ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರ ಪ್ರಕಾರ, ಸ್ಟಾರ್‌ಗಳ ಸಂಭಾವನೆಗೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವುದಕ್ಕೂ ಸಂಬಂಧವಿಲ್ಲ. ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಸೆಳೆಯಲು ಒಳ್ಳೆಯ ಕಥೆಗಳಿರುವ ಸಿನಿಮಾಗಳನ್ನು ಮಾಡುವುದೊಂದೇ ದಾರಿ. ಓಟಿಟಿ ಯುಗದಲ್ಲಿ ಪ್ರೇಕ್ಷಕನ ಸಮಯ ಮತ್ತು ಹಣಕ್ಕೆ ನ್ಯಾಯ ಒದಗಿಸುವಂತಹ ಅದ್ಭುತ ಕಥಾವಸ್ತುಗಳು ಚಿತ್ರರಂಗವನ್ನು ಉಳಿಸಬಲ್ಲವು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸೇವ್‌ ಸ್ಯಾಂಡಲ್‌ವುಡ್‌

1. ಇವತ್ತಿನ ಪರಿಸ್ಥಿತಿಯಿಂದ ಚಿತ್ರರಂಗ ಆಚೆ ಬಂದು ಗೆಲುವು ಕಾಣಬೇಕು ಅಂದರೆ ಒಳ್ಳೆಯ ಕತೆ, ಒಳ್ಳೆಯ ಸಿನಿಮಾ ಮಾಡುವುದು ಬಿಟ್ಟು ಬೇರೆ ದಾರಿ ಇಲ್ಲ. ತುಂಬಾ ಸರಳವಾದ ಕತೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಬೇಕು. ಇಲ್ಲವೇ ತುಂಬಾ ಗ್ರೇಟ್‌ ಎನಿಸುವ ಸಿನಿಮಾಗಳನ್ನು ಮಾಡಬೇಕು.

2. ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರದೆ ಇರುವುದಕ್ಕೆ ನಾವೆಲ್ಲರು ಕಾರಣರೇ. ಅವರಿಗೆ ಮನೆಯಲ್ಲೇ ಸಿನಿಮಾಗಳನ್ನು ಕೊಟ್ಟಿದ್ದು ನಾವೇ. ಟೀವಿ, ಓಟಿಟಿಗಳ ಮೂಲಕ ಪ್ರೇಕ್ಷಕರಿಗೆ ನೇರವಾಗಿ ಮನೆಗೇ ಸಿನಿಮಾಗಳನ್ನು ತಲುಪಿಸಿದ್ವಿ. ಪ್ರೇಕ್ಷಕ ಆಚೆ ಬರೋದನ್ನು ಮರೆತುಬಿಟ್ಟರು.

3. ಪ್ರೇಕ್ಷಕನ ಮುಂದೆ ಜಗತ್ತಿನ ಎಲ್ಲಾ ಕತೆಗಳೂ ಇವೆ. ಆತನಿಗೆ ಮೊಬೈಲ್‌, ಓಟಿಟಿ, ಟೀವಿಗಳ ಮೂಲಕ ಎಲ್ಲವನ್ನೂ ಗೊತ್ತು. ಈಗ ನಾವು ಮಾಡುತ್ತಿರುವ ಸಿನಿಮಾಗಳು ಆತನಿಗೆ ತೀರಾ ಸಾಧರಣ ಎನಿಸುತ್ತವೆ. ಪ್ರೇಕ್ಷಕ ಮನೆ ಬಿಟ್ಟು ಬರುವಂತಹ ಅದ್ಭುತ ಕತೆಗಳನ್ನು ನಾವು ಯಾರೂ ಹೇಳುತ್ತಿಲ್ಲ.

4. ಪ್ರೇಕ್ಷಕನಾದವನು ಹಣ, ಸಮಯ, ತಾಳ್ಮೆಯನ್ನು ಹೂಡಿಕೆ ಮಾಡುತ್ತಾನೆ. ಇದರ ಜತೆಗೆ ಟ್ರಾಫಿಕ್‌, ಮಳೆ, ಬಿಸಿಲು ಇವೆಲ್ಲವನ್ನೂ ದಾಟಿ ಬರಬೇಕು. ಇಷ್ಟೆಲ್ಲ ಸಾಹಸ ಮಾಡಿ ಚಿತ್ರಮಂದಿರಗಳಿಗೆ ಪ್ರೇಕ್ಷಕ ಬರಬೇಕು ಅಂದರೆ ಆತನ ಹೂಡಿಕೆಗೆ ನ್ಯಾಯ ಸಲ್ಲಿಸುವ ಸಿನಿಮಾಗಳನ್ನು ಮಾಡಿದರೆ ಚಿತ್ರರಂಗ ಉಳಿಯುತ್ತದೆ.

