'ಪ್ರೇಮದ ಊರಲಿ' ಚಿತ್ರ ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಹೀಗಾಗಿ ಒಟಿಟಿ ಬಿಡುಗಡೆ ಕುರಿತು ಪ್ರೇಕ್ಷಕರಲ್ಲಿ ಕುತೂಹಲವಿದೆ. ಈ ಹಿಂದೆ ಡಿಜಿಟಲ್ ಬಿಡುಗಡೆಯ ಬಗ್ಗೆ ವದಂತಿಗಳು ಹರಿದಾಡಿದ್ದವು. ಆದರೆ ನಾಯಕ ನಟ ಶ್ರೀರಾಮ್, ‘ಚಿತ್ರವನ್ನು ಯಾವುದೇ ಒಟಿಟಿ ವೇದಿಕೆಗೆ ಇನ್ನೂ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಮುಂದೆ?
50 ದಿನಗಳ ಸಂಭ್ರಮದ ಬಳಿಕ ‘ಪ್ರೇಮದ ಊರಲಿ’ ಟೀಮ್ ಹೊಸ ಸಾಹಸ!
2026ರ ಸೂಪರ್ಹಿಟ್ ಚಿತ್ರಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ‘ಪ್ರೇಮದ ಊರಲಿ’ ಸಿನಿಮಾ (Premada Oorali) ಇದೀಗ 50 ದಿನಗಳ ಸಂಭ್ರಮದತ್ತ ಹೆಜ್ಜೆ ಹಾಕುತ್ತಿದೆ. ಸೆಪ್ಟೆಂಬರ್ 25ರಂದು ತೆರೆಕಂಡ ಈ ಚಿತ್ರ ಆರಂಭದಲ್ಲಿ ಭರ್ಜರಿ ಪ್ರಚಾರದ ಮೂಲಕ ಗಮನ ಸೆಳೆದಿತ್ತು. ಆದರೆ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಆರಂಭವಾದ ಬಳಿಕ ಪ್ರೇಕ್ಷಕರಿಂದ ಸಿಕ್ಕ ಮೆಚ್ಚುಗೆಯೇ ಚಿತ್ರಕ್ಕೆ ದೊಡ್ಡ ಬಲವಾಯಿತು. ಬಾಯಿ ಮಾತಿನ ಪ್ರಚಾರದ ಮೂಲಕ ಜನರನ್ನು ತಲುಪಿದ ಈ ಪ್ರೇಮಕಥೆ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಅದಕ್ಕೆ ಕಾರಣ, ಚಿತ್ರದ ಹೃದಯಸ್ಪರ್ಶಿ ಹಾಡು ‘ಪ್ರೀತಿ ಬೇಡಿತು ಹೃದಯ’ದ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ.

ವಸಂತಳ ನೋವಿಗೆ ಸಂಗೀತದ ಸ್ಪರ್ಶ
‘ಪ್ರೀತಿ ಬೇಡಿತು ಹೃದಯ’ ಹಾಡು ಚಿತ್ರದ ಕಥೆಯಲ್ಲಿ ಭಾವನಾತ್ಮಕ ತಿರುವು ನೀಡುವ ಪ್ರಮುಖ ಭಾಗವಾಗಿದೆ. ವಸಂತಳ ಹೃದಯ ಒಡೆದು ನೋವಿನಲ್ಲಿ ಮುಳುಗುವ ಸಂದರ್ಭ ಈ ಹಾಡು ತೆರೆಮೇಲೆ ಮೂಡಿಬರುತ್ತದೆ. ಹೀಗಾಗಿ ಚಿತ್ರತಂಡ ಈ ಹಾಡನ್ನು ಮೊದಲೇ ಪ್ರತ್ಯೇಕವಾಗಿ ಬಿಡುಗಡೆ ಮಾಡಿರಲಿಲ್ಲ. ಸಿನಿಮಾ ನೋಡಿದ ಪ್ರೇಕ್ಷಕರು ಈಗಾಗಲೇ ಈ ಹಾಡಿನ ಭಾವನೆಯನ್ನು ಅನುಭವಿಸಿದ್ದಾರೆ. ಇದೀಗ ಚಿತ್ರದ 50 ದಿನಗಳ ಸಂಭ್ರಮದ ಹೊತ್ತಿನಲ್ಲಿ ಲಿರಿಕಲ್ ವಿಡಿಯೋ ಹೊರಬಂದಿದ್ದು, ಅಭಿಮಾನಿಗಳಿಗೆ ಮತ್ತೊಮ್ಮೆ ಆ ನೆನಪುಗಳನ್ನು ಮೆಲುಕು ಹಾಕುವ ಅವಕಾಶ ಸಿಕ್ಕಿದೆ.
ವಿಡಿಯೋದಲ್ಲಿ ವಸಂತ ಮತ್ತು ಸಂತೋಷ ಪಾತ್ರಗಳ ಫೋಟೋಗಳು ಇವೆ. “ಪ್ರೀತಿ ಬೇಡಿತು ಹೃದಯ, ಪಡೆದಿದೆ ಮರೆಯದ ಉಡುಗೊರೆ” ಎಂಬ ಸಾಲುಗಳು ಪ್ರೀತಿಯ ಮಧುರತೆ ಹಾಗೂ ಅದರ ನೋವನ್ನು ಒಟ್ಟಿಗೆ ಕಟ್ಟಿಕೊಡುತ್ತವೆ. ಜೀವ ಇರುವವರೆಗೂ ಪ್ರೀತಿಯ ಸಂಭ್ರಮವನ್ನು ನೆನಪಿಸುವ ಈ ಹಾಡು ಕೇಳುಗರ ಮನಸ್ಸಿಗೆ ತಟ್ಟುವಂತಿದೆ.

