ಯಶ್ ಅಭಿನಯದ ‘ಟಾಕ್ಸಿಕ್’ ಟ್ರೇಲರ್ ಬಳಿಕ ಹೊಸ ಥಿಯರಿಗಳು ಹರಿದಾಡುತ್ತಿವೆ. ರಾಯ, ನಾದಿಯಾ ಮತ್ತು ಟಿಕೆಟ್ ಪಾತ್ರಗಳ ನಡುವೆ ಏನು ಸಂಬಂಧ? ‘ವಿಜಯ ವಿಕ್ರಮ’ ಹಾಗೂ ‘ಬಭ್ರುವಾಹನ’ ಜೊತೆ ಹೋಲಿಕೆ ಯಾಕೆ?
‘ಟಾಕ್ಸಿಕ್’ ಚಿತ್ರದ ಟ್ರೇಲರ್ ಬಂದ ಬಳಿಕ ವಿಶ್ಲೇಷಣೆಗಳು ಆರಂಭವಾಗಿವೆ. ಮುಖ್ಯವಾಗಿ ರಾಯ ಮತ್ತು ಟಿಕೆಟ್ ಪಾತ್ರಧಾರಿಯ ಕುರಿತು ಅನೇಕ ಪರಿಕಲ್ಪನೆಗಳು ಓಡಾಡುತ್ತಿವೆ. ಅದರಲ್ಲಿ ತುಂಬಾ ಇಂಟರೆಸ್ಟಿಂಗ್ ಆದ ಪರಿಕಲ್ಪನೆ ಎಂದರೆ ವಿಷ್ಣುವರ್ಧನ್ ನಟನೆಯ ‘ವಿಜಯ ವಿಕ್ರಮ’ ಚಿತ್ರದ ಹೋಲಿಕೆ.
‘ವಿಜಯ ವಿಕ್ರಮ’ ಸಿನಿಮಾದಲ್ಲಿ ವಿಷ್ಣುವರ್ಧನ್ ದ್ವಿಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತಂದೆ ವಿಕ್ರಮ್ ಎಸ್ಟೇಟ್ ಮ್ಯಾನೇಜರ್ ಮಗಳನ್ನು ಅತ್ಯಾ*ಚಾರ ಮಾಡಿರುತ್ತಾನೆ. ಹಾಗೆ ಹುಟ್ಟಿದ ಮಗ ವಿಜಯ್. ಅನ್ಯಾಯ ಮಾಡಿದ ವಿಕ್ರಮ್ ವಿರುದ್ಧ ಹೋರಾಟಕ್ಕೆ ಸಿದ್ಧನಾಗುತ್ತಾನೆ. ಅದೇ ಕತೆಯನ್ನು ಟಾಕ್ಸಿಕ್‌ಗೂ ಹೋಲಿಕೆ ಮಾಡಲಾಗುತ್ತಿದೆ. ಟ್ರೇಲರ್‌ನಲ್ಲಿ ನೋಡಿದರೆ ಯಶ್ ನಟನೆಯ ರಾಯ ಮತ್ತು ಕಿಯಾರ ಅಡ್ವಾಣಿ ನಟನೆಯ ನಾದಿಯಾ ಪಾತ್ರಕ್ಕೂ ಸಂಬಂಧ ಇರುವಂತೆ ಅನ್ನಿಸುತ್ತಿದೆ. ಅಲ್ಲದೇ ಸರ್ಕಸ್ ಹಿನ್ನೆಲೆಯೂ ಇರುವುದರಿಂದ ಟಿಕೆಟ್ ಪಾತ್ರ ಆ ಜೋಡಿಯ ಮಗನಿರಬಹುದು ಎಂಬ ಊಹೆ ಪ್ರೇಕ್ಷಕ ಅಭಿಮಾನಿಗಳದು.
ಹಾಗಂತ ಇದಕ್ಕೆ ಯಾವುದೇ ಅಧಿಕೃತ ಸ್ಪಷ್ಟನೆ ಇಲ್ಲ. ಚಿತ್ರತಂಡ ಏನು ಬೇಕಾದರೂ ಮಾತಾಡಿಕೊಳ್ಳಿ ಅಂತ ಸುಮ್ಮನೆ ಇದೆ. ಹಾಗೆ ನೋಡಿದರೆ ಈ ತಂದೆಯ ವಿರುದ್ಧ ಹೋರಾಡಲು ಬರುವ ಮಗನ ಪರಿಕಲ್ಪನೆ ಹೊಸತೇನೂ ಅಲ್ಲ. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ‘ಬಭ್ರುವಾಹನ’ ಚಿತ್ರದಲ್ಲಿಯೂ ಇದೇ ಕತೆ. ತಂದೆ ಅರ್ಜುನನ ವಿರುದ್ಧ ಬಭ್ರುವಾಹನನ ಯುದ್ಧವೇ ಆ ಚಿತ್ರದ ಹೈಲೈಟ್. ಅಲ್ಲಿಯೂ ಡಾ. ರಾಜ್‌ಕುಮಾರ್ ಅವರು ತಂದೆ ಅರ್ಜುನ ಹಾಗೂ ಮಗ ಬಭ್ರುವಾಹನನಾಗಿ ದ್ವಿಪಾತ್ರದಲ್ಲಿ ಕ್ರಾಂತಿ ಮಾಡಿದ್ದರು. ಈ ಪರಿಕಲ್ಪನೆಯನ್ನು ‘ಟಾಕ್ಸಿಕ್’ನಲ್ಲಿಯೂ ತರಲಾಗಿದೆಯೇ ಅನ್ನುವುದು ಸಿನಿಮಾ ಬಿಡುಗಡೆಯಾದ ಬಳಿಕವಷ್ಟೇ ತಿಳಿಯಬೇಕಿದೆ.
