ಇದು ಮೊದಲೇನಲ್ಲ. ಕಳೆದ 2021ರ ಮೇ ತಿಂಗಳಲ್ಲೂ ಸಹ ಇದೇ ರೀತಿ ಕಿಡಿಗೇಡಿಗಳು ಅವರ ಸಾವಿನ ವದಂತಿ ಹಬ್ಬಿಸಿ ವಿಕೃತ ಸುಖ ಅನುಭವಿಸಿದ್ದರು. ಪದೇ ಪದೇ ಹಿರಿಯ ನಟರ ಜೀವನದ ಜೊತೆ ಆಟವಾಡುತ್ತಿರುವುದಕ್ಕೆ ಸಾರ್ವಜನಿಕರಿಂದ ಬೇಸರ ವ್ಯಕ್ತವಾಗುತ್ತಿದೆ. ಏಕೆ ಹೀಗೆ? ಈ ಸ್ಟೋರಿ ನೋಡಿ..
ಸ್ಯಾಂಡಲ್‌ವುಡ್ ‘ದೊಡ್ಡಣ್ಣ’ನಿಗೆ ಕಿಡಿಗೇಡಿಗಳಿಂದ ಶಾಕ್: ಸಾವಿನ ಸುದ್ದಿ ಬೆನ್ನಲ್ಲೇಆಂಜನೇಯನ ಮೊರೆ ಹೋದ ಹಿರಿಯ ನಟ!
ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ಜೀವ, ಪ್ರೀತಿಯ ನಟ 'ದೊಡ್ಡಣ್ಣ' (Doddanna) ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದ ಆ ಒಂದು ಸುಳ್ಳು ಸುದ್ದಿ ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸಿತ್ತು. ಕಿಡಿಗೇಡಿಗಳ ಅತಿರೇಕದ ವರ್ತನೆಗೆ ಇಡೀ ಚಿತ್ರರಂಗವೇ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಈಗ ನಟ ದೊಡ್ಡಣ್ಣ ಅವರು ತಮ್ಮ ಮೇಲಿರುವ ಕಂಟಕ ನಿವಾರಣೆಗಾಗಿ ಸಾಕ್ಷಾತ್ ಆಂಜನೇಯ ಸ್ವಾಮಿಯ ಮೊರೆ ಹೋಗಿದ್ದಾರೆ.
ಏನಿದು ಘಟನೆ? ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ ‘ಡೆತ್ ರೂಮರ್’!
ಶುಕ್ರವಾರ ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಣ್ಣ ಅವರ ಬಗ್ಗೆ ಸುಳ್ಳು ಸುದ್ದಿಯೊಂದು ಕಾಳ್ಗಿಚ್ಚಿನಂತೆ ಹರಡಿತ್ತು. ಹಿರಿಯ ನಟ ದೊಡ್ಡಣ್ಣ ಇನ್ನಿಲ್ಲ ಎಂಬ ಫೋಟೋಗಳು ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ಹಾಗೂ ಚಿತ್ರರಂಗದ ಆಪ್ತರು ಆತಂಕಕ್ಕೆ ಒಳಗಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಫೇಕ್ ಪೋಸ್ಟ್ ಸೃಷ್ಟಿಸಿದ ಗೊಂದಲ ಅಷ್ಟಿಷ್ಟಲ್ಲ. ಆದರೆ, ಈ ಸುದ್ದಿಯನ್ನು ಕೇಳಿ ಸ್ವತಃ ದೊಡ್ಡಣ್ಣ ಅವರೇ ಕೆಂಡಾಮಂಡಲವಾಗಿದ್ದಾರೆ.
“ನಾನು ಆರೋಗ್ಯವಾಗಿದ್ದೇನೆ, ಸುಮ್ಮನೆ ಬಿಡಲ್ಲ!” – ದೊಡ್ಡಣ್ಣ ಖಡಕ್ ವಾರ್ನಿಂಗ್:
ಸುದ್ದಿ ತಿಳಿಯುತ್ತಿದ್ದಂತೆಯೇ ವಿಡಿಯೋ ಮೂಲಕ ಪ್ರತ್ಯಕ್ಷವಾದ ದೊಡ್ಡಣ್ಣ, "ನಾನು ಚೆನ್ನಾಗಿದ್ದೇನೆ, ಬೆಳಗ್ಗೆ ನಾನು ಎದ್ದೇಳುವ ಮುಂಚೆಯೇ ನನ್ನನ್ನು ಕಳುಹಿಸಿಕೊಡಲು ಕೆಲವರು ಸಜ್ಜಾಗಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ ಇರುವವರೆಗೂ ನನಗೆ ಏನೂ ಆಗುವುದಿಲ್ಲ. ಇಂತಹ ಸುಳ್ಳು ಸುದ್ದಿ ಹಬ್ಬಿಸಿದವರನ್ನು ನಾನು ಸುಮ್ಮನೆ ಬಿಡುವುದಿಲ್ಲ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ" ಎಂದು ಗುಡುಗಿದ್ದಾರೆ.
