ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೊವೊಂದರಲ್ಲಿ, ಪತ್ನಿಯೊಬ್ಬಳು ತನಗೆ ಬೇಕಾದ ವಸ್ತುವನ್ನು ಕೊಡಿಸಲಿಲ್ಲವೆಂದು ಗಂಡನೊಂದಿಗೆ ಜಗಳವಾಡುತ್ತಾ ಅಳುತ್ತಿರುವುದು ಕಂಡುಬಂದಿದೆ. ಈ ವೀಡಿಯೊ ಪ್ರೀತಿ, ಮದುವೆ ಮತ್ತು ಹಣದ ನಡುವಿನ ಸಂಬಂಧದ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
12 ಸಾವಿರ ರೂಪಾಯಿಯ ಗಿಫ್ಟ್ ಕೊಡಿಸದ ಗಂಡ:
ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ನಿನ್ನೆಯಿಂದ ವೀಡಿಯೊವೊಂದು ಭಾರಿ ವೈರಲ್ ಆಗುತ್ತಿದ್ದು, ಇದು ಮದುವೆ, ಪ್ರೀತಿ ಹಾಗೂ ಹಣದ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದ್ದೆ. ಹಾಗಿದ್ರೆ ಆ ವೀಡಿಯೋದಲ್ಲಿ ಏನಿದೆ ನೋಡೋಣ ಬನ್ನಿ...
ವೀಡಿಯೋದಲ್ಲಿ ಗಂಡ ತಾನು ಬಯಸಿದ 12,000 ಮೌಲ್ಯದ ವಸ್ತುವೊಂದನ್ನು ಖರೀದಿಸಿ ನೀಡಿಲ್ಲ ಎಂದು ಎಳೆಯ ಪ್ರಾಯದ ಪತ್ನಿಯೊಬ್ಬಳು ಜೋರಾಗಿ ಅಳುತ್ತಾ ಗಂಡನ ಜೊತೆ ಮಕ್ಕಳಂತೆ ಜಗಳ ಮಾಡುತ್ತಿದ್ದಾಳೆ. ನಿಮಗೆ ನನ್ನ ಮೇಲೆ ಪ್ರೀತಿ ಇಲ್ಲ, ಪ್ರೀತಿ ಇದ್ದಿದ್ದರೆ ನನಗೆ ಅದನ್ನು ಕೊಡಿಸುತ್ತಿದ್ದೀರಿ, ಕನಿಷ್ಟ ನನ್ನ ಕಷ್ಟಸುಖಗಳನ್ನು ನೀನು ವಿಚಾರಿಸುತ್ತಿಲ್ಲ, ನಾನು ಶಾಪ್‌ನಲ್ಲಿ ಒಂದು ಗಂಟೆ ಕಾದೆ ಎಂದು ಹೆಂಡ್ತಿ ಕಣ್ಣೀರಿಡುತ್ತಿದ್ದರೆ, ಆಕೆಯ ಮಡಿಲಲ್ಲಿರುವ ಪುಟ್ಟ ಮಗು ಆ ತಾಯಿಯನ್ನು ಅಳಬೇಡ ಎಂದು ಕಣ್ಣೀರು ಒರೆಸುತ್ತಾ ಆಕೆಯ ಕೂದಲನ್ನು ಹಿಡಿದು ಎಳೆಯುತ್ತಿದೆ. ವೀಡಿಯೋದಲ್ಲಿ ಇರೋದು ಇಷ್ಟೇ ಆದರೆ ಈ ವೀಡಿಯೋ ಈಗ ಮದುವೆ ಹಾಗೂ ಪ್ರೀತಿ ಹಾಗೂ ಹಣದ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ವೀಡಿಯೋವನ್ನು ಅನೇಕರು ಶೇರ್ ಮಾಡಿಕೊಂಡು ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ವೀಡಿಯೋದಲ್ಲಿ ಪುರುಷರು ಆ ವ್ಯಕ್ತಿಯ ಗಂಡನನ್ನು ಬೆಂಬಲಿಸಿದ್ದರೆ, ಮಹಿಳೆಯರು ಆ ಆಳುತ್ತಿರುವ ಮಹಿಳೆಯನ್ನು ಬೆಂಬಲಿಸಿ ಕಾಮೆಂಟ್ ಮಾಡ್ತಿದ್ದಾರೆ. ಮಹಿಳೆಯರು ಯಾವುದೇ ವೇತನವಿಲ್ಲದೇ ಮನೆಯ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಹೀಗಿರುವಾಗ ಗಂಡ ಆಕೆ ಆಸೆಪಟ್ಟ ಅದೊಂದು ವಸ್ತುವನ್ನು ಕೊಡಿಸುವುದರಲ್ಲಿ ತಪ್ಪೇನಿದೆ. ಆಕೆಗೆ ವೇತನ ಬರುತ್ತಿದ್ದರೆ ಆಕೆಯ ಖರೀದಿ ಮಾಡ್ತಿದ್ದಳು, ಮನೆಯ ಕೆಲಸಗಳನ್ನು ಮಾಡುವ ಆಕೆಗೆ ಯಾರೂ ಹಣ ನೀಡುವುದಿಲ್ಲ, ಕನಿಷ್ಠ ಆಕೆಯ ಮೂಲಭೂತ ಅವಶ್ಯಕತೆಗಳನ್ನು ಗಂಡನಾದವವನು ಪೂರೈಸಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಹುಡುಗಿ ಎಷ್ಟು ಮುದ್ದಾಗಿದ್ದಾಳೆ. ಆಕೆಗೆ ಕನಿಷ್ಟ 12 ಸಾವಿರ ಖರ್ಚು ಮಾಡದವನಿಗೆ ಏಕೆ ಆಕೆಯನ್ನು ಮದುವೆ ಮಾಡಿದರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಅದಕ್ಕಾಗಿಯೇ ಲಿಂಗಬೇಧವಿಲ್ಲದೇ ಎಲ್ಲರಿಗೂ ಆರ್ಥಿಕ ಸ್ವಾತಂತ್ರ್ಯ ಮುಖ್ಯವಾಗಿದೆ. ನಿಮ್ಮ ಅಗತ್ಯಗಳಿಗಾಗಿ ನೀವು ಯಾರನ್ನೂ ಅವಲಂಬಿಸಬೇಕಾಗಿಲ್ಲ, ಅದು ಪೋಷಕರಾಗಿರಬಹುದು, ಸಂಗಾತಿಯಾಗಿರಬಹುದು ಅಥವಾ ಬೇರೆಯವರಾಗಿರಬಹುದು. ನೀವು ಆರ್ಥಿಕವಾಗಿ ಸ್ವತಂತ್ರರಾದಾಗ, ನಿಮ್ಮ ಜೀವನವನ್ನು ನೀವು ಹೊಂದಿದ್ದೀರಿ ಮತ್ತು ಈ ರೀತಿ ಬಳಲುವ ಅಗತ್ಯ ಇರುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಹೆಂಡ್ತಿ ಕೇಳಿದ್ದನ್ನು ಕೊಡಿಸಲಾಗದ ಪುರುಷರು ಮದುವೆಯಾಗಬಾದೇ ಸಿಂಗಲ್ ಆಗಿರಬೇಕು. ಆಕೆ ಹೊಸ ಮನೆ ಬೇಕು ಎಂದು ಕೇಳಿಲ್ಲ, ಭಾರತದಲ್ಲಿ ಬಹುತೇಕ ಗೃಹಿಣಿಯರು ಹಣಕಾಸು ಯೋಜನೆಯಲ್ಲಿ ಯಾವುದೇ ಪಾತ್ರವನ್ನು ವಹಿಸುವುದಿಲ್ಲ. ನೀವು ಅವರಿಗೆ ಹಣಕಾಸು ಯೋಜನೆಯಲ್ಲಿ ಯಾವುದೇ ಪಾತ್ರವನ್ನು ವಹಿಸಲು ಅವಕಾಶ ನೀಡದಿದ್ದರೆ, ಕನಿಷ್ಠ ಅವರಿಗೆ ಮಾಸಿಕ ಭತ್ಯೆ ನೀಡಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮದುವೆಯ ಅರ್ಥ ತಿಳಿಯದೇ ಇರುವವರು ಮದುವೆಯಾಗದೇ ಇರುವುದು ಒಳಿತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹೆಂಡ್ತಿಯ ಆಸೆ ಈಡೇರಿಸಲಾಗದವರು ಮದುವೆಯಾಗಬೇಡಿ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
ಹಾಗೆಯೇ ಪುರುಷರು ಅವರದ್ದೇ ಆದ ಚಿಂತನೆಯಿಂದ ಮಾತನಾಡಿದ್ದು, ಹಣದಿಂದ ಪ್ರೀತಿಯನ್ನು ಅಳೆಯುವುದಾದರೆ ಈ ಪ್ರೀತಿ ಕೇವಲ ಶ್ರೀಮಂತರಿಗೆ ಮಾತ್ರ ಸಿಗುತ್ತದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ ಪುರುಷರುಕೂಡ ಈ ವೀಡಿಯೋವನ್ನು ಹಂಚಿಕೊಂಡು ತಮ್ಮದೇ ರೀತಿಯ ವಿಶ್ಲೇಷಣೆ ನೀಡಿದ್ದಾರೆ. ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುವವನಿಗೆ ತಿಂಗಳ ವೇತನವೇ ಕೇವಲ 17 ಸಾವಿರ ರೂಪಾಯಿ ಇರುತ್ತದೆ. ಆದರೆ ಪತ್ನಿ ಲೂಯಿಸ್ ವೀಟಾದಂತಹ ಬ್ರಾಂಡೆಡ್ ಬ್ಯಾಗ್ ಕೇಳಿದರೆ ಅವನು ಎಲ್ಲಿಂದ ಕೊಡಿಸಲು ಸಾಧ್ಯ, ಪತ್ನಿ ಬ್ಯಾಗ್ ಕೇಳಿದರೆ ಮಗ ಐಫೋನ್ ಮ್ಯಾಕ್ಸ್ ಕೇಳುತ್ತಾನೆ. ಹಾಗಾದಾಗ ಅವನು ಅಸಹಾಯಕನಾಗುತ್ತಾನೆ. ಗಂಡ ಹೆಂಡತಿ ಪರಸ್ಪರ ಅರ್ಥ ಮಾಡಿಕೊಂಡು ಬದುಕಬೇಕು ಬೇಡಿಕೆ ಇಡುವುದನ್ನು ನಿಲ್ಲಿಸಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಅನೇಕರು ಇದು ಜಾಹೀರಾತು ಎಂದು ಹೇಳಿದರೆ ಮತ್ತೆ ಕೆಲವರು ಇದು ಸ್ಕ್ರಿಫ್ಟೆಡ್ ಎಂದಿದ್ದಾರೆ. ಅದರೆ ಮೂಲತಃ ಈ ವೀಡಿಯೋ ಯಾರದ್ದು ಎಂಬ ಮಾಹಿತಿ ಇಲ್ಲಿಲ್ಲ.


