ಬೆಂಗಳೂರಿನ ಐಷಾರಾಮಿ ಹೋಟೆಲ್‌ಗಳಲ್ಲಿ ಕೊಳೆತ ಮಾಂಸ, ಫಂಗಸ್‌ಯುಕ್ತ ಆಹಾರ ಪತ್ತೆಯಾದ ಪ್ರಕರಣಕ್ಕೆ ನಟ ಜಗ್ಗೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ರೋಗಗ್ರಸ್ತ ಊಟದಿಂದ ಕ್ಯಾನ್ಸರ್‌ನಂತಹ ಕಾಯಿಲೆಗಳು ಬರುತ್ತವೆ ಎಂದು ಎಚ್ಚರಿಸಿದ್ದಾರೆ.

ಬೆಂಗಳೂರು (ಆ.11): ರಾಜಧಾನಿ ಬೆಂಗಳೂರಿನ ಐಷಾರಾಮಿ ಫೈವ್ ಸ್ಟಾರ್ ಹಾಗೂ ತ್ರೀ ಸ್ಟಾರ್ ಹೋಟೆಲ್‌ಗಳಲ್ಲಿ ಅಧಿಕಾರಿಗಳು ನಡೆಸುತ್ತಿರುವ ಆಪರೇಷನ್‌ನಲ್ಲಿ ವರ್ಷಗಳಷ್ಟು ಹಳೆಯ ಕೊಳೆತ ಮಾಂಸ, ಫಂಗಸ್‌ಯುಕ್ತ ಮಶ್ರೂಮ್ ಮತ್ತು ಜಿರಳೆ ಬಿದ್ದ ಪನ್ನೀರ್ ಪತ್ತೆಯಾಗಿರುವ ಕರ್ಮಕಾಂಡ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಹೈಫೈ ರೆಸ್ಟೋರೆಂಟ್‌ಗಳ ಈ ದಂಧೆಯ ವಿರುದ್ಧ ಚಿತ್ರನಟ, ಸಂಸದ ನವರಸನಾಯಕ ಜಗ್ಗೇಶ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ಜನಪ್ರಿಯ ಆನ್‌ಲೈನ್ ಫುಡ್ ಆಪ್ ಹಾಗೂ ಐಷಾರಾಮಿ ಹೋಟೆಲ್‌ಗಳ ಬಣ್ಣ ಬಯಲು ಮಾಡಿದ್ದಾರೆ.

'ಕ್ಯಾನ್ಸರ್‌ಗೆ ಇಂಥ ರೋಗಗ್ರಸ್ತ ಊಟವೇ ಕಾರಣ!': ಜಗ್ಗೇಶ್ ಕಳವಳ

ಹೋಟೆಲ್‌ಗಳ ಕರಾಳ ಸತ್ಯ ಬಯಲಾದ ಬೆನ್ನಲ್ಲೇ ಕಳವಳ ವ್ಯಕ್ತಪಡಿಸಿರುವ ಜಗ್ಗೇಶ್, "ಶುಭ್ರವಾಗಿ ಮನೆಯಲ್ಲೇ ಅಡುಗೆ ಮಾಡಿ ಆರೋಗ್ಯವಾಗಿ ಊಟ ಮಾಡುವುದು ಲೇಸು... ಇತ್ತೀಚಿನ ದಿನಗಳಲ್ಲಿ ಅನೇಕರು ಕ್ಯಾನ್ಸರ್ ರೋಗಕ್ಕೆ ಇಂಥ ರೋಗಗ್ರಸ್ತ ಊಟದಿಂದ ಬಲಿಯಾಗುತ್ತಿರುವ ವಿಷಯವನ್ನು ನಮ್ಮ ಆತ್ಮೀಯ ವೈದ್ಯರ ವಲಯದಲ್ಲಿ ಕೇಳಿ ದಿಗ್ಭ್ರಾಂತನಾದೆ" ಎಂದು ಬರೆದುಕೊಂಡಿದ್ದಾರೆ.

