ಇಂಡಿಯಾ ಟಿ.ವಿ.ಯ 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ನಟ ಯಶ್ ಭಾಗವಹಿಸಿದ್ದರು. 700 ಅಭಿಮಾನಿಗಳೊಂದಿಗೆ ಫೋಟೋ ತೆಗೆಸಿಕೊಂಡಿದ್ದರ ಬಗ್ಗೆ ಮಾತನಾಡಿದ ಅವರು, ಶೋ ಮುಗಿದ ನಂತರ ಅಲ್ಲಿದ್ದ ಪ್ರತಿಯೊಬ್ಬ ಅಭಿಮಾನಿಯೊಂದಿಗೂ ಫೋಟೋ ತೆಗೆಸಿಕೊಂಡು ಹೊಸ ದಾಖಲೆ ಬರೆದರು, ಇದು ನಿರೂಪಕ ರಜತ್ ಶರ್ಮಾ ಅವರನ್ನೂ ಬೆರಗುಗೊಳಿಸಿತು.
ಇಂಡಿಯಾ ಟಿ.ವಿ. ನಡೆಸಿಕೊಡುವ ಸುಪ್ರಸಿದ್ಧ ಷೋ, ಆಪ್ ಕಿ ಅದಾಲತ್. ಪತ್ರಕರ್ತ ರಜತ್ ಶರ್ಮಾ ಅವರು 1992ರಿಂದ ಈ ಷೋ ನಡೆಸಿಕೊಡುತ್ತಿದ್ದಾರೆ. ಹಾಟ್ ಸೀಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ 800ಕ್ಕೂ ಅಧಿಕ ಗಣ್ಯರು ಈ ಷೋನ ಭಾಗವಾಗಿದ್ದಾರೆ. ಕೋರ್ಟ್ ರೀತಿಯಲ್ಲಿಯೇ ಈ ಷೋ ನಡೆಸಲಾಗುತ್ತದೆ. ರಜತ್ ಶರ್ಮಾ ಅವರು, ಅಲ್ಲಿ ಕುಳಿತ ಗಣ್ಯರ ವಿರುದ್ಧ ಇರುವ ಕೆಲವೊಂದು ಆರೋಪಗಳ ಬಗ್ಗೆ ತಿಳಿಸುತ್ತಾರೆ. ಅದಕ್ಕೆ ಥಟ್ ಎಂದು ಸೆಲೆಬ್ರಿಟಿಗಳು ಉತ್ತರಿಸಬೇಕಾಗುತ್ತದೆ. ಎಲ್ಲವೂ ಆದ ಬಳಿಕ, ಅಲ್ಲಿಯೇ ಇರುವ ಜಡ್ಜ್ ಅಂತಿಮ ತೀರ್ಪು ಕೊಡುತ್ತಾರೆ. ಇಂಥ ಷೋನಲ್ಲಿ ಯಶ್ ಅವರು ತಮ್ಮ ಬದುಕಿನ ಪಯಣಗಳ ಕುರಿತು ಮಾತನಾಡಿದ್ದಾರೆ.
700ಕ್ಕೂ ಹೆಚ್ಚು ಫೋಟೋಸ್
ಇದರ ಷೋನಲ್ಲಿ ರಜತ್ ಶರ್ಮಾ ಅವರು, ಯಶ್ ಅವರು ಹಿಂದೊಮ್ಮೆ 700 ಅಭಿಮಾನಿಗಳ ಜೊತೆ ನಿಂತು ಪ್ರತ್ಯೇಕವಾಗಿ ಫೋಟೋ ತೆಗೆಸಿಕೊಂಡಿರುವ ಬಗ್ಗೆ ಪ್ರಶ್ನಿಸಿದ್ದರು. ಅಂದಹಾಗೆ ಈ ಘಟನೆ ನಡೆದದ್ದು 2022ರಲ್ಲಿ. ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಹೋಗಿದ್ದ ಯಶ್ ಅವರು, 1 ಗಂಟೆಗೂ ಅಧಿಕ ಕಾಲ ನಿಂತುಕೊಂಡು, ತಮಗಾಗಿ ಕಾಯುತ್ತಿದ್ದ 700ಕ್ಕೂ ಅಧಿಕ ಫ್ಯಾನ್ಸ್ ಜೊತೆ ಪ್ರತ್ಯೇಕವಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಅದರ ಬಗ್ಗೆ ರಜತ್ ಶರ್ಮಾ ಅವರು ಪ್ರಶ್ನೆ ಕೇಳಿದಾಗ, ಯಶ್, ಹೌದು. ಇದು ನನಗೆ ಚಿಕ್ಕ ವಿಷಯ ಎನ್ನಿಸಬಹುದು. ಆದರೆ, ನನ್ನ ಜೊತೆ ಫೋಟೋ ತೆಗೆಸಿಕೊಂಡಿರುವ ಆ ಅಭಿಮಾನಿಗೆ ಅದು ಜೀವನಪರ್ಯಂತದ ನನಸಾಗಿರುತ್ತದೆ ಎಂದರು.