ಟಾಕ್ಸಿಕ್ ಚಿತ್ರಕ್ಕೆ ಎ ಸರ್ಟಿಫಿಕೇಟ್
ಯಶ್ ನಟನೆಯ ‘ಟಾಕ್ಸಿಕ್’ ಚಿತ್ರಕ್ಕೆ ಸೆನ್ಸಾರ್ ಆಗಿದ್ದು ಎ ಸರ್ಟಿಫಿಕೇಟ್ ಬಂದಿದೆ. ಯಾವುದೇ ದೃಶ್ಯಗಳ ಮ್ಯೂಟ್, ಕಟ್ ಇಲ್ಲದೆ ಎ ಸರ್ಟಿಫಿಕೇಟ್ ಪಡೆದುಕೊಂಡಿರುವ ‘ಟಾಕ್ಸಿಕ್’ ಚಿತ್ರದ ರನ್ನಿಂಗ್ ಟೈಮ್ ಮೂರು ಗಂಟೆ ಹದಿನಾಲ್ಕು ನಿಮಿಷ ಹನ್ನೆರಡು ಸೆಕೆಂಡ್ ಇದೆ ಎನ್ನಲಾಗಿದೆ. ಗೀತು ಮೋಹನದಾಸ್ ನಿರ್ದೇಶನದ ಈ ಚಿತ್ರ ಆ.26ಕ್ಕೆ ತೆರೆಗೆ ಬರುತ್ತಿದೆ.
ಟಾಕ್ಸಿಕ್ ಅಲ್ಬಮ್ ಬಿಡುಗಡೆ
ಟಾಕ್ಸಿಕ್ ಸಿನಿಮಾದ 30:09 ನಿಮಿಷದ ಎಲ್ಲಾ ಹಾಡುಗಳು (ಅಲ್ಬಮ್) ಜೀ ಮ್ಯೂಸಿಕ್ ಸೌತ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಟ್ರೆಂಡಿಂಗ್‌ನತ್ತ ಸಾಗುತ್ತಿದೆ. ಈ ಬಗ್ಗೆ ಎಕ್ಸ್ ಪೇಜ್‌ನಲ್ಲಿ Tune in for Intoxication! Toxic : A Fairy Tale for Grown - Ups Full Music Album out now! ಎಂದು ಕೆವಿಎನ್ ಸಂಸ್ಥೆ ಪೋಸ್ಟ್ ಮಾಡಿದೆ.
ದೇಶದ ಪ್ರಸಿದ್ಧ ಕಾರ್ಯಕ್ರಮಗಳಲ್ಲಿ ಯಶ್ ಟಾಕ್ಸಿಕ್
ಯಶ್ ‘ಟಾಕ್ಸಿಕ್’ ಸಿನಿಮಾದ ಪ್ರಚಾರವೇ ವಿಭಿನ್ನವಾಗಿದೆ. ದೇಶದ ಅತ್ಯಂತ ಪ್ರಸಿದ್ಧ ಟಿವಿ ಶೋಗಳಲ್ಲಿ ಯಶ್ ಟಾಕ್ಸಿಕ್ ಸುದ್ದಿಯಾಗುತ್ತಿದೆ. ಅದರಲ್ಲೂ ವಿಶೇಷನಾಗಿ ಅಮಿತಾಬ್ ಬಚ್ಚನ್ ಅವರು ನಡೆಸಿಕೊಡುವ ‘ಕೌನ್ ಬನೇಗ ಕರೋಡ್‌ಪತಿ’ ಕಾರ್ಯಕ್ರಮದಲ್ಲೂ ಯಶ್ ಕುರಿತಾದ ಪ್ರಶ್ನೆ ಬಂದಿದೆ. ಈ ಶೋದಲ್ಲಿ ಭಾರತದ ಸೂಪರ್‌ಸ್ಟಾರ್‌ಗಳಿಗೆ ಸಂಬಂಧಿಸಿ ಪ್ರಶ್ನೆಯೊಂದನ್ನು ಕೇಳಲಾಗಿದ್ದು, ‘ರಜನಿಕಾಂತ್ ಸೂಪರ್ ಸ್ಟಾರ್, ಚಿರಂಜೀವಿ ಮೆಗಾ ಸ್ಟಾರ್, ಪವನ್ ಕಲ್ಯಾಣ್ ಪವರ್ ಸ್ಟಾರ್ ಆದರೆ ಯಶ್ ಏನು?’ ಎಂಬ ಪ್ರಶ್ನೆ ಕೇಳಲಾಗಿತ್ತು. ಸ್ಪರ್ಧಿ ‘ರಾಕಿಂಗ್ ಸ್ಟಾರ್’ ಎನ್ನುವ ಮೂಲಕ ಸರಿಯುತ್ತರ ನೀಡಿದರು.
ಈ ವೇಳೆ ಅಮಿತಾಬ್ ಬಚ್ಚನ್ ಅವರು ಯಶ್ ಸಿನಿಮಾ ಜರ್ನಿಯ ಬಗ್ಗೆ ಮಾತನಾಡಿ ಈ ಮಟ್ಟಿಗೆ ಬೆಳೆದ ಯಶ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಜತ್ ಶರ್ಮಾ ಅವರ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆ ಬೆಂಗಳೂರಿನ ಮೆಟ್ರೋ ರೈಲುಗಳಲ್ಲಿಯೂ ಟಾಕ್ಸಿಕ್ ಪೋಸ್ಟರ್‌ಗಳೇ ರಾರಾಜಿಸುತ್ತಿವೆ.


