ಖ್ಯಾತ ನಿರೂಪಕ ಅಕುಲ್‌ ಬಾಲಾಜಿ ತಮ್ಮ ನಟನೆಯ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 'ಆತ್ಮೀಯ' ಮತ್ತು 'ಬನ್ನಿ' ಸಿನಿಮಾಗಳು ಥಿಯೇಟರ್‌ನಲ್ಲಿ ಹೀನಾಯವಾಗಿ ಸೋತರೂ, ಕಿರುತೆರೆಯಲ್ಲಿ ಹೇಗೆ ಸೂಪರ್ ಹಿಟ್ ಆದವು ಎಂಬುದನ್ನು ತಮಾಷೆಯಾಗಿ ವಿವರಿಸಿದ್ದಾರೆ.

ನ್ನಡದ ಸ್ಟಾರ್‌ ನಿರೂಪಕರ ಹೆಸರು ಬಂದಾಗ ನಟಿ ಹಾಗೂ ನಿರೂಪಕಿ ಅನುಶ್ರೀ ಅವರೊಂದಿಗೆ ಬರೋ ಇನ್ನೊಂದು ಹೆಸರು ನಟ ಹಾಗೂ ನಿರೂಪಕ ಅಕುಲ್‌ ಬಾಲಾಜಿ. ಇಂದು ಕನ್ನಡ ಕಿರುತೆರೆಯಲ್ಲಿ ಸ್ಟಾರ್‌ ನಿರೂಪಕನಾಗಿ ಗುರುತಿಸಿಕೊಂಡಿರುವ ಅಕುಲ್‌ ಬಾಲಾಜಿ, ಹಳ್ಳಿ ಪವರ್‌ ಎನ್ನುವ ಬಿಗ್‌ ರಿಯಾಲಿಟಿ ಶೋಗೆ ನಿರೂಪಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ಕೂಡ ಆಗಿರುವ ಅಕುಲ್‌ ಬಾಲಾಜಿ ಅದಕ್ಕೂ ಮುನ್ನ ಕನ್ನಡ ಬೆಳ್ಳಿ ತೆರೆಯಲ್ಲಿ ಅದೃಷ್ಟ ಪರೀಕ್ಷೆಗೂ ಇಳಿದಿದ್ದರು. ಹೌದು.. ಇಂದಿನ ಜನವರಿಗೆ ಅವರು ನಿರೂಪಕರಾಗಿ ಮಾತ್ರವೇ ಪರಿಚಯ. ಆದರೆ, ಅಕುಲ್‌ ಬಾಲಾಜಿ ಕನ್ನಡದಲ್ಲಿ ಮೂರು ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಹಾಗೂ ಕೆಲವೊಂದು ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

2008ರಲ್ಲಿ ರಿಲೀಸ್‌ ಆದ ಆತ್ಮೀಯ ಅವರು ಹೀರೋ ಆಗಿ ನಟಿಸಿದ್ದ ಮೊದಲ ಸಿನಿಮಾ. ಅದರ ಮರುವರ್ಷವೇ ಅವರು ಬನ್ನಿ ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲಿಯೂ ಹೀರೋ ಆಗಿದ್ದರು. ಅದಾದ ಬಳಿಕ 2013ರಲ್ಲಿ ರಿಲೀಸ್‌ ಆದ ಲೂಸ್‌ಗಳು ಅನ್ನೋ ಸಿನಿಮಾದಲ್ಲಿ ಮೂವರು ಹೀರೋಗಳ ಪೈಕಿ ಒಬ್ಬರಾಗಿದ್ದರು. ಆದರೆ, ಈ ಮೂರೂ ಸಿನಿಮಾಗಳು ಅವರ ಕೈಹಿಡಿಯದೇ ಇದ್ದಾಗ, ಕಿರುತೆರೆಯತ್ತ ಮುಖ ಮಾಡಿದ್ದರು. ತಮ್ಮ ಈ ಸಿನಿಮಾಗಳ ಬಗ್ಗೆ ಅವರು ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

'ಬನ್ನಿ' ಅಂದರೂ ಯಾರೂ ಬರಲಿಲ್ಲ!

ತಮ್ಮ ಸಿನಿಮಾಗಳ ಕಲೆಕ್ಷನ್ ಮತ್ತು ಪ್ರೇಕ್ಷಕರ ಪ್ರತಿಕ್ರಿಯೆಯ ಬಗ್ಗೆ ನಗೆ ಚಟಾಕಿ ಹಾರಿಸಿದ ಅಕುಲ್, ನಾನು ಕನ್ನಡದಲ್ಲಿ 'ಬನ್ನಿ' ಅಂತ ಸಿನಿಮಾ ಮಾಡಿದೆ, ಬನ್ನಿ ಬನ್ನಿ ಅಂತ ಯಾರು ಬಂದಿಲ್ಲ! 'ಆತ್ಮೀಯ' ಅಂದೆ, ಜನ ಅದನ್ನು ಪಕ್ಕಕ್ಕಿಟ್ಟುಬಿಟ್ಟರು" ಎಂದು ತಮ್ಮ ಸಿನಿಮಾಗಳ ಸೋಲನ್ನು ತಮಾಷೆಯಾಗಿ ನೆನಪಿಸಿಕೊಂಡರು.

ಥಿಯೇಟರ್‌ನಲ್ಲಿ 15 ಜನ; ಅವರೂ ಅಪ್ಪನ ಫ್ರೆಂಡ್ಸ್!