ಅಲ್ಲದೆ, ನಗರವಾಸಿಗಳ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಳ್ಳುತ್ತಿರುವ ಹೊಟೇಲ್ ಮಾಫಿಯಾವನ್ನು ತರಾಟೆಗೆ ತೆಗೆದುಕೊಂಡ ಅವರು, "ಮನುಷ್ಯ ಹಗಲಿರುಳು ದುಡಿಯುವುದೇ ತುತ್ತು ಅನ್ನಕ್ಕಾಗಿ, ಆ ಅನ್ನವೇ ವಿಷವಾಗಿ ಉಂಡರೆ? ತಪ್ಪು ನಮ್ಮದೇ ಆಗುತ್ತದೆ! ಕೆಲಸದ ಒತ್ತಡ, ಟ್ರಾಫಿಕ್ ಕಿರಿಕಿರಿ, ದಣಿದ ದೇಹ ಸಿಕ್ಕಿದ್ದನ್ನು ತಿಂದು ವಿಶ್ರಾಂತಿ ಪಡೆಯುವ ಮನಸ್ಥಿತಿ ಹಾಗೂ ಮೊಬೈಲ್ ಆಪ್ ಮೂಲಕ ಆನ್‌ಲೈನ್ ಆರ್ಡರ್ ಮಾಡುವುದನ್ನು ಕಾಯುವ ಹಸಿವನ್ನೇ ಬಳಸಿಕೊಂಡು ಅನ್ನವನ್ನು ವಿಷ ಮಾಡಿ ಹಂಚುತ್ತಿದ್ದಾರೆ! ಇವರಿಗೆಲ್ಲಾ ಮನಸ್ಸಾದರೂ ಹೇಗೆ ಬರುತ್ತದೆ?" ಎಂದು ಬೇಸರ ಹೊರಹಾಕಿದ್ದಾರೆ.

'ಅನ್ನಂ ಪರಬ್ರಹ್ಮ ಸ್ವರೂಪ... ಮೋಸ ಮಾಡಿದರೆ ವಂಶನಾಶ!'

ಆಹಾರದಲ್ಲಿ ಮೋಸ ಮಾಡುತ್ತಿರುವ ದುರಾತ್ಮರಿಗೆ ತಕ್ಕ ಶಾಸ್ತಿಯಾಗಬೇಕು ಎಂದಿರುವ ಜಗ್ಗೇಶ್, "ಆತ್ಮೀಯರೇ ದಯಮಾಡಿ ಊಟದ ಎಚ್ಚರ ಬಹಳ ಮುಖ್ಯ, ಆರೋಗ್ಯ ಸರಿಯಿದ್ದರೆ ಜಗತ್ತನ್ನೇ ಗೆಲ್ಲಬಹುದು. ಅನ್ನವನ್ನು ವಿಷವಾಗಿ ಹಂಚುವ ಧುರುಳರಿಗೆ ಕಾನೂನಿನ ಮೂಲಕ ಅತ್ಯಂತ ಕಠಿಣ ಕ್ರಮವಾಗಬೇಕು. 'ಅನ್ನಂ ಪರಬ್ರಹ್ಮ ಸ್ವರೂಪ'... ಅನ್ನಕ್ಕೆ ಮೋಸ ಮಾಡಿದರೆ ವಂಶನಾಶವಾಗುತ್ತದೆ!" ಎಂದು ಆಕ್ರೋಶದ ನುಡಿಗಳನ್ನಾಡಿದ್ದಾರೆ.

ಬೆಂಗಳೂರಿನ ಹೈಫೈ ಹೋಟೆಲ್‌ಗಳಲ್ಲಿ ನಡೆದಿದ್ದೇನು?

ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಸತತ 3ನೇ ದಿನ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಬ್ರಿಗೇಡ್ ರಸ್ತೆ ಹಾಗೂ ಯುಬಿ ಸಿಟಿಯ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ನಡೆದಿರುವ ಕರ್ಮಕಾಂಡ ಬಯಲಾಗಿದೆ. 2 ವರ್ಷದಷ್ಟು ಹಳೆಯ ಚಿಕನ್ ಹಾಗೂ 1 ವರ್ಷದಷ್ಟು ಹಳೆಯ ಮೀನು ಮಾಂಸ ಫ್ರೀಜರ್‌ನಲ್ಲಿ ಪತ್ತೆಯಾಗಿದೆ. ಬಳಸಲು ಇಟ್ಟಿದ್ದ ಮಶ್ರೂಮ್‌ನಲ್ಲಿ ಫಂಗಸ್ ಬಂದಿದ್ದರೆ, ಪನ್ನೀರ್‌ನಲ್ಲಿ ಜಿರಳೆಗಳು ಕಂಡುಬಂದಿವೆ. ನಗರದ ಟೆಕ್ಕಿಗಳು, ವಿಐಪಿಗಳು ಹೆಚ್ಚಾಗಿ ಭೇಟಿ ನೀಡುವ ಹೈ-ಫೈ ಹೋಟೆಲ್‌ಗಳಲ್ಲೇ ಕೊಳೆತ ಆಹಾರ ಪದಾರ್ಥಗಳನ್ನು ಪೂರೈಸಲಾಗುತ್ತಿತ್ತು.

ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹ ಪ್ರಭಾವಿ ಹೋಟೆಲ್‌ಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರೂ ಜಗ್ಗೇಶ್ ಅವರ ಅಭಿಪ್ರಾಯಕ್ಕೆ ಬೆಂಬಲ ಸೂಚಿಸಿದ್ದಾರೆ.