Asianet Suvarna News Asianet Suvarna News

ಬೆಂಗಳೂರು ಟ್ರಾಫಿಕ್‌ನಲ್ಲೇ ಲವ್ವಾಯ್ತು, ಮದ್ವೆನೂ ಆಯ್ತು, ಸೋನಿ ಸಿಗ್ನಲ್‌ನಲ್ಲೊಂದು ಪ್ರೇಮ್‌ ಕಹಾನಿ

ಐಟಿಬಿಟಿ, ಗಾರ್ಡನ್‌ ಸಿಟಿ ಎಂಬೆಲ್ಲಾ ಹೆಗ್ಗಳಿಕೆಯನ್ನು ಪಡೆದಿರುವ ಬೆಂಗಳೂರು ಗಾರ್ಬೇಟ್‌ ಸಿಟಿ, ಟ್ರಾಫಿಕ್ ಸಿಟಿ ಎಂಬ ಕಳಂಕವನ್ನೂ ಹೊತ್ತುಕೊಂಡಿದೆ. ಅಷ್ಟೂ ಸಾಲ್ದು ಅಂತ ಈ ಬಾರಿ ಸುರಿದ ಮಹಾಮಳೆ ಬ್ರ್ಯಾಂಡ್ ಬೆಂಗಳೂರು ಹೆಸರನ್ನು ಮತ್ತಷ್ಟು ಹಾಳು ಮಾಡಿದೆ. ಆದ್ರೆ ಕಿರಿಕಿರಿಯನ್ನುಂಟು ಮಾಡುವ ಇಂಥಾ ಬೆಂಗಳೂರು ಟ್ರಾಫಿಕ್‌ನಲ್ಲೊಂದು ಸುಂದರ ಪ್ರೇಮಕಥೆ ಹುಟ್ಟಿದೆ. ಆ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

This Man Fell In Love And Got Married, All Thanks To Bengaluru Traffic Vin
Author
First Published Sep 21, 2022, 10:44 AM IST

ಬೆಂಗಳೂರಿಗೆ ಹೊರರಾಜ್ಯ ದೇಶಗಳಿಂದ ಬರೋರು ಇಲ್ಲಿನ ಟ್ರಾಫಿಕ್‌ಗೆ ಹೆಚ್ಚು ಭಯಪಡುತ್ತಾರೆ. ಗಂಟೆಗಟ್ಟಲೆ ಫ್ಲೈಓವರ್‌ ಮೇಲೆ ನಿಂತಲೇ ನಿಲ್ಲುವ ವಾಹನಗಳ ಸಾಲು ಜನರನ್ನು ಕಂಗೆಡಿಸುತ್ತದೆ. ಸಮಯಕ್ಕೆ ಸರಿಯಾಗಿ ಇಂಟರ್ವ್ಯೂ, ಕಾಲೇಜ್, ಆಫೀಸ್ ಎಲ್ಲಿಗೂ ತಲುಪಲಾಗದೆ ಒದ್ದಾಡುತ್ತಾರೆ. ಒಟ್ನಲ್ಲಿ ಬೆಂಗಳೂರು ಅಂದ್ರೆ ಎಲ್ರಿಗೂ ತಕ್ಷಣಕ್ಕೆ ನೆನಪಾಗೋದು ಟ್ರಾಫಿಕ್ ಕಿರಿಕಿರಿ. ಎಲ್ಲರೂ ಟ್ರಾಫಿಕ್‌ನಲ್ಲಿ ಸಿಲುಕಿ ಹಾಕಿಕೊಂಡು ಬೈಯುವವರೇ. ಆದ್ರೆ ಇಂಥಾ ಟ್ರಾಫಿಕ್‌ನಲ್ಲಿ ಸುಂದರ ಪ್ರೇಮಕಥೆಯೊಂದು ಅರಳುತ್ತೆ ಅಂದ್ರೆ ನೀವ್ ನಂಬ್ತೀರಾ ? ನಂಬೋಕೆ ಸ್ಪಲ್ಪ ಕಷ್ಟ ಅನಿಸಿದ್ರೂ ಇದು ನಿಜ. 

