Lakshmi Putra: ‘ಉಪಾಧ್ಯಕ್ಷ’ ಯಶಸ್ಸಿನ ಬಳಿಕ ಚಿಕ್ಕಣ್ಣ ನಾಯಕನಾಗಿ ನಟಿಸಿರುವ ‘ಲಕ್ಷ್ಮೀ ಪುತ್ರ’ ಚಿತ್ರ ಡಿಸೆಂಬರ್ 27ರಂದು ಅದ್ದೂರಿಯಾಗಿ ತೆರೆಕಂಡಿದೆ. ಹಳ್ಳಿ ಸೊಗಡಿನ ಕಾಮಿಡಿ ಮತ್ತು ಆ್ಯಕ್ಷನ್ ಜೊತೆಗೆ ಈ ಚಿತ್ರದಲ್ಲಿರುವ ತಾಯಿ ಸೆಂಟಿಮೆಂಟ್ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಸಿನಿಮಾ ನೋಡಿದವರ ಭಾವುಕ ಅನಿಸಿಕೆಗಳು ಹಾಗೂ ಚಿತ್ರದ ಸಂಪೂರ್ಣ ವಿವರ ಇಲ್ಲಿದೆ.

‘ಉಪಾಧ್ಯಕ್ಷ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಟ ಚಿಕ್ಕಣ್ಣ ಈಗ ‘ಲಕ್ಷ್ಮೀ ಪುತ್ರ’ ಸಿನಿಮಾದ ಮೂಲಕ ಮತ್ತೊಮ್ಮೆ ನಾಯಕನಾಗಿ ಬೆಳ್ಳಿತೆರೆಯಲ್ಲಿ ಮಿಂಚಿದ್ದಾರೆ. ಹಾಸ್ಯ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದಿದ್ದ ಚಿಕ್ಕಣ್ಣ, ನಾಯಕನಾಗಿಯೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಎ.ಪಿ. ಅರ್ಜುನ್ ಕಥೆ ಹಾಗೂ ವಿಜಯ್ ಎಸ್. ಸ್ವಾಮಿ ನಿರ್ದೇಶನದ ಈ ಹಳ್ಳಿ ಸೊಗಡಿನ ಕಾಮಿಡಿ ಮತ್ತು ಆ್ಯಕ್ಷನ್ ಚಿತ್ರವು ಡಿಸೆಂಬರ್ 27ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರ ನೋಡಿದ ಪ್ರೇಕ್ಷಕರು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಅಭಿಮಾನಿಗಳಿಗೆ ಇಷ್ಟವಾಗಿದ್ದು ತಾಯಿ-ಮಗನ ಬಾಂಧವ್ಯ

ಹಳ್ಳಿ ಹುಡುಗ ಕೃಷ್ಣನ ಪಾತ್ರದಲ್ಲಿ ಮಿಂಚಿರುವ ಚಿಕ್ಕಣ್ಣ, ನಗುವಿನ ಹೊಳೆಯ ಜೊತೆಗೆ ಭರ್ಜರಿ ಆ್ಯಕ್ಷನ್ ಮೂಲಕವೂ ಪ್ರೇಕ್ಷಕರಿಗೆ ಥ್ರಿಲ್ ನೀಡಿದ್ದಾರೆ. ಹತ್ತು ಹುಡುಗಿಯರಿಗೆ ಕಾಳು ಹಾಕಿ ತಿರಸ್ಕಾರಕ್ಕೆ ಒಳಗಾಗುವುದಕ್ಕಿಂತ, ಒಬ್ಬಳೇ ಹುಡುಗಿಗೆ ಹತ್ತು ಬಾರಿ 'ಐ ಲವ್ ಯೂ' ಎಂದರೆ ಖಂಡಿತ ಒಲಿಯುತ್ತಾಳೆ ಎಂಬ ನಂಬಿಕೆಯೊಂದಿಗೆ ನಾಯಕಿ ವಂದಿತಾ ಗೌಡ ಹಿಂದೆ ಬೀಳುವ ಪಾತ್ರದಲ್ಲಿ ಅವರು ಗಮನ ಸೆಳೆದಿದ್ದಾರೆ. ಹಿರಿಯ ನಟಿ ತಾರಾ ಅನುರಾಧಾ ಅವರು ಚಿಕ್ಕಣ್ಣನ ತಾಯಿಯ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಚಿತ್ರದ ಹಾಸ್ಯ ಮತ್ತು ಆ್ಯಕ್ಷನ್ ಸನ್ನಿವೇಶಗಳು ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಚಿಕ್ಕಣ್ಣನ ಹೊಸ ಅವತಾರ ಹಾಗೂ ತಾಯಿ-ಮಗನ ಬಾಂಧವ್ಯ ಅಭಿಮಾನಿಗಳಿಗೆ ಇಷ್ಟವಾಗಿದ್ದು, ಸಿನಿಮಾ ವೀಕ್ಷಿಸಲು ಚಿತ್ರಮಂದಿರಗಳತ್ತ ಮುನ್ನುಗ್ಗುತ್ತಿದ್ದಾರೆ.

