಡೈವ್‌ಗಳನ್ನು ಮಾಡುತ್ತವೆ ಎಂಬುದು ಈ ದತ್ತಾಂಶದಿಂದ ಬಹಿರಂಗಗೊಂಡಿದೆ. ಒಂದು ದಾಖಲಿತ ಡೈವ್ ಬೊಮ್ಮಾಯಿಯಂತೆ 1,735 ಮೀಟರ್ (ಸುಮಾರು 5,690 ಅಡಿ) ಆಳವನ್ನು ತಲುಪಿರುವುದು ವಿಜ್ಞಾನಿಗಳನ್ನು ಬೆರಗುಗೊಳಿಸಿದೆ.
17 ವರ್ಷಗಳ ಸುದೀರ್ಘ 'ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್' ಅಧ್ಯಯನ
ಪ್ರಸಿದ್ಧ 'ಪ್ಲೋಸ್ ಒನ್' (PLOS ONE) ವೈಜ್ಞಾನಿಕ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸಂಶೋಧಕರು ಹಲವು ತಂತ್ರಜ್ಞಾನಗಳನ್ನು ಸಂಯೋಜಿಸಿ ಈ ಅಧ್ಯಯನ ನಡೆಸಿದ್ದಾರೆ.
ವಯಸ್ಕ ಹೆಣ್ಣು ಸೀಲ್‌ಗಳಿಗೆ (ಸಮುದ್ರ ಆನೆ) ಉಪಗ್ರಹ ಟ್ರಾನ್ಸ್‌ಮಿಟರ್‌ಗಳು, ಟೈಮ್-ಡೆಪ್ತ್ ರೆಕಾರ್ಡರ್‌ಗಳು ಮತ್ತು VHF ಟ್ರಾನ್ಸ್‌ಮಿಟರ್‌ಗಳನ್ನು ಅಳವಡಿಸಲಾಗಿತ್ತು. ಸೀಲ್‌ಗಳು ತಮ್ಮ ವಸಾಹತುಗಳನ್ನು ತೊರೆದು ಸಮುದ್ರಕ್ಕೆ ಇಳಿಯುವ ಮುನ್ನ ಈ ಉಪಕರಣಗಳನ್ನು ಜೋಡಿಸಿ, ಅವು ತಿಂಗಳುಗಳ ನಂತರ ದಂಡೆಗೆ ಹಿಂತಿರುಗಿದಾಗ ಅವುಗಳನ್ನು ತೆಗೆದು ದತ್ತಾಂಶವನ್ನು ವಿಶ್ಲೇಷಿಸಲಾಯಿತು.
ವಯಸ್ಕ ಹೆಣ್ಣು ಸೀಲ್‌ಗಳ ಆಯ್ಕೆ ಏಕೆ?
ಇವು ಆಹಾರಕ್ಕಾಗಿ ಅತ್ಯಂತ ಸುದೀರ್ಘ ವಲಸೆ ಹೋಗುತ್ತವೆ ಮತ್ತು ಕಡ್ಡಾಯವಾಗಿ ತಾವು ಹೊರಟ ಭೂಪ್ರದೇಶಕ್ಕೇ ಹಿಂತಿರುಗುತ್ತವೆ. ಹೀಗಾಗಿ ಇವುಗಳ ದೇಹಕ್ಕೆ ಸಾಧನಗಳನ್ನು ಅಳವಡಿಸುವುದು ಮತ್ತು ಮರುಪಡೆಯುವುದು ಸುಲಭ.
17 ವರ್ಷಗಳ ಅವಧಿಯಲ್ಲಿ ಸಂಗ್ರಹಿಸಿದ ಈ ಕಚ್ಚಾ ದತ್ತಾಂಶವನ್ನು ಅತ್ಯಂತ ನಿಖರವಾದ ಗುಣಮಟ್ಟ ನಿಯಂತ್ರಣ ವಿಧಾನಗಳಿಗೆ ಒಳಪಡಿಸಲಾಯಿತು. ಉಪಕರಣದ ದೋಷಗಳಿಂದ ಉಂಟಾಗಬಹುದಾದ ತಪ್ಪು ದಾಖಲೆಗಳನ್ನು ಫಿಲ್ಟರ್ ಮಾಡಿ, ನೈಜ ಪ್ರಾಣಿ ನಡವಳಿಕೆಯನ್ನು ಮಾತ್ರ ಪ್ರತ್ಯೇಕಿಸಲಾಯಿತು (ಉದಾಹರಣೆಗೆ 150 ನಿಮಿಷಗಳಿಗಿಂತ ಹೆಚ್ಚಿನ ಅವಧಿಯ ಡೈವ್‌ಗಳನ್ನು ಹೊರಗಿಡಲಾಯಿತು).
ಸಮುದ್ರ ಆನೆ ಎಷ್ಟು ಆಳಕ್ಕೆ ಧುಮುಕುತ್ತವೆ ಮತ್ತು ಏಕೆ?
ಸಾಮಾನ್ಯವಾಗಿ ಆನೆ ಸೀಲ್‌ಗಳು 400 ರಿಂದ 600 ಮೀಟರ್ ಆಳದಲ್ಲಿ ಆಹಾರ ಹುಡುಕುತ್ತವೆ. ಆದರೆ, ಕೆಲವು ಸೀಲ್‌ಗಳು ಇದಕ್ಕಿಂತಲೂ ಅತ್ಯಂತ ಆಳವಾದ ಕಂದಕಗಳಿಗೆ ಧುಮುಕುತ್ತವೆ.