ವ್ಯಕ್ತಿಯೊಬ್ಬರು ಬೆಂಗಳೂರಲ್ಲಿ ಅತಿ ಹೆಚ್ಚು ಟ್ರಾಫಿಕ್ ಇರುತ್ತೆ ಅಂತ ಕರೆಸಿಕೊಳ್ಳೋ ಸೋನಿ ಸಿಗ್ನಲ್‌ನಲ್ಲಿ ತಮ್ಮ ಪ್ರೇಮಕಥೆ (Love story) ಹುಟ್ಟಿಕೊಂಡಿದ್ದಾಗಿ ಟ್ವಿಟರ್‌ನಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಸೋನಿ ವರ್ಲ್ಡ್​ ಸಿಗ್ನಲ್ಲೇ ನನಗೆ ನನ್ನ ಹೆಂಡತಿ (Wife)ಯನ್ನು ಹುಡುಕಿಕೊಟ್ಟಿದ್ದು ಎಂದು ತಮ್ಮ ಪ್ರೇಮಕಥೆ ಹೇಳುತ್ತ ಕೊನೆಗೊಂದು ಟ್ವಿಸ್ಟ್​ ಕೊಟ್ಟಿದ್ದಾರೆ. ಅದೇ ಈ ಪೋಸ್ಟ್​ ವೈರಲ್ ಆಗಲು ಕಾರಣವಾಗಿದೆ.

67 ವರ್ಷದ ವ್ಯಕ್ತಿ ಬೆಲೆಬಾಳುವ ಗಿಫ್ಟ್‌ ಕೊಟ್ಟ, 31 ವರ್ಷದ ಯುವತಿ ಹೃದಯ ಕೊಟ್ಟಳು!

ಬೆಂಗಳೂರು ಟ್ರಾಫಿಕ್‌ನಲ್ಲೇ ಲವ್ವಾಯ್ತು, ಮದ್ವೆನೂ ಆಯ್ತು
ರೆಡ್ಡಿಟ್ ಖಾತೆದಾರರಾದ 'MaskedManiac92' ಬೆಂಗಳೂರಿನ ಟ್ರಾಫಿಕ್‌ನಲ್ಲಿ ತಮ್ಮ ಪ್ರೇಮಕಥೆ ಹೇಗೆ ಆರಂಭವಾಯಿತು ಎಂಬುದನ್ನು ವಿವರಿಸಿದ್ದಾರೆ. ಸೋನಿ ವರ್ಲ್ಡ್​ ಸಿಗ್ನಲ್ಲೇ ನನಗೆ ನನ್ನ ಹೆಂಡತಿಯನ್ನು ಹುಡುಕಿಕೊಟ್ತು ಎಂದು ವ್ಯಕ್ತಿ ಮಾಡಿರೋ ಟ್ವೀಟ್ ಎಲ್ಲೆಡೆ ವೈರಲ್‌ ಆಗಿದೆ. ಆದರೆ ವ್ಯಕ್ತಿ ತಮ್ಮ ಪ್ರೇಮಕಥೆಯನ್ನು ಹೇಳುತ್ತಾ ಬೆಂಗಳೂರು ಸಿಗ್ನಲ್‌ನ ಭಯಾನಕತೆಯನ್ನು ಬಿಚ್ಚಿಟ್ಟಿದ್ದಾರೆ.

