'ಕರಾವಳಿ' ಸಿನಿಮಾ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಪ್ರಜ್ವಲ್ ದೇವರಾಜ್ ಅಭಿಮಾನಿಗಳ ಪ್ರತಿಭಟನೆಯಿಂದ ವಿವಾದ ಭುಗಿಲೆದ್ದಿದೆ. ಈ ಕುರಿತು ಮಾತನಾಡಿದ ನಟ ರಾಜ್ ಬಿ. ಶೆಟ್ಟಿ, ಚಿತ್ರತಂಡದ ವಿರುದ್ಧದ ಪಿತೂರಿ ಹಾಗೂ ಪ್ರಜ್ವಲ್ ದೇವರಾಜ್ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಜು.7): ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ಕರಾವಳಿಯ ವಿವಾದ ದೊಡ್ಡದಾಗುವ ಲಕ್ಷಣ ಕಂಡಿದೆ. ಮಂಗಳವಾರ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಸಿನಿಮಾದ ಟ್ರೇಲರ್‌ನಲ್ಲಿ ಪ್ರಜ್ವಲ್ ದೇವರಾಜ್ ಅವರ ವಾಯ್ಸ್ ಇಲ್ಲ ಎನ್ನುವ ಕಾರಣ ನೀಡಿ ಅವರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಈ ಸಿನಿಮಾದ ಒಂದೊಂದೆ ವಿವಾದಗಳು ಹೊರಬರಲು ಆರಂಭಿಸಿದೆ. ಇನ್ನೊಂದೆಡೆ ಇದೇ ಸಿನಿಮಾದಲ್ಲಿ ನಟಿಸಿರುವ ಸ್ಯಾಂಡಲ್‌ವುಡ್‌ನ ಪ್ರಖ್ಯಾತ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ (Raj B Shetty) ಹೀರೊ ಪ್ರಜ್ವಲ್ ದೇವರಾಜ್ ಅವರ ನಡೆ ಹಾಗೂ ಚಿತ್ರತಂಡದ ವಿರುದ್ಧ ನಡೆಯುತ್ತಿರುವ ಪಿತೂರಿಗಳ ವಿರುದ್ಧ ಬಹಿರಂಗವಾಗಿ ಗುಡುಗಿದ್ದಾರೆ. "ನಮ್ಮ ಇಂಡಸ್ಟ್ರಿ ಯಾಕೆ ಉದ್ಧಾರ ಆಗಲ್ಲ ಅಂತ ಜನ ಕೇಳ್ತಾರಲ್ಲ, ಅದಕ್ಕೆ ನಮ್ಮಲ್ಲಿ ಸಹಯೋಗ ಮನೋಭಾವ ಇಲ್ಲದಿರುವುದೇ ಕಾರಣ ಎಂದು ಭಾವುಕರಾಗುತ್ತಲೇ ತೀಕ್ಷ್ಣವಾಗಿ ಆಕ್ರೋಶ ಹೊರಹಾಕಿದ್ದಾರೆ.
ಇತ್ತೀಚೆಗೆ ನಡೆದ ‘ಕರಾವಳಿ’ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಉಂಟಾದ ಗದ್ದಲ ಹಾಗೂ ಪ್ರಜ್ವಲ್ ದೇವರಾಜ್ ಅವರ ಮುನಿಸಿನ ಕುರಿತು ರಾಜ್ ಬಿ. ಶೆಟ್ಟಿ ಮಾಧ್ಯಮಗಳ ಮುಂದೆ ಅದೇ ಕಾರ್ಯಕ್ರಮದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಮನುಷ್ಯರಂತೆ ಮಾತನಾಡಿದರೆ ಮಾತ್ರ ನಾನೂ ಕೂತು ಚರ್ಚಿಸುತ್ತೇನೆ!