ಗ್ರೂಪ್ನಲ್ಲಿ ಫೋಟೋ ತೆಗೆಸಿಕೊಂಡರೆ ಯಾರು ಎಲ್ಲಿದ್ದಾರೆ ತಿಳಿಯುವುದಿಲ್ಲ. ಆದ್ದರಿಂದ ಸಿಂಗಲ್ ಆಗಿ ತೆಗೆಸಿಕೊಳ್ಳುವೆ ಎಂದರು. ಆಗ ಸಭಿಕರ ಪೈಕಿ ಒಬ್ಬಾಕೆ, ಈಗಲೂ ಫೋಟೋ ತೆಗೆಸಿಕೊಳ್ಳಬಹುದಾ ಕೇಳಿದಾಗ, ಯಶ್ ಶ್ಯುವರ್ ಎಂದರು. ಷೋನ ಕೊನೆಯಲ್ಲಿ ಪ್ರತಿಯೊಬ್ಬರ ಆಸೆಯನ್ನೂ ಈಡೇರಿಸಿದರು. ನಡುವೆ, ರಜತ್ ಶರ್ಮಾ ಅವರು, ತುಂಬಾ ಟೈಂ ಆಗಬಹುದು ಎಂದು ಎಚ್ಚರಿಸಿದರೂ, ಯಶ್ ಅವರು ಮಾತನ್ನು ಉಳಿಸಿಕೊಂಡರು.
ದಾಖಲೆ ಬರೆದ ಯಶ್
ಇವೆಲ್ಲಾ ಷೋಮುಗಿದ ಬಳಿಕ ರಜತ್ ಶರ್ಮಾ ಅವರು, ಇಷ್ಟು ವರ್ಷಗಳ ನನ್ನ ಪಯಣದಲ್ಲಿ, ಹೀಗೆ ಪ್ರತಿಯೊಬ್ಬ ಅಭಿಮಾನಿಯ ಆಸೆಯನ್ನು ಈಡೇರಿಸಿ, ಫೋಟೋ ಕ್ಲಿಕ್ಕಿಸಿಕೊಂಡ ಮೊದಲ ಸೆಲೆಬ್ರಿಟಿಯನ್ನು ನಾನು ನೋಡುತ್ತಿದ್ದೇನೆ ಎಂದರು. ಕುತೂಹಲದ ವಿಷಯವೆಂದರೆ 1992ರಲ್ಲಿ ಈ ಷೋ ಶುರುವಾದಾಗಿನಿಂತಲೂ ಕಾರ್ಯಕ್ರಮವನ್ನು ರಜತ್ ಶರ್ಮಾ ಅವರೇ ನಡೆಸಿಕೊಡುತ್ತಿದ್ದು, ಅಲ್ಲಿಂದ ಇಲ್ಲಿಯವರೆಗೂ ಇಂಥ ಸೆಲೆಬ್ರಿಟಿ ನೋಡಿಲ್ಲ ಎಂದು, ಯಶ್ ಅವರು ಈ ಷೋನ ದಾಖಲೆ ಮುರಿದಿದ್ದಾರೆ ಎಂದು ಪರೋಕ್ಷವಾಗಿ ತಿಳಿಸಿದರು.