ಅಪರಿಚಿತ ಹುಡುಗ, ಅಪರಿಚಿತ ಹುಡುಗಿ ಒಂದು ದಿನ ಸೋನಿ ಸಿಗ್ನಲ್​ ಬಳಿ ಅಚಾನಕ್ಕಾಗಿ ಭೇಟಿಯಾಗುತ್ತಾರೆ. ಹೀಗೆ ಪದೇಪದೇ ಟ್ರಾಫಿಕ್‌ನಲ್ಲಿ ಸಿಗುತ್ತಿದ್ದಾಗ ಪರಸ್ಪರರ ನಗುವಿನ ವಿನಿಮಯವಾಗುತ್ತದೆ. ಕ್ರಮೇಣ ಪರಿಚಯಕ್ಕೆ ತಿರುಗುತ್ತದೆ. ಒಂದು ದಿನ ನಿರ್ಮಾಣ ಹಂತದಲ್ಲಿದ್ದ ಈಜಿಪುರ ಮೇಲ್​​ಸೇತುವೆಯಲ್ಲಿ ವಿಪರೀತ ಟ್ರಾಫಿಕ್ ಉಂಟಾಗುತ್ತದೆ. ಇಬ್ಬರಿಗೂ ವಿಪರೀತ ಹಸಿವು, ಕಿರಿಕಿರಿ. ಉಸಿರುಗಟ್ಟಿದಂತಾಗುತ್ತಿರುತ್ತದೆ. ಪರಸ್ಪರ ಮುಖಗಳನ್ನು ನೋಡಿಕೊಳ್ಳುತ್ತ ನಿಂತಿರುತ್ತಾರೆ. ಕೊನೆಗೆ ದಾರಿಮಧ್ಯೆ ಸಿಕ್ಕ ಹೋಟೆಲ್​ನಲ್ಲಿ ಊಟ ಮಾಡುತ್ತಾರೆ. ಮಾತು, ಭಾವನೆಗಳ ವಿನಿಮಯವಾಗುತ್ತದೆ. ಪರಸ್ಪರ ಆಕರ್ಷಣೆ (Attraction) ಬೆಳೆಯುತ್ತದೆ. ಪ್ರೇಮಮಾರ್ಗ! ಐದು ವರ್ಷಗಳತನಕ ಈ ಟ್ರಾಫಿಕ್​ನಲ್ಲಿಯೇ ಡೇಟಿಂಗ್​ ಮಾಡಿ, ಡ್ಯೂಯೆಟ್​ ಹಾಡಿ ಉಲ್ಲಸಿತಗೊಂಡು ಕೊನೆಗೆ ಮದುವೆ (Marriage)ಯನ್ನೂ ಆಗುತ್ತಾರೆ. ಇಷ್ಟೆಲ್ಲಾ ವಿವರಿಸಿ ಪೋಸ್ಟ್‌ ಕೊನೆಗೆ ವ್ಯಕ್ತಿ ಹೊಸ ಟ್ವಿಸ್ಟ್ ನೀಡಿದ್ದಾರೆ.

ಇದು ಪಾಕಿಸ್ತಾನದ ದಿಲ್ ಚಾಹ್ತಾ ಹೈ.. 70 ವರ್ಷದ ಅಜ್ಜಿಯನ್ನು ವಿವಾಹವಾದ 37 ವರ್ಷದ ಯುವಕ!

ಸಿಗ್ನಲ್‌ನಲ್ಲೇ ಲವ್ವಾಗಿ ಮದ್ವೆಯಾಗಿ ವರ್ಷಗಳೇ ಕಳೀತು, ಫ್ಲೈ ಓವರ್ ಅರ್ಧಕ್ಕೇ ನಿಂತಿದೆ
'ಇದೇ ಟ್ರಾಫಿಕ್ಕಿನಲ್ಲಿ ಸಿಕ್ಕ ನನ್ನ ಹುಡುಗಿಯೊಂದಿಗೆ ನಾನು ಮೂರು ವರ್ಷ ಡೇಟಿಂಗ್ ಮಾಡಿದೆ. ಎರಡು ವರ್ಷಗಳ ಹಿಂದೆ ಮದುವೆ (Marriage)ಯನ್ನೂ ಆದೆ. ಆದರೆ ಈ ಫ್ಲೈ ಓವರ್ ಮಾತ್ರ ಇನ್ನೂ ಹೀಗೇ ಅರ್ಧಕ್ಕೇ ನಿಂತಿದೆ' ಇದೇ ಆ ದೊಡ್ಡ ಬಗೆಯರಿಯಲಾರದ ಸಮಸ್ಯೆ ಎಂದು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ರೆಡ್ಡಿಟ್ ಖಾತೆದಾರರು ಈ ವಿಷಯವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಾಗಿನಿಂದ ಸಾವಿರಾರು ನೆಟ್ಟಿಗರು ಇದಕ್ಕೆ ಪ್ರತಿಕ್ರಿಯಿಸಿ ಕಾಮೆಂಟ್ ಮಾಡುತ್ತಿದ್ದಾರೆ.