ಸಿನಿಮಾ ನೋಡಿದವರ ಅನಿಸಿಕೆಗಳು ಹೀಗಿವೆ..

"ಚಿತ್ರದ ಮೊದಲಾರ್ಧದಲ್ಲಿ ಸಂಪೂರ್ಣ ಕಾಮಿಡಿ ಇದ್ದರೆ, ದ್ವಿತೀಯಾರ್ಧದಲ್ಲಿ ತಾಯಿ ಸೆಂಟಿಮೆಂಟ್ ಅದ್ಭುತವಾಗಿ ಮೂಡಿಬಂದಿದೆ. ಸೆಕೆಂಡ್ ಹಾಫ್‌ನಲ್ಲಿ ನಾನು ಹತ್ತು ನಿಮಿಷ ಅತ್ತುಬಿಟ್ಟಿದ್ದೇನೆ. 'ಜೋಗಿ' ಸಿನಿಮಾ ನಂತರ ಇಂತಹದ್ದೊಂದು ಭಾವನಾತ್ಮಕ ಚಿತ್ರವನ್ನು ನೋಡಿರುವುದು ಇದೇ ಮೊದಲು. ತಾಯಿಯನ್ನು ಪ್ರೀತಿಸುವ ಪ್ರತಿಯೊಬ್ಬರೂ ದಯವಿಟ್ಟು ಥಿಯೇಟರ್‌ಗೆ ಬಂದು ಈ ಸಿನಿಮಾ ನೋಡಲೇಬೇಕು. ಚಿತ್ರ ನೂರಕ್ಕೆ ನೂರು ಗೆಲ್ಲುವುದು ಖಚಿತ" ಎಂದು ಪ್ರೇಕ್ಷಕರೊಬ್ಬರು ಸಂತಸ ಹಂಚಿಕೊಂಡಿದ್ದಾರೆ.

ಮತ್ತೊಂದೆಡೆ, ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸಿರುವ ಕಲಾವಿದರೊಬ್ಬರು ಮಾತನಾಡಿ, "ತಾಯಿ ಸೆಂಟಿಮೆಂಟ್ ಎಲ್ಲಾ ಸಿನಿಮಾಗಳಲ್ಲೂ ಇರುತ್ತದೆ. ಆದರೆ 'ಜೋಗಿ' ಬಳಿಕ ಅಂತಹದ್ದೇ ಅನುಭವ ಈ ಚಿತ್ರದಲ್ಲಿ ಸಿಗುತ್ತದೆ. ನನಗೆ ಈ ಪಾತ್ರ ನೀಡಿರುವುದು ಎ.ಪಿ. ಅರ್ಜುನ್ ಸರ್ ಅವರಿಂದ ಸಿಕ್ಕ ಪುಣ್ಯ. ಸಿನಿಮಾದಲ್ಲಿ ಮುಕ್ಕಾಲು ಭಾಗ ಸ್ಟ್ಯಾಂಡರ್ಡ್ ಕಾಮಿಡಿ ಇದ್ದರೆ, ಕೊನೆಯ ಕಾಲು ಭಾಗ ನೋಡಿದವರ ಕಣ್ಣಲ್ಲಿ ನೀರು ತರಿಸುತ್ತದೆ. ಕನ್ನಡ ಜನತೆ ತಪ್ಪದೇ ಥಿಯೇಟರ್‌ಗೆ ಬಂದು ಸಿನಿಮಾ ನೋಡಬೇಕೆಂದು ಕೇಳಿಕೊಳ್ಳುತ್ತೇನೆ" ಎಂದಿದ್ದಾರೆ.

‘ಲಕ್ಷ್ಮೀ ಪುತ್ರ’ ಚಿತ್ರವನ್ನು ಎ.ಪಿ. ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಅನ್ನಪೂರ್ಣ ಎ.ಪಿ. ಅರ್ಜುನ್ ನಿರ್ಮಿಸಿದ್ದು, ರವಿಕಿರಣ್ ಎಂ. ಗೌಡ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಎ.ಪಿ. ಅರ್ಜುನ್ ಅವರ ಕಥೆ ಹಾಗೂ ಸಾಹಿತ್ಯವಿರುವ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಚಿಕ್ಕಣ್ಣ, ತಾರಾ ಅನುರಾಧಾ, ವಂದಿತಾ ಗೌಡ, ಕುರಿ ಪ್ರತಾಪ್, ಧರ್ಮಣ್ಣ ಹಾಗೂ ಮಿತ್ರ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಗಿರೀಶ್ ಆರ್. ಗೌಡ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಹಾಗೂ ಮಾಸ್ ಮಾದ ಸಾಹಸ ನಿರ್ದೇಶನವಿದೆ. ‘ಡಿ ಬೀಟ್ಸ್’ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದ್ದು, ಒಟ್ಟಾರೆಯಾಗಿ ಕುಟುಂಬ ಸಮೇತ ನೋಡಬಹುದಾದ ಮನರಂಜನಾತ್ಮಕ ಚಿತ್ರವಾಗಿ ‘ಲಕ್ಷ್ಮೀ ಪುತ್ರ’ ಪ್ರೇಕ್ಷಕರ ಮನಗೆಲ್ಲುತ್ತಿದೆ.