ರಾಕಿಂಗ್ ಸ್ಟಾರ್ ಯಶ್ ಅವರ ಮುಂಬರುವ 'ಟಾಕ್ಸಿಕ್' ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿನ 'ನಮ್ಮ ಮೆಟ್ರೋ' ರೈಲನ್ನು ಬಳಸಿಕೊಳ್ಳಲಾಗಿದೆ. ಮೆಟ್ರೋ ಬೋಗಿಗಳ ಮೇಲೆ ಸಿನಿಮಾದ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ವಿಭಿನ್ನ ಪ್ರಚಾರಕ್ಕೆ ಚಿತ್ರತಂಡ ಮುಂದಾಗಿದ್ದು, ಈ ಸಿನಿಮಾ ಆಗಸ್ಟ್ 26 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ.

ಬೆಂಗಳೂರು (ಆ.12): ಕೆಜಿಎಫ್ (KGF) ಸರಣಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ಗಡಿಯನ್ನು ದಾಟಿ ಜಾಗತಿಕ ಮಟ್ಟದಲ್ಲಿ ಸ್ಯಾಂಡಲ್‌ವುಡ್ ಕೀರ್ತಿ ಪತಾಕೆ ಹಾರಿಸಿದ ರಾಕಿಂಗ್ ಸ್ಟಾರ್ ಯಶ್, ಇದೀಗ ತಮ್ಮ ಮುಂಬರುವ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಸಿನಿಮಾದ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ಅಚ್ಚರಿಗೊಳಿಸಲು ಸಜ್ಜಾಗಿದ್ದಾರೆ. ಸಿನಿಮಾ ನಿರ್ಮಾಣ ಮಾತ್ರವಲ್ಲದೆ, ಪ್ರಚಾರದ ವಿಷಯದಲ್ಲೂ ಭಾರತೀಯ ಚಿತ್ರರಂಗದಲ್ಲೇ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಯಶ್, ಇದೀಗ ಬೆಂಗಳೂರಿನ ಜೀವನಾಡಿ 'ನಮ್ಮ ಮೆಟ್ರೋ' ರೈಲನ್ನೇ ತಮ್ಮ ಪ್ರಚಾರದ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ.

ನಮ್ಮ ಮೆಟ್ರೋ ಮೇಲೆ 'ಟಾಕ್ಸಿಕ್' ಪೋಸ್ಟರ್ ಅಬ್ಬರ:

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 11 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚಾರ ನಡೆಸುವ 'ನಮ್ಮ ಮೆಟ್ರೋ' ರೈಲಿನ ಬೋಗಿಗಳ ಮೇಲೆ 'ಟಾಕ್ಸಿಕ್' ಸಿನಿಮಾದ ಭರ್ಜರಿ ಪೋಸ್ಟರ್‌ಗಳನ್ನು ಹಾಕಲಾಗಿದೆ. ರೈಲಿನ ಇಡೀ ಹೊರಭಾಗದಲ್ಲಿ ಯಶ್ ಅವರ ಕೈಯಲ್ಲಿ ಗನ್ ಹಿಡಿದಿರುವ ಮಾಸ್ ಹಾಗೂ ಸ್ಟೈಲಿಶ್ ಲುಕ್‌ನ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಮೆಟ್ರೋ ಸಂಚರಿಸುವ ಮಾರ್ಗದುದ್ದಕ್ಕೂ ಲಕ್ಷಾಂತರ ಜನರ ಕಣ್ಣಿಗೆ ಈ ಪೋಸ್ಟರ್‌ಗಳು ಬೀಳುತ್ತಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ದುಪ್ಪಟ್ಟುಗೊಳಿಸಿವೆ.

ಜಾಗತಿಕ ಮಟ್ಟದಲ್ಲಿ ಪ್ರಚಾರದ ಕಸರತ್ತು:

ಯಶ್ ಕೇವಲ ಸ್ಯಾಂಡಲ್‌ವುಡ್ ಅಥವಾ ಬಾಲಿವುಡ್ ಮಟ್ಟಕ್ಕೆ ಸೀಮಿತವಾಗದೆ, ಹಾಲಿವುಡ್ ಪ್ರೇಕ್ಷಕರನ್ನೂ ತಲುಪುವ ಬೃಹತ್ ಯೋಜನೆ ಹಾಕಿಕೊಂಡಿದ್ದಾರೆ. ಹಿಂದೆಂದೂ ಕಾಣದ ವಿಭಿನ್ನ ಪ್ರಮೋಷನ್ ಶೈಲಿಯ ಮೂಲಕ ಇಡೀ ಭಾರತೀಯ ಚಿತ್ರರಂಗವೇ ತಮ್ಮತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಒಮ್ಮೆ ಸ್ಯಾಂಡಲ್‌ವುಡ್ ಎಂದರೆ ಮೂಗು ಮುರಿಯುತ್ತಿದ್ದ ದೇಶದ ಪ್ರಮುಖ ಚಿತ್ರರಂಗಗಳ ಖ್ಯಾತ ನಟ-ನಟಿಯರು ಹಾಗೂ ತಂತ್ರಜ್ಞರು ಇಂದು ಯಶ್ ಸಿನಿಮಾಗಳ ಭಾಗವಾಗಲು ಮತ್ತು ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸುತ್ತಿರುವುದು ಕನ್ನಡ ಚಿತ್ರರಂಗದ ಹೆಮ್ಮೆಯ ವಿಷಯವಾಗಿದೆ.

ಈಗಾಗಲೇ 'ಟಾಕ್ಸಿಕ್' ಸಿನಿಮಾದ ಟ್ರೇಲರ್ ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಅತ್ಯಂತ ಅದ್ಧೂರಿಯಾಗಿ ನೆರವೇರಿಸಲಾಗಿತ್ತು. ದೇಶ-ವಿದೇಶಗಳ ಮಾಧ್ಯಮಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದವು.

ಆಗಸ್ಟ್ 26ಕ್ಕೆ ಬೆಳ್ಳಿಪರದೆಗೆ ಅಪ್ಪಳಿಸಲಿದೆ 'ಟಾಕ್ಸಿಕ್':

ಆರಂಭದಲ್ಲಿ ಈ ಸಿನಿಮಾವನ್ನು ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿತ್ತು. ಆದರೆ, ಇರಾನ್ ಮತ್ತು ಅಮೆರಿಕ ನಡುವಿನ ಅಂತಾರಾಷ್ಟ್ರೀಯ ಉದ್ವಿಗ್ನತೆ ಹಾಗೂ ಜಾಗತಿಕ ಮಾರುಕಟ್ಟೆಯ ಪರಿಸ್ಥಿತಿಗಳನ್ನು ಪರಿಗಣಿಸಿ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿತ್ತು. ಇದೀಗ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಬರುವ ಆಗಸ್ಟ್ 26ರಂದು 'ಟಾಕ್ಸಿಕ್' ಜಾಗತಿಕವಾಗಿ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಸದ್ಯ ಮೆಟ್ರೋ ರೈಲಿನ ಮೇಲಿನ ಈ ವಿಭಿನ್ನ ಜಾಹೀರಾತು ಪ್ರಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ರಾಕಿ ಭಾಯ್ ಅಭಿಮಾನಿಗಳು 'ಟಾಕ್ಸಿಕ್' ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

Scroll to load tweet…