ಸೀಲ್‌ಗಳು ಹಗಲಿನಲ್ಲಿ ಅತ್ಯಂತ ಆಳಕ್ಕೆ ಮತ್ತು ರಾತ್ರಿಯಲ್ಲಿ ಮೇಲ್ಮೈಗೆ ಹತ್ತಿರದಲ್ಲಿ ಧುಮುಕುತ್ತವೆ. ಬೆಳಕಿಗೆ ತಕ್ಕಂತೆ ಸಮುದ್ರದ ಆಳದಲ್ಲಿ ಚಲಿಸುವ ಜಲಚರ ಜೀವಿಗಳನ್ನು (ಬೇಟೆಯನ್ನು) ಹಿಡಿಯಲು ಇವು ಈ ತಂತ್ರ ಬಳಸುತ್ತವೆ.
ಎಲ್ಲ ಸೀಲ್‌ಗಳು ಒಂದೇ ರೀತಿ ವ್ಯವಹರಿಸುವುದಿಲ್ಲ. ಡೈವಿಂಗ್ ಆಳದ ವ್ಯತ್ಯಾಸದಲ್ಲಿ ಶೇ. 33 ಮತ್ತು ಡೈವಿಂಗ್ ಅವಧಿಯ ವ್ಯತ್ಯಾಸದಲ್ಲಿ ಶೇ. 50 ರಷ್ಟು ವೈಯಕ್ತಿಕ ವ್ಯತ್ಯಾಸಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.
ಆನೆ ಸೀಲ್‌ಗಳು ನೀರೊಳಗೆ ಕೇವಲ ಮೇಲಕ್ಕೂ ಕೆಳಕ್ಕೂ ಚಲಿಸುವುದಿಲ್ಲ. ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ನೀರೊಳಗೆ ತೇಲುತ್ತಾ ವಿಶ್ರಾಂತಿ ಪಡೆಯುವ 'ಡ್ರಿಫ್ಟ್ ಡೈವ್'ಗಳನ್ನು ಮಾಡುತ್ತವೆ.
ಆಳ ಸಮುದ್ರದ ಧ್ವನಿ ತರಂಗ ಅಧ್ಯಯನಗಳ ಪ್ರಕಾರ, ಬೇಟೆ ಜೀವಿಗಳ ಸಾಂದ್ರತೆ ಹೆಚ್ಚಿರುವ ಆಳಕ್ಕಿಂತಲೂ ಅತ್ಯಂತ ಆಳವಾದ ಭಾಗಕ್ಕೆ ಸೀಲ್‌ಗಳು ಪ್ರಯಾಣಿಸುತ್ತವೆ. ಅಂದರೆ, ಮಾನವನಿಗೆ ಇನ್ನೂ ತಿಳಿದಿರದ ಅಥವಾ ನಿರೂಪಿಸದಿರುವ ಆಳ ಸಮುದ್ರದ ಜಲಚರ ಸಂಪನ್ಮೂಲಗಳನ್ನು ಇವು ಆಹಾರವಾಗಿ ಬಳಸಿಕೊಳ್ಳುತ್ತಿವೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಸೂರ್ಯನ ಬೆಳಕು ಮತ್ತು ನೀರೊಳಗಿನ ಪಯಣ
'ನೇಚರ್' (Nature) ನಿಯತಕಾಲಿಕೆಯಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನವು ಎರಡು ದಶಕಗಳ ಕಾಲ ಸಂಗ್ರಹಿಸಿದ 3D ಚಲನೆಯ ಡೇಟಾವನ್ನು ವಿಶ್ಲೇಷಿಸಿದೆ. ಸಂಶೋಧಕರು ಸೀಲ್‌ಗಳ ಭೌಗೋಳಿಕ ಸ್ಥಾನ ಮತ್ತು ಸೌರ ಎತ್ತರವನ್ನು ಲೆಕ್ಕಹಾಕಿ, ಸೂರ್ಯನ ಬೆಳಕಿಗೂ ಸೀಲ್‌ನ ಡೈವಿಂಗ್‌ಗೂ ಇರುವ ನೇರ ಸಂಬಂಧವನ್ನು ಸಾಬೀತುಪಡಿಸಿದ್ದಾರೆ.
ಅಧುನಿಕ ತಂತ್ರಜ್ಞಾನ ಬರುವುದಕ್ಕಿಂತ ಮೊದಲು ಆನೆ ಸೀಲ್‌ಗಳು ಕೇವಲ 630 ಮೀಟರ್‌ವರೆಗೆ ಮಾತ್ರ ಧುಮುಕಬಲ್ಲವು ಎಂದು ಭಾವಿಸಲಾಗಿತ್ತು. ಆದರೆ, ಈ ಸುಧಾರಿತ ಎಲೆಕ್ಟ್ರಾನಿಕ್ ಟ್ಯಾಗ್‌ಗಳು ನೂರಾರು ಸಮುದ್ರ ಆನೆಗಳಿಂದ ಲಕ್ಷಾಂತರ ಡೈವ್‌ಗಳ ದಾಖಲೆಗಳನ್ನು ಒದಗಿಸಿದ್ದು, ಅವುಗಳು 1,700 ಮೀಟರ್‌ಗೂ ಹೆಚ್ಚು ಆಳದ ಕತ್ತಲ ಜಗತ್ತಿನಲ್ಲಿ ಹೇಗೆ ಬದುಕುತ್ತವೆ ಎಂಬುದಕ್ಕೆ ಬಲವಾದ ಸಾಕ್ಷಿಗಳನ್ನು ಒದಗಿಸಿವೆ.