ಕಂಟಕ ಪರಿಹಾರಕ್ಕಾಗಿ ಹನುಮನ ಸನ್ನಿಧಿಯಲ್ಲಿ ವಿಶೇಷ ಪೂಜೆ:
ಬೆನ್ನುಬಿದ್ದಿರುವ ಈ ಸುಳ್ಳು ಸುದ್ದಿಗಳ ಕಂಟಕದಿಂದ ದೂರವಿರಲು ಮತ್ತು ತಮ್ಮ ಆರೋಗ್ಯ ವೃದ್ಧಿಗಾಗಿ ದೊಡ್ಡಣ್ಣ ಅವರು ಶನಿವಾರ ಕುಟುಂಬ ಸಮೇತರಾಗಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಪ್ರಸಿದ್ಧ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಕೇಸರಿ ಶಾಲು ಹೊದ್ದು, ಭಕ್ತಿಯಿಂದ ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು, ದೈವದ ಆಶೀರ್ವಾದ ಪಡೆದರು. ಕುಟುಂಬದ ಸದಸ್ಯರೊಂದಿಗೆ ದೇಗುಲದಲ್ಲಿ ಅವರು ಕಳೆದ ಕ್ಷಣಗಳು ಈಗ ವೈರಲ್ ಆಗುತ್ತಿದ್ದು, "ನಮ್ಮ ದೊಡ್ಡಣ್ಣ ಆರಾಮಾಗಿದ್ದಾರೆ" ಎಂದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಬಗ್ಗೆ ‘ಏಷ್ಯಾನೆಟ್ ಸುವರ್ಣ ಡಿಜಿಟಲ್’ ಜೊತೆೆ ಮಾತನ್ನಾಡಿರುವ ನಟ ದೊಡ್ಡಣ್ಣ ಅವರು ‘ಆಂಜನೇಯ ಅಂದ್ರೆ ಮುಖ್ಯಪ್ರಾಣ ದೇವರು. ಅದಕ್ಕೇ ಈ ಅಪಶಕುನದ ನಿವಾರಣೆಗೆ ನಾನು ಸೀದಾ ಆಂಜನೇಯ ಸ್ವಾಮಿ ದೇವರಿಗೆ ಮೊರೆ ಹೋಗಿದ್ದೇನೆ. ನನಗೆ ಹನುಮಂತ ದೇವರ ಆಶೀರ್ವಾದ ದೊರಕಿದೆ. ಈಗ ನೆಮ್ಮದಿಯಾಗಿ ಇದ್ದೇನೆ..’ ಎಂದಿದ್ದಾರೆ.
ಇದು ಮೊದಲಲ್ಲ, ಕಿಡಿಗೇಡಿಗಳ ಚಾಳಿ ಮುಂದುವರಿದಿದೆ!
ಅಂದಹಾಗೆ, ಗಮನಾರ್ಹ ಸಂಗತಿಯೆಂದರೆ, ದೊಡ್ಡಣ್ಣ ಅವರ ಬಗ್ಗೆ ಈ ರೀತಿ ಸುಳ್ಳು ಸುದ್ದಿ ಹಬ್ಬುತ್ತಿರುವುದು ಇದು ಮೊದಲೇನಲ್ಲ. ಕಳೆದ 2021ರ ಮೇ ತಿಂಗಳಲ್ಲೂ ಸಹ ಇದೇ ರೀತಿ ಕಿಡಿಗೇಡಿಗಳು ಅವರ ಸಾವಿನ ವದಂತಿ ಹಬ್ಬಿಸಿ ವಿಕೃತ ಸುಖ ಅನುಭವಿಸಿದ್ದರು. ಪದೇ ಪದೇ ಹಿರಿಯ ನಟರ ಜೀವನದ ಜೊತೆ ಆಟವಾಡುತ್ತಿರುವ ಇಂತಹ ಕಿಡಿಗೇಡಿಗಳಿಗೆ ಈ ಬಾರಿ ತಕ್ಕ ಶಾಸ್ತಿ ಮಾಡಲೇಬೇಕು ಎಂಬ ಒತ್ತಾಯ ಸಿನಿರಸಿಕರಿಂದ ಕೇಳಿಬರುತ್ತಿದೆ.
ಸದ್ಯಕ್ಕೆ ದೊಡ್ಡಣ್ಣ ಅವರು ಆರೋಗ್ಯವಾಗಿ ಲವಲವಿಕೆಯಿಂದ ಇದ್ದಾರೆ. ಆಂಜನೇಯನ ಕೃಪೆಯಿಂದ ಅವರು ನೂರು ಕಾಲ ಸುಖವಾಗಿ ಬಾಳಲಿ ಎಂಬುದು ಕನ್ನಡ ಸಿನಿರಸಿಕರೆಲ್ಲರ ಆಶಯ.