ಪ್ರಜ್ವಲ್ ದೇವರಾಜ್ ಅಸಮಾಧಾನದ ಕುರಿತು ಮಾತನಾಡಿದ ರಾಜ್, "ನನಗೆ ಯಾರ ಜೊತೆಯೂ ಪೈಪೋಟಿ ಇಲ್ಲ. ಅವರ ಮನಸ್ಸಿನಲ್ಲಿ ನನ್ನ ಮೇಲೆ ಏನಾದರೂ ಕೋಪ ಅಥವಾ ಮುನಿಸಿದ್ದರೆ, ನಾನು ಅವರ ಜೊತೆ ಕೂತು ಮಾತನಾಡಲು ಸಿದ್ಧನಿದ್ದೇನೆ. ಆದರೆ, ಅವರು ಮನುಷ್ಯರ ತರಹ ಬಂದು ಮಾತನಾಡಿದರೆ ಮಾತ್ರ ನಾನು ಚರ್ಚಿಸುತ್ತೇನೆ. ಎಲ್ಲದಕ್ಕಿಂತ ಮನುಷ್ಯತ್ವ ಮುಖ್ಯ. ಇಡೀ ಭಾರತವೇ ತಿರುಗಿ ನೋಡುವಂತಹ ಅದ್ಭುತ ಸಿನಿಮಾವನ್ನು ಕಷ್ಟಪಟ್ಟು ಮಾಡಿದ್ದೇವೆ. ಇಂತಹ ಸಮಯದಲ್ಲಿ ನಾವು ಇಂತಹ ಕ್ಷುಲ್ಲಕ ವಿಚಾರಗಳ ಬಗ್ಗೆ ಮಾತನಾಡುತ್ತಿರುವುದು ಅತ್ಯಂತ ಬೇಸರದ ಸಂಗತಿ" ಎಂದಿದ್ದಾರೆ.
ರಾಜ್ ಬಿ ಶೆಟ್ಟಿ ಚಿತ್ರಕ್ಕೆ ಬಂದಿದ್ದರಿಂದ ಪ್ರಜ್ವಲ್ ಮುನಿಸಿಕೊಂಡಿದ್ದಾರೆ ಎಂಬ ಗಾಂಧಿನಗರದ ಗಾಸಿಪ್‌ಗೆ ಉತ್ತರಿಸಿದ ರಾಜ್, "ಈ ಸಿನಿಮಾದಲ್ಲಿ ನಾನೊಂದು ಮುಖ್ಯವಾದ ಅತಿಥಿ ಪಾತ್ರ (Cameo) ಮಾಡುತ್ತಿದ್ದೇನಷ್ಟೇ. ಇದರ ಪೋಸ್ಟರ್, ಟೈಟಲ್ ಎಲ್ಲದರಲ್ಲೂ ಪ್ರಜ್ವಲ್ ಅವರ ಹೆಸರೇ ಮುಂಚೂಣಿಯಲ್ಲಿದೆ ಮತ್ತು ಅದು ನನಗೆ ಮೊದಲೇ ಗೊತ್ತಿತ್ತು. ನಾನು ಈ ಪಾತ್ರಕ್ಕೆ ನಿರ್ದೇಶಕರ ಮೊದಲ ಆಯ್ಕೆಯಾಗಿರಲಿಲ್ಲ. ನನಗಿಂತ ದೊಡ್ಡ ನಟರೊಬ್ಬರು ಈ ಪಾತ್ರ ಮಾಡಬೇಕಿತ್ತು, ಕಾರಣಾಂತರಗಳಿಂದ ಅವರು ಬರದೇ ಇದ್ದಾಗ ಕೊನೆಯಲ್ಲಿ ನಾನು ಬಂದೆ. ಇದು ಬರವಣಿಗೆಯಲ್ಲೇ ಇದ್ದ ಪಾತ್ರ, ಯಾರದ್ದೋ ಜಾಗ ಕಿತ್ತುಕೊಳ್ಳಲು ನಾನು ಬಂದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಸಿನಿಮಾ ನನಗಿಂತ ದೊಡ್ಡದು, ಕಟೌಟ್ ಸಂಸ್ಕೃತಿ ನನಗಿಲ್ಲ!