ಹಾಡು ಹೀಗಿದೆ:-
ಪ್ರೀತಿ ಬೇಡಿತು ಹೃದಯ
ಪಡೆದಿದೆ ಮರೆಯದ ಉಡುಗೊರೆ
ಸಂಭ್ರಮಿಸು ಈ ಸಂಭ್ರಮವ
ಜೀವಕೆ ಉಸಿರಿರೊವರೆಗೂ
ಸುನಾದ್ ಗೌತಮ್ ಸಂಗೀತಕ್ಕೆ ಮೆಚ್ಚುಗೆ
‘ಪ್ರೇಮದ ಊರಲಿ’ ಚಿತ್ರದ ಯಶಸ್ಸಿನಲ್ಲಿ ಸಂಗೀತದ ಕೊಡುಗೆಯೂ ಗಮನಾರ್ಹವಾಗಿದೆ. ಸಂಗೀತ ನಿರ್ದೇಶಕ ಸುನಾದ್ ಗೌತಮ್ ಈ ಹಾಡಿಗೆ ಮನಮಿಡಿಯುವ ಸಂಗೀತ ಸಂಯೋಜನೆ ನೀಡಿದ್ದಾರೆ. ನವೀನ್ ವಿಶಾರದ ಮತ್ತು ನಿನಾದ ನಾಯಕ್ ತಮ್ಮ ಧ್ವನಿಯಲ್ಲಿ ಹಾಡಿಗೆ ಜೀವ ತುಂಬಿದ್ದಾರೆ. ನಿರ್ದೇಶಕ ಮನೋಜ್ ಕುಮಾರ್ ಅವರೇ ಹಾಡಿನ ಸಾಹಿತ್ಯವನ್ನೂ ರಚಿಸಿರುವುದು ವಿಶೇಷ.

ಒಟಿಟಿ ಬಿಡುಗಡೆಗೆ ಯಾವಾಗ?
ಚಿತ್ರ ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವುದರಿಂದ ಒಟಿಟಿ ಬಿಡುಗಡೆ ಕುರಿತು ಪ್ರೇಕ್ಷಕರಲ್ಲಿ ಕುತೂಹಲವಿದೆ. ಈ ಹಿಂದೆ ಡಿಜಿಟಲ್ ಬಿಡುಗಡೆಯ ಬಗ್ಗೆ ವದಂತಿಗಳು ಹರಿದಾಡಿದ್ದವು. ಆದರೆ ನಾಯಕ ನಟ ಶ್ರೀರಾಮ್, ಚಿತ್ರವನ್ನು ಯಾವುದೇ ಒಟಿಟಿ ವೇದಿಕೆಗೆ ಇನ್ನೂ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಪ್ರೇಕ್ಷಕರು ಚಿತ್ರಮಂದಿರಗಳಲ್ಲೇ ಸಿನಿಮಾ ವೀಕ್ಷಿಸಬೇಕು ಎಂಬುದು ತಂಡದ ಆಶಯವಾಗಿದೆ. ಇದೀಗ ಹೊಸ ಹಾಡಿನ ಬಿಡುಗಡೆಯೊಂದಿಗೆ ‘ಪ್ರೇಮದ ಊರಲಿ’ ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆದಿದೆ.