ತಮ್ಮ ಮೊದಲ ಸಿನಿಮಾ 'ಆತ್ಮೀಯ'ದ ರಿಲೀಸ್ ದಿನದ ಅನುಭವವನ್ನು ಹಂಚಿಕೊಂಡ ಅವರು, "ಮೇ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು. ನನ್ನನ್ನು ದೊಡ್ಡ ಪರದೆಯಲ್ಲಿ ನೋಡಿಕೊಳ್ಳುವ ಆಸೆ. ಹೌಸ್ ಫುಲ್ ಬೋರ್ಡ್ ಇರುತ್ತೆ ಅಂದುಕೊಂಡು ಥಿಯೇಟರ್‌ಗೆ ಹೋದರೆ ಕೇವಲ 15 ಜನ ಕೂತಿದ್ದರು! ಅಬ್ಬಾ, ಸದ್ಯ 15 ಜನ ಆದ್ರೂ ಇದ್ದಾರಲ್ಲ ಅಂತ ನೋಡಿದ್ರೆ, ಅವರೆಲ್ಲ ನಮ್ಮಪ್ಪ ಅವರ ವಾಕಿಂಗ್ ಫ್ರೆಂಡ್ಸ್! ನಮ್ಮಪ್ಪ ದಿನಕ್ಕೊಂದು ಬ್ಯಾಚ್‌ನಲ್ಲಿ ತನ್ನ ಸ್ನೇಹಿತರನ್ನು ಕರೆತಂದು ಸಿನಿಮಾ ತೋರಿಸುತ್ತಿದ್ದರು" ಎಂದು ವಿವರಿಸಿದರು.

ದುಬೈ ಫ್ಲೈಟ್‌ನಲ್ಲಿ 'ಆತ್ಮೀಯ' ನೋಡಿದ್ದ ಶಿವಣ್ಣ!

ಥಿಯೇಟರ್‌ನಲ್ಲಿ ಸಿನಿಮಾ ಸೋತರೂ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರಿಂದ ಬಂದ ಒಂದು ಕರೆಯಿಂದ ಅಕುಲ್ ಅವರಿಗೆ ಸಮಾಧಾನ ಸಿಕ್ಕಿತ್ತಂತೆ. "ಒಂದು ದಿನ ಶಿವಣ್ಣ ಕರೆ ಮಾಡಿ, 'ಏನಮ್ಮ ಮೂವಿ ನೋಡಿದೆ, ಸಕತ್ತಾಗಿದೆ' ಎಂದರು. ಯಾವ ಸಿನಿಮಾ ಅಂದರೆ 'ಆತ್ಮೀಯ' ಅಂದರು. ಎಲ್ಲಿ ನೋಡಿದ್ರಿ ಅಂದರೆ, ಅವರು ಜರ್ಮನಿ ಅಥವಾ ದುಬೈನಿಂದ ಎಮಿರೇಟ್ಸ್ ಫ್ಲೈಟ್‌ನಲ್ಲಿ ಬರುವಾಗ ಎಂಟರ್‌ಟೇನ್‌ಮೆಂಟ್ ಸೆಗ್ಮೆಂಟ್‌ನಲ್ಲಿ ನನ್ನ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಪ್ರೊಡ್ಯೂಸರ್ ಇನ್‌ಫ್ಲುಯೆನ್ಷಿಯಲ್ ಆಗಿದ್ದರಿಂದ ಫ್ಲೈಟ್‌ನಲ್ಲಿ ಸಿನಿಮಾ ಹಾಕ್ತಿದ್ರು" ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಥಿಯೇಟರ್‌ನಲ್ಲಿ ಫ್ಲಾಪ್, ಟಿವಿಯಲ್ಲಿ ಸೂಪರ್ ಹಿಟ್!

"ತುಂಬಾ ಜನ ನನ್ನ ಬಳಿ 'ಆತ್ಮೀಯ' ಸಿನಿಮಾ ಚೆನ್ನಾಗಿದೆ ಎನ್ನುತ್ತಿದ್ದರು. ಎಲ್ಲಿ ನೋಡಿದ್ರಪ್ಪಾ ಈ ಸಿನಿಮಾ ಅಂದುಕೊಂಡರೆ, ಜೀ ಕನ್ನಡದಲ್ಲಿ ಪ್ರತಿವಾರ ಈ ಸಿನಿಮಾ ಪ್ರಸಾರವಾಗುತ್ತಿತ್ತು. ಅದಕ್ಕೆ ಒಳ್ಳೆಯ ರೇಟಿಂಗ್ಸ್ ಕೂಡ ಬರುತ್ತಿತ್ತು. ಥಿಯೇಟರ್‌ನಲ್ಲಿ ನನ್ನ ಸಿನಿಮಾ ಫ್ಲಾಪ್ ಆದರೂ, ಟಿವಿಯಲ್ಲಿ ಸೂಪರ್ ಹಿಟ್ ಆಗಿತ್ತು. ಇಂಥ ಒಂದಷ್ಟು ದುರಂತಗಳನ್ನು ಜೀವನದಲ್ಲಿ ಮಾಡಿದ್ದೀನಿ" ಎಂದು ಅಕುಲ್ ಬಾಲಾಜಿ ತಮ್ಮ ಸಿನಿಮಾ ಪಯಣವನ್ನು ನಗುನಗುತ್ತಲೇ ಮೆಲುಕು ಹಾಕಿದ್ದಾರೆ.