ತಮ್ಮ ಸಿನಿಪ್ರಯಾಣದ ಶಿಸ್ತನ್ನು ನೆನಪಿಸಿದ ರಾಜ್, "ನಾನು ಮೂಲತಃ ಒಬ್ಬ ತಂತ್ರಜ್ಞ (Technician). ಒಂಬತ್ತನೇ ಕ್ಲಾಸಿನಲ್ಲಿ ಕುಂದಾಪುರದಿಂದ ಮನೆ ಬಿಟ್ಟು ಓಡಿಬಂದ ಹುಡುಗ ಇವತ್ತು ಇಷ್ಟು ದೊಡ್ಡ ಸಿನಿಮಾ ಮಾಡಿದ್ದಾನೆಂದರೆ ಅದರ ಹಿಂದೆ ಎಷ್ಟು ಶ್ರಮವಿದೆ ಎಂದು ನನಗೆ ಗೊತ್ತು. ಸಿನಿಮಾ ಎನ್ನುವುದು ನನಗಿಂತ ತುಂಬಾ ದೊಡ್ಡದು. ನನ್ನ ಹೆಸರು ಪೋಸ್ಟರ್‌ನಲ್ಲಿ ಹಾಕದಿದ್ದರೂ ಯಾರೂ ನನ್ನ ಸಿನಿಮಾ ನೋಡಲು ಬರಲ್ಲ ಅಂತ ನಾನು ಗ್ಯಾರೆಂಟಿ ಕೊಡಬಲ್ಲೆ. ನಾನು ಈ ಹಿಂದೆ ಖಳನಾಯಕನಾಗಿ, ಕಾಮಿಡಿ ಪಾತ್ರದಲ್ಲೂ ನಟಿಸಿದ್ದೇನೆ. ಎಲ್ಲೂ ನನ್ನ ಕಟೌಟ್ ಹಾಕಿ ಅಂತಾಗಲಿ, ಪೋಸ್ಟರ್‌ನಲ್ಲಿ ಹೆಸರು ದೊಡ್ಡದಾಗಿ ಹಾಕಿ ಅಂತಾಗಲಿ ಕೇಳಿಲ್ಲ, ಕೇಳುವುದೂ ಇಲ್ಲ. ಹಾಗೇನಾದರೂ ನಾನು ಮಾಡಿದರೆ ಅಂದೇ ಚಿತ್ರರಂಗ ಬಿಡುತ್ತೇನೆ" ಎಂದು ಕಟುವಾಗಿ ನುಡಿದಿದ್ದಾರೆ.
ಪ್ರಜ್ವಲ್ ದೊಡ್ಡ ಸ್ಟಾರ್ ಆಗಲಿ, ನನಗೆ ಖುಷಿಯೇ!
ಚಿತ್ರದ ಇತರ ಸಹನಟರಾದ ಮಿತ್ರ ಹಾಗೂ ಶ್ರೀಧರ್ ಅವರ ಶ್ರಮವನ್ನು ಕೊಂಡಾಡಿದ ರಾಜ್, "ಮಿತ್ರ ಸರ್, ಶ್ರೀಧರ್ ಸರ್ ಅವರಂತಹ ಅದ್ಭುತ ಕಲಾವಿದರು ಪೋಸ್ಟರ್‌ನಲ್ಲಿ ತಮ್ಮ ಹೆಸರಿಲ್ಲ ಎಂದು ಎಂದಾದರೂ ಗಲಾಟೆ ಮಾಡಿದ್ದಾರೆಯೇ? ಅವರಿಗಿಂತ ದೊಡ್ಡ ನಟನಾ ನಾನು? ಈ ಸಿನಿಮಾದ ಮೂಲಕ ಪ್ರಜ್ವಲ್ ದೇವರಾಜ್ ಅವರಿಗೆ ಅತಿ ದೊಡ್ಡ ಹೆಸರು ಬಂದರೆ ಎಲ್ಲರಿಗಿಂತ ಹೆಚ್ಚು ಖುಷಿ ಪಡುವವನು ನಾನು. ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ದೊಡ್ಡ ಸ್ಟಾರ್ ಸಿಗಲಿ. ಹಾಗೆಯೇ ಮಿತ್ರ ಸರ್ ಅವರಂತಹ ಕಲಾವಿದರಿಗೆ ಗೌರವ ಸಿಗಲಿ. ಕರಾವಳಿ ಸಿನಿಮಾದ ಗುಣಮಟ್ಟ (Quality) ನೋಡಿ ಮಾತನಾಡಿ, ಅಹಂಕಾರ, ಜಗಳಗಳನ್ನು ಬಿಟ್ಟುಬಿಡಿ" ಎಂದು ಚಿತ್ರರಂಗದ ಮನಸ್ಥಿತಿಗೆ ರಾಜ್ ಬಿ. ಶೆಟ್ಟಿ ಕನ್ನಡಿ ಹಿಡಿದಿದ್ದಾರೆ.


