ಒಂದೇ ಸಿನಿಮಾದ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿರುವ ರಾಮಿಕಾ ಶಿವು ಅವರ ಮುಂದಿನ ಹೆಜ್ಜೆಗಳ ಬಗ್ಗೆ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ‘ಜಡೆ ಹುಡುಗಿ’ಯಾಗಿ ಪ್ರೇಕ್ಷಕರ ಮನಸ್ಸು ಗೆದ್ದಿರುವ ಈ ನಟಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಪಾತ್ರಗಳ ಮೂಲಕ ಮೋಡಿ ಮಾಡಲಿದ್ದಾರೆ? ಸೀಕ್ರೆಟ್ ಇಲ್ಲಿದೆ ನೋಡಿ..
Premada Oorali actress Ramika Shivu Statement Viral; ‘ಪ್ರೇಮದ ಊರಲಿ’ ಮೂಲಕ ಸ್ಯಾಂಡಲ್ವುಡ್ನಲ್ಲಿ ಮಿಂಚಿರುವ ರಮಿಕಾ ಶಿವು ಸೀಕ್ರೆಟ್!
ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳ ಆಗಮನ ನಿರಂತರವಾಗಿ ನಡೆಯುತ್ತಿರುತ್ತದೆ. ಆದರೆ ಕೆಲವರು ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದುಕೊಳ್ಳುತ್ತಾರೆ. ಅಂತಹ ನಟಿಯರ ಸಾಲಿಗೆ ಇದೀಗ ರಾಮಿಕಾ ಶಿವು ಕೂಡ ಸೇರಿದ್ದಾರೆ. ‘ಪ್ರೇಮದ ಊರಲಿ’ ಸಿನಿಮಾದಲ್ಲಿ ವಸಂತಾ ಪಾತ್ರದ ಮೂಲಕ ಕನ್ನಡ ಸಿನಿಪ್ರಿಯರ ಗಮನ ಸೆಳೆದಿರುವ ಅವರು, ಸದ್ಯ ಸ್ಯಾಂಡಲ್ವುಡ್ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಮೊದಲ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ರಾಮಿಕಾ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದ್ದು, ಹೊಸ ಸಿನಿಮಾಗಳ ಅವಕಾಶಗಳೂ ಹುಡುಕಿಕೊಂಡು ಬರುತ್ತಿವೆ.

ವಸಂತಾ ಪಾತ್ರದಿಂದ ಮನೆಮಾತಾದ ಜಡೆ ಹುಡುಗಿ!
ಸೆಪ್ಟೆಂಬರ್ 25, 2026ರಂದು ಬಿಡುಗಡೆಯಾದ ನಿರ್ದೇಶಕ ಮನೋಜ್ ಕುಮಾರ್ ಅವರ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಯಶಸ್ಸು ಕಂಡಿದೆ. ದೊಡ್ಡ ಮಟ್ಟದ ಪ್ರಚಾರ ಅಥವಾ ಅದ್ದೂರಿ ಬಜೆಟ್ ಇಲ್ಲದಿದ್ದರೂ, ಹಳ್ಳಿಯ ಪರಿಸರದಲ್ಲಿ ನಡೆಯುವ ಪ್ರೇಮಕಥೆ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಈ ಸಿನಿಮಾದಲ್ಲಿ ವಸಂತಾ ಪಾತ್ರದಲ್ಲಿ ಕಾಣಿಸಿಕೊಂಡ ರಾಮಿಕಾ ಶಿವು ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ.
ವಿಶೇಷವಾಗಿ ವಸಂತಾ ಪಾತ್ರದ ವಿಭಿನ್ನ ಆಯಾಮಗಳನ್ನು ರಾಮಿಕಾ ನಿಭಾಯಿಸಿರುವ ರೀತಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾದಲ್ಲಿ ನಾಲ್ಕು ವಿಭಿನ್ನ ಶೇಡ್ಗಳಲ್ಲಿ ಕಾಣಿಸಿಕೊಂಡಿರುವ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಉದ್ದನೆಯ ಜಡೆಯೊಂದಿಗೆ ಕಾಣಿಸಿಕೊಂಡಿದ್ದರಿಂದ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ‘ಜಡೆ ಹುಡುಗಿ’ ಎಂದೇ ಕರೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಅವರ ಪಾತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಬಿಗ್ಬಾಸ್ ಕನ್ನಡ ಆಫರ್ ಬಂದರೆ?
ಸಿನಿಮಾ ಯಶಸ್ಸಿನ ಬಳಿಕ ಜನಪ್ರಿಯತೆ ಹೆಚ್ಚಾದಾಗ ಕಿರುತೆರೆ ಮತ್ತು ರಿಯಾಲಿಟಿ ಶೋಗಳ ಅವಕಾಶಗಳು ಬರುವುದು ಸಹಜ. ರಾಮಿಕಾ ಶಿವು ಅವರಿಗೂ ಬಿಗ್ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಬಂದರೆ ಏನ್ ಮಾಡ್ತಾರೆ? ಇಲ್ಲಿದೆ ನೋಡಿ ಉತ್ತರ!
'ನಾನು ಖಂಡಿತ ಬಿಗ್ಬಾಸ್ಗೆ ಹೋಗುವುದಿಲ್ಲ. ಆಫರ್ ಕೊಟ್ಟರೂ ಹೋಗುವುದಿಲ್ಲ'- ರಮಿಕಾ ಶಿವು
ಬಿಗ್ ಬಾಸ್ ಆಫರ್ ತಿರಸ್ಕರಿಸಲು ನಿರ್ಧರಿಸಿದ್ದೇಕೆ?