5. ಸ್ಟಾರ್‌ ಕಲ್ಚರ್‌ ಬೆಳೆಸಿದ್ದೇವೆ. ಅಥವಾ ಬೆಳೆದಿದೆ. ಈ ಹಿಂದೆಯೂ ಸ್ಟಾರ್‌ಗಳಿದ್ದರು. ಸ್ಟಾರ್‌ ಹೀರೋಗಳು ಸಂಭಾವನೆ ಕಡಿಮೆ ಮಾಡಿಕೊಳ್ಳುವುದಕ್ಕೂ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವುದಕ್ಕೂ ಸಂಬಂಧ ಇಲ್ಲ. ಸಂಭಾವನೆ ಎನ್ನುವುದು ಪ್ರೇಕ್ಷಕನಿಗೆ ಬೇಡದ ವಿಚಾರ. ಆತನಿಗೆ ಬೇಕಿರೋದು ಕತೆ.

6. ಒಳ್ಳೆಯ ಕತೆ ಎಂದರೇನು? ಈ ಹಿಂದೆ ಬಡವ ವರ್ಸಸ್‌ ಶ್ರೀಮಂತ, ಚಿಕ್ಕವನು ವರ್ಸಸ್‌ ದೊಡ್ಡವನು ಅನ್ನೋ ಥೀಮು ಇತ್ತು. ಎಲ್ಲರು ಬಡವ ಗೆಲ್ಲಲಿ ಅಂತ ಆಶಿಸೋರು. ಹೀರೋ ಬಡವ ಆಗಿದ್ದ. ಈ ಬಡವ- ಶ್ರೀಮಂತ, ಚಿಕ್ಕವನು- ದೊಡ್ಡವನ ಕತೆ ಬೇರೆ ಎಲ್ಲಿಂದಲೋ ಬಂದಿದ್ದಲ್ಲ, ನಮ್ಮ ನಡುವಿನಿಂದ ಹುಟ್ಟಿಕೊಂಡವು. ಅವು ನಮಗೆ ಕನೆಕ್ಟ್‌ ಆಗುತ್ತಿದ್ದವು. ಕುತೂಹಲದಿಂದ ನಮ್ಮದೇ ಕತೆಗಳನ್ನು ನೋಡುತಿದ್ವಿ. ಈಗ ಚಿಕ್ಕವನು, ದೊಡ್ಡವನು, ಬಡವ- ಶ್ರೀಮಂತ ಯಾರೂ ಕಾಣುತ್ತಿಲ್ಲ.

7. ಸೋಲಿನ ಸುಳಿಯಲ್ಲಿರುವ ಚಿತ್ರರಂಗದಲ್ಲಿ ಬಜೆಟ್‌ ಕಡಿಮೆ ಮಾಡಲು ಮೇಕಿಂಗ್‌ ಕಡೆ ಗಮನ ಕೊಡುವುದಕ್ಕಿಂತ ಕತೆಗಳ ಕಡೆ ಗಮನ ಕೊಡಿ. ಬುದ್ಧಿಗೆ ಸವಾಲು ಹಾಕುವಂತಹ ಕತೆಗಳನ್ನು ರೂಪಿಸಿ. ಕತೆಯ ಹೊರತಾಗಿ ಯಾರು ಏನೇ ಅದ್ದೂರಿ ಸಾಹಸಗಳು ಮಾಡಿದರೂ ಪ್ರಯೋಜನ ಇಲ್ಲ.

8. ಹೀರೋಗಳು ಕಿರುತೆರೆಗೆ ಹೋಗುತ್ತಾರೆ. ದಿನಾ ಟೀವಿಯಲ್ಲಿ ಕಂಡರೆ ಥಿಯೇಟರ್‌ಗಳಲ್ಲಿ ಅವರನ್ನು ನೋಡಲು ಯಾರು ಬರುತ್ತಾರೆ ಅಂದರೆ ಜನ ಥಿಯೇಟರ್‌ಗಳಿಗೆ ಬರೋದು ಸಿನಿಮಾ ನೋಡಕಲ್ವಾ!? ಇನ್ನೂ ಹೀರೋಗಳು ಕಿರುತೆರೆಗೆ ಹೋಗುವುದು ಅವರ ಆಯ್ಕೆ ಅಥವಾ ಅನಿವಾರ್ಯ.

9. ಒಂದು ಸಿನಿಮಾ ಸೋಲಿಗೆ ಹಲವು ಕಾರಣಗಳಿವೆ. ಮಳೆ, ಕ್ರಿಕೆಟ್‌, ಕತೆ ಇತ್ಯಾದಿ. ಈ ಸೋಲಿಗೆ ಕಾರಣ ಏನೂ ಅಂತ ವಾಣಿಜ್ಯ ಮಂಡಳಿ, ಕಲಾವಿದರ ಸಂಘ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ ಈಗ ಕೂತು ಚಿತ್ರೋದ್ಯಮದ ಪರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸೋಲಿಗೆ ಕಾರಣ ತಿಳಿದರೆ ಗೆಲುವಿಗೆ ದಾರಿ ದೊರೆಯುತ್ತದೆ.