'ನಾನು ನನ್ನ ಪದವಿ ಮುಗಿಸಿ ಇಂಟರ್ನ್​ಶಿಪ್​ ಅನ್ನು ಬೆಂಗಳೂರಿನ ಸೋನಿ ಸಿಗ್ನಲ್​ ಬಳಿಯ ಆಫೀಸೊಂದರಲ್ಲಿ ಮಾಡಿದೆ. ಅಲ್ಲಿಯೇ ಎರಡು ವರ್ಷ ಕೆಲಸ ಮಾಡಿದೆ. ನಂತರ ಬೆಂಗಳೂರನ್ನು ಬಿಟ್ಟು ಬೇರೆ ಊರು, ಕಂಪೆನಿಯಲ್ಲಿ ಕೆಲಸ ಮಾಡಿದೆ. ಆದರೂ ಈ ಮೇಲ್ಸೇತುವೆಯ ನಿರ್ಮಾಣ ಕಾಮಗಾರಿ ಮಾತ್ರ ಇನ್ನೂ ಮುಗಿದಿಲ್ಲ' ಎಂದು ಇನ್ನೊಬ್ಬ ವ್ಯಕ್ತಿ ಟೀಕಿಸಿದ್ದಾರೆ. ವ್ಯಕ್ತಿಯ ಪ್ರೇಮಕಥೆಗೆ ಮೆಚ್ಚುಗೆ ಸೂಚಿಸಿರುವ ಇನ್ನೊಬ್ಬರು, 'ಬೆಂಗಳೂರು ಟ್ರಾಫಿಕ್ ಒಂದು ವರ ಇದ್ದಂತೆ. ಆದರೆ ನೀವು ಇದನ್ನು ಅರ್ಥವನ್ನೇ ಮಾಡಿಕೊಳ್ಳುವುದಿಲ್ಲ' ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.

ಸೋನಿ ಸಿಗ್ನಲ್‌ನ 2.5 ಕಿಮೀ ಉದ್ದದ ಈ ಮೇಲ್ಸೇತುವೆಯ ನಿರ್ಮಾಣ ಕಾರ್ಯ 2019 ನವೆಂಬರ್ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ, ಸೋನಿ ವರ್ಲ್ಡ್ ಜಂಕ್ಷನ್‌ನಿಂದ ಕೇಂದ್ರೀಯ ಸದನಕ್ಕೆ ಸಂಪರ್ಕ ಕಲ್ಪಿಸಬೇಕಿದ್ದ ಈ ಮೇಲ್​ಸೇತುವೆ ಪೂರ್ಣಗೊಳ್ಳದೆ ಇನ್ನೂ ಹಾಗೆಯೇ ಉಳಿದಿರುವುದು ವಿಪರ್ಯಾಸ. ಪ್ರೀತಿಸಿ ಮದ್ವೆಯಾದ ದಂಪತಿಗೆ ಇನ್ನು ಮಕ್ಕಳಾಗುವುದರೊಳಗಾದರೂ ಈ ಸೇತುವೆ ಪೂರ್ಣಗೊಳ್ಳಬಹುದೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

Follow Us:
Download App:
  • android
  • ios