"ನಿಜ ಹೇಳಬೇಕೆಂದರೆ.. ನನಗೆ ಸಿಟ್ಟು ಸ್ವಲ್ಪ ಜಾಸ್ತಿ. ಅಲ್ಲಿರುವ ವಿಭಿನ್ನ ಕ್ಯಾರೆಕ್ಟರ್ ಜನರ ಜೊತೆಗೆ ದಿನಪೂರ್ತಿ ಗಲಾಟೆ, ಕಿರುಚಾಟ ಮಾಡುತ್ತಾ ಇರುವುದು ನನಗೆ ತುಂಬಾನೇ ಕಿರಿಕಿರಿಯಾಗುತ್ತದೆ. ಸಹಿಸಿಕೊಳ್ಳುವಷ್ಟು ಸಹಿಸಿಕೊಳ್ಳುತ್ತೇನೆ. ಆಮೇಲೆ ಅಲ್ಲಿ ಕ್ಯಾಮೆರಾ ಇದೆ ಎನ್ನುವುದನ್ನು ಮರೆತು ಎದುರಿಗೆ ಯಾರೇ ಇದ್ದರೂ ರೇಗಾಡುತ್ತೇನೆ. ಅದಕ್ಕಾಗಿ ಅಂಥ ಶೋ ನನಗೆ ಆಗಿ ಬರುವುದಿಲ್ಲ. ಒಂದು ವೇಳೆ ನಾನು ಆ ಶೋಗೆ ಹೋದರೂ ಖಂಡತಿ ನನ್ನನ್ನು ಆದಷ್ಟೂ ಬೇಗ ಹೊರಕ್ಕೆ ಹಾಕುತ್ತಾರೆ' ಎಂದು ರಾಮಿಕಾ ಹೇಳಿದ್ದಾರೆ. ಹೀಗಾಗಿ ರಿಯಾಲಿಟಿ ಶೋಗಿಂತ ಸಿನಿಮಾಗಳತ್ತ ಹೆಚ್ಚಿನ ಗಮನ ಹರಿಸಲು ಅವರು ನಿರ್ಧರಿಸಿದ್ದಾರೆ.
ಯಶ್, ರಾಧಿಕಾ ಪಂಡಿತ್ ಭೇಟಿಯಾದ ರಾಮಿಕಾ!
‘ಪ್ರೇಮದ ಊರಲಿ’ ಯಶಸ್ಸಿನ ನಂತರ ರಾಮಿಕಾ ಅವರ ಬೇಡಿಕೆ ಹೆಚ್ಚಾಗಿದೆ. ಹಲವು ಹೊಸ ಸಿನಿಮಾಗಳ ಕಥೆಗಳು ಮತ್ತು ಪಾತ್ರಗಳ ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ ಕೈಗೆ ಬಂದ ಎಲ್ಲ ಅವಕಾಶಗಳನ್ನೂ ಒಪ್ಪಿಕೊಳ್ಳುವ ಬದಲು, ವಿಭಿನ್ನತೆ ಹೊಂದಿರುವ ಮತ್ತು ಅಭಿನಯಕ್ಕೆ ಹೆಚ್ಚಿನ ಅವಕಾಶವಿರುವ ಗಟ್ಟಿಯಾದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಅವರು ಬಯಸುತ್ತಿದ್ದಾರೆ.
ಇತ್ತೀಚೆಗೆ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರನ್ನು ಭೇಟಿಯಾಗಿರುವುದೂ ಗಮನ ಸೆಳೆದಿದೆ. ಈ ಭೇಟಿಯ ಫೋಟೋಗಳು ಮತ್ತು ವಿಚಾರಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ.
ಕಿರುತೆರೆಯಿಂದ ಹಿರಿತೆರೆಗೆ ಬಂದ ಪ್ರತಿಭೆ
ರಾಮಿಕಾ ಶಿವು ಅವರಿಗೆ ನಟನೆ ಹೊಸತಲ್ಲ. ಸಿನಿಮಾ ನಾಯಕಿಯಾಗಿ ಗುರುತಿಸಿಕೊಳ್ಳುವ ಮುನ್ನವೇ ಅವರು ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರು. ‘ಪಾರು’ ಮತ್ತು ‘ನೀನಾದೆ ನಾ’ ಸೇರಿದಂತೆ ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾಗಿದ್ದರು. ಇದೀಗ ಹಿರಿತೆರೆಯಲ್ಲೂ ತಮ್ಮ ಪ್ರತಿಭೆ ಸಾಬೀತುಪಡಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಅಂದಹಾಗೆ, ಒಂದೇ ಸಿನಿಮಾದ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿರುವ ರಾಮಿಕಾ ಶಿವು ಅವರ ಮುಂದಿನ ಹೆಜ್ಜೆಗಳ ಬಗ್ಗೆ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ‘ಜಡೆ ಹುಡುಗಿ’ಯಾಗಿ ಪ್ರೇಕ್ಷಕರ ಮನಸ್ಸು ಗೆದ್ದಿರುವ ಈ ನಟಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಪಾತ್ರಗಳ ಮೂಲಕ ಮೋಡಿ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಈ ನಟಿಗೆ ಬಹಳಷ್ಟು ಸಿನಿಮಾ ಚಾನ್ಸ್ಗಳು ಬರುತ್ತಿದ್ದು, ಅಳೆದೂ ತೂಗಿ ಕಥೆ ಹಾಗೂ ಪಾತ್ರಗಳ ಆಯ್ಕೆ ಮಾಡಿಕೊಳ್ಳುವ ನಿರ್ಧಾರದಲ್ಲಿದ್ದಾರೆ ಎನ್ನಲಾಗಿದೆ.














